Advertisement

ಮಿಶ್ರ ವೈದ್ಯಕೀಯ ಎಷ್ಟು ಸುರಕ್ಷಿತ?

11:24 PM Dec 12, 2020 | mahesh |

ಆಯುಷ್‌ ಮಂತ್ರಾಲಯದ ಅಧೀನ ಸಂಸ್ಥೆಯಾದ ಭಾರತೀಯ ವೈದ್ಯಶಾಸ್ತ್ರದ ಕೇಂದ್ರೀಯ ಪರಿಷತ್‌ ಇದೇ ನ. 20ರಂದು ಅಧಿಸೂಚನೆಯೊಂದನ್ನು ಹೊರಡಿಸಿತು. ಅದರ ಅನುಸಾರ ಆಯುರ್ವೇದ ವೈದ್ಯರು ಶಲ್ಯ ತಂತ್ರ, ಶಾಲಕ್ಯ ತಂತ್ರ ಎಂಬ ಹೆಸರಿನಲ್ಲಿ ಶಸ್ತ್ರ ಚಿಕಿತ್ಸಾ ಸ್ನಾತಕೋತ್ತರ ಪದವಿ ಹೊಂದಿ ಜನರಲ್‌ ಸರ್ಜರಿ, ಮೂತ್ರಜನಕಾಂಗ ವ್ಯೂಹ ಸಂಬಂಧಿ, ಜೀರ್ಣಾಂಗ ವ್ಯೂಹ ಸಂಬಂಧಿ, ಕಣ್ಣು-ಕಿವಿ- ಮೂಗು- ಗಂಟಲು ಸಂಬಂಧಿ ಹಾಗೂ ದಂತ ಚಿಕಿತ್ಸಾ ಶಸ್ತ್ರ ಚಿಕಿತ್ಸೆಗಳನ್ನು ಮಾಡಬಹುದೆಂದೂ, ತಮ್ಮ ಹೆಸರಿನ ಮುಂದೆ ಎಮ್‌.ಎಸ್‌. ಎಂದು ಬರೆದುಕೊಳ್ಳ ಬಹುದೆಂದೂ ಫ‌ರಮಾನು ಹೊರಡಿಸಿಬಿಟ್ಟಿತು.

Advertisement

ಅಂದರೆ ಪದವಿ ಶಿಕ್ಷಣವನ್ನು ಬರೀ ಆಯುರ್ವೇದ ಕಲಿತವರು ಸ್ನಾತಕೋತ್ತರ ಶಿಕ್ಷಣದಲ್ಲಿ ಎಮ್‌. ಎಸ್‌. ಕಲಿಯುವ ಅಪಾಯಕಾರಿ ಆದೇಶ. ಅಲ್ಲದೇ ಅದೇ ಆದೇಶದಲ್ಲಿ 58 ವಿವಿಧ ಶಸ್ತ್ರಚಿಕಿತ್ಸಾ ಕ್ರಮಗಳ ಪಟ್ಟಿಯನ್ನೂ ಬಿಡುಗಡೆ ಮಾಡಿತು. ಆಶ್ಚರ್ಯ ಹಾಗೂ ಆತಂಕಕಾರಿ ವಿಷಯವೆಂದರೆ ಆಧುನಿಕ ವೈದ್ಯಪದ್ಧತಿಯ ಈ ಶಸ್ತ್ರಚಿಕಿತ್ಸೆಗಳನ್ನು ಮಾಡುವಾಗ, ಸುಮಾರು ಹತ್ತು ವರ್ಷಗಳ ಕಠಿನ ಪರಿಶ್ರಮ ಹಾಗೂ ಹಿರಿಯ ಶಸ್ತ್ರಚಿಕಿತ್ಸಕರ ಮಾರ್ಗ ದರ್ಶನದಲ್ಲಿ ಪರಿಣತಿ ಪಡೆದಾಗ್ಯೂ ಹೊಸ ಸರ್ಜನ್‌ಗಳ ಎದೆಬಡಿತ ಹೆಚ್ಚಾಗುತ್ತದೆ. ಅಲ್ಲದೆ ಹಲವು ಶಸ್ತ್ರಚಿಕಿತ್ಸೆಗಳನ್ನು ಮಾಡಲು ಅದೇ ವಿಷಯಗಳಲ್ಲಿ ಇನ್ನೂ ಹೆಚ್ಚಿನ ತರಬೇತಿಯ ಅವಶ್ಯಕತೆ ಇರುವುದರಿಂದ ಸೂಪರ್‌ ಸ್ಪೆಷಾಲಿಟಿಗಳಿವೆ. ಎಮ್‌ಬಿಬಿಎಸ್‌ ಕಲಿತು, ಎಮ್‌.ಎಸ್‌. ಕಲಿತರೂ ಮೇಲಿನ ಪಟ್ಟಿಯಲ್ಲಿನ ಹಲವು ಶಸ್ತ್ರಚಿಕಿತ್ಸೆಗಳನ್ನು ಮಾಡಲು ಎಮ್‌.ಸಿ.ಎಚ್‌. ಎಂಬ ಮತ್ತೆ ಮೂರು ವರ್ಷದ ಕೋರ್ಸ್‌ ಮಾಡುವ ಘಟ್ಟದಲ್ಲಿ ನಾವಿರುವಾಗ, ಈ ಅಧಿಸೂಚನೆ ಬಂದದ್ದು ವೇಗವಾಗಿ ಚಲಿಸುವ ವಾಹನಕ್ಕೆ ಸಡನ್ನಾಗಿ ರಿವರ್ಸ್‌ ಗಿಯರ್‌ ಹಾಕಿದಂತಹ ಅನುಭವ!

