ಬೆಲೆ ಕಳೆದುಕೊಂಡು ಬದುಕಲು ಯಾರು ಬಯಸುತ್ತಾರೆ ಹೇಳಿ..? ಅವರವರ ವ್ಯಕ್ತಿತ್ವಕ್ಕೊಂದೊಂದು ರೀತಿ ನೀತಿ ಇರುತ್ತದೆ ಮತ್ತು ಅದೊಂದು ಬೆಲೆಯನ್ನು ಸೃಷ್ಟಿ ಮಾಡಿರುತ್ತದೆ. ಅದಕ್ಕೆ ನಾವು ವ್ಯಕ್ತಿತ್ವವೆಂದು ಗುರುತಿಸಬಹುದು. ವ್ಯಕ್ತಿತ್ವ ಒಬ್ಬ ವ್ಯಕ್ತಿಯನ್ನು ನಿರ್ಧರಿಸುವುದರೊಂದಿಗೆ ಅವನ ವಿಕಾಸಕ್ಕೂ ಕೂಡ ಕಾರಣವಾಗುತ್ತದೆ.
ಈ ‘ವ್ಯಕ್ತಿತ್ವ’ ಬೆಲೆ ತಂದುಕೊಡುವುದು ನಮ್ಮ ಇರುವಿಕೆಯ ಆಧಾರದ ಮೇಲೆ ಎನ್ನುವುದು ಅಪ್ಪಟ ಸತ್ಯ. ನಂತರದ ಬೆಳವಣಿಗೆಯಲ್ಲಿ ಈ ಬೆಲೆ ವ್ಯಕ್ತಿತ್ವಕ್ಕೆ ಗೌರವವನ್ನೂ ಕೂಡ ಒದಗಿಸಿಕೊಡುತ್ತದೆ.
ಒಬ್ಬ ವ್ಯಕ್ತಿಯ ವ್ಯಕ್ತಿತ್ವ, ಆತನ ಭೌತಿಕ, ನೈತಿಕ, ಆಧ್ಯಾತ್ಮಿಕ ಸಂಪತ್ತು ಎಂದರೆ ತಪ್ಪಿಲ್ಲ. ಅದು ಎಲ್ಲವನ್ನೂ ಸಂಕಲಿಸಿ ಕೊಡುತ್ತದೆ. ಒಬ್ಬ ವ್ಯಕ್ತಿಯ ಪ್ರತಿಷ್ಠೆಯನ್ನು ಸೂಚಿಸುವುದು ಆತನ ವ್ಯಕ್ತಿತ್ವ ಮತ್ತು ಆತನಿಗಿರುವ ಬೆಲೆ.
ಓದಿ : ಕಚೇರಿಯಿಂದ ಕೇವಲ 2ನಿಮಿಷ ಬೇಗ ಮನೆಗೆ ತೆರಳುತ್ತಿದ್ದ ನೌಕರರಿಗೆ ಬಿಸಿ ಮುಟ್ಟಿಸಿದ ಜಪಾನ್!
ಒಬ್ಬ ಮನುಷ್ಯ ತನ್ನ ಬದುಕಿನಲ್ಲಿ ವ್ಯಕ್ತಿತ್ವದ ವಿಕಸನದೊಂದಿಗೆ ಬೆಳೆಯುತ್ತಾನೆ ಅಂತಂದರೆ, ಅಲ್ಲಿ ಆತನ ನೈತಿಕ ಮೌಲ್ಯ ಮುಖ್ಯವಾಗುತ್ತದೆ. ಈ ‘ಮೌಲ್ಯ’ ವ್ಯಕ್ತಿಯೋರ್ವನ ಆಂತರಿಕ ಪ್ರಮಾಣಗಳನ್ನು ನಿಗದಿಗೊಳಿಸುತ್ತದೆ. ನಮ್ಮ ಜೀವನ ವಿಧಾನ ನಮ್ಮ ವ್ಯಕ್ತಿತ್ವದ ಕೈದೀವಿಗೆ, ಮಾತ್ರವಲ್ಲದೇ ಅದು ನಮ್ಮ ಬದುಕನ್ನು ದರ್ಶಿಸುವ ಮಸುಕಿಲ್ಲದ ಕನ್ನಡಿ.
