ದಕ್ಷಿಣ ಭಾರತದ ಸಿನಿಮಾಗಳು ಕಳೆದ ಕೆಲ ವರ್ಷಗಳಿಂದ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಕಿಂಗ್ ಗಳಾಗಿ ಮೆರೆಯುತ್ತಿದೆ. 2023 ರ ಆರಂಭದಲ್ಲಿ ಟಾಲಿವುಡ್, ಕಾಲಿವುಡ್ ಕೋಟಿ ಗಟ್ಟಲೆ ಕಮಾಯಿ ಮಾಡುವ ಸಿನಿಮಾಗಳನ್ನು ರಿಲೀಸ್ ಮಾಡಿ ದಕ್ಷಿಣದ ಸಿನಿಮಾಗಳ ಮೋಡಿಯನ್ನು ಮುಂದುವರೆಸುವಂತೆ ಮಾಡಿದೆ. ಈ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿರುವುದರ ಹಿಂದಿನ ಕಾರಣವನ್ನು ತಿಳಿಯೋಣ.
ಪೊಂಗಲ್ ಹಬ್ಬ ಮತ್ತು ಬಿಗ್ ಸ್ಟಾರ್ಸ್ ಗಳ ಕೋಟಿ ಕಮಾಯಿ:
ಕಾಲಿವುಡ್, ಟಾಲಿವುಡ್ ಪ್ರತಿವರ್ಷದಂತೆ ಈ ವರ್ಷವೂ ʼಪೊಂಗಲ್ ಹಬ್ಬʼವನ್ನೇ ಗುರಿಯಾಗಿಸಿಕೊಂಡು ಸಿನಿಮಾವನ್ನು ರಿಲೀಸ್ ಮಾಡಿದೆ. ದಳಪತಿ ವಿಜಯ್ ಅವರ ʼವಾರಿಸುʼ, ಅಜಿತ್ ಅವರ ʼತುನಿವುʼ, ಟಾಲಿವುಡ್ ನಲ್ಲಿ ಚಿರಂಜೀವಿ ಅವರ ʼ ವಾಲ್ತೇರು ವೀರಯ್ಯʼ, ಬಾಲಯ್ಯ ಅವರ ʼವೀರ ನರಸಿಂಹ ರೆಡ್ಡಿʼ ಸಿನಿಮಾಗಳು ರಿಲೀಸ್ ಆಗಿದೆ. ಈ ಎಲ್ಲಾ ಸಿನಿಮಾಗಳು ರಿಲೀಸ್ ಆದದ್ದು ʼಪೊಂಗಲ್ ಹಬ್ಬʼದ ಅಸುಪಾಸಿನಲ್ಲೇ.
ದಳಪತಿ ವಿಜಯ್, ಅಜಿತ್, ಬಾಲಯ್ಯ ಹಾಗೂ ಚಿರಂಜೀವಿ ಆಯಾ ಸಿನಿಮಾರಂಗದ ಬಿಗ್ ಸ್ಟಾರ್ ಗಳು. ಈ ಬಿಗ್ ಸ್ಟಾರ್ ಸಿನಿಮಾವನ್ನು ಹಬ್ಬಕ್ಕೆ ರಿಲೀಸ್ ಮಾಡಿದರೆ ಹಾಕಿದ ಹಣ ಡಬಲ್ ಆಗೋದು ಪಕ್ಕಾ ಎನ್ನುವುದು ನಿರ್ಮಾಪಕರ ಲೆಕ್ಕಚಾರ. ಈ ವರ್ಷವೂ ಇದೇ ಲೆಕ್ಕಾಚಾರ ಎರಡೂ ಇಂಡಸ್ಟ್ರಿಯಲ್ಲಿ ವರ್ಕೌಟ್ ಆಗಿದೆ.
Related Articles
ಇದುವರೆಗೆ ‘ವಾರಿಸು’ ಸಿನಿಮಾ 250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದರೆ, ‘ತುನಿವು’ 170 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಚಿತ್ರಮಂದಿರಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಇತ್ತ ಟಾಲಿವುಡ್ ನಲ್ಲಿ ʼವಾಲ್ತೇರು ವೀರಯ್ಯʼ 170 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಬಾಲಯ್ಯ ಅವರ ʼವೀರ ನರಸಿಂಹ ರೆಡ್ಡಿʼ 125 ಕೋಟಿಗೂ ಅಧಿಕ ಗಳಿಕೆ ಕಂಡಿದೆ.
