Advertisement

ಕದ್ದ ಕಾರು ಅಡವಿಟ್ಟು ಕಳವು ಮಾಡುತ್ತಿದ್ದ ತಂಡದ ಇನ್ನಿಬ್ಬರ ಸೆರೆ : ಮತ್ತೆ ಏಳು ಕಾರು ವಶ

06:08 PM Jan 22, 2022 | Team Udayavani |

ಹುಬ್ಬಳ್ಳಿ: ಕದ್ದ ಐಷಾರಾಮಿ ಕಾರುಗಳನ್ನು ನಗರಕ್ಕೆ ತಂದು ನಕಲಿ ದಾಖಲೆ ಸೃಷ್ಟಿಸಿ ಅಡವಿಟ್ಟು ನಂತರ ಅವುಗಳನ್ನು ಕಳವು ಮಾಡುತ್ತಿದ್ದ ತಂಡದ ಮಂಗಳೂರು ಮೂಲದ ಮತ್ತಿಬ್ಬರನ್ನು ಕೇಶ್ವಾಪುರ ಪೊಲೀಸರು ಕಳವಿನ ಕಾರುಗಳ ಸಮೇತ ಬಂಧಿಸಿದ್ದಾರೆ.

Advertisement

ಕೇಶ್ವಾಪುರ ಪೊಲೀಸರು ಜ. 14ರಂದು ಮಂಗಳೂರಿನ ಮಹ್ಮದ ಫಯಾಜ, ಇನಾಯತ, ಇಮ್ರಾನ ಹಾಗೂ ನಗರದ ಮಧ್ಯವರ್ತಿ ರಾಜೇಶ ಹೆಗಡೆ ಎಂಬುವರನ್ನು ಬಂಧಿಸಿ ಸುಮಾರು 50 ಲಕ್ಷ
ರೂ. ಮೌಲ್ಯದ ಮೂರು ಇನ್ನೋವಾ ಕಾರುಗಳನ್ನು ವಶಪಡಿಸಿಕೊಂಡು, ತನಿಖೆ ಮುಂದುವರಿಸಿದ್ದರು. ಶುಕ್ರವಾರ ಮತ್ತಿಬ್ಬರನ್ನು ಬಂಧಿಸಿ, ಅವರಿಂದ ಸ್ವಿಫ್ಟ್‌, ಬಲೆನೊ, ಇನ್ನೋವಾ ಸೇರಿದಂತೆ ಮತ್ತೆ ಏಳು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಆ ಮೂಲಕ ಈ ತಂಡದಿಂದ ಒಟ್ಟು 10 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಲ್ಲೆ-ಜೀವ ಬೆದರಿಕೆ: ತಲೆಗೆ ಗನ್‌ ಹಿಡಿದು ಜೀವದ ಬೆದರಿಕೆ ಹಾಕಿದ್ದಲ್ಲದೆ, ಛೇಡಿಸುವುದು ಹಾಗೂ ಹಲ್ಲೆ ನಡೆಸುವುದು ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪತಿಯ ವಿರುದ್ಧ ವಿದ್ಯಾನಗರ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಉಣಕಲ್ಲನ ಗಿರೀಶ ಆರೋಪಿಯಾಗಿದ್ದು, ಅವರ ಪತ್ನಿ ವಿಜಯಲಕ್ಷ್ಮೀ ದೂರು ಕೊಟ್ಟಿದ್ದಾರೆ. ಲಗ್ನವಾದಾಗಿನಿಂದ ಗಿರೀಶ ಕಿರುಕುಳ ಕೊಡುತ್ತ ಬಂದಿದ್ದ. ಜೊತೆಗೆ ಹರ್ಷವರ್ಧನ, ನೀಲಕಂಠ, ಮೈತ್ರಾಣಿ, ಕಾಂಚನಾ, ಪ್ರೀತಿ ಎಂಬುವರ ಚಿತಾವಣೆಯಿಂದ ದೈಹಿಕ ಹಲ್ಲೆ ಮಾಡಿ, ಆಸ್ತಿಯ ವಿಷಯವಾಗಿ ತೊಂದರೆ ಕೊಟ್ಟಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯ ಮಾರುತ್ತಿದ್ದವರ ಸೆರೆ: ವಿಕಾಸ ನಗರ ಪೆಟ್ರೋಲ್‌ ಪಂಪ್‌ ಬಳಿ ಬುಧವಾರ ರಾತ್ರಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಉಪನಗರ ಪೊಲೀಸರು ಬಂಧಿಸಿ,
