Advertisement

ಆನ್‌ಲೈನ್‌ನಲ್ಲಿ ಹೇಗಿರಬೇಕು ?

06:25 AM Jul 07, 2018 | Team Udayavani |

ಸಾಮಾಜಿಕ ಜಾಲತಾಣಗಳು ಕೇವಲ ಆನ್‌ಲೈನ್‌ನಲ್ಲೇ ಹುಟ್ಟಿ ಅಲ್ಲೇ  ಮುಗಿಯುವುದಿಲ್ಲ. ಅಲ್ಲಿಂದ ಹುಟ್ಟಿದ ಪ್ರತಿ ಶಬ್ದಗಳೂ ವಾಸ್ತವ ಜಗತ್ತಿನಲ್ಲಿ ಹಾರಾಡುತ್ತವೆ, ಕುಣಿಯುತ್ತವೆ, ಅಣಕಿಸುತ್ತವೆ, ನಮ್ಮನ್ನು ನೋಡಿ ನಗುತ್ತವೆ. ಹಾಗಾಗಿ ಫೇಸ್‌ಬುಕ್‌- ವಾಟ್ಸಪ್‌ನಲ್ಲಿ ಹೇಗೆ ವರ್ತಿಸಬೇಕು ಎನ್ನುವುದೂ ಇವತ್ತಿನ ಆನ್‌ಲೈನ್‌ ವ್ಯಕ್ತಿತ್ವ ವಿಕಸನದ ಸಂಗತಿಯಾದೀತು.

Advertisement

ಕಚೇರಿಯಲ್ಲೋ, ಮನೆಯಲ್ಲೋ ಕುಳಿತು ಸಾಮಾಜಿಕ ಜಾಲತಾಣದಲ್ಲಿ ನಾವು ಒಂದು ಪೋಸ್ಟ್ ಟ್ವೀಟ್‌ ಮಾಡುತ್ತೇವೆ. ನಮ್ಮ ಪ್ರಕಾರ ಸುತ್ತ ಯಾರೂ ಇಲ್ಲ. ನಾವೊಬ್ಬರೇ ಎಂದೆನಿಸುತ್ತದೆ. ಆದರೆ, ವಾಸ್ತವ ಹಾಗಿಲ್ಲ. ನಮ್ಮ ಆತ್ಮೀಯರು, ಪರಿಚಿತರು, ದೂರದಿಂದ ಬಲ್ಲವರು, ನಮ್ಮ ಹೆಸರು ಕೇಳಿ ಗೊತ್ತಿರುವವರು ನಮ್ಮ ಪ್ರತಿಯೊಂದು ಹೆಜ್ಜೆಯನ್ನೂ ನೋಡುತ್ತಿರುತ್ತಾರೆ. ಅಷ್ಟೇ ಅಲ್ಲ, ಲಕ್ಷಾಂತರ ಅಪರಿಚಿತರ ಕಣ್ಣೂ ನಮ್ಮ ಮೇಲೆ ಇರುತ್ತದೆ.

ನಮ್ಮ ಬದುಕಿನ ಬಹುತೇಕ ಭಾಗವನ್ನು ಸಾಮಾಜಿಕ ಜಾಲತಾಣಗಳು ಕಬಳಿಸುತ್ತಿವೆ. ನಾವು ಟೇಬಲ್‌ ಮ್ಯಾನರ್ಸ್‌ ಕಲಿತಿರುತ್ತೇವೆ, ಸ್ಮಾರ್ಟ್‌ ಆಗಿ ಡ್ರೆಸ್‌ ಮಾಡಿಕೊಂಡು ಕಚೇರಿಗೆ ಹೋಗಬೇಕು ಎಂದು ತಿಳಿದಿರುತ್ತವೆ, ಬಾಡಿ ಲ್ಯಾಂಗ್ವೇಜ್‌ ಗೊತ್ತಿರುತ್ತದೆ. ಆದರೆ, ಈ ಹೊಸ ಸಾಮಾಜಿಕ ಜಾಲತಾಣದಲ್ಲಿ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂದು ಯಾರೂ ಹೇಳಿಕೊಡುವುದಿಲ್ಲ. ಹೀಗಾಗಿ ಇದು ಸ್ವಯಂ ಕಲಿಕೆಯ ಪಾಠ.

