Advertisement

ಸಂಸ್ಕಾರವಂತ ಜನಪ್ರತಿನಿಧಿಗಳ ನಿರೀಕ್ಷಿಸುವುದು ಹೇಗೆ?

12:53 AM Nov 07, 2019 | mahesh |

ಈಗ ಏನಾಗಿದೆ? ಕ್ರಿಮಿನಲ್‌ ಪ್ರಕರಣಗಳನ್ನು ಮಾಡಿದವರಿಗೆ ಮತ ಕೇಳುವ ಅಧಿಕಾರ ಬಂದಿದೆ. ಅವರ ಬಾಯಿಯಲ್ಲಿ ವೇದ, ಉಪನಿಷತ್‌ ಕೇಳಬಯಸಿದರೆ ಸಿಕ್ಕೀತೇ? ವರ್ತನೆಯಿಂದ ಗೌರವ ಸಂಪಾದಿಸಿಕೊಳ್ಳಬೇಕೆಂಬ ಬಯಕೆ ಇಲ್ಲದ ರಾಜಕಾರಣಿಗಳು ಎಲ್ಲ ಪಕ್ಷಗಳಲ್ಲಿಯೂ ತುಂಬಿಕೊಳ್ಳುತ್ತಿದ್ದಾರೆ.

Advertisement

“ನುಡಿದರೆ ಮುತ್ತಿನ ಹಾರದಂತಿರಬೇಕು…’
ಶರಣರು ಹೇಳಿದ ಮಾತು ಬಹುಶಃ ಇಂದಿನ ರಾಜಕಾರಣಿಗಳಿಗೆ ಗೊತ್ತಿಲ್ಲ ಅನಿಸುತ್ತದೆ. ವಾಜಪೇಯಿಯವರಂತಹ ಅತ್ಯುತ್ತಮ ಸಂಸದೀಯ ಪಟು, ರಾಮಕೃಷ್ಣ ಹೆಗಡೆಯವರಂತಹ ಸಂಯಮದ ಮಾತುಗಾರ ಅಲಂಕರಿಸಿದ ಆಸನಗಳಲ್ಲಿ ಇಂದು ಕುಳಿತುಕೊಳ್ಳುವ ಬಹುಮಂದಿ ಮಾತನಾಡುವ ಮಾತು, ಅದರಲ್ಲಿರುವ ವಾಕರಿಕೆ ತರಿಸುವ ನುಡಿಮುತ್ತುಗಳು, ಗೌರವಾನ್ವಿತರೆನಿಸಿಕೊಂಡವರ ಬಗೆಗೆ ಪ್ರಯೋಗಿಸುವ ಏಕವಚನಗಳು ಇದನ್ನೆಲ್ಲ ನೋಡಿದರೆ ನಮ್ಮನ್ನಾಳುವ ಪ್ರಭುಗಳ ಸಂಸ್ಕೃತಿ ಎಲ್ಲಿ ತನಕ ಮುಟ್ಟಿತು ಎಂಬ ವಿಷಾದ ಕಾಡುತ್ತದೆ. ಪೊಲೀಸರ ಮಾತುಗಾರಿಕೆಯ ಬಗೆಗೆ ಸಾಕಷ್ಟು ವಿರೋಧಗಳಿವೆ. ಇತ್ತೀಚಿನ ದಿನಗಳಲ್ಲಿ ಪದವೀಧರರಾದವರು ಅಲ್ಲಿ ಕೆಲಸಕ್ಕೆ ಸೇರುತ್ತಿದ್ದಾರೆ. ಅವರ ಭಾಷೆ ಸುಧಾರಿಸುತ್ತಿದೆ. ಆದರೆ ನಡೆನುಡಿಯಲ್ಲಿ ನಮ್ಮ ಶಾಸನದ ಮನೆಗಳಿಗೆ ಇನ್ನಿಲ್ಲದ ಗೌರವ ತಂದ ಎಂತೆಂತಹ ಸರ್ವಶ್ರೇಷ್ಠರು ಇತಿಹಾಸವಿಡೀ ನೆನಪಿರಿಸಿಕೊಳ್ಳುವಂತಹ ಸಚ್ಚಾರಿತ್ರ್ಯ, ಸುಸಂಸ್ಕೃತ ಮಾತುಗಳಿಂದ ಇಂದಿಗೂ ಸವಿ ನೆನಪಾಗಿ ಉಳಿದಿದ್ದರೆ ಇಂದು ಗೆದ್ದು ಬರುವವರ ನಾಲಿಗೆಯಲ್ಲಿ ಪುಟಿಯುವ ವಾಕ್‌ ಸರಣಿಯನ್ನು ನೋಡಿದರೆ ಅಯ್ಯೋ ದೇಶದ ದುರ್ಗತಿಯೇ ಎಂಬ ಭಾವ ಮೂಡುವುದು ಅಸಹಜವೇನಲ್ಲ. ಕಾರಣ ಜನ ಪ್ರತಿನಿಧಿಯಾಗುವವನಿಗೆ ವಿದ್ಯೆ, ಸಂಸ್ಕಾರಗಳ ಅಳತೆಗೋಲು ಬೇಕಾಗಿಲ್ಲ.

