Advertisement

ನಿತೀಶ್‌ ನಡೆ ಎಷ್ಟು ತಪ್ಪು, ಎಷ್ಟು ಸರಿ?

01:50 AM Aug 13, 2017 | Team Udayavani |

ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತೆ ಈ ಹಿಂದಿನ ಮೈತ್ರಿ ಪಕ್ಷ ಬಿಜೆಪಿ ಜತೆ ಕೈಜೋಡಿಸಿ ಸರ್ಕಾರ ರಚಿಸಿಕೊಂಡಿರುವ ಬಗ್ಗೆ ರಾಷ್ಟ್ರಾದ್ಯಂತ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಈ ಬೆಳವಣಿಗೆ ಬಿಹಾರದ ಮಟ್ಟಿಗೆ ಮಾತ್ರ ಪ್ರಸ್ತುತವಾದ ಚರ್ಚೆಯಾಗಿ ಉಳಿಯದೆ ರಾಷ್ಟ್ರವ್ಯಾಪಿಯಾಗಿ ಹರಡಿರಲು ಕಾರಣ, ನಿತೀಶ್‌ ಕುಮಾರ್‌ ತಮ್ಮ ವ್ಯಕ್ತಿತ್ವದ ಸ್ವಚ್ಛತೆ ಮತ್ತು ಮುಖ್ಯಮಂತ್ರಿತ್ವದ ದಕ್ಷತೆಗಳ‌ ಮೂಲಕ ರಾಷ್ಟ್ರದ ವಿಶೇಷ ಗಮನ ಸೆಳೆದಿರುವ ನಾಯಕರಾಗಿರುವುದು. 

Advertisement

ನಿತೀಶ್‌ ಅವರ ರಾಜಕಾರಣದ ಸಂಬಂಧವಾಗಿ ಗಮನಿಸಬೇಕಾದ ಪ್ರಮುಖ ಸಂಗತಿ ಎಂದರೆ ಅವರು ತಮ್ಮ ರಾಜಕಾರಣವನ್ನು ಆರಂಭಿಸಿದ್ದು 1977ರಲ್ಲಿ, ಓರ್ವ ಯುವ ಸಮಾಜವಾದಿಯಾಗಿ, ಜಯಪ್ರಕಾಶ್‌ ನಾರಾಯಣರ ಸಂಪೂರ್ಣ ಕ್ರಾಂತಿ ಆಂದೋಲನದ ಮೂಲಕ. ಆ ನಂತರದ ಇಪ್ಪತ್ತು ವರ್ಷಗಳ ಕಾಲ ಅವರು ರಾಜಕಾರಣ ಮಾಡಿದ್ದು ಸದ್ಯದ ಅವರ ಎದುರಾಳಿಯಾಗಿರುವ ಲಾಲು ಪ್ರಸಾದ್‌ ಅವರ ಜತೆಗೇ. ಹಾಗಾಗಿ ನಿತೀಶ್‌ ಕುಮಾರ್‌ ಅವರ ಸದ್ಯದ ಮೈತ್ರಿ ಬದಲಾವಣೆಯನ್ನು ಸರಳವಾಗಿ ಅವಕಾಶವಾದಿ ಎಂದು ಕರೆಯಲಾಗದು. ಏಕೆಂದರೆ, ಈ ಮೈತ್ರಿ ಬದಲಾವಣೆಗೆ ಅಧಿಕಾರ ಲಾಲಸೆಯೇ ಕಾರಣವೆಂದೂ ಕೆಲವರು ವ್ಯಾಖ್ಯಾನಿಸುತ್ತಿರುವುದಕ್ಕೆ ಯಾವುದೇ ಆಧಾರಗಳಿಲ್ಲ. ಸರಳ ಮತ್ತು ಇನ್ನೂ ಮಧ್ಯಮ ವರ್ಗದ ಸೀಮೆಗಳನ್ನು ದಾಟದ ಬದುಕಿನ ಅವರ ಮೇಲೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತಗಳ ಅಥವಾ ಕುಟುಂಬ ರಾಜಕಾರಣದ ಯಾವುದೇ ಆರೋಪಗಳಾಗಲೀ, ನಿದರ್ಶನಗಳಾಗಲೀ ಇಲ್ಲ. ಹಾಗಾಗಿ ತಾವು ಮೈತ್ರಿ ಬದಲಾಯಿಸಿದ್ದು ಬಿಹಾರ ಜನತೆಯ ಹಿತದೃಷ್ಟಿಯಿಂದ ಎಂಬ ಅವರ ಹೇಳಿಕೆಯನ್ನು ನಂಬದಿರಲು ಯಾವುದೇ ಕಾರಣಗಳು ಇದ್ದಂತಿಲ್ಲ. 

