Advertisement

ಹುಬ್ಬಳ್ಳಿ-ಧಾರವಾಡ: “ಅದೃಷ್ಟದ ಕ್ಷೇತ್ರ’ದಲ್ಲಿ ಶೆಟ್ಟರ್‌ಗೆ ಟಿಕೆಟ್‌ ಗಟ್ಟಿನಾ?

01:31 AM Mar 06, 2023 | Team Udayavani |

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಜಗದೀಶ ಶೆಟ್ಟರ ಅವರಿಗೆ ಈ ಬಾರಿ ಟಿಕೆಟ್‌ ಗಟ್ಟಿನಾ? ಇಂತಹದ್ದೊಂದು ಶಂಕೆ-ಚರ್ಚೆ ಹಾಗೂ ಗೊಂದಲ ಕಳೆದ 29 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸುಳಿದಾಡುತ್ತಿದೆ. ಹಾಗೆಯೇ ಕಳೆದ ಮೂರು ದಶಕಗಳಿಂದ ಈ ಕ್ಷೇತ್ರದಲ್ಲಿ ಗೆಲುವನ್ನೇ ಕಾಣದೆ ಪರಿತಪಿಸುತ್ತಿರುವ ಕಾಂಗ್ರೆಸ್‌ನಲ್ಲೂ ಟಿಕೆಟ್‌ ಯಾರಿಗೆ ಎಂಬ ಸ್ಪಷ್ಟತೆ ಇಲ್ಲವಾಗಿದೆ.

Advertisement

ಈ ಹಿಂದೆ ಹುಬ್ಬಳ್ಳಿ ಗ್ರಾಮೀಣ ವಿಧಾನಸಭಾ ಕ್ಷೇತ್ರವಾಗಿದ್ದ ಈ ಕ್ಷೇತ್ರ ದಿ|ಎಸ್‌.ಆರ್‌.ಬೊಮ್ಮಾಯಿ ಹಾಗೂ ಜಗದೀಶ ಶೆಟ್ಟರ ಸೇರಿ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿ ರಾಜಕೀಯ ಮಹತ್ವ ಹೊಂದಿದೆ. ಕಾಂಗ್ರೆಸ್‌, ಜನತಾ ಪರಿವಾರಕ್ಕೂ ಒಲಿದಿದ್ದು, ಕಳೆದ ಆರು ಚುನಾವಣೆಗಳಿಂದ ಸತತವಾಗಿ ಬಿಜೆಪಿ ಪಾಲಾಗಿದೆ.

ಹುಬ್ಬಳ್ಳಿಯ ರಾಣಿ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ಹೋರಾಟ ರಾಷ್ಟ್ರಮಟ್ಟದ ಗಮನ ಸೆಳೆದು ಬಿಜೆಪಿಗೆ ದೊಡ್ಡ ಬಲ ತಂದು ಕೊಟ್ಟಿತ್ತು. ಇದರ ಪೂರ್ಣ ಲಾಭವನ್ನು ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ ಪಡೆದಿದೆ. 1994ರಲ್ಲಿ ಕಾಂಗ್ರೆಸ್‌ನಿಂದ ಕ್ಷೇತ್ರವನ್ನು ಕಿತ್ತುಕೊಂಡ ಬಿಜೆಪಿ ಅಲ್ಲಿಂದ ಇಲ್ಲಿಯವರೆಗೂ ಪ್ರಾಬಲ್ಯ ಮೆರೆಯುತ್ತಾ ಬಂದಿದೆ. ಸತತವಾಗಿ ಆರು ಬಾರಿ ಶೆಟ್ಟರ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