ಎಲ್ಲ ಉದ್ಯೋಗಕ್ಕೆ ಸೇರುವಾಗಲೂ ಅದರದೇ ಆದ ನೀತಿ, ನಿಯಮಗಳಿವೆ, ವಿಧಿ ನಿರ್ಬಂಧಗಳಿವೆ. ಆದರೆ ದೇಶವನ್ನಾಳಲು ಯಾವುದೇ ಮೌಲ್ಯಗಳು ಬೇಕಾಗುವುದಿಲ್ಲ. ಸಾಮಾನ್ಯ ಜ್ಞಾನ ಕೂಡ ಅಗತ್ಯವಾಗುವುದಿಲ್ಲ. ನಮ್ಮ ರಾಜ್ಯದಲ್ಲಿ ಮೂವತ್ನಾಲ್ಕು ಜಿಲ್ಲೆಗಳಿವೆ ಎಂದು ಸಂಸದರೊಬ್ಬರು ವಟಗುಟ್ಟಿದರೆ ಅದು ಕೂಡ ಜ್ಞಾನ ಭಂಡಾರದ ಅತ್ಯುಚ್ಚ ಗುಣ ಲಕ್ಷಣವೆಂದೇ ಭಾವಿಸುವವರಿದ್ದಾರೆ. ಹೊಡಿ, ಕಡಿ, ನಾಲಿಗೆ ಕತ್ತರಿಸಿ, ಕುತ್ತಿಗೆ ಕೊಯ್ಯಿರಿ ಎಂದು ಒಬ್ಬನು ಪ್ರಲಾಪಿಸಿದರೆ ಅದನ್ನು ಗೀತ ಗಾಯನದ ಆಲಾಪನೆಯೆಂದು ಸ್ವೀಕರಿಸುವವರಿದ್ದಾರೆ. ನೆರೆ ಸಂತ್ರಸ್ತರಿಗೆ ಬಿಸ್ಕೆಟಿನ ಪಾಕ್ಕೆಟುಗಳನ್ನು ನಾಯಿಗೆ ಮೂಳೆ ಎಸೆದ ಹಾಗೆ ಎಸೆಯುವ ಶಾಸಕರೊಬ್ಬನನ್ನು ಉದಾರವಾಗಿ ಮತದಾರರು ಸ್ವೀಕರಿಸಿದ್ದಾರೆಂದರೆ ಎಲುಬಿಲ್ಲದ ನಾಲಿಗೆಯನ್ನು ಹರಿಯಬಿಡುವ ಸಂಸ್ಕಾರವಂತರನ್ನು ಏಕೆ ದೂರವಿಡುತ್ತಾರೆ?