ಜತೆಗೆ, ನಿತೀಶ್‌ ಅವರು ಈ ಮೊದಲು ಹೆಚ್ಚಾ ಕಡಿಮೆ ಎರಡು ಪೂರ್ಣಾವಧಿಗಳಲ್ಲಿ (2005ರಿಂದ 2015) ಮುಖ್ಯಮಂತ್ರಿ ಆಗಿದ್ದಾಗ ಅವರು ಬಿಹಾರದ ಬಿಂಬವನ್ನು ಸಂಪೂರ್ಣ ಬದಲಾಯಿಸಿದ್ದನ್ನು ರಾಷ್ಟ್ರ ನೋಡಿದೆ. ಆ ಮುನ್ನ ಕಾನೂನು ಮತ್ತು ಶಿಸ್ತಿನ ಸಾರ್ವತ್ರಿಕ ಅಧೋಗತಿಯಲ್ಲಿ ಅರಾಜಕ ರಾಜ್ಯ ಎನಿಸಿಕೊಂಡ ಬಿಹಾರವನ್ನು ತಮ್ಮ ಮೊದಲ ಅಧಿಕಾರಾವಧಿಯಲ್ಲೇ ಸರ್ವರಂಗಗಳಲ್ಲೂ$ಅಭೂತಪೂರ್ವ ಅಭಿವೃದ್ಧಿಯ ಹಾದಿಗೆ ತಂದು ರಾಷ್ಟ್ರದ ರಾಜಕೀಯ ವೀಕ್ಷಕರನ್ನೆಲ್ಲ ಬೆಕ್ಕಸಬೆರಗಾಗಿಸಿದವರು ನಿತೀಶ್‌. ಅವರ ಈ ಅವಧಿಯಲ್ಲಿ ರಾಜ್ಯದ ಪ್ರಗತಿ ದರ ಆಗ ಪ್ರಗತಿಯ ಉಜ್ವಲ ಉದಾಹರಣೆಯಾಗಿ ಎಲ್ಲರ ಗಮನ ಸೆಳೆದಿದ್ದ ಗುಜರಾತ್‌ ಸೇರಿದಂತೆ ರಾಷ್ಟ್ರದ ಇತರೆಲ್ಲ ರಾಜ್ಯಗಳ ಪ್ರಗತಿ ದರ‌ವನ್ನು ಮೀರಿ ಬೆಳೆಯಿತು. ಆ ಸಂದರ್ಭದಲ್ಲೇ ನಿತೀಶ್‌ ಸಹಜವಾಗಿಯೇ ರಾಷ್ಟ್ರದ ಗಮನ ಸೆಳೆಯುವಂತಾಗಿ ಆಗಿನ ಕಾಂಗ್ರೆಸ್‌ ವಿರುದ್ಧದ ಪ್ರತಿಪಕ್ಷಗಳ ಮುಖವಾಗಿ ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿಯಾಗುವ ಅವರ ಸಾಮರ್ಥ್ಯ ಮತ್ತು ಸಾಧ್ಯತೆಗಳು ಚರ್ಚಿತವಾದದ್ದು ಎಂಬುದನ್ನೂ ಇಲ್ಲಿ ಗಮನಿಸಬೇಕು.

