ಹುಬ್ಬಳ್ಳಿ: ಕೋವಿಡ್ ತಡೆಗೆ ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ ನೀಡುವ ಕುರಿತು ಶನಿವಾರ ಶಾಸಕ ಪ್ರಸಾದ ಅಬ್ಬಯ್ಯ ಅವರ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಹಾಲಿ ಹಾಗೂ ಮಾಜಿ ನಾಯಕರ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಿತು.
ಸಭೆಯಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಜತೆಗೆ ಬ್ಲಾಕ್ ಅಧ್ಯಕ್ಷರ ಮೂಲಕ ಮಾಹಿತಿ ಜಾಲ ವಿಸ್ತರಿಸಿ ಜನರಿಗೆ ಸರ್ಕಾರಿ ಸೌಲಭ್ಯ ತಲುಪಿಸಲು, ಮೇಲ್ವಿಚಾರಣೆ ನಡೆಸಲು ಸಮಿತಿ ರಚಿಸುವ ಬಗ್ಗೆ ಹಾಗೂ ಜಿಲ್ಲಾಡಳಿತ ಮತ್ತು ಜನರ ನಡುವೆ ಪಕ್ಷ ಪ್ರಮುಖ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ಕುರಿತು ಚರ್ಚಿಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕೋವಿಡ್-19 ಟಾಸ್ಕ್ ಫೋರ್ಸ್ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ, ಇಂಥ ಸಂಕಷ್ಟದ ಸಮಯದಲ್ಲಿ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಸಹಾಯ ಮಾಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಎದುರಾಗುವ ಜಟಿಲ ಸಮಸ್ಯೆಗಳಿಗೆ ಜಿಲ್ಲಾಡಳಿತದ ನೆರವಿನೊಂದಿಗೆ ಪಕ್ಷವು ಬಡವರ, ನೊಂದವರ ಕಣ್ಣಿರೊರೆಸುವ ಕೆಲಸ ಮಾಡಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರು ಮಾತನಾಡಿ, ಇಂಥ ಸಂಕಷ್ಟದ ಸಂದರ್ಭದಲ್ಲಿ ಎಲ್ಲರೂ ಅಗತ್ಯ ಸಲಹೆ- ಸಹಕಾರ ನೀಡುವ ಮೂಲಕ ಬಡವರ ಪರ ಕೆಲಸ ಮಾಡೋಣ ಎಂದರು. ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಯಾವುದೇ ಅಡ್ಡಿ ಉಂಟಾಗದಂತೆ ಮತ್ತು ಲಾಕ್ ಡೌನ್ ಪರಿಣಾಮ ಜಿಲ್ಲೆಯಲ್ಲೇ ಉಳಿದಿರುವ ಅನ್ಯ ರಾಜ್ಯ ಹಾಗೂ ಜಿಲ್ಲೆಗಳ ಕೂಲಿ ಕಾರ್ಮಿಕರಿಗೆ, ಬಡವರಿಗೆ, ವೃದ್ಧರಿಗೆ ಅಗತ್ಯ ಆಹಾರ, ನೀರು ಪೂರೈಕೆ ಪ್ರಾಮಾಣಿಕ ಸೇವೆ ಸಲ್ಲಿಸುವ ಎನ್ ಜಿಒ ಮೂಲಕ ಒದಗಿಸಲು, ಪಡಿತರ ಚೀಟಿ ಇಲ್ಲದವರಿಗೂ ಪಡಿತರ-ಹಾಲು ನೀಡುವ ಬಗ್ಗೆ ಒತ್ತಾಯಿವ ಕುರಿತು ಚರ್ಚಿಸಲಾಯಿತು. ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಪ್ರೊ| ಐ.ಜಿ. ಸನದಿ, ಇಸ್ಮಾಯಿಲ್ ತಮಟಗಾರ ಇನ್ನಿತರರು ಇದ್ದರು.