ನಮ್ಮ ಶಾಸನ ಸಭೆಗೆ ಬಹು ದೊಡ್ಡ ಪೂಜ್ಯ ಇತಿಹಾಸವಿದೆ. ಕೆಂಗಲ್‌ ಹನುಮಂತಯ್ಯ, ನಿಜಲಿಂಗಪ್ಪ, ದೇವರಾಜ ಅರಸುರಂತಹ ಮುಖ್ಯಮಂತ್ರಿಗಳು ಇಲ್ಲಿ ಹದಮೀರಿದ ಮಾತಿಗೆ ಎಡೆ ಕೊಡಲಿಲ್ಲ. ಬೇರೊಬ್ಬರ ಮಾನಕ್ಕೆ ಚ್ಯುತಿ ತರುವ ಮಾತುಗಳು ಅವರ ಕಾಲದಲ್ಲಿ ವಿರೋಧ ಪಕ್ಷಗಳ ಸದಸ್ಯರಿಂದಲೂ ಸು#ರಿಸಲಿಲ್ಲ. ಆದರೆ ಈಗ ಏನಾಗಿದೆ? ಕ್ರಿಮಿನಲ್‌ ಪ್ರಕರಣಗಳನ್ನು ಮಾಡಿದವರಿಗೆ ಮತ ಕೇಳುವ ಅಧಿಕಾರ ಬಂದಿದೆ. ಅವರ ಬಾಯಿಯಲ್ಲಿ ವೇದ, ಉಪನಿಷತ್‌ ಕೇಳಬಯಸಿದರೆ ಸಿಕ್ಕೀತೇ? ಇತ್ತೀಚೆಗಿನ ಟಿಪ್ಪು ಮತ್ತು ಸಾವರ್ಕರ್‌ ಪ್ರಸಂಗಗಳನ್ನು ನೋಡಿದರೆ ಈ ಇಬ್ಬರೂ ನಮ್ಮ ಕಣ್ಣ ಮುಂದೆ ಇಲ್ಲ. ಒಬ್ಬರಿಗೆ ಭಾರತ ರತ್ನ ಇನ್ನೊಬ್ಬರಿಗೆ ಜಯಂತಿ. ಇದೆರಡೂ ಅವರು ಅಪೇಕ್ಷಿಸಿದ್ದಲ್ಲ. ಜನ ಪ್ರತಿನಿಧಿಯಾದವನು ಯಾವುದೇ ಕೋಮು ಅಥವಾ ಅದಕ್ಕೆ ಸಂಬಂಧಿಸಿದ ವ್ಯಕ್ತಿಯನ್ನು ದೂಷಿಸಬಾರದು. ತಲೆಯಲ್ಲಿ ಹೊತ್ತುಕೊಂಡು ಮೆರವಣಿಗೆ ಬರುವ ಅಗತ್ಯವೂ ಇಲ್ಲ. ಆದರೂ ಕೆಲವು ಶಾಸಕರು ಮಾತನಾಡಿದ ರೀತಿ ನೋಡಿದರೆ ಸಂಸ್ಕೃತಿ ಮತ್ತು ರಾಷ್ಟ್ರ ರಕ್ಷಣೆಯ ಗಂಧಮಾದನ ಪರ್ವತವನ್ನೇ ತಾವು ಹೊತ್ತಂತೆ ತೋರಿಸಿಕೊಳ್ಳುತ್ತಿದ್ದರು.

ಮೊದಲು ಕನ್ನಡದಲ್ಲಿ ಒಂದೇ ದೂರದರ್ಶನ ವಾಹಿನಿಯ ಪ್ರಸಾರವಿದ್ದಾಗ ಅದರಲ್ಲಿ ಬರುವ ಕಾರ್ಯಕ್ರಮಗಳಿಗೆ ಅಂದ ಚಂದ ಗೌರವ ಇತ್ತು. ಆದರೆ ಪ್ರಸಾರ ಮಾಧ್ಯಮಗಳ ಸಂಖ್ಯೆ ಬೆಳೆಯುತ್ತ ಹೋದಂತೆ ನಾಲಿಗೆ ಹರಿಬಿಡುವ ರಾಜಕಾರಣಿಗಳ ತೆವಲು ತೀರಿಸಿಕೊಳ್ಳಲು ಅದು ವೇದಿಕೆಯಾಗುತ್ತಿದೆ. ಆರೋಗ್ಯಕರ ಟೀಕೆಗಳಾದರೆ ಸರಿ, ಇದು ಅವರ ಸಾಹಿತ್ಯದ ಗಟಾರವನ್ನೇ ಕಿವಿಗಳಲ್ಲಿ ಹರಿಸುವ ಕೊಳಕು ಮಾತುಗಳ ರಣರಂಗವಾದರೆ ವಾಹಿನಿಯವರಿಗೆ ಲಾಭವಾಗುತ್ತದೆ. ಅಲ್ಲಿ ಪರಸ್ಪರ ಬೈದುಕೊಂಡು ವಾಗ್‌ ವೈಖರಿ ಪ್ರದರ್ಶಿಸುವ ರಾಜಕಾರಣಿಗಳು ಹೋಗುವಾಗ ಒಂದೇ ಕಾರಿನಲ್ಲಿ ಒಟ್ಟಿಗೆ ಕುಳಿತು ತೆರಳಬಹುದು. ಆದರೆ ಅವರ ಮಾತು ಕೇಳಿ ಅಸಹ್ಯಪಡುವವರಿಗಿಂತಲೂ ಎದುರಾಳಿಯನ್ನು ಝಾಡಿಸಿ ಒದ್ದರೆಂದೇ ಭಾವಿಸಿ ಖುಷಿಪಡುವ ಮಂದಿ ಹೆಚ್ಚಿರುವ ಕಾರಣ ರಾಜಕಾರಣಿಗಳಿಗೆ ಅಂತರಂಗ ಮತ್ತು ಬಹಿರಂಗ ಅಶುದ್ಧಿಯಿರುವಾಗ ನಾಲಿಗೆಯನ್ನು ಶುದ್ಧವಾಗಿಡುವ ಅಗತ್ಯವೇನಿದೆ ಎನಿಸಬಹುದು.

