Advertisement

Hubli; ಶಾಸಕರ ಪರೇಡ್‌ ಮೂಲಕ ಮುಡಾ ಹಗರಣ ಮರೆಮಾಚಲು ಸಿಎಂ ಯತ್ನ: ಬಸವರಾಜ ಬೊಮ್ಮಾಯಿ

03:57 PM Aug 24, 2024 | Team Udayavani |

ಹುಬ್ಬಳ್ಳಿ: ಮುಡಾ ಹಗರಣ ಮರೆಮಾಚಲು ಮುಖ್ಯಮಂತ್ರಿ ದೆಹಲಿಯಲ್ಲಿ ಶಾಸಕರ‌ ಪರೇಡ್ ಮಾಡಲು ತಯಾರಿ ನಡೆಸುತಿದ್ದು, ಅವರು ಏನೇ ಮಾಡಲಿ ಬಿಡಲಿ ಅವರಿಗೆ ಬಿಟ್ಟಿದ್ದು.‌ ಆದರೆ ಈಗಾಗಲೇ ಕಾನೂನು ಹೋರಾಟ ಆರಂಭವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ಚೆಂಡು ಕಾನೂನು ಅಂಗಳಕ್ಕೆ ಹೋಗಿದ್ದು, ಅದರ ಮೂಲಕವೇ ಅದು ಇತ್ಯರ್ಥವಾಗಬೇಕು. ಏನೆಲ್ಲಾ ಬೆಳವಣಿಗೆ ಆಗುತ್ತವೆ, ಹೈಕೋರ್ಟ್‌ನಲ್ಲಿ ಏನು ತೀರ್ಮಾನವಾಗುತ್ತದೆ ನೋಡಿಕೊಂಡು ಅದರ ಮೇಲೆ ಮುಂದಿನ ಹೋರಾಟ ನಡೆಸಲಾಗುವುದು. ಮುಖ್ಯಮಂತ್ರಿಗಳು ತಮ್ಮ ಸ್ಥಾನ ಉಳಿಸಿಕೊಳ್ಳಲು ರಾಜಕೀಯ ತಂತ್ರ ಮಾಡುತ್ತಿದ್ದಾರೆ ಎಂದರು.

ಜಿಂದಾಲ್‌ ಗೆ ಕಡಿಮೆ ದರಕ್ಕೆ ಜಮೀನು ನೀಡಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರು ಅಧಿಕಾರವಿದ್ದಾಗ ಒಂದು. ವಿಪಕ್ಷದಲ್ಲಿದ್ದಾಗ ಒಂದು ರೀತಿ ನಡೆದುಕೊಳ್ಳುವ ಮೂಲಕ ಎರಡು ನಾಲಿಗೆ ತೋರಿದ್ದಾರೆ. ಇದು ಸಚಿವ ಸಂಪುಟದಲ್ಲಿ ಸಹ ವಿರೋಧ ವ್ಯಕ್ತವಾಗಿದ್ದು, ಜೊತೆಗೆ ಸಾರ್ವಜನಿಕವಾಗಿ ಸಹ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ಇದಕ್ಕೆ ವಿರೋಧ ಬಂದಾಗ ನಾವು ಸಹ ಸಚಿವ ಸಂಪುಟದಲ್ಲಿ ಹಿಂದೆ ಪಡೆದುಕೊಂಡೆವು. ಆದರೆ, ಆಗ ಇದೇ ಕಾಂಗ್ರೆಸ್‌ನವರು ಇದಕ್ಕೆ ಭಾರೀ ವಿರೋಧ ಮಾಡಿದ್ದರು. ಈಗ ಇವರೇ ಪರಭಾರೆ ಮಾಡಲು ಹೊರಟಿದ್ದಾರೆ ಎಂದು ಹರಿಹಾಯ್ದರು.

ರಾಜ್ಯಪಾಲರು ಕೆಲವು ಮಸೂದೆಗಳಿಗೆ ಸ್ಪಷ್ಟೀಕರಣ ಕೇಳಿ ವಾಪಾಸ್ ಕಳುಹಿಸಿದ್ದರ ಬಗ್ಗೆ ಸರ್ಕಾರ ವಿರೋಧ ವ್ಯಕ್ತಪಡಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವುದೇ ಮಸೂದೆಗೆ ರಾಜ್ಯಪಾಲರು ವಿರೋಧ ವ್ಯಕ್ತಪಡಿಸಿಲ್ಲ. ಯಾವ ರೀತಿಯೂ ಉದ್ದೇಶ ಪೂರ್ವಕವಾಗಿ ನಡೆದುಕೊಂಡಿಲ್ಲ. ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದ ಮಸೂದೆಗಳಿಗೆ ಉತ್ತರ ಕೊಡಿ ಎಂದು ಕೇಳಿದ್ದಾರೆ. ಸಾರ್ವಜನಿಕ ಅನುಕೂಲವಾಗದ ಮಸೂದೆಗೆ ತಡೆಹಿಡಿಯುವ ಅಧಿಕಾರ ರಾಜ್ಯಪಾಲರಿಗೆ ಇದೆ. ಅಲ್ಲದೆ ಮುಂದೆ ರಾಷ್ಟ್ರಪತಿಗಳಿಗೆ ಸಹ ಕಳುಹಿಸಿ ಕೊಡುವ ಅಧಿಕಾರವಿದೆ.‌ ಅದು ರಾಜ್ಯಪಾಲರು ಹಾಗೂ ಸರ್ಕಾರ ನಡುವೆ ಇರುವ ವ್ಯವಹಾರ ಎಂದರು.

Advertisement

Udayavani is now on Telegram. Click here to join our channel and stay updated with the latest news.