ಹುಬ್ಬಳ್ಳಿ: ಆಸ್ತಿ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಮುಖಂಡ ಮತ್ತು ಅವರ ಸಂಬಂಧಿಯು ಪಾಲಿಕೆ ಸದಸ್ಯೆ ಮನೆಗೆ ನುಗ್ಗಿ ಅವರ ಕುಟುಂಬದ ಸದಸ್ಯರ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಕಸಬಾಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಂಗ್ರೆಸ್ ಮುಖಂಡ ಗಿರೀಶ ಊರ್ಫ್ ಚನ್ನಬಸನಗೌಡ ಮತ್ತು ಹಳೇ ಹುಬ್ಬಳ್ಳಿಯ ಹರ್ಷವರ್ಧನ ಎಂಬುವರೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಲೋಕೇಶ ಎಂಬುವರು ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.
ತಾಲೂಕಿನ ಕಡಪಟ್ಟಿ ಹಳಿಯಾಳದಲ್ಲಿ ತನಗೆ ಸೇರಿದ 16 ಎಕರೆ 26 ಗುಂಟೆ ಜಮೀನನ್ನು ಗಿರೀಶ ತನ್ನ ಪತ್ನಿ ಹೆಸರಿಗೆ ಖರೀದಿಸಿ, ಖರೀದಿ ಪತ್ರ ಸಂಚಕಾರ ಮಾಡಿಸಿದ್ದ. ಆದರೆ, ಖರೀದಿ ಪತ್ರ ಆಗಿರಲಿಲ್ಲ. ಈ ನಡುವೆ ಆಸ್ತಿ ವಿಚಾರವಾಗಿ ಗಿರೀಶ ಹಾಗೂ ಆತನ ಪತ್ನಿ ನಡುವೆ ಜಗಳ ಉಂಟಾಗಿದೆ. ಈ ಕಾರಣಕ್ಕೆ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳಬೇಕೆಂಬ ಕಾರಣಕ್ಕೆ ರವಿವಾರ ರಾತ್ರಿ ತನ್ನ ಅಳಿಯ ಹರ್ಷವರ್ಧನನ್ನು ಕರೆದುಕೊಂಡು ಜಂಗ್ಲಿಪೇಟೆಯಲ್ಲಿರುವ ಮನೆಗೆ ನುಗ್ಗಿ, ಈವರೆಗೆ ಯಾಕೆ ಆಸ್ತಿ ಖರೀದಿ ಮಾಡಿಕೊಟ್ಟಿಲ್ಲ ಎಂದು ಅವಾಚ್ಯವಾಗಿ ನಿಂದಿಸಿದ್ದಾನೆ. ಅಲ್ಲದೆ ವಯೋವೃದ್ಧ ತಾಯಿ ಈರಮ್ಮ, ಚಿಕ್ಕಮ್ಮ ಪಾಲಿಕೆ ಸದಸ್ಯೆಯಾದ ಸುಮಿತ್ರಾ ಸೇರಿದಂತೆ ಕುಟುಂಬದ ಇತರೆ ಸದಸ್ಯರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ. ಗಾಯಾಳುಗಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಆರೋಪಿಸಿ ಲೋಕೇಶ ಅವರು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.
