ಹುಬ್ಬಳ್ಳಿ: ಸದಾಶಿವನಗರದ ಮಾರುತಿ ದೇವಸ್ಥಾನ ಅಭಿವೃದ್ಧಿಗೆ 50 ಲಕ್ಷ ಹಾಗೂ ದೇವಸ್ಥಾನ ಮುಂಭಾಗದ ರಸ್ತೆ ಅಭಿವೃದ್ಧಿಗೆ 30 ಲಕ್ಷ ರೂ. ಸೇರಿದಂತೆ ಒಟ್ಟು 80 ಲಕ್ಷ ರೂ. ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಸಿಸಿ ರಸ್ತೆ, ಗಟಾರ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಕ್ಕಾಗಿ ಹಳೇ ಹುಬ್ಬಳ್ಳಿ ಸದಾಶಿವನಗರ ಸ್ಥಳೀಯರಿಂದ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಜನರ ಅಹವಾಲು ಆಲಿಸಿ, ನಾಗರಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರದಿಂದ ಅನುದಾನ ಬಿಡುಗಡೆಯಾದ ಕೂಡಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಸದಾಶಿವನಗರದಲ್ಲಿ ಈಗಾಗಲೇ 50 ಲಕ್ಷ ವೆಚ್ಚದ ಸಿಸಿ ರಸ್ತೆ, 50 ಲಕ್ಷ ವೆಚ್ಚದ ತೆರೆದ ಚರಂಡಿ ಸೇರಿದಂತೆ 1 ಕೋಟಿ ಅನುದಾನದ ಕಾಮಗಾರಿ ಪೂರ್ಣಗೊಳಿಸಲಾಗಿದೆ.
22.5 ಲಕ್ಷ ಅನುದಾನದಲ್ಲಿ ಇಲ್ಲಿನ ಪುರಾತನವಾದ ಬಸವೇಶ್ವರ ಹಾಗೂ ಈಶ್ವರ ದೇವಸ್ಥಾನವನ್ನು ಅಭಿವೃದ್ಧಿಗೊಳಿಸಲಾಗಿದೆ. ಸರಕಾರಿ ಉರ್ದು ಮತ್ತು ಕನ್ನಡ ಶಾಲೆಯ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗಿದೆ. ಶ್ರೀರಾಮ ಕಾಲೋನಿಯಲ್ಲಿ 2 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಈ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಟಿಪ್ಪುನಗರ ಮಾರ್ಗವಾಗಿ ಸಿಟಿ ಬಸ್ ಸಂಚಾರ ಆರಂಭಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಹುಡಾ ಮಾಜಿ ಸದಸ್ಯ ಪ್ರಭು ಪ್ರಭಾಕರ, ಮುಖಂಡರಾದ ಗಂಗಾಧರ ಹೊಂಗಲ, ಮಂಜುನಾಥ ಕಲಭಾವಿ, ಗಣಪತಿ ಹೇಮಾಡಿ, ಪ್ರಕಾಶ ಅರಗಂಜಿ, ಮಂಜುನಾಥ ಪಾಟೀಲ, ದುರ್ಗಪ್ಪ ಶಿರಗೇರಿ, ಪ್ರಕಾಶ ಕಲಾಲ್, ನಂದಕುಮಾರ ಹುಟಗಿ, ಪ್ರಕಾಶ ಬುರಬುರೆ ಇತರರು ಇದ್ದರು.
ಓದಿ :
ಸಾರ್ವಜನಿಕರಿಗೆ ಕಂಟಕವಾದ ಕ್ರಷರ್ ಲಾರಿಗಳು!