ಚಿಂತನೆ ಸ್ವಾತಂತ್ರ್ಯ!
ಸಾಮಾನ್ಯವಾಗಿ ನಾವು ಆಫ್ಲೈನ್‌ನಲ್ಲಿ, ರಸ್ತೆಯಲ್ಲಿ ಸ್ನೇಹಿತರೊಂದಿಗೆ ನಿಂತು ಮಾತಾಡುವಾಗ ಸ್ನೇಹಿತ ಹೇಳಿದ ಯಾವುದಾದರೂ ವಿಷಯ ನಮಗೆ ಸರಿಬರಲಿಲ್ಲ ಎಂದಾಗ ಅಲ್ಲಿಯೇ ಅದನ್ನು ಹೇಳುತ್ತೇವೆ. ಆದರೆ ಇಲ್ಲಿ  ಹಾಗಿಲ್ಲ. ಅಕ್ಷರಗಳನ್ನು ಕೀಬೋರ್ಡ್‌ನಲ್ಲಿ ಒತ್ತುವಾಗ ನಮ್ಮ ಮನಸ್ಸಿನ ಮಾತು, ಭಾವ ಕೈಗೆ ಇಳಿಯುವುದಿಲ್ಲ. ಶಬ್ದಗಳು ಬರೀ ಶಬ್ದಗಳಾಗಿರುತ್ತವೆ. ಇವು ನಿಮ್ಮ ಪರಿಚಯವೇ ಇಲ್ಲದ ಜಗತ್ತಿನ ಇನ್ಯಾವುದೋ ಮೂಲೆಯಲ್ಲಿರುವ ವ್ಯಕ್ತಿಯೂ ನೋಡಬಹುದು. ಅವುಗಳ ಸನ್ನಿವೇಶವನ್ನು ಅರಿತುಕೊಳ್ಳದೆಯೇ ನಿಮ್ಮ ವ್ಯಕ್ತಿತ್ವವನ್ನು ಆ ಒಂದು ಕಾಮೆಂಟ್‌ ಮೂಲಕ ಅಳೆದುಬಿಡಬಹುದು.  ಹೀಗಾಗಿ ಒಂದು ಕ್ಷಣ ಯೋಚಿಸಿ. ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಕಟ್ಟುಬೀಳಬೇಡಿ. ಚಿಂತನೆಗೆ ಸ್ವಾತಂತ್ರ್ಯ ನೀಡಿ.

ಧ್ವನಿ ಸರಿಪಡಿಸಿಕೊಳ್ಳಿ
ಸಾಮಾಜಿಕ ಮಾಧ್ಯಮದಲ್ಲಿ ಬರೆಯುತ್ತಿರುವ ಸಾಮಾನ್ಯ ವ್ಯಕ್ತಿ ಪಂಡಿತನಾಗಿರುವುದಿಲ್ಲ. ಭಾಷಾ ವಿಜ್ಞಾನಿಯೂ ಅಲ್ಲ. ಆದರೆ, ಭಾವಗಳನ್ನು ಶಬ್ದವಾಗಿ ಇಳಿಸುವಾಗ ಧ್ವನಿ ಕರ್ಕಶವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಯಾವ ಧ್ವನಿಯನ್ನು ಸೂಚಿಸಬೇಕು ಎಂದು ಮೊದಲೇ ನಿರ್ಧರಿಸುವುದು ಒಳಿತು. ಇದು ಪಾಸಿಟಿವ್‌ ಆಗಿರಬೇಕೆ? ನೆಗೆಟಿವ್‌ ಆಗಿರಬೇಕೆ? ಅಥವಾ ನಿರ್ಲಿಪ್ತವಾಗಿರಬೇಕೆ? ಒಂದೊಮ್ಮೆ ನೆಗೆಟಿವ್‌ ಆಗಿದ್ದರೆ ಸಾವಿರ ಬಾರಿ ಚೆಕ್‌ ಮಾಡಿಕೊಂಡರೆ ಉತ್ತಮ ಎಂಬುದು ಗಮನದಲ್ಲಿರಬೇಕು.

