ಗುವಾಹಟಿ: “ಅಯ್ಯೋ… ವಯಸ್ಸಾಯ್ತು.. ಮೊದಲಿನಂತೆ ಈಗ ಕೆಲಸ ಮಾಡೋದಕ್ಕೇ ಆಗಲ್ಲ…’
ಇದು 35-40 ದಾಟಿದ ಬಹುತೇಕರ ದೂರು. ಈ ಸಮಸ್ಯೆಯನ್ನು ಮನಗಂಡಿರುವ ಗುವಾಹಟಿಯ ವಿಜ್ಞಾನಿಗಳು ಅದಕ್ಕೊಂದು ಹೊಸ ಪರಿಹಾರ ಕಂಡುಹಿಡಿದಿದ್ದಾರೆ. ಅದೇ “ಯೋಗರ್ಟ್'(ಮೊಸರು).
ಅಸ್ಸಾಂನ ಗುವಾಹಟಿ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡಿ ಇನ್ ಸೈನ್ಸ್ ಅಂಡ್ ಟೆಕ್ನಾಲಜಿ (ಐಎಎಸ್‌ಎಸ್‌ಟಿ) ಯ ವಿಜ್ಞಾನಿಗಳು “ಲಕ್ಟೋಬಕಿಲಸ್ ಪ್ಲಾಂಟರಂ ಜೆಬಿಸಿ5′ ಹೆಸರಿನ ಬ್ಯಾಕ್ಟೀರಿಯಾವನ್ನು ಪತ್ತೆ ಹಚ್ಚಿದ್ದಾರೆ. ಅದನ್ನು ಕೆನೋರ್ಹಾಬ್‌ಡಿಟಿಸ್ ಎಲಿಗೆನ್ಸ್ ಹೆಸರಿನ ಹುಳುವೊಂದರ ಮೇಲೆ ಪ್ರಯೋಗಿಸಿದ್ದಾರೆ. ಹೀಗೆ ಮಾಡಿದ ನಂತರ ಆ ಹುಳುವಿನ ಜೀವಿತಾವಧಿ ಶೇ.27.8ರಷ್ಟು ಹೆಚ್ಚಾಗಿದೆ. ಹಾಗೆಯೇ ಅದು ಅತಿಹೆಚ್ಚು ಕಾಲ ಸದೃಢವಾಗಿರುವುದನ್ನೂ ವಿಜ್ಞಾನಿಗಳು ಗಮನಿಸಿದ್ದಾರೆ.
ಇದನ್ನೂ ಓದಿ:ಗಮನಿಸುತ್ತಿದ್ದೇವೆ, ಕೆಲ ಮಕ್ಕಳ ಪೋಷಕರು ಮತೀಯ ಸಂಘಟನೆಯಲ್ಲಿದ್ದಾರೆ : ಆರಗ ಜ್ಞಾನೇಂದ್ರ
ಈ ಬ್ಯಾಕ್ಟೀರಿಯಾವು ಮನುಷ್ಯನನ್ನು ವಯೋಸಹಜವಾಗಿ ಕಾಡುವ ಬೊಜ್ಜು, ಪ್ರತಿಕಾಯದ ಸಮಸ್ಯೆಗಳಿಂದ ಕಾಯಬಲ್ಲದು ಎಂದು ಎಐಎಸ್‌ಎಸ್‌ಟಿ ನಿರ್ದೇಶಕರಾಗಿರುವ ಆಶಿಶ್ ಕೆ.ಮುಖರ್ಜಿ ತಿಳಿಸಿದ್ದಾರೆ.
ಸಂಸ್ಥೆ ಕಂಡುಹಿಡಿದ “ಲಕ್ಟೋಬಕಿಲಸ್ ಪ್ಲಾಂಟರಂ ಜೆಬಿಸಿ5′ ಬ್ಯಾಕ್ಟೀರಿಯಾ ಬಳಸಿಕೊಂಡು ಪ್ರೊಬಯೋಟಿಕ್ ಮೊಸರನ್ನು(ಯೋಗರ್ಟ್) ತಯಾರಿಸಿದೆ. ಅದರ ಪೇಟೆಂಟ್‌ಗೆಂದು ಅರ್ಜಿಯನ್ನೂ ಸಲ್ಲಿಸಿದೆ. ಈ ಮೊಸರನ್ನು ಮನುಷ್ಯರು ಬಳಸುವುದರಿಂದ ಅವರ ದೈಹಿಕ ಸಾಮರ್ಥ್ಯ ಹೆಚ್ಚಬಹುದು ಎನ್ನುವುದು ಸಂಶೋಧಕರ ವಾದ.