ಆದರೆ ನಿತೀಶ್‌ ಕುಮಾರ್‌ ಅವರ ಇತ್ತೀಚಿನ ರಾಜಕೀಯ ವರ್ತನೆಯನ್ನು ಖಂಡಿಸುತ್ತಿರುವ ಬಹುತೇಕ ಎಲ್ಲರೂ ಈಗ, ಸರ್ವಾಧಿಕಾರಿಯಂತೆ ಬೆಳೆಯುತ್ತಿರುವಂತೆ ತೋರುವ ನರೇಂದ್ರ ಮೋದಿ ಅವರಿಗೆ ವಿಶ್ವಾಸಾರ್ಹ ಸವಾಲನ್ನು ಒಡ್ಡಲು ನಡೆಸಲಾಗುತ್ತಿರುವ ಪ್ರಯತ್ನಗಳನ್ನು ಭಂಗಗೊಳಿಸುವ ಮೂಲಕ ಪ್ರಜಾಸತ್ತೆಯನ್ನು ಉಳಿಸುವ ಹೋರಾಟವನ್ನು ನಿತೀಶ್‌ ಘಾಸಿಗೊಳಿಸಿದ್ದಾರೆ ಎನ್ನುತ್ತಿದ್ದಾರೆ. ಜತೆಗೆ ಮೋದಿಯವರ ನಾಯಕತ್ವಕ್ಕೆ ಒಂದು ವಿಶ್ವಾಸಾರ್ಹ ಸವಾಲು ಒಡ್ಡಬಲ್ಲ ನಾಯಕರಾಗಿ ಮೂಡಬಲ್ಲವರಾಗಿದ್ದ ನಿತೀಶ್‌ ಅವರ ಈ ನಿರ್ಧಾರ‌ 2019ರ ಚುನಾವಣೆಯಲ್ಲಿ ಮೋದಿಯವರ ಮತ್ತೂಂದು ದಿಗ್ವಿಜಯವನ್ನು ಖಚಿತಗೊಳಿಸಿಬಿಟ್ಟಿದೆ ಎಂದೂ ಇವರು ಹೇಳುತ್ತಿದ್ದಾರೆ. ಇನ್ನು ಕೆಲವರು ನಿತೀಶ್‌ ಕಳೆದ ಎರಡೂವರೆ ವರ್ಷಗಳ ಹೊರತಾಗಿ ಆ ಹಿಂದಿನ ಎರಡು ದಶಕಗಳ ಕಾಲ ಬಿಜೆಪಿಯೊಂದಿಗೇ ಮೈತ್ರಿಯಲ್ಲಿದ್ದರು ಎಂಬುದನ್ನೇ ಮರೆತವರಂತೆ ಅವರ ಮೇಲೆ ಕೋಮುವಾದಿ ರಾಜಕಾರಣವನ್ನು ಪೋಷಿಸಲು ಹೊರಟಿರುವ ಆರೋಪವನ್ನೂ ಹೊರಿಸುತ್ತಿದ್ದಾರೆ. 