ಆಯುರ್ವೇದವು ಮೂಲತಃ ನಿಸರ್ಗ ನಿರ್ಮಿತ ಔಷಧಗಳಿಂದ ಹಾಗೂ ನಿಯಮಿತ ಆಚರಣೆಗಳಿಂದ, ಜೀವನ ಪದ್ಧತಿಗಳಿಂದ ರೋಗಗಳನ್ನು ಗುಣಪಡಿಸುವ ವಿಧಾನವೇ ಹೊರತು ಆಧುನಿಕ ವೈದ್ಯ ಪದ್ಧತಿಯಲ್ಲಿನ ಸಾಕ್ಷ್ಯಾಧಾರಿತ ವೈದ್ಯಕೀಯ (Evidence Based Medicine) ಚಿಕಿತ್ಸೆ ಅಲ್ಲ. ಪ್ರಾಚೀನ ಆಯುರ್ವೇದ ಗ್ರಂಥಗಳಲ್ಲಿ ಅನೇಕ ಶಸ್ತ್ರಚಿಕಿತ್ಸಾ ವಿಧಾನಗಳನ್ನು ವಿವರಿಸಲಾಗಿದೆಯಾದರೂ ಆ ವಿಧಾನಗಳ ತರಬೇತಿ ಅಥವಾ ಅವುಗಳ ಮುಂದುವರಿಕೆ ಆದದ್ದಾಗಲೀ ಅಥವಾ ಆ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಅತ್ಯಾವಶ್ಯಕವಾದ ಅರಿವಳಿಕೆ ಜ್ಞಾನವಾಗಲೀ ಇಲ್ಲವೇ ಇಲ್ಲ.

