ಹುಬ್ಬಳ್ಳಿ: ಜಮೀನು ವ್ಯವಹಾರಕ್ಜೆ ಸಂಬಂಧಿಸಿ ನಟೋರಿಯಸ್ ರೌಡಿ ಬಚ್ಚಾ ಖಾನ್ ಸಹಚರರ ತಂಡವು ನಗರದ ವ್ಯಕ್ತಿಯೊಬ್ಬರಿಗೆ ಕೋಟ್ಯಂತರ ರೂ. ಕೊಡುವಂತೆ ನಿರಂತರವಾಗಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಹು-ಧಾ. ಸಿಸಿಬಿ ಪೊಲೀಸರು ನಟೋರಿಸ್ ರೌಡಿ ಬಚ್ಚಾಖಾನ್ ಜೊತೆ ಆತನ ಏಳು ಸಹಚರರನ್ನು ಬಂಧಿಸಿದ್ದಾರೆ.
ಜಮೀನು ವ್ಯವಹಾರಕ್ಕೆ ಸಂಬಂಧಿಸಿ ಖರೀದಿದಾರರು ಹಾಗೂ ಮಾರಾಟಗಾರರ ನಡುವೆ ವಿವಾದವುಂಟಾದ ಹಿನ್ನಲೆಯಲ್ಲಿ ಬಚ್ಚಾಖಾನ್ ಸಹಚರರ ತಂಡವು ಜಮೀನು ಮಾರಾಟಗಾರರಿಗೆ ಕೋಟ್ಯಂತರ ರೂ. ಕೊಡುವಂತೆ ನಿರಂತರವಾಗಿ ಕರೆಗಳನ್ನು ಮಾಡಿ ಜೀವ ಬೆದರಿಕೆ ಹಾಕುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನು ಮಾಲೀಕರು ಸಿಸಿಬಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಬಚ್ಚಾಖಾನ್‌ನ ಸಹಚರರಾದ ಹು-ಧಾ.ದ ಏಳು ಜನರನ್ನು ಬಂಧಿಸಲಾಗಿದ್ದು, ಬೆಂಗಳೂರಿನಲ್ಲಿ ಪ್ರಮುಖ ಆರೋಪಿ ಬಚ್ಚಾಖಾನ್‌ನನ್ನು ವಶಕ್ಕೆ ಪಡೆದು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಆಯುಕ್ತ ಎನ್. ಶಶಿಕುಮಾರ ಸುದ್ದಿಗಾರರಿಗೆ ತಿಳಿಸಿದರು.
ಬಚ್ಚಾಖಾನ ಮೇಲೆ ಧಾರವಾಡದ ಫ್ರೂಟ್ ಇರ್ಫಾನ್ ಕೊಲೆಗೆ ಸಂಬಂಧಿಸಿ ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಈತ 45 ದಿನಗಳ ಕಾಲ ಪೆರೋಲ್ ಮೇಲೆ ಬಳ್ಳಾರಿ ಕಾರಾಗೃಹದಿಂದ ಹೊರಗಡೆ ಬಂದಿದ್ದ ಎಂದು ತಿಳಿಸಿದರು.
ಇದನ್ನೂ ಓದಿ: Haryana ಗೆಲ್ಲಲು ಕೈ ಕಸರತ್ತು: ರಾಹುಲ್ ಭೇಟಿಯಾದ ವಿನೇಶ್, ಬಜರಂಗ್ !