ಇವರಾರೂ, ಈ ರಾಜಕೀಯ ಬೆಳವಣಿಗೆಗೆ ಮೂಲ ಕಾರಣವನ್ನೊದಗಿಸಿದ ಲಾಲು ಪ್ರಸಾದರ ಹಠಮಾರಿತನವನ್ನೇಕೆ ಪ್ರಶ್ನಿಸುತ್ತಿಲ್ಲ ಎಂದು ಕೇಳಬೇಕಾಗುತ್ತದೆ.  ದೇಶದಲ್ಲಿ ಕೋಮುವಾದಿ ರಾಜಕಾರಣದ ವಿರುದ್ಧದ ಹೋರಾಟವನ್ನೇ ಮುಖ್ಯ ಧ್ಯೇಯವೆಂದು ಘೋಷಿಸಿಕೊಂಡಿರುವ ಲಾಲು ಈ ಹೋರಾಟಕ್ಕೆ ತಮ್ಮ ನಿಷ್ಠೆ ನಿಜವಾದುದೇ ಆಗಿದ್ದರೆ, ರಾಜ್ಯದ ಉಪಮುಖ್ಯಮಂತ್ರಿಯೂ ತಮ್ಮ ಹಿರಿಮಗನೂ ಆಗಿದ್ದ ತೇಜಸ್ವಿ ಯಾದವ್‌ರಿಂದ ರಾಜೀನಾಮೆಯನ್ನೇಕೆ ಕೊಡಿಸಲಿಲ್ಲ? ನಿತೀಶ್‌ ಮೇಲೆ ನೈತಿಕತೆಯ ಆಧಾರಗಳ ಮೇಲೆ ದಾಳಿ ಮಾಡುತ್ತಿರುವವರು ಈ ಪ್ರಶ್ನೆಯನ್ನೇ ಕೇಳುತ್ತಿಲ್ಲ ಏಕೆ? ಹಾಗೆ ನೋಡಿದರೆ ನಿತೀಶ್‌, ತೇಜಸ್ವಿ ಯಾದವ್‌ ಅವರ ರಾಜೀನಾಮೆಯನ್ನೇನೂ ಕೇಳಿರಲಿಲ್ಲ. ಅಥವಾ ಲಾಲೂ ಪ್ರಸಾದ್‌ ಅವರ ಇಡೀ ಕುಟುಂಬದ ಮೇಲೆ ಕವಿದಿರುವ ಹೊಸ ಭಾರೀ ಭ್ರಷ್ಟಾಚಾರದ ಆರೋಪಗಳ ಸುದ್ದಿಗೂ ಹೋಗಿರಲಿಲ್ಲ. ಅವರು ಕೇಳಿದ್ದುದು, ತೇಜಸ್ವಿ ತನ್ನ ವಿರುದ್ಧ ಅಧಿಕೃತವಾಗಿ ದಾಖಲಾಗಿರುವ ಆರೋಪ ಪಟ್ಟಿ ಅವರ ಕುಟುಂಬ ಹೇಳುವ ಹಾಗೆ ಕೇವಲ ಸೇಡಿನ ರಾಜಕಾರಣವಾಗಿದ್ದು, ಅದರಲ್ಲೇನೂ ಹುರುಳಿಲ್ಲ ಎಂಬುದನ್ನು ವಿವರವಾಗಿ ವಿಷದೀಕರಿಸಬೇಕೆಂದು ಮಾತ್ರ. ಅದನ್ನೂ ಮಾಡಲಾಗದು ಎಂದರೆ ಏನರ್ಥ? ಈ ಕೋಮುವಾದಿ ವಿರೋಧಿಯಾದ ಧರ್ಮನಿರಪೇಕ್ಷ ರಾಜಕಾರಣದ ಬೆಂಬಲಿಗರೆಂದು ಹೇಳಿಕೊಂಡು ನಿತೀಶ್‌ ಅವರನ್ನು ಖಂಡಿಸುತ್ತಿರುವ ಮಹನೀಯರಲ್ಲಿ ಯಾರಾದರೂ ಲಾಲೂ ತಮ್ಮ ಪಕ್ಷದ ಪರವಾಗಿ ತನ್ನ ಇಬ್ಬರು ಗಂಡು ಮಕ್ಕಳನ್ನು ಬಿಹಾರ ಸರ್ಕಾರದ ಮಂತ್ರಿಗಳನ್ನಾಗಿ ಮತ್ತು ಒಬ್ಬ ಮಗಳನ್ನು ರಾಜ್ಯ ಸಭೆಯ ಸದಸ್ಯರನ್ನಾಗಿ ಮಾಡಿದ ಲಜ್ಜೆಗೆಟ್ಟ ಕುಟುಂಬ ರಾಜಕಾರಣದ ವಿರುದ್ಧ ಸೊಲ್ಲೆತ್ತಿದ ದಾಖಲೆ ಇದೆಯೇ?  