ಧಾರವಾಡ: ಸಶಸ್ತ್ರ ಮೀಸಲು ಪೊಲೀಸ್ ಕಾನ್‌ಸ್ಟೆàಬಲ್‌ಗಳ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಮೂಲ ಅಭ್ಯರ್ಥಿ ಬದಲಾಗಿ ನಕಲಿ ಅಭ್ಯರ್ಥಿ ಹಾಜರಾಗಿ ನೌಕರಿ ಗಿಟ್ಟಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿದ್ದು, ಈ ಕುರಿತಂತೆ ಐದು ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಪಿ.ಕೃಷ್ಣಕಾಂತ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾಮದ ಶಿವಪ್ಪ ಪಡೆಪ್ಪನವರ, ಮಂಜುನಾಥ ಕರಿಗಾರ, ಗೋಕಾಕ ತಾಲೂಕಿನ ನಲ್ಲನಟ್ಟಿ ಗ್ರಾಮದ ಬಸವರಾಜ ಮೇಲ್ಮಟ್ಟಿ, ಬಸವರಾಜ ದೇವರಮನಿ ಹಾಗೂ ಆನಂದ ಕೋಳೂರ ಎಂಬುವರನ್ನು ಬಂ ಧಿಸಲಾಗಿದ್ದು, ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.
ಸಶಸ್ತ್ರ ಮೀಸಲು ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳ ಭರ್ತಿಗೆ ಅ ಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ 2020ರ ಡಿ.19ರಂದು ದೇಹದಾಡ್ಯìತೆ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಮೂಲ ಅಭ್ಯರ್ಥಿ ಆರೋಪಿ ಶಿವಪ್ಪ ಪಡೆಪ್ಪನವರ ತನ್ನ ಬದಲಿಗೆ ನಕಲಿ ಅಭ್ಯರ್ಥಿ ಆನಂದ ಕೋಳೂರ ಎಂಬುವರನ್ನು ಹಾಜರುಪಡಿಸಿದ್ದ. ಅದರಲ್ಲಿ ಆತ ಉತ್ತೀರ್ಣನಾಗಿದ್ದ. ವೈದ್ಯಕೀಯ ಪರೀಕ್ಷೆ ನಂತರ ಶಿವಪ್ಪ 2021ರ ಮಾ.7ರಂದು ನೇಮಕಾತಿ ಆದೇಶ ಪಡೆದು ಏ.3ರಂದು ಕರ್ತವ್ಯಕ್ಕೆ ಹಾಜರಾಗಿದ್ದ ಎಂದು ತಿಳಿಸಿದರು.
ಬೆರಳು ಮುದ್ರೆಯಿಂದ ಸಿಕ್ಕಿ ಬಿದ್ದರು: ನೇಮಕಗೊಂಡ ಕಾನ್‌ಸ್ಟೆಬಲ್‌ಗಳ ಬೆರಳು ಮುದ್ರೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಧಾರವಾಡದ ಬೆರಳು ಮುದ್ರೆ ಘಟಕದ ಅ ಧಿಕಾರಿಗಳಿಗೆ ಸೂಚಿಸಲಾಗಿತ್ತು. ಈ ವೇಳೆ ಶಿವಪ್ಪ ಪಡೆಪ್ಪನವರ ಎಂಬ ಅಭ್ಯರ್ಥಿಯ ವೈದ್ಯಕೀಯ ಪರೀಕ್ಷೆಯ ಕಾಲಕ್ಕೆ ಹಾಗೂ ದೇಹದಾಡ್ಯತೆ ಪರೀಕ್ಷೆಯ ಕಾಲಕ್ಕೆ ಪಡೆದ ಎಡಗೈ ಹೆಬ್ಬರಳಿನ ಮುದ್ರೆಯೊಂದಿಗೆ ಹೊಂದಾಣಿಕೆಯಾಗಿಲ್ಲ ಎಂದು ತಜ್ಞರು ವರದಿ ನೀಡಿದ್ದು, ಇದರಿಂದ ಅನುಮಾನಗೊಂಡು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬಯಲಿಗೆ ಬಂದಿದೆ ಎಂದರು.
ಮೂಲ ಅಭ್ಯರ್ಥಿ ಶಿವಪ್ಪ ಪಡೆಪ್ಪನವರ ಓದಿನಲ್ಲಿ ಉತ್ತಮನಾಗಿದ್ದರೆ, ದೇಹದಾಡ್ಯìತೆ ಪರೀಕ್ಷೆ ಪಾಸ್ ಮಾಡಲು ಅಸಮರ್ಥನಾಗಿದ್ದ. ಹೀಗಾಗಿ ತನ್ನ ಸ್ನೇಹಿತ ಮಂಜುನಾಥ ಕರಿಗಾರ ಮೂಲಕ ಗೋಕಾಕನ ಬಸವರಾಜ ಮೇಲ್ಮಟ್ಟಿ ಹಾಗೂ ಬಸವರಾಜ ದೇವರಮನಿ ಎಂಬುವರನ್ನು ಸಂಪರ್ಕಿಸಿ, ಆನಂದ ಕೋಳೂರ ಎಂಬಾತನನ್ನು ದೇಹದಾಡ್ಯತೆಯ ಪರೀಕ್ಷೆಗೆ ಒಪ್ಪಿದ್ದರು.
ಅದಕ್ಕೆ ಶಿವಪ್ಪ 2.30 ಲಕ್ಷ ರೂ. ನೀಡಿದ್ದ. ಈ ಹಣವನ್ನು ಆರೋಪಿಗಳು ಹಂಚಿಕೊಂಡಿರುವುದು ಪ್ರಕರಣದ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದಲ್ಲದೇ ನಕಲಿ ಅಭ್ಯರ್ಥಿ ಆನಂದ ಕೋಳೂರು ಎಂಬಾತನ ವಿರುದ್ಧ ಈ ಹಿಂದೆ ಇಂತಹದೇ ಪ್ರಕರಣದಲ್ಲಿ ಹಾಸನದ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿದರು.