ಭೋಪಲ್: ಆಕೆ ಎಲ್ಲರಂತೆ ಕಾಲೇಜಿಗೆ ಬರುತ್ತಾಳೆ, ಪಾಠ ಕೇಳುತ್ತಾಳೆ. ಸ್ನೇಹಿತೆಯರೊಂದಿಗೆ ಕೂತು ಮಾತಾಡುತ್ತಾಳೆ. ಕ್ಯಾಂಟೀನ್ ನಲ್ಲಿ ಬಂಕ್ ಹೊಡೆದು ಕಾಲ ಕಳೆಯುತ್ತಾಳೆ. ಆದರೆ ಆಕೆಗೆ ತಾನು ಪೊಲೀಸ್ ಎನ್ನುವುದು ತನ್ನ ಸ್ನೇಹಿತರಿಗೆ ಎಲ್ಲಿಯಾದರೂ ಗೊತ್ತಾದರೆ ಕಷ್ಟವೆನ್ನುವ ಭಯವೊಂದು ಸದಾ ಮನಸ್ಸಿನಲ್ಲಿತ್ತು.
ಈ ಘಟನೆ ಕೇಳಲು ಸಿನಿಮಾ ಕಥೆಯ ಹಾಗೆ ಇದೆ. ಮಧ್ಯ ಪ್ರದೇಶದ 24 ವರ್ಷದ ಪೊಲೀಸ್ ಕಾನ್ಸ್ ಸ್ಟೇಬಲ್ ಶಾಲಿನಿ ಚೌಹಾಣ್ ಕಾಲೇಜಿನಲ್ಲಿ ನಡೆಯುತ್ತಿರುವ ರ‍್ಯಾಗಿಂಗ್ ಪ್ರಕರಣವನ್ನು ಬೇಧಿಸಲು ವಿದ್ಯಾರ್ಥಿನಿಯಾಗಿ 3 ತಿಂಗಳು ಕಾಲೇಜಿನಲ್ಲಿ ಕಾಲ ಕಳೆದಿದ್ದಾರೆ.
ಈ ಬಗ್ಗೆ ಮಾತಾನಾಡಿದ ಹಿರಿಯ ಇನ್ಸ್ ಪೆಕ್ಟರ್ ತೆಹಜೀಬ್ ಕಾಜಿ,ಇಂದೋರ್‌ನಲ್ಲಿರುವ ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಕಳೆದ ಕೆಲ ತಿಂಗಳಿನಿಂದ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡುತ್ತಿದ್ದರು. ಹಲವು ಬಾರಿ ಪೊಲೀಸರಿಗೆ ಈ ಬಗ್ಗೆ ದೂರುಗಳು ಕೇಳಿ ಬಂದಿವೆ. ಮೊದಲ ವರ್ಷದ ವಿದ್ಯಾರ್ಥಿಗಳಿಂದ ಅಸಭ್ಯವಾಗಿ ವರ್ತಿಸಬೇಕು, ದಿಂಬಿನ ಜೊತೆ ಲೈಂಗಿಕವಾಗಿ ನಟಿಸಬೇಕು ಈ ರೀತಿಯ ವರ್ತನೆಯನ್ನು ಮಾಡಬೇಕೆಂದು ಕಿರುಕುಳ ನೀಡಿದ್ದಾರೆ. ಆದರೆ ಈ ಬಗ್ಗೆ ನಮಗೆ ದೂರು ಕೇಳಿ ಬಂದಿವೆ. ವಿದ್ಯಾರ್ಥಿಗಳು ಮುಂದೆ ಬಂದು ನಮ್ಮೊಂದಿಗೆ ಮಾತಾನಾಡಲು ಹಿಂಜರಿಯುತ್ತಿದ್ದರು. ನಮ್ಮನ್ನು ಪೊಲೀಸ್ ಬಟ್ಟೆಯಲ್ಲಿ ನೋಡುವಾಗ ವಿದ್ಯಾರ್ಥಿಗಳು ಹೆದರಿ ಏನನ್ನು ಹೇಳುತ್ತಿರಲಿಲ್ಲ. ಹೀಗಾಗಿ ನಾವು ಈ ರೀತಿ ಪೊಲೀಸ್ ಕಾರ್ಯಚರಣೆಗೆ ಇಳಿಯಲು ಯೋಜನೆಯನ್ನು ಮಾಡಿದ್ದೆವು ಎಂದು ಹೇಳಿದರು.
ಶಾಲಿನಿ ಅವರ ನೇತೃತ್ವದಲ್ಲಿ ಕಾನ್ಸ್ ಸ್ಟೇಬಲ್ ಗಳು ಪೊಲೀಸ್ ಬಟ್ಟೆ ಬಿಟ್ಟು ಕಾಲೇಜಿನ ಯೂನಿಫಾರಂನ್ನು ಧರಿಸಿಕೊಂಡು ಹೋಗುತ್ತಿದ್ದರು. ಅಲ್ಲಿ ವಿದ್ಯಾರ್ಥಿಗಳೊಂದಿಗೆ ಸ್ನೇಹಮಯವಾಗಿದ್ದು, ನಿಧಾನವಾಗಿ ಆಗುತ್ತಿರುವ ಕಿರುಕುಳದ ಬಗ್ಗೆ ಶಾಲಿನಿ ಮಾಹಿತಿ ಕಲೆ ಹಾಕಲು ಶುರು ಮಾಡಿದ್ದಾರೆ. ಯಾರಿಗಾದರೂ ಶಾಲಿನಿ ಪೊಲೀಸ್ ಎಂದು ಸಂಶಯ ಬಂದರೆ ಆ ಕೂಡಲೇ ಅವರು ವಿಷಯವನ್ನು ಬದಲಾಯಿಸಿ ಬೇರೆ ವಿಷಯದ ಬಗ್ಗೆ ಮಾತಾನಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ನಾನು ಪ್ರತಿದಿನ ಕಾಲೇಜಿಗೆ ಹೋಗಬೇಕಿತ್ತು. ಮುಕ್ತವಾಗಿ ನನ್ನ ಬಗ್ಗೆ ಮಾತಾನಾಡುತ್ತಾ, ರ‍್ಯಾಗಿಂಗ್ ಘಟನೆಗಳನ್ನು ಕೇಳುತ್ತಾ ಹೋದೆ. ನನ್ನ ಬಗ್ಗೆ ಸಂಶಯದ ಪ್ರಶ್ನೆ ಕೇಳುವಾಗ ನಾನು ಮಾತು ಬದಲಾಯಿಸುತ್ತಿದ್ದೆ. ನನ್ನ ಬಳಿ ಬ್ಯಾಗ್, ಯೂನಿಫಾರಂ, ಪುಸ್ತಕಗಳಿದ್ದವು. ವಿದ್ಯಾರ್ಥಿಯಂತೆಯೇ ಕಾಣುತ್ತಿದ್ದೆ ಎಂದು ಶಾಲಿನಿ ಹೇಳಿದ್ದಾರೆ.
ಶಾಲಿನಿ ಮೂರು ತಿಂಗಳು ಕಾಲೇಜು ಕ್ಯಾಂಪಸ್ ನಲ್ಲಿ ರ‍್ಯಾಗಿಂಗ್ ಬಗ್ಗೆ ಗಮನಿಸಿ 11 ಮಂದಿ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿದ್ದು ಅವರನ್ನು ಕಾಲೇಜಿನಿಂದ ಹಾಗೂ ಹಾಸ್ಟೆಲ್ ನಿಂದ ಅಮಾನತು ಮಾಡಲಾಗಿದೆ.