Advertisement

ಮದುವೆಯ ಈ ಬಂಧ… ಅನುರಾಗದ ಅನುಬಂಧ…!

06:47 PM Feb 21, 2021 | Team Udayavani |

ಮದುವೆ ಎಂಬ ಮೂರಕ್ಷರದ ಸಂಸ್ಕಾರ ಎನ್ನುವುದು ಒಂದು ರೀತಿಯಲ್ಲಿ ಅದು ಕಾನೂನಾತ್ಮಕ ಒಪ್ಪಂದವೂ ಹೌದು. ಮದುವೆ ಎನ್ನುವುದು ಗಂಡ ಹೆಂಡತಿ ನಡುವಿನ ಎಲ್ಲಾ ಭಾವನೆಗಳಿಗೂ ಶಿಫಾರಸ್ಸು ಇದ್ಹಂಗೆ. ಇದೆಲ್ಲದರ ಆಚೆಗೆ ಒಂದು ಅವಿನಾಭಾವ ಸಂಬಂಧದ ಸೃಷ್ಟಿಗಿದು ಆನಂಧಾನುಭೂತಿಯ ನಾಂದಿಯೂ ಹೌದು.  ಪ್ರೀತಿ, ಒಪ್ಪಿಗೆ, ಅನು ಸಂಧಾನ, ವಾತ್ಸಲ್ಯ ಹೀಗೆ ಎರಡು ಜೀವಗಳ ನಡುವಿನ ಎಲ್ಲಾ ಭಾವಗಳ ಸೇರುವ ತಾಣ. ನಾ ನಿನಗೆ, ನೀ ನನಗೆ ಎಂಬ ಒಡಂಬಡಿಕೆ. ಇಷ್ಟೆಲ್ಲಾ ಮದುವೆಯೊಂದಿಗೆ ಆರಂಭವಾಗುವ ಹೊಸ ಅನುರಾಗ.

Advertisement

ಹೇಗಿರಬೇಕು ಗಂಡ ಹೆಂಡತಿಯರ ಬಾಂಧವ್ಯ..!?

ಎಲ್ಲೋ ಹುಟ್ಟಿ ಬೆಳೆವ ಅವನು, ಇನ್ನೆಲ್ಲೋ ಜನಿಸಿದ ಅವಳು. ಇಬ್ಬರನ್ನು ಶಾಸ್ತ್ರೋಕ್ತವಾಗಿ ಒಂದುಗೂಡಿಸುವ ಬಂಧವೇ ಈ ವಿವಾಹವಾಗಿದೆ. ಹಿರಿಯರು ಕಂಡು ಒಪ್ಪಿ , ಮನೆ ತುಂಬ ಸಂಬಂಧಿಕರು ಓಡಾಡಿ ಎಲ್ಲರೆದುರು ನಡೆವ ಮದುವೆಯು ಒಂದು ನಿಜ  ಅರ್ಥ ಪಡೆದುಕೊಳ್ಳುತ್ತದೆ. ಅಥವಾ ತಾವೇ    ಕಂಡುಕೊಂಡು ಮೆಚ್ಚಿ ಮದುವೆಯಾಗುವುದು ತಪ್ಪೇನಲ್ಲ. ಮದುವೆಯ ನಂತರವೇ ಅವಳು ಅವನ ಹೆಂಡತಿಯಾಗುತ್ತಾಳೆ. ಮತ್ತವ ಅವಳ ಗಂಡನಾಗುತ್ತಾನೆ.ಇಲ್ಲಿಂದ ಶುರುವಾಯಿತು ನೋಡಿ, ಗಂಡ- ಹೆಂಡತಿ ಎನ್ನುವ ಬಾಂಧವ್ಯ!

