Advertisement

ಮಂಗನ ಕಾಯಿಲೆಗೆ ಶೀಘ್ರ ಹೊಸ ಮದ್ದು: ಐದು ಪ್ರಮುಖ ಲಸಿಕೆ ಉತ್ಪಾದನ ಕಂಪೆನಿ ಜತೆ ಸಭೆ

11:25 PM Jan 15, 2023 | Shreeram Nayak |

ಶಿವಮೊಗ್ಗ: ಮಂಗನ ಕಾಯಿಲೆ (ಕೆಎಫ್‌ಡಿ)ಗೆ ಲಸಿಕೆ ಉತ್ಪಾದನೆ ನಿಲ್ಲಿಸಿರುವ ಆತಂಕದ ಮಧ್ಯೆ ಆಶಾದಾಯಕ ಬೆಳವಣಿಗೆಯೊಂದು ನಡೆದಿದೆ. ಅಂದುಕೊಂಡಂತೆ ಆದರೆ ಶೀಘ್ರವೇ ಹೊಸ ಲಸಿಕೆ ದೊರೆಯಲಿದೆ.

Advertisement

ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ಗೆ ಈವರೆಗೆ ನೀಡಲಾಗುತ್ತಿದ್ದ ಲಸಿಕೆಯ ಸಾಮರ್ಥ್ಯ ಕುಸಿದಿದೆ ಎಂಬ ಆರೋಗ್ಯ ಇಲಾಖೆ ವರದಿಯಲ್ಲಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಲಸಿಕೆ ನೀಡುವುದನ್ನು ಈ ಅವಧಿಗೆ ನಿಲ್ಲಿಸಲಾಗಿತ್ತು ಹಾಗೂ ಲಸಿಕೆಯನ್ನು ಹಿಮಾಚಲ ಪ್ರದೇಶದ ಕಸೌಲಿಯಲ್ಲಿರುವ ಸಿಡಿಎಲ್‌ (ಸೆಂಟ್ರಲ್‌ ಡ್ರಗ್‌ ಲ್ಯಾಬೊರೇಟರಿ)ಗೆ ಕಳುಹಿಸಲಾಗಿದೆ. ಈ ವರದಿ ಬರುವುದಕ್ಕೆ ಮುನ್ನವೇ ಆರೋಗ್ಯ ಇಲಾಖೆ ಹೊಸ ಲಸಿಕೆ ಉತ್ಪಾದನೆಗೆ ಆಸಕ್ತಿ ತೋರಿದೆ. ಪರಿಣಾಮಕಾರಿ ಹಾಗೂ ಸುರಕ್ಷಿತ ಲಸಿಕೆ ದೊರೆತರೆ ರಾಜ್ಯದ 8 ಜಿಲ್ಲೆಗಳ ಹಾಗೂ ಐದು ರಾಜ್ಯಗಳ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.

ಈಚೆಗೆ ದಿಲ್ಲಿಯ ಎನ್‌ಸಿಡಿಸಿ (ನ್ಯಾಷನಲ್‌ ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌)ಯಲ್ಲಿ ವಿಡಿಎಲ್‌, ಆರೋಗ್ಯ ಇಲಾಖೆ ಇತರ ಅಧಿ ಕಾರಿಗಳ ಸಭೆ ನಡೆದಿದ್ದು, ಈ ಸಭೆಯಲ್ಲಿ ದೇಶದ 5 ಪ್ರಮುಖ ಲಸಿಕೆ ಉತ್ಪಾದನ ಕಂಪೆನಿಗಳ ಜತೆ ಸಭೆ ನಡೆಸಿ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗೆ ಲಸಿಕೆ ಉತ್ಪಾದಿಸುವಂತೆ ಕೋರಲಾಗಿದೆ. ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ, ಭಾರತ್‌ ಬಯೋಟೆಕ್‌, ಇಂಡಿಯನ್‌ ಇಮ್ಯೂನೋ
ಲಾಜಿಕಲ್ಸ್‌, ಹ್ಯೂಮನ್‌ ಬಯೋಲಾಜಿಕಲ್ಸ್‌ ಆ್ಯಂಡ್‌ ಕ್ಯಾಡಿಲಾ ಕಂಪೆನಿಗಳು ಸಭೆಯಲ್ಲಿ ಭಾಗವಹಿಸಿದ್ದು, ಇವುಗಳಿಗೆ ಹೊಸ ಲಸಿಕೆ ತಯಾರಿಸುವಂತೆ ಮನವಿ ಮಾಡಲಾಗಿದೆ.