1994ರಲ್ಲಿ ಹಾಲಿ ಮುಖ್ಯಮಂತ್ರಿ ಅಂದಿನ ಜನತಾದಳ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದ ಶೆಟ್ಟರ ಇಂದಿಗೂ ಹಿಂತಿರುಗಿ ನೋಡಿಲ್ಲ. ಆಡಳಿತ ವಿರೋಧಿ ಅಲೆ ಇದೆ ಎಂದಾಗಲೂ, ಬಿಜೆಪಿಯಿಂದ ಸಿಡಿದು ಬಿ.ಎಸ್‌.ಯಡಿಯೂರಪ್ಪ, ಬಿ.ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಪ್ರತ್ಯೇಕ ಪಕ್ಷ ಸ್ಥಾಪನೆ ಮಾಡಿ ಬಿಜೆಪಿ ಮತಗಳನ್ನು ಕಸಿದಾಗಲೂ ಯಾವ ವ್ಯತ್ಯಾಸವೂ ಇಲ್ಲದೆ ನಿರಾಯಾಸವಾಗಿ ಗೆಲುವು ಕಂಡವರು. ಈಗಲೂ ಕ್ಷೇತ್ರದಲ್ಲಿ ತಮ್ಮದೇ ಗಟ್ಟಿ ಹಿಡಿತ, ವರ್ಚಸ್ಸು ಹೊಂದಿದ್ದಾರೆ.

ಆದರೆ, ಬಿಜೆಪಿಯಲ್ಲಿ ಹಿರಿಯರಿಗೆ ಈ ಬಾರಿ ಟಿಕೆಟ್‌ ಇಲ್ಲ ಎಂಬ ಸುದ್ದಿ ಅವರ ಕ್ಷೇತ್ರದಲ್ಲೇ ದೊಡ್ಡ ಸದ್ದು ಮಾಡತೊಡಗಿದೆ. ಈ ಬಾರಿ ಶೆಟ್ಟರಿಗೆ ಟಿಕೆಟ್‌ ಸಿಗುತ್ತಾ ಎಂಬ ಪ್ರಶ್ನೆ ಬಿಜೆಪಿ ಕಾರ್ಯಕರ್ತರಿಂದ ಹಿಡಿದು ಮತದಾರರ ಮಟ್ಟದಲ್ಲೂ ಸಣ್ಣ ರೀತಿಯಲ್ಲಿ ಚರ್ಚೆಯಾಗುತ್ತಿದೆ. ಅವರನ್ನು ರಾಜ್ಯಪಾಲರನ್ನಾಗಿ ಮಾಡಿ ಟಿಕೆಟ್‌ ಬೇರೆಯವರಿಗೆ ನೀಡುತ್ತಾರಂತೆ ಎಂಬ ಗುಸುಗುಸು ಎದ್ದಿದೆ. ಶೆಟ್ಟರ ಪರ ಇದ್ದವರು ಟಿಕೆಟ್‌ ಸಿಕ್ಕೇ ಸಿಗುತ್ತದೆ ಎನ್ನುತ್ತಿದ್ದರೆ, ಇನ್ನೂ ಕೆಲವರು ಪಕ್ಷ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ನೋಡಬೇಕು ಎನ್ನುತ್ತಿದ್ದಾರೆ. ಪಕ್ಷದಲ್ಲಿದ್ದ ಕೆಲವರು ಉದ್ದೇಶ ಪೂರ್ವಕವಾಗಿ ಟಿಕೆಟ್‌ ಇಲ್ಲ ಎಂಬ ಪುಕಾರು ಹಬ್ಬಿಸುತ್ತಿದ್ದಾರೆ ಎಂಬ ಅನಿಸಿಕೆಯೂ ಸುಳಿದಾಡುತ್ತಿದೆ. ಸ್ವತಃ ಶೆಟ್ಟರ ಅವರು ನಾನೇ ಅಭ್ಯರ್ಥಿ. ಪಕ್ಷ ನನಗೆ ಟಿಕೆಟ್‌ ನೀಡುವ ಪೂರ್ಣ ವಿಶ್ವಾಸವಿದೆ ಎನ್ನುತ್ತಿದ್ದಾರೆ.