Advertisement

ಓದಿ ಹೇಳಿ…
ಕಮೆಂಟ್‌ ಪೋಸ್ಟ್ ಮಾಡುವವರು ಯಾರೂ ಶಬ್ದ ಪರಿಣತರಲ್ಲ. ಕಾಗುಣಿತ ತಪ್ಪುಗಳಾಗುವುದು ಸಹಜ. ಹೀಗಾಗಿ ಬರೆದ ಕಾಮೆಂಟ್‌ ಅಥವಾ ಪೋಸ್ಟ್‌ ಅನ್ನು ಬಾಯಿಬಿಟ್ಟು  ಓದಿಕೊಳ್ಳುವುದು. ಅದರಲ್ಲೂ ವಿಶೇಷವಾಗಿ ನೆಗೆಟಿವ್‌ ಟೋನ್‌ನ  ಪೋಸ್ಟ್‌ ಅನ್ನು ದೊಡ್ಡದಾಗಿ ಓದಿ ಕೊಂಡರೆ ನಿಮಗೆ ಬೇಡದ ಧ್ವನಿಯೂ ಕೇಳಬಹುದು. ಯಾರೋ ಅದನ್ನು ನಿಮಗೇ ಹೇಳಿದಂತೆ ಕೇಳಿಸಬಹುದು.

ಎಲ್ಲವೂ ವಿಪರೀತ…
ಕಳೆದ ಕೆಲವು ವರ್ಷಗಳಿಂದಂತೂ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲವೂ ವಿಪರೀತವೇ. ಯಾರನ್ನೋ ತೆಗಳಿ ಬರೆಯುವ, ಕುಟುಕುವ ಕಾಮೆಂಟ್‌ಗಳು ಅಥವಾ ಅವಕ್ಕೆ ನಿಮ್ಮ ಪ್ರತಿಕ್ರಿಯೆ ಹಲವು ದಿಕ್ಕಿನಲ್ಲಿ ಪಲ್ಲಟಗಳನ್ನು ಸೃಷ್ಟಿಸೀತು. ಹೀಗಾಗಿ, ಸನ್ನಿವೇಶಕ್ಕೆ ತಕ್ಕ ಶಬ್ದಗಳನ್ನು ಪೋಣಿಸುವುದು ಅಗತ್ಯ.

ದೃಷ್ಟಿ ವೈವಿಧ್ಯ
ಸಾಮಾಜಿಕ ಜಾಲತಾಣ ಎಂಬುದು ಒಂದು ಕೂಪ. ನಿಮಗೆ ತೀರಾ ಅಪರಿಚಿತರಾಗಿರುವವರು ನಿಮ್ಮ ಒಂದು ಕಾಮೆಂಟ್‌ ನೋಡಿ ನಿಮ್ಮ ವ್ಯಕ್ತಿತ್ವವನ್ನು ಅಳೆಯಬಹುದು. ಯಾಕೆಂದರೆ, ನಮ್ಮ ಪೋಸ್ಟ್‌ಗಳೇ ನಮ್ಮ ಜಾಹೀರಾತು. ಇವು ನಮ್ಮನ್ನು ಅತ್ಯಂತ ರಂಜಿತವಾಗಿ ವ್ಯಾಖ್ಯಾನಿಸುತ್ತವೆ.
 