ಲಸಿಕೆ ತಯಾರಿ ಸವಾಲು
1990ರಿಂದ ಕೆಎಫ್‌ಡಿಗೆ ಲಸಿಕೆ ಕೊಡುವ ಪ್ರಕ್ರಿಯೆ ಆರಂಭವಾಯಿತು. ಅನಂತರ ಲಸಿಕೆ ತಯಾರಿಕೆಯನ್ನು ಖಾಸಗಿ ಕಂಪೆನಿಗಳಿಗೆ ವಹಿಸುವ ನಿರ್ಧಾರಕ್ಕೆ ಬರಲಾಯಿತು. ಯಾವುದೇ ಕಂಪೆನಿಗಳು ಮುಂದೆ ಬಾರದ ಕಾರಣ ಕೊನೆಗೆ ಬೆಂಗಳೂರಿನ ಐಎಎಚ್‌ವಿಬಿ( ಇನ್‌ಸ್ಟಿಟ್ಯೂಟ್‌ ಆಫ್‌ ಆ್ಯನಿಮಲ್‌ ಹೆಲ್ತ್‌ ಆ್ಯಂಡ್‌ ವೆಟರ್ನರಿ ಬಯೋಲಾಜಿಕಲ್ಸ್‌)ಗೆ ವರ್ಗಾಯಿಸಲಾಯಿತು. ಈವರೆಗೆ ಅಲ್ಲಿಯೇ ಲಸಿಕೆ ತಯಾರಾಗುತ್ತಿತ್ತು. ಪ್ರತಿ ವರ್ಷ 2.5 ಲಕ್ಷ ಡೋಸ್‌ ಲಸಿಕೆ ರಾಜ್ಯದ 8 ಜಿಲ್ಲೆ ಸಹಿತ ಐದು ರಾಜ್ಯಗಳ ಜನರಿಗೆ ಅಗತ್ಯವಿದೆ. ಇಷ್ಟೊಂದು ಕಡಿಮೆ ಪ್ರಮಾಣದ ಲಸಿಕೆ ಉತ್ಪಾದನೆ ಖಾಸಗಿ ಕಂಪೆನಿಗಳಿಗೆ ಲಾಭದಾಯಕವಲ್ಲ. ಈಗ ಖಾಸಗಿ ಕಂಪೆನಿಗಳು ಹೊಸ ಲಸಿಕೆ ತಯಾರಿಕೆಗೆ ಮನಸ್ಸು ಮಾಡುವ ಸಾಧ್ಯತೆ ತೀರಾ ಕಡಿಮೆ. ಸರಕಾರವೇ ಹೊಸ ಲಸಿಕೆ ಉತ್ಪಾದನೆಗೆ ಕಾಳಜಿ ವಹಿಸಬೇಕಿದೆ.

ಇದುವರೆಗೆ 437 ಜನ ಬಲಿ
60ರ ದಶಕದಲ್ಲಿ ಕಾಣಿಸಿಕೊಂಡ ಕಾಯಿಲೆಯಿಂದ ಈವರೆಗೆ 437 ಮಂದಿ ಬಲಿಯಾಗಿದ್ದಾರೆ. ಆರಂಭದಲ್ಲಿ ಮರಣ ಪ್ರಮಾಣ ಕಡಿಮೆಯಿದ್ದರೂ ಬಳಿಕ ಹೆಚ್ಚಿದೆ. ಪ್ರತಿ ವರ್ಷ ವೈರಸ್‌ ಪ್ರಭಾವ ಒಂದೇ ರೀತಿ ಇರದ ಕಾರಣ ಸರಕಾರ ನಿರ್ಲಕ್ಷಿಸುತ್ತಲೇ ಬಂದಿದೆ. ಕೇಂದ್ರ ಸರಕಾರದ ಒನ್‌ಹೆಲ್ತ್‌ ಯೋಜನೆ ಕೆಎಫ್‌ಡಿ ಸಂಶೋಧನೆಗೆ ಹೇಳಿ ಮಾಡಿಸಿದಂತಿತ್ತು. ಆದರೆ ಈವರೆಗೆ ಅ ಧಿಕೃತ ಆದೇಶ ಹೊರಬಿದ್ದಿಲ್ಲ. ಆರೋಗ್ಯ, ಪಶು ವೈದ್ಯಕೀಯ, ಅರಣ್ಯ ಇಲಾಖೆ ಸಹಯೋಗದಲ್ಲಿ ಸಂಶೋಧನೆಗೆ ಅವಕಾಶವಿದೆ. ಈ ಯೋಜನೆ ಜಾರಿಯಾದರೆ ಕೆಎಫ್‌ಡಿ ವಿಚಾರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದಂತಾಗುತ್ತದೆ. ಸರಕಾರ ನಿರ್ಲಕ್ಷಿಸದೆ ಒನ್‌ ಹೆಲ್ತ್‌ ವ್ಯಾಪ್ತಿಗೆ ಕೆಎಫ್‌ಡಿ ಸೇರಿಸಲು ಆಸಕ್ತಿ ತೋರಿದರೆ ಲಕ್ಷಾಂತರ ಜನ ನಿಟ್ಟುಸಿರು ಬಿಡಲಿದ್ದಾರೆ.

Advertisement

ಹೊಸ ಲಸಿಕೆ ತಯಾರಿಕೆ ಸಂಬಂ ಧಿಸಿ ಎನ್‌ಸಿಡಿಸಿ ಸಭೆ ನಡೆಸಿದೆ. ಐದು ಲಸಿಕೆ ಉತ್ಪಾದನ ಕಂಪೆನಿಗಳು ಸಭೆಯಲ್ಲಿ ಪಾಲ್ಗೊಂಡಿದ್ದವು. ಯಾವ ಕಂಪೆನಿ ಮುಂದೆ ಬರಲಿದೆ ಇನ್ನಷ್ಟೇ ತಿಳಿಯಬೇಕಿದೆ.
– ಹೆಸರು ಹೇಳಲಿಚ್ಛಿಸದ ಆರೋಗ್ಯ ಇಲಾಖೆ ಅಧಿಕಾರಿ

– ಶರತ್‌ ಭದ್ರಾವತಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next