Advertisement

ತ್ಯಾಜ್ಯ ಸಂಗ್ರಹ-ವಿಲೇವಾರಿ ಲೋಪ ಅನಾವರಣ

04:45 PM Jul 01, 2022 | Team Udayavani |

ಹುಬ್ಬಳ್ಳಿ: ಅವಳಿನಗರದಲ್ಲಿನ ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿ, ಸ್ವಚ್ಛತೆ ವಿಷಯವಾಗಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸುದೀರ್ಘ‌ ಚರ್ಚೆ ನಡೆಯಿತಲ್ಲದೆ, ತ್ಯಾಜ್ಯ ವಿಚಾರದಲ್ಲಿ ಲೋಪ-ಕೊರತೆಗಳು ಅನಾವರಣಗೊಂಡವು.

Advertisement

ಸುಮಾರು ನಾಲ್ಕು ದಶಕಗಳಿಂದ ಸಂಗ್ರಹಗೊಂಡ ತ್ಯಾಜ್ಯದ ವಿಲೇವಾರಿ, ಸ್ವಚ್ಛತೆ ಕುರಿತಾಗಿ ಸಮಗ್ರ ಮಾಹಿತಿ ಸಂಗ್ರಹಿಸಿ ಪರಿಹಾರ ರೂಪದ ವರದಿಯನ್ನು ಮುಂದಿನ ಸಾಮಾನ್ಯ ಸಭೆಗೆ ಮಂಡಿಸುವಂತೆ ಮಹಾಪೌರ ಈರೇಶ ಅಂಚಟಗೇರಿ, ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ವೀರಣ್ಣ ಸವಡಿ ಗಮನ ಸೆಳೆಯುವ ಸೂಚನೆ ಮಂಡಿಸಿದರು.

ವಿಪಕ್ಷ ನಾಯಕ ದೊರೈರಾಜ್‌ ಮಣಿಕುಂಟ್ಲಾ ಅನುಮೋದಿಸಿದರು. ತ್ಯಾಜ್ಯ ಸಂಗ್ರಹ-ವಿಲೇವಾರಿ ಬಗ್ಗೆ ಮಾಹಿತಿ ನೀಡುವಂತೆ ಕೇಳಿದರು.

ಪಾಲಿಕೆ ಅಧಿಕಾರಿ ಸಂತೋಷ ಮಾತನಾಡಿ, ಪಾಲಿಕೆಯಲ್ಲಿ 444 ಕಾಯಂ ಪೌರಕಾರ್ಮಿಕರು, 984 ನೇರ ವೇತನ ಪಾವತಿ ಪೌರಕಾರ್ಮಿಕರು ಹಾಗೂ 785 ಗುತ್ತಿಗೆಯಾಧಾರಿತ ಸೇರಿದಂತೆ ಒಟ್ಟು 2213 ಪೌರಕಾರ್ಮಿಕರು ಇದ್ದಾರೆ. 191 ಆಟೋಟಿಪ್ಪರ್‌ಗಳು ಇದ್ದು, 75 ಟ್ರ್ಯಾಕ್ಟರ್, 2 ಜೆಸಿಬಿ, 16 ಜೆಟ್ಟಿಂಗ್‌ ಯಂತ್ರಗಳು, 6 ಹೂಳೆತ್ತುವ ಯಂತ್ರಗಳು, 5 ಕಾಂಪ್ಯಾಕ್ಟರ್‌ ಕೇಂದ್ರ ಇವೆ. 39 ಜನ ಆರೋಗ್ಯ ನಿರೀಕ್ಷಕರು, 8 ಜನ ಪರಿಸರ ಎಂಜಿನಿಯರ್‌ ಗಳು ಇದ್ದಾರೆ. ನಿತ್ಯ ಸಂಗ್ರಹಗೊಳ್ಳುವ ಅಂದಾಜು 450-500 ಟನ್‌ ತ್ಯಾಜ್ಯದ ಪೈಕಿ ಹಸಿ ತ್ಯಾಜ್ಯದಲ್ಲಿ ಶೇ.80 ತ್ಯಾಜ್ಯ ಕಾಪೋಸ್ಟ್‌ ಆಗಿ ಪರಿವರ್ತಿಸಲಾಗುತ್ತಿದ್ದು, ಇದುವರೆಗೆ ಸುಮಾರು 130 ಟನ್‌ ಕಾಂಪೋಸ್ಟ್‌ ಮಾರಾಟ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ‌

