Advertisement

ಡಿಎನ್‌ಎ ಆಧಾರದಲ್ಲಿ ಟಿಕೆಟ್‌ ಕೊಡಿ ಎಂದ್ರೆ ಹೇಗೆ?

01:03 AM Apr 12, 2019 | Sriram |

ಚಾಮರಾಜನಗರ: “ಕೇಂದ್ರದ ಮಾಜಿ ಸಚಿವ ಅನಂತಕುಮಾರ್‌ ಅವರಿಗೆ ಏನು ಕ್ರೆಡಿಟ್‌ ಕೊಡಬೇಕೋ ಸಂಘಟನೆ ಅದನ್ನ ಕೊಡುತ್ತದೆ.ಅದನ್ನೇ ಅವರ ಹೆಂಡತಿಯೂ ಪಡೆದುಕೊಳ್ಳ ಬೇಕೆಂದರೆ ಹೇಗೆ? ಅದು ಆಗೋದಿಲ್ಲ. ಜೀನ್ಸ್‌ಗೆ,ಡಿಎನ್‌ಎಗೆ ಟಿಕೆಟ್‌ ಕೊಡ್ತಾ ಹೋದ್ರೆ ಪಾರ್ಟಿ ಮೆಂಬರ್‌ಶಿಪ್‌ಗೆ ಬೆಲೆ ಬೇಕಲ್ಲ?’ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಹೇಳಿದರು.

Advertisement

ನಗರದಲ್ಲಿ ಬಿಜೆಪಿ ಏರ್ಪಡಿಸಿದ್ದ ಪ್ರಬುದ್ಧರ ಗೋಷ್ಠಿ ಕಾರ್ಯಕ್ರಮದಲ್ಲಿ ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.

“20-30 ವರ್ಷ ರಾಜಕಾರಣದಲ್ಲಿ ಮುಂದುವರಿಯಲು ಸಾಮರ್ಥ್ಯ ಇರುವವರಿಗೆ ಟಿಕೆಟ್‌ ಕೊಟ್ಟಿದ್ದೇವೆ. ಪಕ್ಷ ಕಟ್ಟಿದವರಲ್ಲಿ ಅನಂತ್‌ ಕುಮಾರ್‌ ಸಹ ಒಬ್ಬರು. ತೇಜಸ್ವಿನಿ
ಅನಂತಕುಮಾರ್‌ಗೆ ಟಿಕೆಟ್‌ ತಪ್ಪಿಸಲಾಯಿತು ಅನ್ನೋದು ಸರಿಯಲ್ಲ. ಡಿಎನ್‌ಎ ಆಧಾರದಲ್ಲಿ ಟಿಕೆಟ್‌ ಕೊಡಿ ಎಂದರೆ ಹೇಗೆ? ಅವರ ಪುಣ್ಯವನ್ನೆಲ್ಲ ಇವರಿಗೆ ಧಾರೆ ಎರೆದು ಟಿಕೆಟ್‌ ನೀಡಬೇಕು ಎಂಬುದು ಸರಿಯಲ್ಲ ಎಂದರು.

ಗೌರವಕ್ಕೆ ಸಮಾನವಾದುದು ಟಿಕೆಟ್‌ ಎಂಬುದಲ್ಲ, ಟಿಕೆಟ್‌ ಕೊಟ್ಟರೆ ಗೌರವ, ಕೊಡದಿದ್ದರೆ ಗೌರವ ಇಲ್ಲ ಅಂತಲ್ಲ. ಇದು ಸಮಾಜಕ್ಕೆ ಆರೋಗ್ಯಕರವಾದ ಸಂಗತಿಯಲ್ಲ.ಗೌರವ, ಸಾಮರ್ಥ್ಯವನ್ನು ಲೆಕ್ಕಹಾಕಿ ರಾಜ್ಯದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಅವಕಾಶ ತೆರೆದಿದೆ. ಅವರು ಎಲ್ಲಿಗೆ ಬೇಕಾದರೂ ಬೆಳೆಯಲಿ.ಅದಕ್ಕೆ ಸಮಾನವಾದದ್ದು ಟಿಕೆಟ್‌ ಎಂಬುದನ್ನು ನಮ್ಮ ಸಂಘಟನೆ ಒಪ್ಪುವುದಿಲ್ಲ ಎಂದರು.

ಪತ್ರಿಕೆಯಲ್ಲಿ ಬಂದದ್ದೆಲ್ಲ ಸತ್ಯವಲ್ಲ: ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದ ಇಬ್ಬರಲ್ಲಿ ಅನಂತ್‌ಕುಮಾರ್‌ ಕೂಡ ಒಬ್ಬರು ಎಂಬುದನ್ನು 50 ವರ್ಷದ ನಂತರ ಕೇಳಿದರೂ ಉಳಿದುಕೊಳ್ಳುವ ಸಂಗತಿ ಎಂದರಲ್ಲದೆ, 30 ವರ್ಷ ರಾಜಕೀಯ ಮಾಡುವ ಸಾಮರ್ಥ್ಯ ಇರುವವರಿಗೆ ಟಿಕೆಟ್‌ ಕೊಡಬೇಕು.ಹಾಗಾಗಿ ಅವರ ಪತ್ನಿಗೆ ಟಿಕೆಟ್‌ ತಪ್ಪಿಸಿದರು
ಎಂಬುದು ಸರಿಯಲ.É ಪತ್ರಿಕೆಯಲ್ಲಿ ಬಂದದ್ದೆಲ್ಲ ಸತ್ಯ ಎಂದು ಒಪ್ಪಿಕೊಂಡರೆ ಅದು ಬಹಳ ಅಪಾಯಕಾರಿ ಎಂದು ಸಂತೋಷ್‌ ಹೇಳಿದರು.

