Advertisement

ಸಂತೋಷವೆಂದರೇ, ಭಾವ ಶುದ್ಧಿಯ ಸಂಕಲ್ಪ..!

05:26 PM Apr 16, 2021 | ಶ್ರೀರಾಜ್ ವಕ್ವಾಡಿ |

ಸಂತೋಷವನ್ನು ಬಯಸದ ಮನುಷ್ಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂದು ಪರಿಗಣಿಸಬಹುದು. ಬದುಕಿನ ಇಂಚಿಂಚು ಕ್ಷಣಗಳನ್ನು ಸಂತೋಷದಿಂದ ಕಳೆಯುವವರು ಹಲವರಿದ್ದಾರೆ ಹಾಗೂ ದುಃಖವನ್ನು ಅದುಮಿಟ್ಟುಕೊಂಡು ಹೊರ ನೋಟಕ್ಕೆ ಸಂತೋಷದಿಂದಿದ್ದಾರೆ ಎಂಬುವುದನ್ನು ತೋರಿಸಿಕೊಳ್ಳುವ ವ್ಯಕ್ತಿತ್ವದವರು ಕೂಡ ಇದ್ದಾರೆ.

Advertisement

ದೇಹ ನಾವು ಮಾಡುವ ಕೆಲಸಗಳಿಗೆ ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ನಮ್ಮ ಸಂತೋಷದಿಂದ ನಿರ್ಧಾರವಾಗುತ್ತದೆ. ಹೌದು, ನಾವು ಸಂತೋಷದಿಂದ ಬದುಕನ್ನು ಕಳೆಯುವದಕ್ಕೆ ಪ್ರಾರಂಭಿಸಿದಾಗ ನಮ್ಮ ಭೌತಿಕ ಶರೀರವು ನಮಗೆ ನಮ್ಮ ಎಲ್ಲಾ ಕೆಲಸಗಳಿಗೂ ಸ್ಪಂದಿಸುವುದಕ್ಕೆ ಮುಂದಾಗುತ್ತದೆ. ಮತ್ತು ಅದು ನಾವು ಹಸನಾಗಿ, ಆರೋಗ್ಯದಿಂದ ಇದ್ದೇವೆ ಎನ್ನುವುದನ್ನು ಸೂಚಿಸುತ್ತದೆ.

ಸಂತೋಷವೆನ್ನುವುದು ಒಂದು ಮಧುರ ಅನುಭೂತಿ. ಅದೊಂದು ಲವಲವಿಕೆಯ ಭಾವನೆ. ಅದು ನಮ್ಮನ್ನು ಸದಾ ಚೈತನ್ಯದಿಂದಿರಲು ಸಹಾಯ ಮಾಡುತ್ತದೆ.

ಇಡೀ ಜಗತ್ತನ್ನೇ ನಗುವಿನ ಕಡಲಲ್ಲಿ ತೇಲಿಸಿದ ಚಾರ್ಲಿ ಚಾಪ್ಲಿನ್ ಒಂದು ಕಡೆ ಹೇಳುತ್ತಾನೆ…, ನಾನು ಸಂತೋಷದಿಂದ ನಿಮ್ಮನ್ನು ನಗಿಸುತ್ತಿದ್ದೇನೆ ಅಂತಂದರೇ, ನನಗೆ ದುಃಖವಿಲ್ಲ ಎಂದರ್ಥವಲ್ಲ. ನಾನದನ್ನು ತೋರಿಸಿಕೊಳ್ಳುವುದಿಲ್ಲ. ನನಗೆ ತುಂಬಾ ದುಃಖವಾದಾಗ ನಾನು ಮಳೆಯಲ್ಲಿ ನೆನೆಯುವುದಕ್ಕೆ ಇಷ್ಟ ಪಡುತ್ತೇನೆ, ಯಾಕೆಂದರೇ, ನಾನು ಅಳುವುದು ಯಾರಿಗೂ ಕಾಣಿಸುವುದಿಲ್ಲ. ನಾನು ಆಗ ಸಮಾಧಾನದಿಂದ ಇರಲು ಸಾಧ್ಯವಾಗುತ್ತದೆ ಎನ್ನುತ್ತಾನೆ.

ಇದರ ಅರ್ಥ, ನಮ್ಮಿಂದ ಇನ್ನೊಬ್ಬರಿಗೆ ಭಾರ ಎನ್ನಿಸಬಾರದು, ಎಲ್ಲಾ ಭಾವನೆಗಳನ್ನು ತೋರಿಸಿಕೊಳ್ಳಬೇಕೆಂದೇನಿಲ್ಲ. ಬದುಕನ್ನು ಬಂದ ಹಾಗೆ ಸ್ವೀಕರಿಸುವುದು ಕೂಡ ಸಂತೋಷದ ಮತ್ತೊಂದು ಮುಖ ಅದು. ನಗು ಸಂತೋಷದ ಒಂದು ಅಭಿವ್ಯಕ್ತಿ. ಮೌನ, ದುಃಖ, ಕೋಪ, ದುಮ್ಮಾನ ಎಲ್ಲವೂ ಕೂಡ ಸಂತೋಷದ ಒಂದೊಂದು ಹಂತ.