ಅವರಿಂದ 12,400ರೂ. ಮೌಲ್ಯದ ಮದ್ಯದ ಬಾಟಲಿಗಳು ಹಾಗೂ 800 ನಗದು ವಶಪಡಿಸಿಕೊಂಡಿದ್ದಾರೆ. ವಿಕಾಸನಗರ ಸಿದ್ದಲಿಂಗೇಶ್ವರ ಕಾಲೋನಿಯ ರಾಮಕೃಷ್ಣ ಮತ್ತು ಹಳೇಹುಬ್ಬಳ್ಳಿಯ ಅರ್ಜುನ ಬಂಧಿತರು.  ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಡ್‌ನಿಂದ ಹಲ್ಲೆ: ಅಂಚಟಗೇರಿ ಗ್ರಾಮದ ಅಂಬೇಡ್ಕರ್‌ ನಗರದಲ್ಲಿ ಬುಧವಾರ ರಾತ್ರಿ ಆರು ಜನರ ತಂಡವು ಹಳೆಯ ದ್ವೇಷವನ್ನಿಟ್ಟುಕೊಂಡು ಓರ್ವನ ಮೇಲೆ ಕಲ್ಲು ಕಟ್ಟಿದ ವಸ್ತ್ರ ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಲ್ಲದೆ, ಬಿಡಿಸಲು ಹೋದ ಆತನ ತಂದೆ-ತಾಯಿಗೂ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆ. ಪ್ರಭು, ಗುರುಸಿದ್ದ, ಪರಶುರಾಮ, ಫಕ್ಕೀರ ಹಾಗೂ ಇನ್ನಿಬ್ಬರು ಸೇರಿ ಹಿಂದಿನ ಸಿಟ್ಟು ಇಟ್ಟುಕೊಂಡು ಅವಾಚ್ಯವಾಗಿ ನಿಂದಿಸಿದ್ದರು. ಈ ಕುರಿತು ವಿಚಾರಿಸಿದ್ದಕ್ಕೆ ಮನಬಂದಂತೆ ಹೊಡೆಯುತ್ತಿದ್ದಾಗ ಬಿಡಿಸಲು ಬಂದ ನನ್ನ ತಂದೆ ಸಿದ್ದಪ್ಪ, ತಾಯಿ ತಿಪ್ಪವ್ವ ಅವರ ಮೇಲೂ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಮೈಲಾರಿ ಎಂಬುವರು ದೂರು ಕೊಟ್ಟಿದ್ದಾರೆ. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಖಾತೆ ಬ್ಲಾಕ್‌ ಹೆಸರಲ್ಲಿ ಸರಕಾರಿ ಅಧಿಕಾರಿಗೆ ವಂಚನೆ: ಧಾರವಾಡ ಕೆಲಗೇರಿ ರಸ್ತೆಯ ಸರಕಾರಿ ಅಧಿಕಾರಿಯೊಬ್ಬರಿಗೆ ಅಪರಿಚಿತನು ನಿಮ್ಮ ಎಸ್‌ಬಿಐ ಯೊನೊ ಖಾತೆ ಬ್ಲಾಕ್‌ ಆಗುತ್ತದೆ. ಪಾನ್‌ಕಾರ್ಡ್‌ ಅಪ್‌ಡೇಟ್‌ ಮಾಡಿ ಎಂದು ಲಿಂಕ್‌ ಸಂದೇಶ ಕಳುಹಿಸಿ, 1.25ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಡಾ| ಶಿವಪ್ಪ ಎಂಬುವರು ಅಪರಿಚಿತ ಕಳುಹಿಸಿದ್ದ ಲಿಂಕ್‌ ಸಂದೇಶ ಕ್ಲಿಕ್‌ ಮಾಡಿದ್ದಾರೆ. ಆಗ ಮೊಬೈಲ್‌ಗೆ ಬಂದ ಒಟಿಪಿ ಹಾಕಿ ಸಬ್‌ಮಿಟ್‌ ಮಾಡಿದಾಗ ವಂಚಕನು ಅವರ ಖಾತೆಯಿಂದ 25 ಸಾವಿರ ಮತ್ತು 1 ಲಕ್ಷ ರೂ.ವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ಮೋಸಪಡಿಸಿದ್ದಾನೆ. ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next