Advertisement

ಪ್ರಸ್ತುತ ಸ್ಥಿತಿಯಲ್ಲಿ ಶೆಟ್ಟರ ಅವರೇ ಮುಂದಿನ ಅಭ್ಯರ್ಥಿ ಎಂದಾದರೆ ಯಾವುದೇ ಲೆಕ್ಕಾಚಾರ, ಪೈಪೋಟಿ ಬಿಜೆಪಿಯಲ್ಲಿ ಉದ್ಬವಿಸದು. ಒಂದು ವೇಳೆ ಅವರಿಗೆ ಟಿಕೆಟ್‌ ಇಲ್ಲ ಎಂದಾದರೆ, ಬಿಜೆಪಿಯ ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ಡಾ|ಮಹೇಶ ನಾಲವಾಡ ಸೇರಿದಂತೆ ಹಲವರು ಪೈಪೋಟಿಗಿಳಿಯುವ ಸಾಧ್ಯತೆ ಇಲ್ಲದಿಲ್ಲ.

ಇನ್ನು ಮೂರು ದಶಕಗಳ ಹಿಂದೆ ಕಳೆದುಕೊಂಡ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್‌ಗೆ ಇಂದಿಗೂ ಸಾಧ್ಯವಾಗಿಲ್ಲ. ಬಿಜೆಪಿ ಸತತ ಆರು ಬಾರಿ ಗೆಲುವು ಕಂಡಿರುವುದಕ್ಕೆ ವಿಪಕ್ಷದ ಪ್ರಬಲ ಪೈಪೋಟಿ ಇಲ್ಲ ಎಂಬುದೂ ಕಾರಣವಾಗಿದೆ ಎನ್ನಬಹುದು. 1989ರಲ್ಲಿ ಗೋಪಿನಾಥ ಸಾಂಡ್ರಾ ಅವರು ಈ ಕ್ಷೇತ್ರದಲ್ಲಿ ಗೆಲುವು ಕಂಡಿದ್ದು ಬಿಟ್ಟರೆ ಇದುವರೆಗೂ ಕಾಂಗ್ರೆಸ್‌ ಗೆದ್ದಿಲ್ಲ. ಪ್ರಸ್ತುತ ಪಕ್ಷದಲ್ಲಿ ಅನಿಲಕುಮಾರ ಪಾಟೀಲ, ರಜತ್‌ ಉಳ್ಳಾಗಡ್ಡಿ ಮಠ, ಸದಾನಂದ ಡಂಗನವರ, ಅಲ್ಪಸಂಖ್ಯಾತರ ಕೋಟಾದಡಿ ಮಹ್ಮದ್‌ ಯೂಸೂಫ್‌ ಸವಣೂರು ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ನಲ್ಲಿ ಆಕಾಂಕ್ಷಿಗಳ ಜತೆಗೆ ಪಕ್ಷದ ಕಾರ್ಯಕರ್ತರ ಕೊರತೆಯೂ ಕಾಡತೊಡಗಿದೆ.

ಶೆಟ್ಟರ್‌ಗೆ ಅದೃಷ್ಟದ ಕ್ಷೇತ್ರ..
ಅಂದಿನ ಹುಬ್ಬಳ್ಳಿ ಗ್ರಾಮೀಣ ಹಾಲಿ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ ಶೆಟ್ಟರ ಅವರಿಗೆ ಮುಖ್ಯಮಂತ್ರಿ, ಸಚಿವ, ಬಿಜೆಪಿ ರಾಜ್ಯಾಧ್ಯಕ್ಷ, ವಿಧಾನಸಭೆ ವಿಪಕ್ಷ ನಾಯಕ, ಸ್ಪೀಕರ್‌ ಹೀಗೆ ವಿವಿಧ ಹುದ್ದೆಗಳನ್ನು ತಂದುಕೊಟ್ಟ ಅದೃಷ್ಟದ ಕ್ಷೇತ್ರ. ಈ ಹಿಂದೆ ಅವರ ವಿರುದ್ಧ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಶಂಕರಣ್ಣ ಮುನವಳ್ಳಿ, ರಾಜಣ್ಣ ಕೊರವಿ, ಡಾ|ಮಹೇಶ ನಾಲವಾಡ ಅವರು ಇದೀಗ ಬಿಜೆಪಿಯಲ್ಲಿರುವುದು ವಿಶೇಷ.

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next