ಇನ್ನು ಈ ವಿವಾದನ್ನು ನಿತೀಶ್‌ ಕುಮಾರ್‌ ಕಡೆಯಿಂದ ನೋಡುವುದಾದದರೆ, ಅಲ್ಲಿಯೂ ಅನೇಕ ಪ್ರಶ್ನೆಗಳು ಏಳುತ್ತವೆ. ಪ್ರತಿಪಕ್ಷಗಳ ಮೈತ್ರಿಕೂಟವನ್ನು ರಚಿಸಿಕೊಂಡು 2015ರ ವಿಧಾನಸಭಾ ಚುನಾವಣೆಗಳನ್ನು ಗೆದ್ದಾಗ ನಿತೀಶ್‌ಗೆ ಲಾಲು ಪ್ರಸಾದ್‌ ಭ್ರಷ್ಟರು ಎಂದು ಗೊತ್ತಿರಲಿಲ್ಲವೇ ಎಂದು ಈಗ ಕೆಲವರು ಕೇಳುತ್ತಿದ್ದಾರೆ. ಆದರೆ ಅವರು ಮೈತ್ರಿ ಮಾಡಿಕೊಂಡದ್ದು ವೈಯಕ್ತಿಕವಾಗಿ ಲಾಲು ಅವರೊಂದಿಗಲ್ಲ; ಆರ್‌ಜೆಡಿ ಎಂಬ ಪಕ್ಷದೊಂದಿಗೆ ಮತ್ತು ಆಗ ಲಾಲು ಭ್ರಷ್ಟಾಚಾರದ ಮೊಕದ್ದಮೆಯ ಸಂಬಂಧವಾಗಿ ಚುನಾವಣಾ ರಾಜಕಾರಣದಿಂದ ಬಹಿಷ್ಕೃತರಾಗಿದ್ದರು ಹಾಗೂ ಇದರಿಂದ ಲಾಲು ಪಾಠ ಕಲಿತಿರುವರೆಂದು ನಿತೀಶ್‌ ಬಾವಿಸಿರಲೂಬಹುದು. ಆದರೆ ಲಾಲು ತಮ್ಮ ಪಕ್ಷದ ವತಿಯಿಂದ ಸರ್ಕಾರದ ಮೇಲೆ ತಮ್ಮ ಇಬ್ಬರು ಮಕ್ಕಳನ್ನು-ಅದೂ ಒಬ್ಬರನ್ನು ಉಪಮುಖ್ಯಮಂತ್ರಿಯನ್ನಾಗಿ- ಹೇರಿದ್ದನ್ನು ನಿತೀಶ್‌ ನಿರೀಕ್ಷಿಸಿರಲಾರರು. ತಮ್ಮ ರಾಜಕೀಯ ಜೀವನದುದ್ದಕ್ಕೂ ಭ್ರಷ್ಟಾಚಾರ ಅಥವಾ ಸ್ವಜನ ಪಕ್ಷಪಾತವನ್ನು ಸಹಿಸದ ದಾಖಲೆ ಇರುವ ನಿತೀಶ್‌ ಬಹುಶಃ ಅಂದಿನಿಂದಲೇ ಲಾಲು ಅವರ ಈ ರಿಪೇರಿಯಾಗದ ಪಾಳೇಗಾರಿ ರಾಜಕಾರಣವನ್ನು ಹೇಗಾದರೂ ನಿವಾರಿಸಿಕೊಳ್ಳುವ ಅವಕಾಶಕ್ಕಾಗಿ ಕಾಯುತ್ತಿದ್ದರೆಂದು ಕಾಣುತ್ತದೆ. 