5 ಲಕ್ಷ ಟನ್‌ ತ್ಯಾಜ್ಯ ಸಂಗ್ರಹ: ನಿತ್ಯ ಹುಬ್ಬಳ್ಳಿಯಲ್ಲಿ ಸುಮಾರು 300 ಟನ್‌, ಧಾರವಾಡದಲ್ಲಿ ಸುಮಾರು 150 ಟನ್‌ ತ್ಯಾಜ್ಯ ಸಂಗ್ರಹವಾಗುತ್ತಿದೆ. ಜತೆಗೆ ಅವಳಿನಗರದಲ್ಲಿ ಕಳೆದ 40 ವರ್ಷಗಳಿಂದ ಹುಬ್ಬಳ್ಳಿಯಲ್ಲಿ 3.5 ಲಕ್ಷ ಟನ್‌ ಹಾಗೂ ಧಾರವಾಡದಲ್ಲಿ 1.2 ಲಕ್ಷ ಟನ್‌ ತ್ಯಾಜ್ಯ ಸಂಗ್ರಹಗೊಂಡು ವಿಲೇವಾರಿಯಾಗದೆ ಉಳಿದಿದೆ. ಇದರ ವಿಲೇವಾರಿ ಅತ್ಯವಶ್ಯವಾಗಿದೆ. ಸಂಗ್ರಹಗೊಂಡ ತ್ಯಾಜ್ಯವನ್ನು ಎನ್‌ ಟಿಪಿಸಿಯಿಂದ ಕೋಲ್‌ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ. ಇಂತಹ ಕಾರ್ಯಕ್ಕೆ ಕೇಂದ್ರ ಸರಕಾರದಿಂದ ಸಬ್ಸಿಡಿಯೂ ದೊರೆಯಲಿದ್ದು, ಅಂತಹ ಯೋಜನೆ ಇಲ್ಲಿಯೂ ಅನುಷ್ಠಾನಗೊಂಡರೆ ಸಂಗ್ರಹ ತ್ಯಾಜ್ಯ ಸಮಸ್ಯೆ ನಿವಾರಣೆ ಆಗಲಿದೆ ಎಂದರು.

