ನಮ್ಮ ಈ ಹೊತ್ತಿನ ಬದುಕು ಬಹಳ ಸುಂದರ, ಸಂತೋಷಮಯ, ಲವಲವಿಕೆಯದು ಆಗಿದ್ದರೆ “ಈ ಬದುಕಿನ ಅರ್ಥವೇನು’, “ಬದುಕಿನ ಗುರಿಯೇನು’ ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳುವುದಿಲ್ಲ. ಜೀವನದಲ್ಲಿ ದುಃಖ ಗಳು ಎದುರಾದಾಗ, ಕಷ್ಟ ಒದಗಿದಾಗ ಇಂತಹ ಪ್ರಶ್ನೆಗಳು ಉದ್ಭವಿಸುತ್ತವೆ. ನಿಜಕ್ಕೂ ಜೀವನ ಬಹಳ ಸುಂದರವಾಗಿದೆ, ಸತ್ವಪೂರ್ಣ ವಾಗಿದೆ, ಅದ್ಭುತವಾಗಿದೆ. ಆದರೆ ನಾವು ಬದುಕನ್ನು ಅದರ ಪೂರ್ಣ ಮಟ್ಟದಲ್ಲಿ ಅನುಭವಿಸಲು ಕಲಿಯದೆ ಇರುವುದು, ಜೀವನದ ಸೌಂದರ್ಯವನ್ನು ಆಸ್ವಾದಿಸದೆ ಇರುವುದು, ಅದು ಹೇಗಿದೆಯೋ ಹಾಗೆಯೇ ಸ್ವೀಕರಿಸದೆ ಇರುವುದರಿಂದಲೇ ಅದಕ್ಕೊಂದು ಅರ್ಥ ಹುಡುಕುವ ಗೋಜಿಗೆ ಮುಂದಾಗುತ್ತೇವೆ ಎನ್ನುತ್ತಾರೆ ಸದ್ಗುರು.
ಬದುಕಿನ ಅರ್ಥವೇನು ಎಂದು ಪ್ರಶ್ನಿಸು ವುದಕ್ಕೆ ಮುನ್ನ ಜೀವನವನ್ನು ಅದರ ಪೂರ್ಣ ಮಟ್ಟದಲ್ಲಿ ಅನುಭವಿಸಲು ನಾವು ಕಲಿಯ ಬೇಕು. ಬದುಕು ಅಂದರೆ ಯಾವುದೋ, ಏನೋ ದೂರದ್ದಲ್ಲ, ಅದೆಲ್ಲೋ ಆಕಾಶದಲ್ಲಿ ಇಲ್ಲ. ನಮ್ಮ ಜತೆಗೆ ನಮ್ಮ ದೇಹ, ಮನಸ್ಸು ಇವೆಯಲ್ಲ – ಅವೇ ಬದುಕು. ಅವುಗಳು ಎಷ್ಟು ಸಾಧ್ಯವೋ ಅಷ್ಟು ಸಾತ್ವಿಕ ಸುಖದಿಂದ, ಲವ ಲವಿಕೆಯಿಂದ, ಸಂತೋಷ ದಿಂದ ಇರುವಂತೆ ಮಾಡೋಣ. ದೇಹ ಮತ್ತು ಮನಸ್ಸು ಸಂತುಷ್ಟವಾಗಿ, ಸಂತೃಪ್ತಿಯಿಂದ ಇದ್ದಾಗ ಮಾತ್ರ ಎಲ್ಲವೂ ಸರಿಯಾಗಿರುತ್ತದೆ. ಅಂತಹ ಸ್ಥಿತಿಯಲ್ಲಿ ಮಾತ್ರ ನಮ್ಮ ಬುದ್ಧಿ, ಆತ್ಮಸಾಕ್ಷಿ, ಆತ್ಮವಿಶ್ವಾಸ, ವಿವೇಕ ಇವೆಲ್ಲವೂ ಸರಿಯಿರುತ್ತವೆ.
