Advertisement

ಪ್ರಜಾಪ್ರಭುತ್ವ ವ್ಯವಸ್ಥೆಗೆ ಸ್ಪಷ್ಟ ರೂಪ ನೀಡಿದ ಚೇತನ: ಜೋಶಿ

07:30 PM Apr 15, 2021 | Team Udayavani |

ಹುಬ್ಬಳ್ಳಿ: ಡಾ|ಬಿ.ಆರ್‌.ಅಂಬೇಡ್ಕರ್‌ ಅವರು ಕೊಟ್ಟ ಸಂವಿಧಾನದ ಪರಿಣಾಮವಾಗಿ ದೇಶ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಬುಧವಾರ ಇಲ್ಲಿನ ಡಾ|ಬಿ.ಆರ್‌. ಅಂಬೇಡ್ಕರ್‌ ಅವರ ಜಯಂತಿ ಪ್ರಯುಕ್ತ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ಚುನಾವಣೆ, ಸಿಎಜಿ, ಸುಪ್ರೀಂಕೋರ್ಟ್‌ ಹೀಗೆ ಪ್ರತಿಯೊಂದು ಸಂಸ್ಥೆ ಹೇಗಿರಬೇಕು ಎಂದು ಕಲ್ಪನೆ ಮಾಡಿ ಸ್ಪಷ್ಟ ರೂಪ ನೀಡಿದ್ದಾರೆ. ಯಾವುದೇ ಗೊಂದಲ ಇಲ್ಲದೆ ದೇಶ ಮುನ್ನಡೆಯುತ್ತಿದೆ. ಗೊಂದಲ ಸೃಷ್ಟಿಯಾದರೆ ಅವುಗಳಿಗೆ ಪರಿಹಾರ ಕಲ್ಪಿಸುವ ಮಾರ್ಗಗಳನ್ನು ಕೂಡ ಅದರಲ್ಲಿ ನೀಡಿದ್ದಾರೆ. ಬಾಬಾಸಾಹೇಬರು ಮಾಡಿದ ಭಾಷಣ ನೋಡಿದರೆ ಇಂದು ಉದ್ಭವವಾಗಿರುವ ಸಮಸ್ಯೆಗಳನ್ನು ಅಂದೇ ಊಹಿಸಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ ಎಂದರು.

ಅಂದಿನ ಸಂದರ್ಭದಲ್ಲಿ ಬಾಬಾಸಾಹೇಬರು ಸಮಾಜದಲ್ಲಿ ಅಸ್ಪೃಶ್ಯತೆ ಸೇರಿದಂತೆ ಸಾಕಷ್ಟು ಸಮಸ್ಯೆ ಅನುಭವಿಸಿದ್ದರು. ಎಷ್ಟೇ ಸಂಕಷ್ಟಗಳನ್ನು ಅನುಭವಿಸಿದರೂ ಅವರಿಗೆ ನೋವನ್ನು ನೀಡಿದವರ ವಿರುದ್ಧ ದ್ವೇಷ ತೀರಿಸಿಕೊಳ್ಳಲು ಯಾವ ಅಂಶವನ್ನು ಸಂವಿಧಾನದಲ್ಲಿ ಸೇರಿಸಲಿಲ್ಲ. ದ್ವೇಷವನ್ನು ದೂರ ಇಟ್ಟು, ಸಮಾಜದಲ್ಲಿ ಸಮಾನತೆ ಸೃಷ್ಟಿಸಲು ಸಂವಿಧಾನ ರಚಿಸಿದರು. ಕರಡು ರಚನಾ ಸಮಿತಿಯಲ್ಲಿ ಕೆಲವರ ಆರೋಗ್ಯ, ನಿಧನದಿಂದಾಗಿ ಇಡೀ ಅ ಧಿಕಾರ ಇವರ ಮೇಲೆ ಇದ್ದರೂ ಯಾವ ಹಂತದಲ್ಲೂ ದುರ್ಬಳಕೆ ಮಾಡಿಕೊಳ್ಳದೆ ದೇಶಕ್ಕೆ ಅತ್ಯುತ್ತಮ ಸಂವಿಧಾನ ನೀಡಿದ್ದಾರೆ ಎಂದರು.

ಯಾವ ಸಮುದಾಯ ನೋವು ಕೊಟ್ಟಿದೆ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಒಂದು ಅಂಶವನ್ನು ಸೇರಿಸಬಹುದಿತ್ತು. ಆದರೆ ಎಲ್ಲರನ್ನೂ ಸಮಾನವಾಗಿ ನೋಡಿದರು. ಇದು ಅವರ ಮಹಾ ಮಾನವತವಾದಿ ತತ್ವ ಹಾಗೂ ಆಚರಣೆಗೆ ಹಿಡಿದ ಕೈಗನ್ನಡಿಯಾಗಿದೆ. ಅವರ ವಿಚಾರಗಳನ್ನು ಆಚರಣೆಯಲ್ಲಿ ತಂದು ನಡೆದುಕೊಂಡರೆ ನಾವು ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next