Advertisement

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

02:26 PM Aug 04, 2022 | ಕೀರ್ತನ್ ಶೆಟ್ಟಿ ಬೋಳ |

ಅದು 1992ರ ಮೇ 25. ಮನಿಲಾದ ರೈಲ್ವೆ ಹಳಿಯ ಬಳಿಯ ಮರದ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದ 23 ವರ್ಷದ ಮೆರ್ಲಿ ಸೊ ಎಂಬ ಮಹಿಳೆಯ ನೋಟವೆಲ್ಲಾ ಚಾನೆಲ್ 2 ವಾಹಿನಿಯೆಡೆಗೆ ನೆಟ್ಟಿತ್ತು. ವಾಹಿನಿಯಲ್ಲಿ ಪ್ರಸಾರವಾದ ಸುದ್ದಿ ಕಂಡ ಮೆರ್ಲಿ ಗೆ ತನ್ನ ಕಣ್ಣುಗಳನ್ನೇ ತನಗೆ ನಂಬಲಾಗಲಿಲ್ಲ. ತನ್ನ ನಾಲ್ಕು ಮಕ್ಕಳನ್ನು ಬಳಿಗೆ ಕರೆದ ಮೆರ್ಲಿ ಸಂತೋಷದಿಂದ ತಬ್ಬಿ ಮುದ್ದಾಡಿದ್ದಳು.

Advertisement

ಸುಮಾರು ಐದು ಮೈಲುಗಳ ಆಚೆ ಟ್ರೈಸಿಕಲ್-ಟ್ಯಾಕ್ಸಿ ಡ್ರೈವರ್ ಅರ್ನೆಸ್ಟೊ ಡಿ ಗುಜ್ಮಾನ್ ಡಿ ಲೀ ಕೂಡಾ ಟಿವಿ ನೋಡುತ್ತಿದ್ದ. ಬಂದ ಸುದ್ದಿ ಕೇಳಿ ಕುಣಿದಾಡಿದ ಅರ್ನೆಸ್ಟೋ, ತನ್ನ ಬಳಿಯಿದ್ದ ಆ ಅಮೂಲ್ಯ ವಸ್ತುವನ್ನು ಸೋದರಳಿಯ ಮರ್ಸೆಲೋಗೆ ತೋರಿಸಲು ಕೆಳಮನೆಗೆ ಓಡಿಬಂದಿದ್ದ. ಪ್ರಪಂಚ ಗೆದ್ದ ಸಂಭ್ರಮದಲ್ಲಿ ಅವರಿಬ್ಬರೂ ಕುಣಿದಾಡಿದ್ದರು.

ದೇಶದ ಮತ್ತೊಂದು ಮೂಲೆಯ ಬಾರೊಂದರ ವೈಟರ್ ಅಗಿದ್ದ ಜೋಸೆಫ್ ಗೆ ಟಿವಿಯಲ್ಲಿ ಬಂದ ಸುದ್ದಿ ಕೇಳಿ ಏನು ಹೇಳಬೇಕೋ ತಿಳಿಯಲಿಲ್ಲ. ತನ್ನ ಕಷ್ಟದ ದಿನಗಳು ಇನ್ನು ದೂರವಾದವು.  ಇನ್ನು ನಾನು ಈ ಬಾರ್ ನಲ್ಲಿ ಕೆಲಸ ಮಾಡುವುದಿಲ್ಲ. ನನ್ನದೇ ವ್ಯವಹಾರ ನಡೆಸುತ್ತೇನೆ ಎಂದು ಎದೆಯುಬ್ಬಿಸಿ ನಡೆದಿದ್ದ.

ಅಂದಹಾಗೆ ಮೇ 25ರಂದು ಈ ಮೆರ್ಲಿ, ಅರ್ನೆಸ್ಟೊ, ಜೋಸೆಫ್ ರಂತೆ ಫಿಲಿಪೈನ್ಸ್ ನ ಬರೋಬ್ಬರಿ ಆರು ಲಕ್ಷ ಮಂದಿ ಇದೇ ರೀತಿ ಸಂತಸಗೊಂಡಿದ್ದರು. ಅದಕ್ಕೆ ಕಾರಣ ಒಂದು ನಂಬರ್. ಅದುವೇ 349.