Advertisement

ಯಡಿಯೂರಪ್ಪ ಅವರೇ ಘೋಷಿತ ಮುಖ್ಯಮಂತ್ರಿ: ಮಾಜಿ ಉಪ ಪ್ರಧಾನಿ ಎಲ್‌.ಕೆ.ಅಡ್ವಾನಿ ಮತ್ತು ಮುರುಳಿ ಮನೋಹರ್‌ ಜೋಷಿ ಅವರಂತೆ ರಾಜ್ಯದ ಬಿಜೆಪಿ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮೂಲೆ ಗುಂಪು ಮಾಡಲಾಗುತ್ತದೆಯೇ ಎಂಬ ಮುಖಂಡರೊಬ್ಬರ ಪ್ರಶ್ನೆಗೆ, ಮೂಲೆಗುಂಪು ಮಾಡುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರೇ ಘೋಷಿತ ಮುಖ್ಯಮಂತ್ರಿ ಎಂದು ಯಡಿಯೂರಪ್ಪ ಪರ
ಬ್ಯಾಟಿಂಗ್‌ ಮಾಡಿದರು.

ರಾಜ್ಯದಲ್ಲಿ ಬಿಜೆಪಿ 22 ಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ
ಮೈತ್ರಿ ಸರ್ಕಾರ ಬಿದ್ದು ಹೋಗಲಿದೆ ಎಂದು ವೀರಪ್ಪ ಮೊಯ್ಲಿ ಅವರೇ ಹೇಳಿದ್ದಾರೆ. 22 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಐದು ವರ್ಷಗಳ ಕಾಲ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಮುಂದಿಟ್ಟುಕೊಂಡು ನಾವು ಜನರ ಬಳಿಗೆ ಯಾವುದೇ ಅಳುಕಿಲ್ಲದೆ ಹೋಗಿದ್ದೇವೆ. ಐದು ವರ್ಷಗಳ ಬಳಿಕ ಜನರ ಬಳಿಗೆ ಹೋಗಲು ನಮಗೆ ನಮ್ಮ ಸರ್ಕಾರದ ಸಾಧನೆಗಳೇ ಸಾಕು. ಏರ್‌ ಸ್ಟ್ರೈಕ್‌ನಂತಹ ವಿಚಾರ ಬೇಕಾಗಿಲ್ಲ . ಭಯೋತ್ಪಾದನೆ ಈಗ ಕಾಶ್ಮೀರ ಬಿಟ್ಟು ಹೊರಗೆ ನಡೆಯುತ್ತಿಲ್ಲ. ಉಗ್ರರಿಗೆ ತಕ್ಕ ಪಾಠಕಲಿಸಲಾಗಿದೆ. ಆದರೂ, ಇದರ ಬಗ್ಗೆ ಸಾಕ್ಷಿ ಕೇಳುವವರು ಹೆಚ್ಚಾಗುತ್ತಿದ್ದಾರೆ ಎಂದು ಸಂತೋಷ್‌ ವ್ಯಂಗ್ಯವಾಡಿದರು.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ನಾಯಕನಾಗಲೇ ಇಲ್ಲ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಂತೆಯೇ ಸೋನಿಯಾಗಾಂಧಿ ಅವರಿಗೆ ಋಣಿಯಾಗಿದ್ದರು.ಮನಮೋಹನ್‌ ಸಿಂಗ್‌ ಅವರಿಗೆ ಗುಂಡಿಗೆ ಇರಲಿಲ್ಲ. ಇದರಿಂದಾಗಿ ಮೋದಿಗೆ ಲೀಡರ್‌ ಶಿಪ್‌ ದೊರಕಿತು. ರಾಜಕಾರಣ ಮತ್ತು ರಾಜಕೀಯ ಕ್ಷೇತ್ರಕ್ಕೆ ವಿಶ್ವಾಸರ್ಹತೆಯನ್ನು ಮೋದಿ ತಂದು ಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಚಾಮರಾಜನಗರ ಉಸ್ತುವಾರಿ ರಾಜೇಂದ್ರ, ಜೈನ ಸಮಾಜದ ವರ್ಧಮಾನಯ್ಯ, ಹಾಗೂ ಉದ್ಯಮಿ ಜಿ.ಎಸ್‌. ಅಶ್ವತ್ಥ ನಾರಾಯಣ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next