ಲಾಭದಾಸೆ ತೋರಿಸಿ ವಂಚನೆ:
ಮೂಲತಃ ಮುಳಗುಂದದ ಇಲ್ಲಿನ ನವನಗರ ಅಶ್ವಮೇಧನಗರದ ಪ್ರೀತಿ ಎಂಬುವರಿಗೆ ವಂಚಕರು ಕ್ರಿಪ್ಟೋದಲ್ಲಿ ಕಡಿಮೆ ಹಣ ಹೂಡಿ ಹೆಚ್ಚಿನ ಲಾಭ ಪಡೆದುಕೊಳ್ಳಬಹುದೆಂದು ಆಸೆ ತೋರಿಸಿ 80,300ರೂ. ವರ್ಗಾಯಿಸಿಕೊಂಡು ಮೋಸವೆಸಗಿದ್ದಾರೆ. ಪ್ರೀತಿ ಅವರು ಇನ್‌ಸ್ಟಾಗ್ರಾಮ್‌ದಲ್ಲಿ ಅವರ ಗೆಳತಿಗೆ ಬಂದಿದ್ದ ಮೂರು ತಾಸಿನಲ್ಲಿ ಕ್ರಿಪ್ಟೋದಲ್ಲಿ 30 ಸಾವಿರ ರೂ. ಹೂಡಿ 2.50 ಲಕ್ಷ ರೂ. ಗಳಿಸಬಹುದು ಎಂಬ ಲಿಂಕ್‌ವುಳ್ಳ ಸಂದೇಶಕ್ಕೆ ಸಂಪರ್ಕಿಸಿದ್ದಾರೆ. ಆಗ ಅಪರಿಚಿತನು ಯುಪಿಐ ಐಡಿ ಮೂಲಕ ಮೂರು ಸಾವಿರ ರೂ. ವರ್ಗಾಯಿಸಿಕೊಂಡಿದ್ದು, ತಾಂತ್ರಿಕ ತೊಂದರೆಯಿಂದ ಹಣ ಜಮಾ ಆಗಿಲ್ಲ. ಮತ್ತೆ ಹಣ ಹಾಕಿರಿ, ಜಿಎಸ್‌ಟಿ, ಬ್ರೋಕರೇಜ್ ಹಣ ಸೇರಿದಂತೆ ಇತರೆ ಕಾರಣಗಳನ್ನು ಹೇಳುತ್ತ ಹಂತ ಹಂತವಾಗಿ 80,300ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಪ್ರೀತಿಯವರು ಅಪರಿಚಿತನನ್ನು ಸಂಪರ್ಕಿಸಿ ಅಸಲು ಹಣ ಮರಳಿಸುವಂತೆ ಹೇಳಿದಾಗ, ಮೊಬೈಲ್‌ಗೆ ಲಿಂಕ್ ಕಳುಹಿಸಿದ್ದಾನೆ. ಅದರ ಸಹಾಯದಿಂದ ಇವರ ಇನ್‌ಸ್ಟಾಗ್ರಾಮ್ ಅನ್ನು ಎಕ್ಸಸ್ ಪಡೆದು, ಸ್ನೇಹಿತರಿಗೆ ಇವರ ಹೆಸರಲ್ಲಿ ಹಣದ ಬೇಡಿಕೆಯಿಟ್ಟು ವಂಚಿಸಲು ಪ್ರಯತ್ನಿಸಿದ್ದಾನೆ. ಈ ಕುರಿತು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮದ್ಯ ಸಾಗಿಸುತ್ತಿದ್ದ ಇಬ್ಬರ ಬಂಧನ:
ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್‌ಗಳನ್ನು ಸಾಗಾಟ ಮಾಡುತ್ತಿದ್ದ ಮುಲ್ಲಾ ಓಣಿಯ ಶಶಿಧರ ಮತ್ತು ಕಾರವಾರ ರಸ್ತೆ ಮಿಷನ್ ಕಾಂಪೌಂಡ್‌ನ ದೇವರಾಜ ಎಂಬುರನ್ನು ಉಪನಗರ ಪೊಲೀಸರು ಬಂಧಿಸಿ, ಅವರಿಂದ ಅಂದಾಜು 3,360 ರೂ. ಮೌಲ್ಯದ 96 ಟೆಟ್ರಾ ಪಾಕೆಟ್ಸ್ ಮತ್ತು 400 ನಗದು ವಶಪಡಿಸಿಕೊಂಡಿದ್ದಾರೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ನೇಹಿತನ ಸಾವಿನಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ:
ಸ್ನೇಹಿತ ಮೃತಪಟ್ಟಿದ್ದಕ್ಕೆ ಮನನೊಂದು ಹರಿತವಾದ ವಸ್ತುವಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ಇಲ್ಲಿನ ಕಾರವಾರ ರಸ್ತೆ ಎಂ.ಟಿ. ಮಿಲ್ ವೃತ್ತ ಬಳಿ ನಡೆದಿದೆ. ಗೌಂಡಿ ಕೆಲಸ ಮಾಡಿಕೊಂಡಿರುವ ಗಿರಣಿ ಚಾಳ ನಿವಾಸಿ ನಿರುಪಾದಿ ಕೆ. ಭಂಡಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈತನ ಸ್ನೇಹಿತ ರಮೇಶ ಇತ್ತೀಚೆಗೆ ಮೃತಪಟ್ಟಿದ್ದ. ಇದರಿಂದ ಮನನೊಂದು ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.