ಮಾಸ್, ಕ್ಲಾಸ್ ಮತ್ತು ಫ್ಯಾಮಿಲಿ ಡ್ರಾಮಾವೆಂಬ ಕಂಟೆಂಟ್: ಸಂಕ್ರಾಂತಿ ಹಬ್ಬದ ಸಮಯಕ್ಕೆ ರಿಲೀಸ್ ಆದ ಕಾಲಿವುಡ್, ಟಾಲಿವುಡ್ ಸಿನಿಮಾಗಳು ಹೌಸ್ ಫುಲ್ ಆಗಲು ಬಹುಮುಖ್ಯ ಕಾರಣ ಸಿನಿಮಾದಲ್ಲಿರುವ ಕಥೆಗಳು.ʼವಾರಿಸು ಸಿನಿಮಾದಲ್ಲಿ ದಳಪತಿ ವಿಜಯ್ ಅಭಿಮಾನಿಗಳಿಗೆ ಇಷ್ಟವಾಗುವ ಕ್ಲಾಸ್ & ಮಾಸ್ ಅಂಶಗಳಿವೆ. ಇದರೊಂದಿಗೆ ಫ್ಯಾಮಿಲಿ ಎಮೋಷನಲ್ ಡ್ರಾಮಾವೂ ಇರುವುದರಿಂದ ಮಧ್ಯಮ ವಯಸ್ಸಿನ ಜನರಿಗೂ ಸಿನಿಮಾ ಥಿಯೇಟರ್ ನತ್ತ ಕರೆ ತರುತ್ತದೆ.
ಅಜಿತ್ ಅವರ ʼತುನಿವುʼ ಬ್ಯಾಂಕ್ ದರೋಡೆ ಕಥೆಯನ್ನೊಳಗೊಂಡಿದ್ದು ಮಾಸ್ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ. ಚಿರಂಜೀವಿ ಅವರ ʼ ವಾಲ್ತೇರು ವೀರಯ್ಯʼ ಆ್ಯಕ್ಷನ್ ಹಾಗೂ ಫ್ಯಾಮಿಲಿ ಡ್ರಾಮಾವನ್ನು ಒಳಗೊಂಡಿದೆ. ಇನ್ನು ಬಾಲಯ್ಯ ಅವರ ʼವೀರ ನರಸಿಂಹ ರೆಡ್ಡಿʼ ಮಗನೊಬ್ಬ ತಂದೆಯ ಕನಸನ್ನು ನನಸಾಗಿಸುವ ಕಥೆಯನ್ನು ಹೊಂದಿದೆ.
ಅಭಿಮಾನಿಗಳೇ ಥಿಯೇಟರ್ ಗೆ ಬರುವ ದೇವರು..
ಕಥೆ ಚೆನ್ನಾಗಿಲ್ಲದಿದ್ದರೂ ದಕ್ಷಿಣದ ಸಿನಿಮಾಗಳು ಕನಿಷ್ಠ 100 ಕೋಟಿಯಾದರೂ ಕಲೆಕ್ಷನ್ ಮಾಡೇ ಮಾಡುತ್ತದೆ ಅದಕ್ಕೆ ಕಾರಣ ಬಿಗ್ ಸ್ಟಾರ್ ಗಳಿಗಿರುವ ಫ್ಯಾನ್ಸ್ ಗಳು. ಹಬ್ಬದ ದಿನ ಸಿನಿಮಾ ರಿಲೀಸ್ ಆದರೆ ಅಥವಾ ಇತ್ತೀಚೆಗೆ ಬಂದಿರುವ ಪ್ರಿಮಿಯರ್ ಶೋ ಟ್ರೆಂಡ್, ಮಾರ್ನಿಂಗ್ ಶೋ ಟ್ರೆಂಡ್ ಗೆ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋಗೆ ಬರುತ್ತಾರೆ. ಈ ಸಿನಿಮಾಗಳಿಗೆ ದೊಡ್ಡ ಪ್ರಚಾರಕರು ಎಂದರೆ ಅದು ಅಭಿಮಾನಿಗಳು. ಹಬ್ಬದ ದಿನ ಒಂದು ಶೋ ನೋಡಿದರೆ ಸ್ವಲ್ಪ ದಿನ ನಂತರ ಫ್ಯಾಮಿಲಿಯೊಂದಿಗೆ ಬಂದು ಮತ್ತೆ ಸಿನಿಮಾವನ್ನು ನೋಡುತ್ತಾರೆ.
ಈ ನಾಲ್ಕು ಸಿನಿಮಾಗಳು ಕೋಟಿ ಕೋಟಿ ಗಳಿಸಿರುವುದರಿಂದ ದೇಶ- ವಿದೇಶಗಳಲ್ಲಿರುವ ಸ್ಟಾರ್ ಗಳ ಅಭಿಮಾನಿಗಳು ಕೂಡ ಒಂದು ಕಾರಣ ಎಂದರೆ ತಪ್ಪಾಗದು. ಈ ನಾಲ್ಕು ಸಿನಿಮಾದಲ್ಲಿ ವಿಶ್ವದಾದ್ಯಂತ ಈ ತಿಂಗಳ ಅಂತ್ಯಕ್ಕೆ 700 ಕೋಟಿಗೂ ಅಧಿಕ ಕಲೆಕ್ಷನ್ ಮಾಡಹುದು ಎಂದು ಅಂದಾಜಿಸಲಾಗಿದೆ.
*ಸುಹಾನ್ ಎಸ್