Advertisement

ನಿತೀಶ್‌ ಬಿಜೆಪಿ ಸಖ್ಯವನ್ನು ಆರಿಸಿಕೊಳ್ಳುವ ಬದಲಾಗಿ ತೇಜಸ್ವಿಯನ್ನು ಸಂಪುಟದಿಂದ ಹೊರಹಾಕಬಹುದಿತ್ತು ಎಂದು ಅಮಾಯಕವಾಗಿ ವಾದಿಸುವವರೂ ಇದ್ದಾರೆ. ಹಾಗೆ ಮಾಡಿದ್ದರೆ ಲಾಲು ಆರ್‌ಜೆಡಿ ಪಕ್ಷದ ನೆರವಿನಿಂದ ಸರ್ಕಾರವನ್ನು ಉರುಳಿಸುತ್ತಿದ್ದರು.  ನಿತೀಶ್‌ ರಾಜಕಾರಣ ಮಾಡಲು ಬಂದವರು. ಅಧಿಕಾರದ ಮೂಲಕ ಜನತೆಗೆ ಒಂದಿಷ್ಟು ಒಳಿತು ಮಾಡಬಹುದು ಎಂದು ನಂಬಿದವರು. ಹಾಗಾಗಿಯೇ ಇವರು ತಮ್ಮ ರಾಜ್ಯದಲ್ಲಿ ಸುಶಾಸನ ಬಾಬು, ವಿಕಾಸ್‌ ಪುರುಷ್‌ ಎಂದೂ ಹೆಸರಾಗಿರುವುದು. ಆದುದರಿಂದ ಇವರು ಈಗ ಅನಿವಾರ್ಯಯೆಂಬಂತೆ ಮಾಡಿಕೊಂಡಿರುವ ರಾಜಕೀಯ ಆಯ್ಕೆಯನ್ನು ಅವಕಾಶವಾದಿ ಅಥವಾ ಕೋಮುವಾದಿ ಪರ ರಾಜಕೀಯ ನಡೆಯೆಂದು ವ್ಯಾಖ್ಯಾನಿಸುವುದು ರಾಷ್ಟ್ರದ ಇಂದಿನ ಸಂಕೀರ್ಣ ರಾಜಕೀಯ ಸಂದರ್ಭದ ಸರಳ ಗ್ರಹಿಕೆ ಮಾತ್ರವಾಗುತ್ತದೆ. ಇಂದಿನ ರಾಜಕಾರಣದ ಮುಖ್ಯ ನೆಲೆಗಳನ್ನು ನಿರ್ಧರಿಸುವ ಆರ್ಥಿಕ ನೀತಿಯ ವಿಷಯದಲ್ಲಿ ಬಿಜೆಪಿಗೂ ಪರ್ಯಾಯ ರಾಜಕಾರಣದ ನೇತೃತ್ವ ವಹಿಸಬೇಕಾದ ಕಾಂಗ್ರೆಸ್ಸಿನ ಅಥವಾ ಅದರ ಇತರ ಬಹುತೇಕ ಮಿತ್ರ ಪಕ್ಷಗಳಿಗೂ ಏನು ವ್ಯತ್ಯಾಸ? ಏನೂ ಇಲ್ಲ! ಹಾಗೆ ನೋಡಿದರೆ ಮನಮೋಹನ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಆರ್ಥಿಕ ನೀತಿಯನ್ನೇ ಮೋದಿ ಸರ್ಕಾರವೂ ಮುಂದುವರೆಸಿರುವುದು ಮತ್ತು ವಿಸ್ತರಿಸುತ್ತಿರುವುದು. ಈ ಬಗ್ಗೆ ಕಾಂಗ್ರೆಸ್‌/ ಮಿತ್ರ ಪಕ್ಷಗಳು ನಿತೀಶ್‌ರತ್ತ ಪರ್ಯಾಯ ನಾಯಕತ್ವದ ಸಾಧ್ಯತೆಗಾಗಿ ಒಮ್ಮೆಯೂ ಕಣ್ಣು ಮಿಟುಕಿಸದೇ ಇದ್ದಾಗ ಅವರಾದರೂ ಒಂಟಿಯಾಗಿ ಏನು ಮಾಡಿಯಾರು? 