Advertisement

ಸಂತೋಷ ಅಂದರೇ, ಎಂಜಾಯ್ ಮೆಂಟ್ ಅಲ್ಲ. ಎಂಜಾಯ್ ಮೆಂಟ್ ನನ್ನು ತೀರಿಸಿಕೊಳ್ಳುವುದು ಅಥವಾ ತೃಷೆ ನೀಗಿಸಿಕೊಳ್ಳುವುದು ಅಂತ ಅರ್ಥೈಸಿಕೊಳ್ಳಬಹುದು. ಆದರೇ, ಸಂತೋಷ ಬಯಸದೇ ಆಗುವುದು. ಬಯಸಿ ಪಡೆಯುವುದು ಸಂತೋಷ ಕ್ಷಣಿಕ.

ಸಂತೋಷ ಮಾನವನ ಒಂದು ಸಹಜ ಗುಣಧರ್ಮ. ಅದು ಸ್ವಾಭಾವಿಕ. ಯಾವುದೇ ಅಡೆ ತಡೆಗಳಿಲ್ಲದೇ ನಮ್ಮನ್ನು ಒಪ್ಪುವ, ಅಪ್ಪುವ ಭಾವನೆ. ಬೇಕೆಂದರೇ, ಸಿಗದಿರುವ ಒಂದು ವಿಷಯ ಇಲ್ಲಿ ಇದೆ ಅಂತಾದರೇ, ಅದು ಈ ಸಂತೋಷ ಮಾತ್ರ.

ನಮ್ಮೊಳಗೆ ತುಡಿಯುವ ಜೀವ ಜಲ ಬಿಂದು ಸಂತೋಷ. ನಿಷ್ಕಲ್ಮಶ ಸ್ವಾಭಾವಿಕ ಫಲಿತಾಂಶಗಳ ಸಹಜ ಸ್ಥಿತಿ ಅಂದರೇ, ಸಂತೋಷ. ಸಂತೋಷವೆನ್ನುವುದು ಗಳಿಸುವ ಸಾಧನೆಯಲ್ಲ. ಸಂತೋಷವೆನ್ನುವುದು ಮೂಲ ಸ್ಥಿತಿ. ಅದು ನಮ್ಮ ಇರುವಿಕೆಯ ಮೇಲೆ ನಿರ್ಧಾರವಾಗುತ್ತದೆ.

ಅಂದೊಂದು ತೃಪ್ತ ಭಾವ ಅಷ್ಟೇ. ಸಂತೋಷವೆನ್ನುವುದು  ಎಲ್ಲರಿಗೂ ಬೇಕು. ಆದರೇ, ಸಂತೋಷದ ಅರ್ಥ ಎಲ್ಲರಿಗೂ ಗೊತ್ತಿಲ್ಲ. ಸಂತೋಷ ಇರುವುದು ನಾವು ನೋಡುವ ದೃಷ್ಟಿಯಲ್ಲಿ. ಸಂತೋಷನ್ನು ಸಾಧಿಸಿಕೊಳ್ಳುವುದು ನಮ್ಮ ಭಾವನೆಯಿಂದ. ಭಾವ ಶುದ್ಧಿ ಸಂತೋಷವನ್ನು ಪಡೆದುಕೊಳ್ಳುವ ಒಂದು ಅತ್ಯುತ್ತಮ ಮಾರ್ಗ ಎನ್ನುವುದನ್ನು ಸೈಕಾಲಜಿ ಅಥವಾ ಮನಶಾಸ್ತ್ರ ಕೂಡ ಹೇಳುತ್ತದೆ.

ಹಾಗಾದರೇ, ಭಾವ ಶುದ್ಧಿಯಾಗುವುದು ಹೇಗೆ..?

ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ನಾವು ನಮಗೆ ಎಲ್ಲವನ್ನು ಹೇಳಿಕೊಳ್ಳಬೇಕು. ಅಂದರೇ, ನಾವೇನು ಮಾಡಿದ್ದೇವೆ ಎನ್ನುವುದನ್ನು ನಾವು ಪರಿಶೀಲಿಸಿಕೊಳ್ಳಬೇಕು. ಅದು ನಮ್ಮಿಂದ ಮಾತ್ರ ಸಾಧ್ಯ. ನಮ್ಮನ್ನು ನಾವೇ ಕೌನ್ಸಿಲಿಂಗ್ ಮಾಡಿಕೊಳ್ಳುವುದರಿಂದ ಸಂತೋಷ ಪಡೆದುಕೊಳ್ಳಬಹುದು ಎನ್ನುವುದಕ್ಕೆ ಯಾವುದೇ ಅನುಮಾನ ಪಡಬೇಕಾಗಿಲ್ಲ.

ಇತ್ತೀಚೆಗಿನ ದಿನಗಳಲ್ಲಿ ಸಂತೋಷ ಪಡೆಯುವುದಕ್ಕೆ ‘ಯೋಗ’ ಮಾಡಿ ಎಂದು ಹೇಳುವ ಕಾಲ ಬಂದೊಂದಗಿದೆ. ಒತ್ತಡದ ಈ 4ಜಿ ಯುಗದಲ್ಲಿ ‘ಸಂತೋಷ’ ಈಗ ವ್ಯಾಪಾರ ಆಗಿದೆ ಎನ್ನುವುದು ದುರಂತ. ಸಂತೋಷ ಎನ್ನುವುದು ಅದೊಂದು ಭಾವ ಶುದ್ಧಿಯ ಸಂಕಲ್ಪ. ಅಷ್ಟರ ಹೊರತಾಗಿ ಮತ್ತೇನಲ್ಲ. ನಿಮ್ಮ ಸಂತೋಷ ನಿಮ್ಮ ನಾಳೆಗಳಿಗೆ ಬೆಳಕಾಗುವ ದಾರಿ ದೀಪ.

Advertisement

Udayavani is now on Telegram. Click here to join our channel and stay updated with the latest news.

Next