Advertisement

ಕಾಂಗ್ರೆಸ್‌ ಸದಸ್ಯ ಸಂದೀಲ್‌ ಕುಮಾರ, ಎಐಎಂಐನ ನಜೀರ್‌ ಹೊನ್ಯಾಳ ಮಾತನಾಡಿ, ಅಧಿಕಾರಿಗಳು ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ವಾರ್ಡ್‌ ಗೆ 30 ಪೌರಕಾರ್ಮಿಕರು ಬೇಕು. ಆದರೆ, ವಾಸ್ತವಿಕವಾಗಿ ಅನೇಕ ವಾರ್ಡ್‌ ಗಳಿಗೆ 3-4 ಪೌರಕಾರ್ಮಿಕರು ಇದ್ದಾರೆ ಎಂದರು. ವಿಪಕ್ಷ ನಾಯಕ ದೊರೈರಾಜ್‌ ಮಣಿಕುಂಟ್ಲಾ, ಅನೇಕ ಸದಸ್ಯರು ತ್ಯಾಜ್ಯ ಸಮಸ್ಯೆ ಮೇಲೆ ಮಾತನಾಡಿದರು. ಪಾಲಿಕೆ ಆಯುಕ್ತ ಡಾ| ಬಿ.ಗೋಪಾಲಕೃಷ್ಣ ಮಾತನಾಡಿ, ಒಟ್ಟು ಪೌರಕಾರ್ಮಿಕರಲ್ಲಿ ಶೇ.10 ಜನರು ಗೈರಾಗಿರುತ್ತಾರೆ. 50 ಪೌರಕಾರ್ಮಿಕರನ್ನು ಅತಿಗಣ್ಯರ ಆಗಮನ ಇನ್ನಿತರ ತುರ್ತು ಕಾರ್ಯಕ್ಕೆ ಕಾಯ್ದಿರಿಸಿ, ಉಳಿದ ಪೌರಕಾರ್ಮಿಕರನ್ನು 82 ವಾರ್ಡ್‌ಗಳಿಗೆ ಹಂಚಿಕೆ ಮಾಡಲಾಗುವುದು. ವಾರ್ಡ್‌ ನಲ್ಲಿನ ಜನಸಂಖ್ಯೆ, ವಾರ್ಡ್‌ ವಿಸ್ತಾರ ಇನ್ನಿತರ ವಿಷಯಗಳನ್ನು ಗಮನಿಸಿ ಹಂಚಿಕೆ ಮಾಡುವ ಚಿಂತನೆ ಹೊಂದಿದ್ದೇವೆ. ಕಾಯಂ ಪೌರಕಾರ್ಮಿಕರು, ನೇರ ವೇತನ ಹಾಗೂ ಗುತ್ತಿಗೆಯಾಧಾರಿತ ಪೌರಕಾರ್ಮಿಕರು ಸೇರಿ ತಲಾ ಆರು ಜನರಂತೆ ಒಂದು ವಾರ್ಡ್‌ಗೆ ನಿಯೋಜನೆ ಮಾಡಲು ಯೋಜಿಸಲಾಗಿದ್ದು, ಸದಸ್ಯರು ಒಪ್ಪಿಗೆ ನೀಡಿದರೆ ಇದನ್ನು ಅನುಷ್ಠಾನಕ್ಕೆ ತರುವುದಾಗಿ ಹೇಳಿದರು.

ಮಹಾಪೌರ ಈರೇಶ ಅಂಚಟಗೇರಿ ಮಾತನಾಡಿ, ಪ್ರತಿ ವಲಯವಾರು ಸದಸ್ಯರನ್ನು ಆಹ್ವಾನಿಸಿ ಪೌರಕಾರ್ಮಿಕರ ವಿಂಗಡಣೆ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಬೇಕು. ಸಂಗ್ರಹಿತ ತ್ಯಾಜ್ಯ ವಿಲೇವಾರಿ ಕುರಿತಾಗಿ ಅಗತ್ಯ ಮಾಹಿತಿ ಸಂಗ್ರಹಿಸಿ ಮುಂದಿನ ಸಾಮಾನ್ಯ ಸಭೆಗೆ ಮಂಡಿಸಬೇಕೆಂದು ಆದೇಶಿಸಿದರು. ಕನಿಷ್ಟ 500 ಜನರಿಗೆ ಒಬ್ಬರು ಪೌರಕಾರ್ಮಿಕರು ಅಗತ್ಯವಾಗಿದ್ದು, ಇದರ ಪ್ರಕಾರ ಇನ್ನೂ 300 ಪೌರಕಾರ್ಮಿಕರು ಬೇಕು. ಸುಮಾರು 250 ಆಟೋಟಿಪ್ಪರ್‌, ಪ್ರತಿ ಎರಡು ವಾರ್ಡ್‌ಗೆ ಒಬ್ಬ ಆರೋಗ್ಯ ನಿರೀಕ್ಷಕ, ವಲಯಕ್ಕೆ ಒಬ್ಬರು ಪರಿಸರ ಎಂಜಿನಿಯರ್‌ ಬೇಕಾಗಿದೆ. ಆಟೋಟಿಪ್ಪರ್‌ಗಳ ದುರಸ್ತಿ ಕಾರ್ಯವನ್ನು ಆಯಾ ವಲಯಾಧಿಕಾರಿಗಳಿಗೆ ನೀಡುವುದು ಒಳಿತು. –ವೀರಣ್ಣ ಸವಡಿ, ಪಾಲಿಕೆ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next