ಅಲ್ಲಿಂದಲೇ ಅವನ ಜವಾಬ್ದಾರಿ ಆರಂಭ. ಹೆಂಡತಿಯಾದವಳ ಬೇಕು- ಬೇಡಗಳನ್ನು ನೋಡಿಕೊಳ್ಳಬೇಕು. ನಂತರ ಜನಿಸುವ ಮಕ್ಕಳ ಪೊರೆಯುವಿಕೆ. ಇದರಲ್ಲಿ ಹೆಂಡತಿಯ ಪಾತ್ರವಿಲ್ಲವೇ? ಖಂಡಿತಾ ಇದೆ. ಒಂದು ಗಂಡ- ಹೆಂಡತಿಯ ಸಂಬಂಧ ಉತ್ತಮವಾಗಿರಬೇಕೆಂದರೆ ಗಂಡನಾದವನು ಎಷ್ಟು ಜವಾಬ್ದಾರಿಯಿಂದ, ಪ್ರೀತಿಯಿಂದ ಅವಳನ್ನು ನೋಡಿಕೊಳ್ಳುತ್ತಾನೋ ಹೆಂಡತಿಯಾದವಳು ಕೂಡಾ ಅಷ್ಟೇ ಪ್ರೀತಿಯಿಂದ, ವಾತ್ಸಲ್ಯದಿಂದ ಪತಿಯನ್ನು ಪೊರೆಯಬೇಕು. ಇಲ್ಲಿ ಕೊಡು-ಕೊಳ್ಳುವಿಕೆ ಸಮನಾಗಿರಬೇಕು. ಸದಾ ಗಂಡನೇ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದು ಹೆಂಡತಿ ಆಶಿಸಬಾರದು. ಪತಿಯಾದವನಿಗೆ ಕೆಲಸದ ಒತ್ತಡವಿರತ್ತದೆ. ಸಂಸಾರವನ್ನು ಸುಭದ್ರವಾಗಿಡುವ ಆಶಯವಿರುತ್ತದೆ. ಇದಕ್ಕೆಲ್ಲ ಪತ್ನಿಯೂ ಕೈಜೋಡಿಸಬೇಕು.‌

ಓದಿ : ಪ್ರಿಯಾಂಕ ಗಾಂಧಿ ವಾದ್ರಾ ಇಂದು ಪ್ರಯಾಗ್ ರಾಜ್ ಗೆ ಭೇಟಿ..!

Advertisement

ಒಂದು ಸಂಸಾರ ಸುಸೂತ್ರವಾಗಿ ನಡೆಯಬೇಕೆಂದರೆ ಅಲ್ಲಿ ಪತಿ-ಪತ್ನಿಯರಿಬ್ಬರ ಏಕ ಭಾವವೂ ಅಗತ್ಯ. ಮೊದಲು ಇಬ್ಬರೂ ನಾನು- ನಾನೆಂಬ ಅಹಂಕಾರವನ್ನು ತೊರೆದಿರಬೇಕು. ಗಂಡ-ಹೆಂಡತಿಯ ಮಧ್ಯೆ ಒಂದೂ ರಹಸ್ಯ ವಿಚಾರವುಳಿದಿಲ್ಲದಿದ್ದರೆ ಮಾತ್ರ ಅದು ಸುಖೀ ಸಂಸಾರವಾಗಿರಲು ಸಾಧ್ಯ.

ಈಗಿನ ಕಾಲದಲ್ಲಿ ಹೆಚ್ಚಾಗಿ ಕಂಡುಬರುವ ವಿವಾಹ ವಿಚ್ಛೇದನ ಪ್ರಕ್ರೀಯೆ  ನಡೆಯುವುದೇ ಈ ಹೊಂದಾಣಿಕೆಯ ಕೊರತೆಯಿಂದ. ಎಲ್ಲಿ ಸಹಧರ್ಮಿಯರಲ್ಲಿ ಹೊಂದಾಣಿಕೆ ಇರುತ್ತದೆಯೋ ಅಲ್ಲಿ ಸಂಸಾರ ಸುಸೂತ್ರವಾಗಿ ಸಾಗುತ್ತದೆ. ನಾನೇ ಮೇಲು ನೀನು ಕೀಳು ಎಂಬ ಒಂದು ಅಹಂಕಾರದ ಕಿಡಿ ಹೊತ್ತಿತೋ ಆಗ ಮಾತ್ರ ಆ ಸಂಸಾರದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ.

