Advertisement

12 ದಿನವಾದರೂ ಪತ್ತೆಯಾಗದ ಹಂತಕರ ಸುಳಿವು

12:56 PM Nov 23, 2022 | Team Udayavani |

ಹುಬ್ಬಳ್ಳಿ: ಗುಂತಕಲ್ಲ-ಹುಬ್ಬಳ್ಳಿ ಪ್ಯಾಸೆಂಜರ್‌ ರೈಲಿನಲ್ಲಿ ನ. 10ರಂದು ಆಂಧ್ರಪ್ರದೇಶ ಮೂಲದ ವ್ಯಕ್ತಿಯ ಬರ್ಬರ ಹತ್ಯೆ ಮಾಡಿದ್ದ ಹಂತಕರ ಸುಳಿವು ಇನ್ನೂ ರೈಲ್ವೆ ಪೊಲೀಸರಿಗೆ ಪತ್ತೆಯಾಗಿಲ್ಲ.

Advertisement

ನೇಕಾರಿಕೆ ಮಾಡಿಕೊಂಡಿದ್ದ ಆಂಧ್ರಪ್ರದೇಶ ಕರ್ನೂಲ್‌ ಜಿಲ್ಲೆ ಅದೋನಿ ಗ್ರಾಮದ ಹನುಮಾನ ನಗರ ನಿವಾಸಿ ಆಂಜನೇಯ ಲಕ್ಷ್ಮಣ ಸಾಂದೋಪ (50) ಎಂಬುವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದರು. ನ. 10ರಂದು ಗುಂತಕಲ್‌-ಹುಬ್ಬಳ್ಳಿ ಪ್ಯಾಸೆಂಜರ್‌ ಸ್ಪೇಶಲ್‌ (07338) ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸಿಕೊಂಡು ಬರುತ್ತಿದ್ದ ಇವರನ್ನು ಹಂತಕರು ರಾತ್ರಿ ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿದ್ದರು.

ಹತ್ಯೆಗೆ ಸಂಬಂಧಿಸಿ ಪ್ರತ್ಯೇಕ ಎರಡು ತಂಡಗಳಲ್ಲಿ ತನಿಖೆ ನಡೆಸುತ್ತಿರುವ ರೈಲ್ವೆ ಪೊಲೀಸ್‌ ತನಿಖಾಧಿಕಾರಿಗಳು ಕೊಲೆಯಾದ ಆಂಜನೇಯ ಅವರ ನಿವಾಸಕ್ಕೂ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ. ಅವರ ಕುಟುಂಬದ ಮೂಲಗಳ ಪ್ರಕಾರ ಇವರೊಂದಿಗೆ ವೈಯಕ್ತಿಕವಾಗಿ ಯಾರ ದ್ವೇಷ, ಹಗೆತನ ಇರಲಿಲ್ಲ. ಯಾರು ಯಾವ ಉದ್ದೇಶಕ್ಕಾಗಿ ಕೊಲೆ ಮಾಡಿದ್ದಾರೆ ಎಂಬುದು ನಮಗೂ ತಿಳಿಯುತ್ತಿಲ್ಲವೆಂದು ಹೇಳುತ್ತಿದ್ದಾರೆಂದು ತಿಳಿದುಬಂದಿದೆ.

ತನಿಖಾ ತಂಡ ಈಗಾಗಲೇ ಅದೋನಿಯಿಂದ ಬಳ್ಳಾರಿ ಹಾಗೂ ಗುಂತಕಲ್ಲದಿಂದ ಹುಬ್ಬಳ್ಳಿ ವರೆಗಿನ ಮಾರ್ಗಮಧ್ಯದಲ್ಲಿನ ಎಲ್ಲ ಬಸ್‌ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿನ ಸಿಸಿ ಟಿವಿ ಫೂಟೇಜ್‌ಗಳನ್ನು ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಹಾಗೂ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಆದರೆ ಇದುವರೆಗೂ ಹಂತಕರ ಕುರಿತು ಖಚಿತ ಸುಳಿವು ದೊರೆತಿಲ್ಲ ಹಾಗೂ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲವೆಂದು ಹೇಳಲಾಗುತ್ತಿದೆ.

ಟಿಕೆಟ್‌ ಪಡೆದಿರಲಿಲ್ಲ?: ಆಂಜನೇಯ ಅವರು ತಮ್ಮ ಮಗಳನ್ನು ಭೇಟಿಯಾಗಲೆಂದು ಹುಬ್ಬಳ್ಳಿಗೆ ಬರುವಾಗ ಅದೋನಿಯಿಂದ ಬಳ್ಳಾರಿಗೆ ಬಸ್ಸಿನಲ್ಲಿ ಬಂದಿದ್ದಾರೆ. ಬಳ್ಳಾರಿಯಿಂದ ಹುಬ್ಬಳ್ಳಿಗೆ ಗುಂತಕಲ್ಲ-ಹುಬ್ಬಳ್ಳಿ ಪ್ಯಾಸೆಂಜರ್‌ ರೈಲಿನ ಸಾಮಾನ್ಯ ಬೋಗಿಯಲ್ಲಿ ಆಗಮಿಸುತ್ತಿದ್ದರು. ಆದರೆ ಇವರು ಬಳ್ಳಾರಿಯಿಂದ ರೈಲು ಹತ್ತುವಾಗ ಟಿಕೆಟ್‌ ತೆಗೆದುಕೊಳ್ಳದೆ ಅವಸರದಲ್ಲಿ ಹಾಗೇ ರೈಲು ಹತ್ತಿ ಬಂದಿರಬಹುದು ಎನ್ನಲಾಗುತ್ತಿದೆ.

Advertisement

ಏಕೆಂದರೆ ತನಿಖಾಧಿಕಾರಿಗಳ ತಂಡವು ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿದಾಗ ಆಂಜನೇಯ ಅವರು ಅಂದು ಟಿಕೆಟ್‌ ಕೌಂಟರ್‌ ಬಳಿಯೇ ಕಾಣಿಸಿಕೊಂಡಿಲ್ಲ ಎನ್ನಲಾಗುತ್ತಿದೆ.

ತೃತೀಯ ಲಿಂಗಿಗಳ ಕೃತ್ಯ?: ಆಂಜನೇಯ ಅವರು ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದಾಗ ಅದೇ ಬೋಗಿಯಲ್ಲಿದ್ದ ತೃತೀಯ ಲಿಂಗಿಗಳ ನಡುವೆ ಯಾವುದೋ ವಿಷಯವಾಗಿ ತಕರಾರು ನಡೆದಿರಬಹುದು. ಇದೇ ಸಿಟ್ಟು ಇರಿಸಿಕೊಂಡು ಅವರು ಕೊಲೆಮಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next