ನವದೆಹಲಿ/ಇಸ್ಲಾಮಾಬಾದ್:ಪುಲ್ವಾಮಾ ದಾಳಿಗೆ ಪ್ರತೀಕಾರ ಎಂಬಂತೆ ಭಾರತೀಯ ವಾಯುಪಡೆ ಮಂಗಳವಾರ ಮುಂಜಾನೆ ಪಾಕ್ ಗಡಿಯೊಳಗೆ ನುಗ್ಗಿ ಮಿರಾಜ್ 2000 ಯುದ್ಧ ವಿಮಾನದ ಮೂಲಕ ಉಗ್ರರ ಅಡಗು ತಾಣಗಳನ್ನು ನಾಶ ಮಾಡಿ, ಉಗ್ರರನ್ನು ಹತ್ಯೆಗೈದಿರುವ ಘಟನೆ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದೇ ಬೇರೆ!
ಪಾಕಿಸ್ತಾನದ ಬಹುತೇಕ ಇಂಗ್ಲಿಷ್ ಮಾಧ್ಯಮಗಳ ವರದಿ ಪ್ರಕಾರ, ಭಾರತೀಯ ಸೇನೆ ಪಾಕ್ ನೊಳಗೆ ನುಗ್ಗಿ ಜೈಶ್ ಎ ಮೊಹಮ್ಮದ್ ಉಗ್ರರ ಶಿಬಿರಗಳ ಮೇಲೆ ನಡೆಸಲು ಯತ್ನಿಸಿದ ದಾಳಿ ವಿಫಲವಾಗಿದೆ ಎಂದು ಹೇಳಿದೆ!
ಪಾಕಿಸ್ತಾನದ ದೈನಿಕ ಡಾನ್ ನ ವೆಬ್ ಸೈಟ್ ನಲ್ಲಿ “ಭಾರತೀಯ ವಾಯುಪಡೆಯಿಂದ ಗಡಿ ನಿಯಂತ್ರಣ ರೇಖೆ ಉಲ್ಲಂಘನೆ, ಪಾಕ್ ವಾಯುಪಡೆಯಿಂದ ತೀಕ್ಷ್ಣ ಪ್ರತಿಕ್ರಿಯೆಗೆ ಹಿಂದೆ ಸರಿದ ಭಾರತೀಯ ವಾಯುಪಡೆ ಎಂಬುದಾಗಿ ವರದಿ ಪ್ರಕಟಿಸಿದೆ.
ಎಕ್ಸ್ ಪ್ರೆಸ್ ಟ್ರೈಬೂನ್ ದೈನಿಕದ ಹೆಡ್ ಲೈನ್ ಹೇಗಿದೆ ಎಂದರೆ ಎಲ್ ಓಸಿ ದಾಟಿ ಒಳಬಂದ ಭಾರತೀಯ ವಾಯುಪಡೆ ವಿಮಾನವನ್ನು ಬೆನ್ನಟ್ಟಿದ್ದ ಪಾಕ್ ವಾಯುಪಡೆ! ಅದರ ಜೊತೆಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಮೆಹಮೂದ್ ಖುರೇಶಿ ಲೇಖನವೊಂದನ್ನು ಪ್ರಕಟಿಸಿದೆ. ಅದರಲ್ಲಿ ಪಾಕ್ ಪಡೆಯಿಂದ ತಕ್ಕ ಉತ್ತರ ಎಂಬುದಾಗಿ ಬರೆಯಲಾಗಿದೆ.
ದ ನೇಷನ್ ಪತ್ರಿಕೆಯ ವೆಬ್ ಸೈಟ್ ನಲ್ಲಿ ಪಾಕಿಸ್ತಾನದ ಪ್ರಜೆಗಳು ಮತ್ತು ರಕ್ಷಣಾ ಪಡೆ ಹೈಅಲರ್ಟ್ ಆಗಿರುವಂತೆ ವಿದೇಶಾಂಗ ಸಚಿವ ಖುರೇಷಿ ಅವರು ಘೋಷಿಸಿರುವ ಸುದ್ದಿಯನ್ನು ಮಾತ್ರ ಪ್ರಕಟಿಸಿತ್ತು.
ಪಾಕಿಸ್ತಾನದ ಹೆಚ್ಚಿನ ಪತ್ರಿಕೆಗಳು ಭಾರತೀಯ ಸೇನಾಪಡೆಯ ದಾಳಿಯನ್ನು ಇದೊಂದು ಅತಿಕ್ರಮ ಮತ್ತು ಗಡಿನಿಯಂತ್ರಣ ರೇಖೆಯ ಉಲ್ಲಂಘನೆ ಎಂಬ ಪಾಕಿಸ್ತಾನ ಸೇನಾಪಡೆಯ ಹೇಳಿಕೆಯನ್ನೇ ಉಲ್ಲೇಖಿಸಿ ವರದಿ ಪ್ರಕಟಿಸಿವೆ. ಪಾಕಿಸ್ತಾನ ಟುಡೇ ವರದಿ ಹೀಗಿತ್ತು..ಭಾರತೀಯ ಸೇನಾಪಡೆಯಿಂದ ಎಲ್ ಓಸಿ ಪ್ರವೇಶ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ತುರ್ತು ಸಭೆ ಎಂಬುದಾಗಿ!
ಭಾರತೀಯ ವಾಯುಪಡೆ ಮಂಗಳವಾರ ಮುಂಜಾನೆ 3.30ಕ್ಕೆಪಾಕಿಸ್ತಾನದ ಬಾಲಕೋಟ್ ಎಂಬಲ್ಲಿ ದಾಳಿ ನಡೆಸುವ ಮೂಲಕ ಉಗ್ರರ ಅಡಗು ತಾಣಗಳನ್ನು ಹಾಗೂ ಉಗ್ರರನ್ನು ಸದೆಬಡಿದಿರುವುದಾಗಿ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ ಪಾಕ್ ಮಾಧ್ಯಮಗಳು ಈ ಸುದ್ದಿಯನ್ನು ತಿರುಚಿ, ಪಾಕ್ ಪರ ಸುದ್ದಿ ಪ್ರಕಟಿಸಿದ್ದವು!