ಝೆನ್ ಗುರುಮಠವೊಂದರ ವಿದ್ಯಾರ್ಥಿಗೆ ದೀರ್ಘಕಾಲದ ಅಧ್ಯಯನದ ಬಳಿಕ ಜ್ಞಾನೋದಯವಾಯಿತು. ಬಳಿಕ ಗುರುಗಳು ಅವನನ್ನು ಕರೆದು ಲೋಕವನ್ನೆಲ್ಲ ಸುತ್ತಾಡಿ ಅನುಭವ ಪಡೆದು ಬಾ ಎಂದರು. ವಿದ್ಯಾರ್ಥಿ ಪ್ರವಾಸ ಆರಂಭಿಸಿದ. ಒಂದು ಪಟ್ಟಣದಲ್ಲಿ ಇನ್ನೊಂದು ಝೆನ್ ಮಠದ ಇನ್ನೊಬ್ಬ ವಿದ್ಯಾರ್ಥಿ ಅವನನ್ನು ಸಂಧಿಸಿ ಇಬ್ಬರ ನಡುವೆ ಪರಿಚಯ, ಉಭಯ ಕುಶಲೋಪರಿ ಗಳಾದವು. ಆ ವಿದ್ಯಾರ್ಥಿಯು ಈ ವಿದ್ಯಾರ್ಥಿಯನ್ನು “ನೀನು ಕಲಿತ ಮಠದ ವಿಶೇಷವೇನು?’ ಎಂದು ಪ್ರಶ್ನಿಸಿದ.
ಅದಕ್ಕೆ ಈ ವಿದ್ಯಾರ್ಥಿ, “ಅಲ್ಲೇನೂ ವಿಶೇಷವಿಲ್ಲ’ ಎಂದು ಉತ್ತರಿಸಿದ. ಆ ವಿದ್ಯಾರ್ಥಿಯಿಂದ, “ಹಾಗಾದರೆ ಅಲ್ಲಿ ಏಕೆ ಕಲಿತೆ? ಕಲಿತು ಏನು ಫಲ ಸಿಕ್ಕಿತು?’ ಎಂದ. ಈ ವಿದ್ಯಾರ್ಥಿ, “ಅಲ್ಲಿ ಕಲಿಯದೇ ಇದ್ದರೆ ಅಲ್ಲೇನೂ ವಿಶೇಷ ಇಲ್ಲ ಎಂಬುದು ನನಗೆ ತಿಳಿಯುವುದಾದರೂ ಹೇಗೆ?’ ಎಂದು ಮರು ಪ್ರಶ್ನಿಸಿದ.
ಜ್ಞಾನೋದಯ ಅಥವಾ ಪರಮ ಸತ್ಯದ ಅರಿವು ಎಂದರೆ ದೇವಲೋಕದ ಹೂವಲ್ಲ. ನಮಗೆ ಪ್ರಾಪ್ತಿಯಾಗುವ ಯಾವುದೋ ಒಂದು ವಸ್ತುವಿಶೇಷ ಅದಲ್ಲ. ಅದು ಗುರಿ ಸಾಧನೆಯೂ ಅಲ್ಲ. ಪರ್ವತ ಶಿಖರ ಏರುವು ದಲ್ಲವೇ ಅಲ್ಲ. ಪರಮ ಸತ್ಯದ ಅರಿವು, ಜ್ಞಾನೋ ದಯ ಎಂದರೆ ಸ್ವ ಅರಿವು, ನಾನು ಯಾರು ಎಂಬುದನ್ನು ತಿಳಿದುಕೊಳ್ಳುವುದು. ಪರಮ ಸತ್ಯ ಹೊರಗೆಲ್ಲೋ ಇಲ್ಲ; ನಮ್ಮೊಳಗೆಯೇ ಇದೆ. ಅದರ ದರ್ಶನವೇ ಜ್ಞಾನೋದಯ.
ಸದಾ ನಮ್ಮೆದುರಿಗೇ ಇರುವ ಸತ್ಯದ ದರ್ಶನವದು. ನೀವು ದಿನವೂ ನಡೆದಾಡುವ ದಾರಿಬದಿಯಲ್ಲಿ ಚೆಂದದ ಒಂದು ಗಿಡವಿದೆ ಎಂದುಕೊಳ್ಳಿ. ನೂರಾರು ಬಾರಿ ಅದೇ ದಾರಿಯಲ್ಲಿ ನಡೆದು ಹೋಗಿದ್ದರೂ ನಿಮಗೆ ಅದು ಕಂಡಿರುವುದಿಲ್ಲ. ಒಂದು ದಿನ ಹಠಾತ್ತಾಗಿ ದೃಗ್ಗೊàಚರವಾಗುತ್ತದೆ. “ಆಹ್ ಎಷ್ಟು ಚೆಂದವಿದೆ’ ಎಂದುಕೊಳ್ಳುತ್ತೀರಿ. ಆಡುಭಾಷೆಯಲ್ಲಿ “ಗೋಷ್ಠಿಯಾಗದೆ ಇರು ವುದು’ ಎನ್ನುತ್ತಾರೆ ಇದನ್ನು. ಪರಮ ಸತ್ಯ ಹೀಗೆಯೇ. ನಮ್ಮೆದುರಿಗೇ ಇರುತ್ತದೆ, ನಮ್ಮ ಅರಿವಿಗೆ ಬರುವುದಿಲ್ಲ.