Advertisement

ವರ್ತನೆಯಿಂದ ಗೌರವ ಸಂಪಾದಿಸಿಕೊಳ್ಳಬೇಕೆಂಬ ಬಯಕೆ ಇಲ್ಲದ ರಾಜಕಾರಣಿಗಳು ಎಲ್ಲ ಪಕ್ಷಗಳಲ್ಲಿಯೂ ತುಂಬಿಕೊಳ್ಳುತ್ತಿರುವಾಗ ವಾಜಪೇಯಿಯವರಂತೆ ಕವನಗಳನ್ನು, ವಚನಗಳನ್ನು ಪೋಣಿಸುವ ಸಂಸ್ಕಾರವಂತ ಸಂಸದರನ್ನು, ಶಾಸಕರನ್ನು ಹೇಗೆ ನಿರೀಕ್ಷಿಸಬಲ್ಲೆವು? ಭಾರತೀಯ ಸಂಸ್ಕೃತಿಯ ರಕ್ಷಣೆಗೆ ಜೀವ ಬೇಕಿದ್ದರೂ ಕೊಡಬಲ್ಲೆವು ಎಂದು ಹೇಳುವವರು ಕೂಡ ಮಾತಿಗಿಳಿದರೆ ಅಸಂಬದ್ಧ, ಅವಾಚ್ಯ ಪದಗಳಿಂದ ಅವರು ಎಷ್ಟು ಸಂಸ್ಕೃತಿಯುಳ್ಳವರು ಎಂಬ ಮೌಲ್ಯಮಾಪನ ಮಾಡಲು ಸುಲಭವಾಗುತ್ತದೆ.

ಶಾಸಕರು ಅಥವಾ ಸಂಸದರ ಮಾತೆಂದರೆ ಇಷ್ಟೇ ಖಾರವಿರಬೇಕು, ಹೊಲಸಿರಬೇಕು, ಕೇಳಿದವರು ಮುಖ ಮುಚ್ಚಿಕೊಳ್ಳುವಂತಿರಬೇಕು ಎಂದು ಮುಂದಿನ ಪೀಳಿಗೆಯವರು ಅದನ್ನೊಂದು ಪರಂಪರೆಯೆಂದು ಭಾವಿಸುವ ಹಾಗೆ ಆಗಬಾರದು. ಅವರು ಆಡಳಿತದಿಂದ ಹೇಗೆ ಮಾದರಿಯಾಗಿರುತ್ತಾರೋ ಮಾತಿನಿಂದಲೂ ಮಾರ್ಗದರ್ಶಕರಾಗಿರಬೇಕು. ಜನ ಪ್ರತಿನಿಧಿ ಅಳತೆ ಮೀರಿ ಮಾತನಾಡಿದಾಗ ಅದನ್ನು ತಪ್ಪು ಎಂದು ಪರಿಗಣಿಸುವ ಒಂದು ಕಟ್ಟುನಿಟ್ಟಿನ ಕಾನೂನಿನ ವ್ಯವಸ್ಥೆ ಕಾನೂನಿನ ನಿರ್ಮಾಪಕರಾದ ಇವರು ಮಾಡುತ್ತಾರೆಂದು ಭಾವಿಸಿದರೆ ತಪ್ಪಾಗಬಹುದು. ಜನತೆ ಸಂಸ್ಕಾರವನ್ನು ಮೈಗೂಡಿಸಿಕೊಂಡರೆ, ಅಸಂಸ್ಕೃತವಾಗಿ ಮಾತನಾಡುವವರಿಗೆ ಪವಿತ್ರವಾದ ಶಾಸನ ಸಭೆಗೆ ಕಾಲಿಡಲೂ ಅಧಿಕಾರವಿಲ್ಲವೆಂಬುದನ್ನು ಮತದಾರ ತೀರ್ಮಾನಿಸಿದರೆ ಮಾತ್ರ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಬಹುದು. ಜನ ಪ್ರತಿನಿಧಿಯ ಬಾಯಲ್ಲಿ ಮುತ್ತಲ್ಲ, ಮಾಣಿಕ್ಯದಂತಹ ಮಾತಿನ ಹಾರ ಹೊರಗೆ ಬರಬಹುದು.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next