ಬೆಲೆ ಅಂದರೆ ಬೇರೆ ಏನಲ್ಲ. ಇನ್ನೊಬ್ಬರು ನಮ್ಮ ಮೇಲೆ ಇರಿಸಿಕೊಳ್ಳುವ ವಿಶ್ವಾಸ, ನಂಬಿಕೆ, ಪ್ರೀತಿ, ಆಪ್ತತೆ, ಗೌರವ. ಇವನ್ನೆಲ್ಲಾ ನಾವು ಬೆಳೆಸಿಕೊಳ್ಳಲು ಹಾಗೂ ಉಳಿಸಿಕೊಳ್ಳಲು ನಮ್ಮಲ್ಲೇ ಒಂದು ಮಾರ್ಗ ಇದೆ. ಬೇರೆಯವರನ್ನು ಪ್ರಶ್ನಿಸುವ ಮೊದಲು ನಾವು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ಹೇಗೆ..? ನಮ್ಮ ವ್ಯಕ್ತಿತ್ವದ ದರ್ಶನ ನಮಗೇ ಆಗಬೇಕೆಂದರೆ ನಾವು ಅಗತ್ಯವಾಗಿ ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಈ ಕೆಳಗಿವೆ..
- ನಾನು ನನ್ನ ಜೀವನದಲ್ಲಿ ಹೇಗಿರಬೇಕು..?
- ನನ್ನ ಇರುವಿಕೆ ಇನ್ನೊಬ್ಬರೊಂದಿಗೆ ಹೇಗಿರಿಬೇಕು..?
- ನಾನು ಯಾವುದಕ್ಕೆ ಹೆಚ್ಚು ಮೌಲ್ಯವನ್ನು ನೀಡಬೇಕು..?
- ನನಗೆ ಯಾವುದು ಮುಖ್ಯ..?
- ನನ್ನ ಗುರಿ ಏನು..? ನಾನು ಯಾವುದಕ್ಕೆ ಲಕ್ಷ್ಯ ನೀಡಬೇಕು..?
- ನನ್ನ ಆತ್ಮ ವಿಶ್ವಾಸದ ಮೇಲೆ ನನಗೆಷ್ಟು ನಂಬಿಕೆ ಇದೆ..?
- ನಾನು ನನ್ನನ್ನೆಷ್ಟು ನಂಬುತ್ತೇನೆ..? ನಾನೆಷ್ಟು ಧೈರ್ಯವಂತನಾಗಿದ್ದೇನೆ..?
- ನಾನು ಕೇಳಿಕೊಳ್ಳುವ ಪ್ರಶ್ನೆಗಳಿಗೆ ನಾನು ಕಂಡುಕೊಳ್ಳುವ ಉತ್ತರ ಎಂಥದ್ದು..?
- ನಾನು ಮಾಡುತ್ತಿರುವ ಕೆಲಸ ನನಗೆ ಹಿತವೆನ್ನಿಸುತ್ತಿದೆಯೇ..?
- ಬದುಕಿನ ಬಗ್ಗೆ ನಾನೆಷ್ಟು ಭರವಸೆ ಹೊಂದಿದ್ದೇನೆ..?
ಈ ಮೇಲಿನ ಪ್ರಶ್ನೆಗಳಿಗೆ ನಾವು ಕಂಡುಕೊಳ್ಳುವ ಉತ್ತರಗಳು ನಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಹಸನಾಗಿಸಲು ಸಹಾಯ ಮಾಡುತ್ತದೆ ಎನ್ನುವುದರಲ್ಲಿ ಅನುಮಾನ ಪಡಬೇಕಾಗಿಲ್ಲ.