ಬೇಸ್ತು ಬೀಳಬೇಡಿ
ಇತ್ತೀಚಿನ ದಿನಗಳಲ್ಲಿ  ನಮ್ಮ ಕಾಮನ್‌ ಸೆನ್ಸ್  ಟೆಸ್ಟ್ ಮಾಡುವ ಸುದ್ದಿಗಳು ಯಥೇತ್ಛವಾಗಿ ಓಡಾಡು ತ್ತವೆ. ನಿಜವೋ, ಸುಳ್ಳೋ ಎಂದು ನಮ್ಮ ಒಳಮನಸ್ಸಿಗೆ ಭಾಸವಾದರೂ ಅದನ್ನು ನಾವು ಮರೆತು ನಿಜ ವೆಂದು ನಂಬಿಬಿಡುತ್ತೇವೆ. ಒಂದು ಸುದ್ದಿ ಓದಿದರೆ, ಅದು ನಿಜವೇ ಎಂದು ಎರಡು ಬಾರಿ ಚೆಕ್‌ ಮಾಡಿಕೊಳ್ಳಬೇಕು. ಇಲ್ಲಿ ಯಾವು ದನ್ನೂ ನಂಬಬೇಡಿ, ಎಲ್ಲವನ್ನೂ ಪ್ರಶ್ನಿಸಿ.

ಏನಾದೀತು?
ನಾನು ಒಂದು ಕಾಮೆಂಟ್‌ ಅಥವಾ ಪೋಸ್ಟ್  ಹಾಕಿದರೆ ನನಗೆ ಖುಷಿ ಸಿಗುತ್ತದೆಯೇನೋ ಸರಿ. ಆದರೆ, ಅದು ಇತರರ ಅಂಗಳದಲ್ಲಿ ಎಸೆದ ಚೆಂಡಿನಂತಾದೀತೇ ಎಂದೂ ಯೋಚಿಸಬೇಕು. ನಾನು ಎಸೆದ ಚೆಂಡನ್ನು ಆತ ಅದೇ ವೇಗ ದಲ್ಲಿ, ಅಥವಾ ಅದಕ್ಕೂ ತೀವ್ರ ವೇಗದಲ್ಲಿ  ಎಸೆದು ಬಿಡಬಹುದು. ಸಾಮಾನ್ಯವಾಗಿ, ಸಾಮಾಜಿಕ ಮಾಧ್ಯಮದಲ್ಲಿ ಸಂಸ್ಥೆ ಅಥವಾ ವ್ಯಕ್ತಿಗೆ ನಮ್ಮ ಮಾತಿನಿಂದ ಪರಿಣಾಮ ಬೀರುತ್ತದೆ. ನಾವು ಕೆಲಸ ಮಾಡಿದ ಹಿಂದಿನ ಸಂಸ್ಥೆ, ನಮ್ಮ ಮಾಜಿ ಬಾಸ್‌, ಸದ್ಯದ ಬಾಸ್‌ಗೆ ಸೂಚಿಸಿ ಏನನ್ನೋ ಹೇಳುವುದು… ಇವೆಲ್ಲವೂ ನೇರ ಪರಿಣಾಮದ ಜತೆಗೆ ಹಲವು ಅಡ್ಡ ಪರಿಣಾಮಗಳನ್ನೂ ಒಳಗೊಂಡಿರುತ್ತವೆ. ಫೇಸ್‌ಬುಕ್‌ನಲ್ಲಿ ಹಾಕುವುದಕ್ಕೂ ಮುನ್ನ ನೇರವಾಗಿ ಹೇಳಿದರೆ ಅದರ ಪರಿಣಾಮ ಏನಿದ್ದೀತು, ನೇರವಾಗಿ ಹೇಳುವುದೇ ಸೂಕ್ತವೇ ಎಂದೂ ಯೋಚಿಸಿ.

– ಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next