ಎಷ್ಟೋ ಸಮಯದಲ್ಲಿ ಹೀಗೆಯೇ ಆಗುತ್ತದೆ. ಮದುವೆಯ ಮುಂಚೆ ವರ್ಷಗಳ ಕಾಲ ಪ್ರೀತಿಸುವ ಜೋಡಿ ಮದುವೆಯಾಗಿ ವರ್ಷ ತುಂಬುವ ಮೊದಲೇ ಅವನು/ಅವಳೆಂದರೆ ಆಗದು ಎಂದು ಮುಖ ತಿರುಗಿಸಿಕೊಂಡು ವಿಷಕಾರುತ್ತಾ ಅಪರಿಚಿತರಂತೆ ದೂರ ಸಾಗುತ್ತಾರೆ. ಇದಕ್ಕೆ ಕಾರಣರಾರು? ಪತಿಯೇ ಅಥವಾ ಪತ್ನಿಯೇ ? ಅಥವಾ ಸುತ್ತಲಿರುವ ಜನರೇ ?,  ತುಂಬಾ ಸಮಯದಲ್ಲಿ ಈ ಮೂರೂ ವಿಷಯಗಳು ಬಹಳವೇ ಪರಿಣಾಮ ಬೀರುತ್ತವೆ. ಇದೆಲ್ಲ ಕೇವಲ ಹೊಂದಾಣಿಕೆಯ ಕೊರತೆಯಷ್ಟೇ. ಇಬ್ಬರೂ ಸಮಾನ ಬುದ್ಧಿವಂತಿಕೆ ಹೊಂದಿ ಸಮಾನ ಸಂಪಾದನೆಗಳಿಸಿ ತರುವಾಗ ನನಗೆ ಅವಳ/ಅವನ ಹಂಗೇಕೆ?, ನಾನ್ಯಾಕೆ ಅವನು/ ಅವಳು ಹೇಳಿದುದೆಲ್ಲ ಪಾಲಿಸಬೇಕು? ನಾನೇನು ಕಡಿಮೆ ಎನ್ನುವ ಒಂದು ಭಾವವಿದೆಯಲ್ಲಾ, ಇದು ಸಾಕು ಒಂದು ಸಂಸಾರವನ್ನು ಪೂರ್ತಿ ಹಾಳುಗೆಡವಲು! ಹೀಗಾಗಬಾರದೆಂದರೆ ಈ ಸಣ್ಣಪುಟ್ಟ ವಿಷಯದ ಕುರಿತು ಹುಟ್ಟುವ ಅಹಂಕಾರವನ್ನೆಲ್ಲ ಆದಷ್ಟು ತೊರೆಯಬೇಕು.

ಪತಿ- ಪತ್ನಿಯರ ಮಧ್ಯೆ ಜಗಳವೆಲ್ಲ ಮಾಮೂಲು. ಅದು ಗಂಡ ಹೆಂಡತಿಯರ ಅಪೂರ್ವ ಮಿಲನಕ್ಕೆ ಹಿತವದು.  ಆದರೆ ಅದು ಬೆಳೆಯುತ್ತಾ ಹೋಗುವಂತಿರಬಾರದು,  ಅಥವಾ ಅದರಲ್ಲಿ ಮೂರನೆಯವರ ಪ್ರವೇಶವೂ ಇರುವಂತಿರಬಾರದು. ಎಲ್ಲಿ ಇವರಿಬ್ಬರ ಮಧ್ಯೆ  ಮೂರನೆಯವರು ಪ್ರವೇಶವಾಗುತ್ತದೋ ಆಗ ಇಡೀ ಬಾಂಧವ್ಯವೇ ಮುರಿದುಬೀಳುವ ಸಾಧ್ಯತೆಯಿದೆ. ಇನ್ನು ಹೊಸತಾಗಿ ಮದುವೆಯಾದಾಗ ಪತಿಯಾದವನು ಪತ್ನಿಯ ಎಲ್ಲಾ ಕಾರ್ಯಕ್ಕೂ ಕೈ ಜೋಡಿಸುತ್ತಾ, ಎಲ್ಲದಕ್ಕೂ ಹುರಿದುಂಬಿಸುತ್ತಾ, ಮೆಚ್ಚುಗೆ ವ್ಯಕ್ತಪಡಿಸುತ್ತಾ ನಂತರದ ದಿನಗಳಲ್ಲಿ ಅವಳನ್ನು ಸಂಪೂರ್ಣವಾಗಿ ಕಡೆಗಣಿಸುವುದನೆಲ್ಲ ಮಾಡಬಾರದು. ಆರಂಭದ ದಿನಗಳಲ್ಲಿ ಅವಳನ್ನು ಹೇಗೆ ಪ್ರೀತಿಯಿಂದ ಕಾಣುತ್ತಿದ್ದನೋ ಹೇಗೆ ಒಲವನ್ನೂ- ಬಲವನ್ನೂ ನೀಡುತ್ತಿದ್ದನೋ ಹಾಗೆಯೇ ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಆರಂಭದ ದಿನಗಳಲ್ಲಿ ಮಾತ್ರ ಪ್ರೀತಿಯಿಂದ ಕಂಡು ನಂತರವೆಲ್ಲ ಕಾಲಿನ ಕಸ ಮಾಡುವ ಪತಿಯಂದಿರೂ ಇದ್ದಾರೆ‌. ಇದರಿಂದ ಆ ಪತ್ನಿಯಾದವಳ ಮನಸ್ಥಿತಿ ಹದಗೆಟ್ಟು ಸಂಸಾರ ಸೂತ್ರ ಕಡಿದ ಗಾಳಿಪಟದಂತಾಗಬಹುದು. ಒಂದು ಹೆಣ್ಣು ತನಗೆ ಸಾಕಷ್ಟು ಪ್ರೀತಿ, ಕಾಳಜಿ ಸಿಗುತ್ತಿದೆ ಎಂದು ಗೊತ್ತಾಗುತ್ತಿದಂತೆ ಸಂತ್ರಪ್ತಿಯಾಗುತ್ತಾಳೆ. ಅವಳು ಬಯಸುವ ಆ ಪ್ರೀತಿ- ಕಾಳಜಿಯೆನ್ನುವುದೇ ಮರೀಚಿಕೆಯಾದಾಗ ಅವಳು ತಾನೇ ಹೇಗೆ ಸಹಿಸಿಯಾಳು. ಹಾಗಾಗಿ ಗಂಡನಾದವನು ಹಣ- ಒಡವೆಯನ್ನು ಅವಳಿಗೆಂದು ತಂದು ಸುರಿಯುವ ಮುನ್ನ ಅವಳ ಅಂತರಂಗವ ಅರಿಯುವ ಪ್ರಯತ್ನ ಮಾಡಬೇಕು. ಆಗ ಮಾತ್ರ ಅದು ಸುಖ ಸಂಸಾರವಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

