Advertisement

ಹುಬ್ಬಳ್ಳಿ: ಶತಮಾನದ ಶಾಲೆಗಿಲ್ಲ ಸುಸಜ್ಜಿತ ಆಟದ ಮೈದಾನ

06:17 PM Jan 07, 2023 | Team Udayavani |

ಹುಬ್ಬಳ್ಳಿ: ಶತಮಾನದ ಇತಿಹಾಸ ಹೊಂದಿರುವ ಶಾಲೆಗೆ ಸುಸಜ್ಜಿತ ಆಟದ ಮೈದಾನವಿಲ್ಲ, ಇದ್ದರೂ ಮಣ್ಣು ಕಲ್ಲುಗಳಿಂದ ಕೂಡಿದ್ದು, ಮಕ್ಕಳ ಕ್ರೀಡೆಗೆ ಯೋಗ್ಯವಾಗಿಲ್ಲ. ಎಲ್ಲೆಂದರಲ್ಲಿ ಕಲ್ಲುಗಳು, ಪ್ಲಾಸ್ಟಿಕ್‌ ಬಾಟಲ್‌, ಪ್ಲಾಸ್ಟಿಕ್‌ ಹಾಳೆಗಳು, ಇದರಲ್ಲಿಯೇ ಮಕ್ಕಳ ಕ್ರೀಡಾಕೂಟ.

Advertisement

ಇದು ಮಹಾನಗರ ಪಾಲಿಕೆ ಅಧೀನದಲ್ಲಿರುವ ಲ್ಯಾಮಿಂಗ್ಟನ್‌ ಬಾಲಕರ ಪ್ರೌಢಶಾಲೆಯ ಕಥೆ-ವ್ಯಥೆ. ಶುಕ್ರವಾರ ಲ್ಯಾಮಿಂಗ್ಟನ್‌ ಬಾಲಕರ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ವಾರ್ಷಿಕ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು. ಶಾಲೆಯ ಮುಂಭಾಗದಲ್ಲಿರುವ ಹಾಳಾದ ಮೈದಾನದಲ್ಲಿ ಶಿಕ್ಷಕರು ಆಟೋಟ ಸ್ಪರ್ಧೆಗಳನ್ನು ನಡೆಸುತ್ತಿರುವುದು ಕಂಡುಬಂದಿತು.

ಏರಿಳಿತದ ರಸ್ತೆಯಲ್ಲಿ ಓಟದ ಸ್ಪರ್ಧೆ, ಮೈದಾನದ ಒಂದು ಮೂಲೆಯಲ್ಲಿ ಹಾಕಲಾಗಿರುವ ಮರಳಿನ ಮೇಲೆ ಕುಸ್ತಿ ಪಂದ್ಯಗಳು, ಇನ್ನೊಂದು ಬದಿಯಲ್ಲಿ ಚಕ್ರ ಎಸೆತ…ಇದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿ.

ಸಭಾಪತಿಗಳು ದೈಹಿಕ ಶಿಕ್ಷಕರಾಗಿದ್ದ ಶಾಲೆ: ವಿಧಾನ ಪರಿಷತ್‌ ಸಭಾಪತಿ ಆಗಿರುವ ಬಸವರಾಜ ಹೊರಟ್ಟಿ ಅವರು ಸೇವೆ ಸಲ್ಲಿಸಿರುವ ಶಾಲೆ ಇದಾಗಿದೆ. ಹು-ಧಾ ಮಹಾನಗರ ಪಾಲಿಕೆ ಉತ್ತರದಾಯಿತ್ವ ಹೊಂದಿದೆ. ಈಗಾಗಲೇ ಶಾಲೆಯ ಅಭಿವೃದ್ಧಿಗೆ ಪಾಲಿಕೆ ಹಲವಾರು ಕ್ರಮ ಕೈಗೊಂಡಿದ್ದು, ಮೈದಾನದ ವಿಷಯದಲ್ಲಿ ಮಾತ್ರ ನಿರಾಸಕ್ತಿ ಎದ್ದು ಕಾಣುತ್ತಿದೆ. ಈ ಕುರಿತು ಬಸವರಾಜ ಹೊರಟ್ಟಿ ಅವರು ಸಹ ಗಮನ ಹರಿಸಬೇಕಾಗಿದೆ.

ವಾರ್ಷಿಕ ಕ್ರೀಡಾಕೂಟ
ಮಹಾನಗರ ಪಾಲಿಕೆಯ ಲ್ಯಾಮಿಂಗ್ಟನ್‌ ಬಾಲಕರ ಪ್ರೌಢಶಾಲೆಯಲ್ಲಿ ಶುಕ್ರವಾರ ವಾರ್ಷಿಕ ಕ್ರೀಡಾಕೂಟ ನಡೆಸಲಾಯಿತು. ಶಾಲೆಯ ವಿದ್ಯಾರ್ಥಿಗಳಿಗೆ ಮೂರು ವಿಭಾಗದಲ್ಲಿ ವಿಂಗಡಿಸಿ 100, 200, 400, 800 ಹಾಗೂ 1500 ಮೀಟರ್‌ ಓಟದ ಸ್ಪರ್ಧೆ ನಡೆಸಲಾಯಿತು. ಜೊತೆಗೆ ಕುಸ್ತಿ, ಗುಂಡು ಎಸೆತ, ಲಾಂಗ್‌ಜಂಪ್‌, ಚಕ್ರ ಎಸೆತ್‌, ಚೆಸ್‌ ಪಂದ್ಯಾವಳಿ ನಡೆಸಲಾಯಿತು.

Advertisement

ನೆಹರು ಮೈದಾನದಲ್ಲಿ ನಡೆಯುತ್ತಿತ್ತು
ಪ್ರತಿವರ್ಷ ಲ್ಯಾಮಿಂಗ್ಟನ್‌ ಶಾಲೆಯ ವಾರ್ಷಿಕ ಕ್ರೀಡಾಕೂಟಗಳನ್ನು ಪಕ್ಕದ ನೆಹರು ಮೈದಾನದಲ್ಲಿ ಆಯೋಜನೆ ಮಾಡಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್‌ ಹಿನ್ನೆಲೆಯಲ್ಲಿ ಕ್ರೀಡಾಕೂಟ ಆಯೋಜನೆ ಮಾಡಲಾಗಿಲ್ಲ. ಈ ವರ್ಷ ಆಯೋಜನೆ ಮಾಡಿದ್ದರೂ ನೆಹರು ಮೈದಾನ ಕಾಮಗಾರಿ ಹಿನ್ನೆಲೆಯಲ್ಲಿ ಮೈದಾನದಲ್ಲಿ ಕ್ರೀಡಾಕೂಟ ಆಯೋಜನೆಗೆ ಅವಕಾಶ ಸಿಗಲಿಲ್ಲ. ಆದ್ದರಿಂದ ಇರುವ ಮೈದಾನದಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕ ಕ್ರೀಡಾಕೂಟ ನಡೆಸಲಾಗುತ್ತಿದೆ.
ಡಿ.ಜಿ. ಜಾಧವ, ದೈಹಿಕ ಶಿಕ್ಷಣ ಶಿಕ್ಷಕ

*ಬಸವರಾಜ ಹೂಗಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next