ಇನ್ನು, ನಮ್ಮ ವ್ಯಕ್ತಿತ್ವಗಳು ಇನ್ನೊಬ್ಬರ ಅನಿಸಿಕೆ ಅಥವಾ ಅಭಿಪ್ರಾಯವಲ್ಲ ಅಂತಂದುಕೊಂಡಾಗಲೇ ನಮ್ಮ ವ್ಯಕ್ತಿತ್ವಕಕ್ಕೆ ಬೆಲೆ ಬರುವುದು. ನೆನಪಿರಲಿ, ನಮ್ಮ ವ್ಯಕ್ತಿತ್ವಕ್ಕೆ ಬೆಲೆ ನಿರ್ಧರಿಸುವುದು ನಾವು ಮಾಡುವ ಕೃತಿ.
ಓದಿ : ಮಕ್ಕಳಲ್ಲಿ ದೈವ-ದೇವರ ಅರಿವು ಮೂಡಿಸಿ: ನಿತ್ಯಾನಂದ ಡಿ. ಕೋಟ್ಯಾನ್
ನಮ್ಮ ಬದುಕಿಗೆ, ನಮ್ಮ ವ್ಯಕ್ತಿತ್ವಕ್ಕೆ ನಮ್ಮ ಸುತ್ತಲಿನ ವಾತಾವರಣ ತುಂಬಾ ಪ್ರಭಾವ ಬೀರುತ್ತದೆ. ಅದು ಕೂಡ ನಮ್ಮ ವ್ಯಕ್ತಿತ್ವದ ಬೆಲೆಯನ್ನು ನಿಗದಿಗೊಳಿಸುತ್ತದೆ ಎನ್ನುವುದು ಸುಳ್ಳಲ್ಲ. ನಮ್ಮ ಮೇಲೆ ಬೀರುವ ಸಕಾರಾತ್ಮಕ ಅಥವಾ ನಕಾರಾತ್ಮಕ ಪ್ರಭಾವಗಳೆಲ್ಲದಕ್ಕೂ ನಮ್ಮ ಇರುವಿಕೆಯೇ ಕಾರಣ ಎನ್ನುವುದು ಪದಶಃ ಸತ್ಯ.
ನಮ್ಮ ಮೇಲೆ ಅಥವಾ ನಮ್ಮ ವ್ಯಕ್ತಿತ್ವದ ಮೇಲೆ ಒಬ್ಬೊಬ್ಬರ ವಿಶ್ಲೇಷಣೆ, ವಿಮರ್ಶೆ, ಅನುಭೂತಿ ಬೆರೆ ಬೇರೆಯಾಗಿರುತ್ತದೆ. ಅದು ಅವರವರ ಭಾವಕ್ಕೆ. ನಮ್ಮ ಇರುವಿಕೆಯನ್ನು ಪರಿಶೀಲಿಸುವುದನ್ನು ಬೇರೆಯವರಿಗೆ ಮಾಡುವುದಕ್ಕಿಂತ ಹೆಚ್ಚಾಗಿ ನಾವೇ ಮಾಡಿಕೊಳ್ಳುವುದು ಲೇಸು. ಯಾಕೆಂದರೇ, ನಮ್ಮ ವ್ಯಕ್ತಿತ್ವ ಬೆಲೆ ತಂದುಕೊಡುವುದು ನಮಗೆ ಹೊರತು ಇನ್ನೊಬ್ಬರಿಗಲ್ಲ.
–ಶ್ರೀರಾಜ್ ವಕ್ವಾಡಿ
ಓದಿ : ‘ಹರಿದ ಜೀನ್ಸ್’ ಸಿಎಂ ತಿರತ್ ಹೇಳಿಕೆಗೆ ಬಿಗ್‍ಬಿ ಮೊಮ್ಮಗಳ ಖಡಕ್ ತಿರುಗೇಟು