ಇನ್ನು ವಿನಾಕಾರಣ ದೂಷಿಸುವುದು, ಆರೋಪ ಹೊರಿಸುವುದನ್ನು ಯಾರೂ ಸಹಿಸುವುದಿಲ್ಲ. ಸಹಿಸಿಕೊಳ್ಳುವುದಕ್ಕೂ ಮಿತಿಯಿದೆ. ಪತಿಯಾಗಲೀ, ಪತ್ನಿಯಾಗಿರಲೀ ಇದನ್ನು ಗಮನದಲ್ಲಿಟ್ಟುಕೊಂಡಿರಬೇಕು. ಇಲ್ಲಸಲ್ಲದ್ದನ್ನು ಆರೋಪಿಸುವ, ಹಿಂಸಿಸುವ ಗುಣವನ್ನೆಲ್ಲ ಕಲಿಯಬಾರದು‌. ಎಲ್ಲಿ ನಂಬಿಕೆಯ ಹಾಯಿದೋಣಿಯ ಹುಟ್ಟು ಕೈ ಜಾರುತ್ತದೋ ಆಗ ತೀರ ಸೇರಲು ಸಾಧ್ಯವೇ ಇಲ್ಲ. ಹೀಗಾಗಿ ನಂಬಿಕೆಯೆನ್ನುವ  ಕೊಂಡಿ ಇಬ್ಬರ ಮಧ್ಯವೂ ಇರಲೇಬೇಕು.

ಒಟ್ಟಿನಲ್ಲಿ, ಪರಸ್ಪರ ಒಬ್ಬರನ್ನೊಬ್ಬರು ಒಪ್ಪಿಕೊಳ್ಳುವ ತೆರೆದ ಮನಸ್ಸು ಸಂಸಾರದಲ್ಲಿ ಮುಖ್ಯ. “ಮದುವೆ” ಗಂಡನಿಗಾಗಲಿ, ಹೆಂಡತಿಗಾಗಲಿ ಅದು ಅಧಿಕಾರ ನೀಡುವುದಿಲ್ಲ. ಅದು ಪ್ರೀತಿಯನ್ನಷ್ಟೇ ನೀಡಬೇಕು. ಈ ಮಧುರ ಸಂಬಂಧದ ನಡುವೆ ಸಣ್ಣ ಪೊಸೆಸಿವ್ ನೆಸ್ ಕೂಡ ಉತ್ತಮ ಆದರೇ, ಅದು ಸಂಶಯ ಹುಟ್ಟುವಷ್ಟಿರಬಾರದು. ‘ಮದುವೆ’ ಸಂಸಾರ ನೌಕೆಯ ಹಿತವಾದ ವಿಹಾರವಾಗಬೇಕು. ಶುಷ್ಕ ವಿಹಾರವಲ್ಲ. ಹಾಗಾಗಿಯೇ ಹೇಳುವುದು ಮದುವೆಯ ಈ ಬಂಧ, ಅನುರಾಗದ ಅನುಬಂಧ.

–ವಿನಯಾ ಶೆಟ್ಟಿ, ಕೌಂಜೂರು

ಓದಿ : ಡ್ರಗ್ಸ್ ದಂಧೆಯಲ್ಲಿ ಕೈಲಾಶ್ ವಿಜಯವರ್ಗಿಯಾ ಅವರ ಸಹಾಯಕ… ?!

Advertisement

Udayavani is now on Telegram. Click here to join our channel and stay updated with the latest news.

Next