ಒಂದು ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು, ಅಖಂಡ 24 ತಾಸು ಕೂಡ ಸಂತೋಷವಾಗಿ ಇದ್ದ ಒಂದು ದಿನವಾದರೂ ಇದೆಯೇ? ನಾವು ಮಾತ್ರ ಅಲ್ಲ; ಎಲ್ಲರೂ ಇದಕ್ಕೆ ಉತ್ತರಿಸುವುದು “ಇಲ್ಲ’ ಎಂದೇ. ಯಾವುದೋ ಒಂದು ದಿನ ಸಂತೋಷವಾಗಿಲ್ಲ ಎಂದರೆ ಅದು ಸಹಜ. ಆದರೆ ತಿಂಗಳಾನು ಗಟ್ಟಲೆಯಲ್ಲಿ ಒಂದು ದಿನವೂ ನಾವು ಖುಷಿ ಯಾಗಿರಲಿಲ್ಲ ಎಂದರೆ ಏನೋ ಸಮಸ್ಯೆಯಿದೆ ಎಂದರ್ಥವಲ್ಲವೆ? ಬದುಕುವುದು ಹೇಗೆ ಎಂಬ ಮೂಲ ಸಂಗತಿಯನ್ನು ಅರ್ಥ ಮಾಡಿಕೊಳ್ಳದಿರುವುದೇ ಇದಕ್ಕೆ ಕಾರಣ. ಕಾರಿನಲ್ಲಿ ಚಾಲಕನ ಕಾಲ ಕೆಳಗಿರುವ ಮೂರು ಪೆಡಲುಗಳು ಏಕೆ ಇವೆ ಎಂಬುದನ್ನು ತಿಳಿಯದೆ ಕಾರು ಚಲಾಯಿಸಿದಂತೆ ಇದು.
ಎಲ್ಲವನ್ನೂ ಯದ್ವಾತದ್ವಾ ಒತ್ತಿದರೆ ಕಾರು ಹೇಗೆಹೇಗೋ ಚಲಿಸುತ್ತದೆ! ಬದುಕುವುದು ಹೇಗೆ ಎಂಬ ಮೂಲ ತಣ್ತೀ ತಿಳಿಯದೆ ನಾವು ಯದ್ವಾತದ್ವಾ ಜೀವಿಸುತ್ತಿದ್ದೇವೆ. ಈ ಜನ್ಮ ಬಹಳ ದೊಡ್ಡದು ಎಂದು ಹಿರಿಯರು ಹೇಳಿದಂತೆ ಬದುಕು ಒಂದು ಅದ್ಭುತ ಅವಕಾಶ ಎಂದುಕೊಂಡು, ಪ್ರತೀಕ್ಷಣವೂ ಅದರ ಸೌಂದರ್ಯವನ್ನು, ಔನ್ನತ್ಯ ವನ್ನು ಅರಿತು ಜೀವಿಸಿದರೆ ಎಲ್ಲವೂ ಸರಿಹೋಗುತ್ತದೆ. ಆಗ ಬದುಕಿನ ಅರ್ಥವೇನು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಏಕೆಂದರೆ ಬದುಕುವುದೇ ಬದುಕಿನ ಉದ್ದೇಶ ಎಂಬುದನ್ನು ನಾವು ಅರಿತಿರುತ್ತೇವೆ. ಬದುಕನ್ನು ಸುಂದರಗೊಳಿಸಿಕೊಳ್ಳುವುದು ಹೇಗೆ ಎಂದು ಚಿಂತಿಸುವುದಿಲ್ಲ. ಏಕೆಂದರೆ ಬದುಕು ಅದು ಇರುವ ಹಾಗೆಯೇ ಸುಂದರ ವಾಗಿದೆ ಎಂಬ ಸಂತೃಪ್ತಿ ನಮ್ಮಲ್ಲಿರುತ್ತದೆ.
ನಿಜಕ್ಕೂ ಈ ಬದುಕಿನಲ್ಲಿ ಅರ್ಥ ಹುಡುಕು ವುದಕ್ಕೇನೂ ಇಲ್ಲ, ಅದನ್ನು ಸುಂದರಗೊಳಿಸು ವುದಕ್ಕಿಲ್ಲ. ಅದು ಇರುವ ಹಾಗೆಯೇ ಬಹಳ ಚೆಲುವಾಗಿದೆ, ಅತ್ಯದ್ಭುತವಾಗಿದೆ, ಮಹೋ ನ್ನತವಾಗಿದೆ. ಇದನ್ನು ನಾವು ಮೊದಲು ಮನಗಂಡು ಬದುಕನ್ನು ಆಸ್ವಾದಿಸೋಣ.ಅಲ್ಲದೆ ಅಷ್ಟೇ ಉನ್ನತವಾಗಿ ಈ ಸಮಾಜದಲ್ಲಿ ಜೀವಿಸೋಣ.