ನಾವು ಹೊಸ ಸುಳ್ಳನ್ನು ಸೃಷ್ಟಿಸಬಹುದು. ಆದರೆ ಹೊಸ ಸತ್ಯವನ್ನು ಸೃಷ್ಟಿಸಲಾಗುವುದಿಲ್ಲ. ಸತ್ಯ ಅದಾಗಲೇ ಇದೆ, ಅದರ ದರ್ಶನ ನಮಗೆ ಆಗುವುದೇ ಜ್ಞಾನೋದಯ. ವಿಚಿತ್ರ ಎಂದರೆ ನಮಗೆ ಏನು ಗೊತ್ತಿಲ್ಲ ಎನ್ನುವುದು ನಮಗೆ ತಿಳಿದಿಲ್ಲ. ಹಾಗೆಯೇ ಸತ್ಯದರ್ಶನವೂ. ಇದೇ ಕಾರಣಕ್ಕಾಗಿ ನಮಗೆ ಸತ್ಯದರ್ಶನವಾಗಿರುವ ಗುರುವಿನ ಅಗತ್ಯ ವಿದೆ. ಅಲ್ಲವಾದರೆ ನಾವು ಯಾವುದೋ ಒಂದನ್ನು ಅದೇ ಪರಮ ಸತ್ಯ ಎಂದು ಭ್ರಮಿಸುವ ಸಾಧ್ಯತೆ ಇದೆ ಅಥವಾ ನನಗೆ ಲ್ಲವೂ ತಿಳಿದಿದೆ ಎಂದುಕೊಳ್ಳುವ ಸಾಧ್ಯತೆಯಿದೆ. ಇದನ್ನೇ ಇನ್ನೊಂದು ಬಗೆ ಯಲ್ಲಿ ಹೇಳುವುದಾದರೆ, ಪರಮ ಸತ್ಯ ಎಂದ ರೇನು ಎನ್ನುವುದು ನನಗೆ ಗೊತ್ತಿಲ್ಲ ಎನ್ನುವುದು ಮೊತ್ತ ಮೊದಲ ನೆಯದಾಗಿ ನಮ್ಮ ಅರಿವಿಗೆ ಬರಬೇಕು. ನಮಗೇನೂ ತಿಳಿದಿಲ್ಲ ಎನ್ನುವ ತಿಳಿವಳಿಕೆ ಇಲ್ಲದೇ ಇರುವುದೇ ಈ ದಾರಿಯಲ್ಲಿ ನಮಗಿರುವ ತೊಂದರೆ. ಆ ಅರಿವು ನಮ್ಮಲ್ಲಿ ಉಂಟಾದರೆ ಸತ್ಯ ದರ್ಶನ ಸುಲಭವಾಗುತ್ತದೆ.
ಜ್ಞಾನಾರ್ಥಿಯೊಬ್ಬ ಗುರುಗಳ ಬಳಿಗೆ ಬಂದನಂತೆ. ಮಾತುಕತೆಯ ಮಧ್ಯೆ ಚಹಾ ಬಂತು. ಗುರುಗಳು, “ನೀನು ಇದುವರೆಗೆ ಏನೆಲ್ಲ ಕಲಿತಿರುವೆ’ ಎಂದು ಪ್ರಶ್ನಿಸಿದರು. ಜ್ಞಾನಾರ್ಥಿ ಹೇಳುತ್ತ ಹೋದ. ಇದರ ನಡುವೆ ಗುರುಗಳು ಅವನೆದುರು ಚಹಾದ ಲೋಟ ಇರಿಸಿ ಹುಯ್ಯುತ್ತಲೇ ಇದ್ದರು. ತುಂಬಿ ಚೆಲ್ಲಿದರೂ ಮುಂದುವರಿಸಿದರು.
ಜ್ಞಾನಾರ್ಥಿ, “ತುಂಬಿತಲ್ಲ, ಚೆಲ್ಲುತ್ತಿದೆ’ ಎಂದ. ಗುರುಗಳು ಹೇಳಿದರು, “ಈಗಾಗಲೇ ತುಂಬಿದೆ. ಹಾಗಾಗಿ ಚೆಲ್ಲುತ್ತಿದೆ. ಖಾಲಿ ಯಾಗದೆ ಪುನಃ ತುಂಬಿಸುವುದು ಹೇಗೆ?’ ಪರಮ ಸತ್ಯದ ದರ್ಶನವಾಗಬೇಕಾದರೆ ಮೊದಲು ನಮ್ಮೊಳಗೂ ಈಗಾಗಲೇ ತುಂಬಿರುವುದು ಖಾಲಿಯಾಗಬೇಕು.