ಹಿಂದೂ ಕೋಮುವಾದದ ವಿರುದ್ಧದ ರಾಜಕಾರಣವನ್ನೇ ತಮ್ಮ ಇಡೀ ರಾಜಕೀಯ ದೃಷ್ಟಿಕೋನವನ್ನಾಗಿ ರೂಪಿಸಿಕೊಂಡಿರುವ ಮಹನೀಯ ರುಗಳಿಗೆ ನಿತೀಶ್‌ರ ಇತ್ತೀಚಿನ ನಿರ್ಧಾರ ನಿರ್ಣಾಯಕ ತಪ್ಪಾಗಿ ಕಾಣುವುದು ಸಹಜವೇ ಆಗಿದೆ. ಏಕೆಂದರೆ ಇಂತಹವರ ಕಣ್ಣಿಗೆ ಹಿಂದೂ ಕೋಮುವಾದವೆನ್ನುವುದು ನಾವೆಲ್ಲರೂ- ವಿಶೇಷವಾಗಿ ಕಾಂಗ್ರೆಸಿಗರು- ಭಾಗಿಯಾಗಿ ರೂಪಿಸಿದ ವರ್ತಮಾನದ‌ ಒಂದು ಸಂಕೀರ್ಣ ರಾಜಕೀಯ ರಚನೆಯ ಪರಿಣಾಮವಾಗಿದೆ ಎಂಬ ಸತ್ಯ ಕಾಣುವುದಿಲ್ಲ. ಹಾಗಾಗಿ, ಅದನ್ನು ಪ್ರತ್ಯೇಕತೆಯಲ್ಲಿ ಎದುರಿಸುವುದು ಅಸಾಧ್ಯವೆಂದು ಅವರಿಗೆ ಹಲವು ಸೋಲುಗಳ ಅನಂತರವೂ ಅರಿವಾಗಿಲ್ಲ. ಹಾಗಾಗಿ, ನಿತೀಶ್‌ ಬಿಜೆಪಿ ಸಖ್ಯದೊಂದಿಗೆ ಇದ್ದೂ ಎಂತಹ ರಾಜಕಾರಣ ಮಾಡುತ್ತಾರೆ ಮತ್ತು ಅದು ರಾಷ್ಟ್ರ ಮಟ್ಟದ ರಾಜಕಾರಣದ ಮೇಲೆ, ನಿರ್ದಿಷ್ಟವಾಗಿ ಸದ್ಯದ ಬಿಜೆಪಿ ರಾಜಕಾರಣದ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡಲಿದೆೆಯೇ ಎಂಬುದನ್ನು ಸ್ವಲ್ಪ ಕಾಲ ಕಾದು ನೋಡಿಯೇ ಈ ವಿಷಯವಾಗಿ ಅಂತಿಮ ತೀರ್ಪು ನೀಡಬೇಕಾಗುತ್ತದೆ. ಏಕೆಂದರೆ ನಿತೀಶ್‌ ಕುಮಾರ್‌ ಇತ್ತೀಚಿನ ವರ್ಷಗಳಲ್ಲಿ ಭಾರತ ಕಂಡ ವಿಭಿನ್ನ ಸತ್ವದ- ಗುಂಪಿನಲ್ಲಿ ಗೋವಿಂದ ಎನ್ನಲೊಲ್ಲದ ಸ್ವತಂತ್ರ ನಿರ್ಧಾರಗಳ- ಅನುಭವಿ ಮತ್ತು ಜಾಣ ರಾಜಕೀಯ ನಾಯಕ. ಕೇಜ್ರಿವಾಲ್‌ರಂತೆ ಎಳೆ ನಿಂಬೆಕಾಯಿಯಲ್ಲ.

ಡಿ.ಎಸ್‌. ನಾಗಭೂಷಣ

Advertisement

Udayavani is now on Telegram. Click here to join our channel and stay updated with the latest news.

Next