ಈಗ ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಾರಾ ದರೆ ಅವರಿಗೆ ತರಬೇತಿ ನೀಡುವವರಾರು? ಅಕಸ್ಮಾತ್‌ ಸರಕಾರ ತನ್ನ ಶಕ್ತಿ ಬಳಸಿ ಅಲೋಪಥಿ ವೈದ್ಯರನ್ನು ನಿಯೋ ಜಿಸಿ ಆಯುರ್ವೇದ ವೈದ್ಯರಿಗೆ ತರಬೇತಿ ನೀಡಿಸಿದರೂ ಅರಿವಳಿಕೆಗೆ ಬಳಸುವ ಔಷಧಗಳು ಯಾವುವು? ಶಸ್ತ್ರಚಿಕಿತ್ಸಾ ಅನಂತರದಲ್ಲಿ ನಂಜು ಆಗದಂತೆ, ಕೀವು ಆಗದಂತೆ ಬಳಸಲು ಆಂಟಿಬಾಯಾಟಿಕ್ಸ್‌ ಯಾವುವು? ನೋವು ಆಗದಂತೆ ನೀಡಲು ನೋವು ನಿವಾರಕಗಳೆಲ್ಲಿ? ಸಲೈನ್‌ಗಳು, ಇಂಜೆಕ್ಷನ್‌ಗಳು ಆಯುರ್ವೇದ ಹೇಗಾದಾವು? ಹಾಗಾದರೆ ಅಲೋಪಥಿ ಔಷಧಗಳನ್ನು ಆಯುರ್ವೇದ ವೈದ್ಯರು ಬಳಸಬೇಕೆ? ಹಾಗೆ ಬಳಸಬೇಕಾದರೆ ಅವುಗಳ ಜ್ಞಾನದ ಆವಶ್ಯಕತೆ ಇಲ್ಲವೇ? ಅವುಗಳ ಬಗ್ಗೆ ಜ್ಞಾನವಿಲ್ಲದೆ ಬಳಸಿದರೆ ರೋಗಿಗಳಿಗೆ ಅಪಾಯವಾಗುವುದಿಲ್ಲವೇ? ಅದನ್ನು ಕಲಿತು ಇದನ್ನು ಮಾಡಿದರೆ ಅದು ಕಿಚಡಿ ವೈದ್ಯಕೀಯ ಆಗುವುದಿಲ್ಲವೇ? ಅಂದರೆ ಸರಕಾರ ತಾನೇ ಮುಂದೆ ನಿಂತು ನಕಲಿ ವೈದ್ಯರನ್ನು ತಯಾರು ಮಾಡಿದಂತಾಗುವು ದಿಲ್ಲವೇ? (ಈ ಹಿಂದೆ ಇದ್ದ ಭಾರತ ವೈದ್ಯಕೀಯ ಪರಿಷತ್‌ ಪ್ರಕಾರ ಕಲಿತ ಪದ್ಧತಿಯನ್ನು ಬಿಟ್ಟು ಬೇರೆಯದನ್ನು ಬಳಕೆ ಮಾಡುವವರೆಲ್ಲ ನಕಲಿ ವೈದ್ಯರೇ! ಅಲೋಪತಿ ವೈದ್ಯರು ಆಯುರ್ವೇದ ಔಷಧ ಬಳಸಿದರೂ ನಕಲಿ ವೈದ್ಯರೇ) ಈ ನೂರೆಂಟು ಪ್ರಶ್ನೆಗಳಿಗೆ ಉತ್ತರ ಕೊಡುವವರಾರು?

ಭಾರತ ಇಂದಿಗೂ ಆಧುನಿಕ ವೈದ್ಯಕೀಯದ ಮುಖ್ಯ ಕೇಂದ್ರವಾಗಿದೆ. ಅನೇಕ ದೇಶಗಳ ಜನ ಭಾರತದ ಆಸ್ಪತ್ರೆಗಳೆಡೆ ಮುಖ ಮಾಡುತ್ತಿದ್ದಾರೆ. ಜಗತ್ತಿನಾದ್ಯಂತ ಸೇವೆ ಸಲ್ಲಿಸುತ್ತಿರುವ ಭಾರತೀಯ ವೈದ್ಯರು ದೇಶಕ್ಕೆ ಹೆಮ್ಮೆಯ ಪರಂಪರೆ ನೀಡಿದ್ದಾರೆ. ಆದರೆ Mixopathy ಎಂದು ಈಗೀಗ ಕರೆಸಿಕೊಳ್ಳುತ್ತಿರುವ ಮಿಶ್ರ ವೈದ್ಯಕೀಯ ಅಥವಾ ಕಿಚಡಿ ವೈದ್ಯಕೀಯದಿಂದ ಇಂತಹ ಪರಂಪರೆ ನಾಶವಾಗುತ್ತದೆ. ಸಂಶೋಧನೆ ಮತ್ತು ಬೆಳವಣಿಗೆಗಳು ಆಯಾ ವೈದ್ಯಕೀಯ ಕ್ಷೇತ್ರಗಳಲ್ಲಿ ನಡೆಯಬೇಕು ಮತ್ತು ಪ್ರತಿಯೊಬ್ಬರೂ ತಮ್ಮದೇ ಆದ ವೈದ್ಯಕೀಯ ಪದ್ಧತಿಯನ್ನು ಅನುಸರಿಸಬೇಕು. ಆಗ ಮಾತ್ರ ರೋಗಿಗಳು ತಮಗೆ ಇಷ್ಟವಾದ ಪದ್ಧತಿಯನ್ನು ಬಳಸಿ ಸುರಕ್ಷಿತವಾಗಿರಲು ಸಾಧ್ಯ.

Advertisement

ಡಾ| ಶಿವಾನಂದ ಕುಬಸದ (ಉಪಾಧ್ಯಕ್ಷರು, ಐಎಂಎ, ಕರ್ನಾಟಕ ರಾಜ್ಯ ಶಾಖೆ)

Advertisement

Udayavani is now on Telegram. Click here to join our channel and stay updated with the latest news.

Next