ಹುಬ್ಬಳ್ಳಿ: ದೇಶದ ಸಮಗ್ರ ಅಭಿವೃದ್ಧಿ ಹಾಗೂ ಒಗ್ಗಟ್ಟಿನ ದೃಷ್ಟಿಯಿಂದ ರಾಷ್ಟ್ರದಲ್ಲಿ ಏಕರೂಪ ಶಿಕ್ಷಣ ಜಾರಿ ಅಗತ್ಯ. ಈ ಕುರಿತು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಚಿಂತನೆ ನಡೆಸಬೇಕೆಂದು ಹುಬ್ಬಳ್ಳಿ ಗ್ರಾಮೀಣ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ| ಎಸ್.ಆರ್. ಗುಂಜಾಳ ಪ್ರತಿಪಾದಿಸಿದರು.
ತಾಲೂಕಿನ ಕೋಳಿವಾಡ ಗ್ರಾಮದ ಮಹಾಕವಿ ಕುಮಾರವ್ಯಾಸ ಸ್ಮಾರಕ ಸಾಂಸ್ಕೃತಿಕ ಭವನದಲ್ಲಿ ನಡೆದ 7ನೇ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರ ಭಾಷಣದಲ್ಲಿ ರಾಷ್ಟ್ರದಲ್ಲಿ ಏಕರೂಪ ಶಿಕ್ಷಣ ಅಗತ್ಯತೆ ಕುರಿತು ಅವರು ಒತ್ತಾಯಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜ್ಯ ತನ್ನದೆಯಾದ ಶಿಕ್ಷಣ ಪದ್ಧತಿ ಅಳವಡಿಸಿಕೊಂಡಿದ್ದು, ಇದು ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸಮಂಜಸವಲ್ಲ. ಇಂದಿನ ಶಿಕ್ಷಣ ಪದ್ಧತಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ರಾಷ್ಟ್ರಾದ್ಯಂತ ಏಕರೂಪ ಶಿಕ್ಷಣ ಪದ್ಧತಿ ಜಾರಿಗೊಳಿಸುವಲ್ಲಿ ಸರಕಾರಗಳು ಚಿಂತಿಸಬೇಕೆಂದು ಅಭಿಪ್ರಾಯಪ್ಟಟರು.
ಆಂಗ್ಲ ಮಾಧ್ಯಮ ಸರಿಯಲ್ಲ: ಕನ್ನಡ ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸದ ಸರಕಾರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಕ್ಕೆ ಮುಂದಾಗಿರುವುದು ಎಷ್ಟು ಸಮಂಜಸ ಎಂಬುವುದನ್ನು ಚಿಂತಿಸಬೇಕು. ರಾಜ್ಯದಲ್ಲಿ ಸುಮಾರು 5,272 ಗ್ರಾಮಗಳಲ್ಲಿ ಸರಕಾರಿ ಶಾಲೆಗಳಿಲ್ಲ ಎನ್ನುವುದು ಖೇದಕರ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. 2011ರಲ್ಲಿ 3000ಕ್ಕೂ ಅಧಿಕ ಶಾಲೆಗಳನ್ನು ವಿಲೀನಗೊಳಿಸಿದ್ದು ಅವೈಜ್ಞಾನಿಕ. ಇದರಿಂದ ಸಾವಿರಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗಲು ಕಾರಣವಾಗಿದೆ. 1996ರ ನಂತರದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಒಂದೇ ಒಂದು ಶಾಲೆ ಆರಂಭಿಸಿರುವುದು ಕಂಡುಬಂದಿಲ್ಲ ಎಂದರು.
ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಗಮಕ ವ್ಯಾಖ್ಯಾನಕಾರ ಎ.ವಿ. ಪ್ರಸನ್ನ, ಕುಮಾರವ್ಯಾಸನ ದೃಷ್ಟಿಯಲ್ಲಿ ಕೃಷಿಯೇ ಐಶ್ವರ್ಯ. ಕೃಷಿ ಅಭಿವೃದ್ಧಿಯಿಂದ ಸಕಲ ಪ್ರಗತಿ ಸಾಧ್ಯ ಎಂದು ವಿವರಿಸಿದ್ದಾರೆ ಎಂದರು.
ಸಾಹಿತಿ ಡಾ| ವಿಜಯಲಕ್ಷ್ಮೀ ಬಾಳೆಕುಂದ್ರಿ ಮಾತನಾಡಿ, ಮಾತೃ ಭಾಷೆಯಲ್ಲಿ ಪಡೆಯುವ ಶಿಕ್ಷಣ ವ್ಯಕ್ತಿತ್ವ ವಿಕಸನದ ಜೊತೆಗೆ ಎಲ್ಲಾ ಭಾಷೆಗಳ ಮೇಲೆ ಪ್ರೌಢಿಮೆ ಸಾಧಿಸಲು ಸಾಧ್ಯ. ಸರಕಾರ 1000 ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಮುಂದಾಗಿರುವುದು ಕನ್ನಡ ಶಿಕ್ಷಣ ಪದ್ಧತಿ ನಶಿಸಲು ಕಾರಣ. ಕನ್ನಡ ಭಾಷೆಯ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಕೊಡಿಸಲು ಪಣ ತೊಡಬೇಕು. ಆಂಗ್ಲ ಮಾಧ್ಯಮ ಶಾಲೆಗಳ ಮೇಲಿನ ವ್ಯಾಮೋಹ ಬಿಡಬೇಕು ಎಂದರು.
ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಕಸಾಪ ಜಿಲ್ಲಾಧ್ಯಕ್ಷ ಡಾ| ಲಿಂಗರಾಜ ಅಂಗಡಿ, ಎಪಿಎಂಸಿ ಅಧ್ಯಕ್ಷ ಜಗನ್ನಾಥಗೌಡ ಸಿದ್ದನಗೌಡ್ರ, ಕುಮಾರವ್ಯಾಸ ವಂಶಸ್ಥ ದತ್ತಾತ್ರೇಯ ಪಾಟೀಲ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಿರೂಪಾಕ್ಷಪ್ಪ ಬಾವಿಕಟ್ಟಿ, ಪ್ರೊ| ಕೆ.ಎಸ್. ಕೌಜಲಗಿ, ಡಾ| ಜಿನದತ್ತ ಹಡಗಲಿ, ಎಸ್.ಎಸ್. ದೊಡಮನಿ, ಮಹೇಶ ಪತ್ತಾರ, ಸಿದ್ದು ಹಿರೇಮಠ, ಸಿದ್ದರಾಮಪ್ಪ ಶಿವಳ್ಳಿ ಇನ್ನಿತರರಿದ್ದರು.