ತಂಪು ಪಾನೀಯದ ಬಿಸಿಬಿಸಿ ಜಾಹೀರಾತು

Advertisement

ಅಮೆರಿಕದ ತಂಪು ಪಾನೀಯ ಕಂಪನಿ ಪೆಪ್ಸಿ ಕಂಪೆನಿಗೆ ಹೊಸ ಸಿಇಒ ಆಗಿ ಬಂದ ಕ್ರಿಸ್ಟೋಫರ್ ಸಿಂಕ್ಲೇರ್ ತನ್ನ ಎದುರಾಳಿ ಕೋಕಾ ಕೋಲಾ ವಿರುದ್ದ ತೊಡೆ ತಟ್ಟಿದ್ದ. ಈ ಬಾರಿ ಕೋಕ್ ಗಿಂತ ಪೆಪ್ಸಿ ಮಾರಾಟವನ್ನು ಹೆಚ್ಚಿಸಬೇಕೆಂದು ಪಣ ತೊಟ್ಟ ಸಿಂಕ್ಲೇರ್ ಗೆ ಸಾಥ್ ನೀಡಿದ್ದು ನ್ಯೂಯಾರ್ಕ್ ನಲ್ಲಿ ಕೆಲಸ ಮಾಡುತ್ತಿದ್ದ ಚಿಲಿ ಮೂಲದ ಪೆಡ್ರೋ ವರ್ಗರಾ. ಆತನ ನೀಡಿದ ಸಲಹೆ ಪೆಪ್ಸಿಯನ್ನು ಜಾಗತಿಕ ಸೆನ್ಸೇಶನ್ ಮಾಡಿತ್ತು.

ಅಮೆರಿಕ ದೇಶದ ಗಾಢ ಪ್ರಭಾವ ಹೊಂದಿರುವ ಫಿಲಿಪೈನ್ಸ್ ನಲ್ಲಿ ಪೆಪ್ಸಿ ತನ್ನ ಮಾರುಕಟ್ಟೆ ವಿಸ್ತರಣೆಗೆ ಸಜ್ಜಾಗಿತ್ತು. 7641 ದ್ವೀಪಗಳ ಫಿಲಿಪೈನ್ಸ್ ನಲ್ಲಿ ಪೆಪ್ಸಿ ಕಂಪೆನಿ ಒಂದು ಜಾಹೀರಾತು ಪ್ರಕಟಿಸಿತ್ತು. ತಮ್ಮ ಪಾನೀಯದ ಬಾಟಲಿಯ ಮುಚ್ಚಳದಲ್ಲಿ ಸಂಖ್ಯೆಯೊಂದನ್ನು ನಮೂದಿಸುತ್ತೇವೆ. ಪ್ರತಿದಿನ ಒಂದು ಲಕ್ಕಿ ಡ್ರಾ ಇರಲಿದೆ. ಅದರಲ್ಲಿ ಗೆದ್ದವರಿಗೆ ಇಂತಿಷ್ಟು ಮೊತ್ತ ಸಿಗಲಿದೆ. ಆದರೆ ಅಭಿಯಾನದ ಕೊನೆಯಲ್ಲಿ ನಾವು ಆಯ್ಕೆ ಮಾಡಿದ ಒಂದು ಸಂಖ್ಯೆಯ ಬಾಟಲ್ ಕ್ಯಾಪ್ ಯಾರ ಬಳಿ ಇರುತ್ತದೋ ಅವರಿಗೆ ಬರೋಬ್ಬರಿ ಒಂದು ಮಿಲಿಯನ್ ಪೆಸೋ ಹಣ ಸಿಗಲಿದೆ ಎಂಬ ಜಾಹೀರಾತದು. (ಒಂದು ಮಿಲಿಯನ್ ಪೆಸೊ ಎಂದರೆ ಸುಮಾರು 50 ಲಕ್ಷ ರೂ ಗಳಷ್ಟು).

ಕೇವಲ ಒಂದು ಪೆಪ್ಸಿಯಿಂದ ತಾವು ಮಿಲಿಯನೇರ್ ಗಳಾಗಬಹುದು ಎಂಬ ಆಸೆಗೆ ಬಿದ್ದ ಫಿಲಿಪ್ಪೀನಿಯರು ಮುಗಿಬಿದ್ದು ಪೆಪ್ಸಿ ಖರೀದಿಸಲು ತೊಡಗಿದರು. ಅಲ್ಲಿ ಮಾಸಿಕ ಮಾರಾಟವು ತ್ವರಿತವಾಗಿ 10 ಮಿಲಿಯನ್‌ ಡಾಲರ್ ನಿಂದ 14 ಮಿಲಿಯನ್‌ ಡಾಲರ್ ಗೆ ಏರಿತು. 19.4% ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದ ಪೆಪ್ಸಿ 24.9% ಕ್ಕೆ ತಲುಪಿತು. ಪೆಪ್ಸಿಗೆ ಎಷ್ಟು ಬೇಡಿಕೆ ಬಂತೆಂದರೆ ಬಾಟಲಿಂಗ್ ಪ್ಲಾಂಟ್‌ಗಳು ದಿನಕ್ಕೆ 20 ಗಂಟೆಗಳ ಕಾಲ ಕೆಲಸ ಮಾಡಲಾರಂಭಿಸಿದವು. ಒಂದೇ ಒಂದು ಜಾಹೀರಾತು ಫಿಲಿಪೈನ್ಸ್ ನಲ್ಲಿ ಕಿಚ್ಚು ಹತ್ತಿಸಿತ್ತು. ನಾಲ್ಕು ಪತ್ರಿಕೆಗಳು ಮತ್ತು 29 ರೇಡಿಯೋ ಕೇಂದ್ರಗಳು ವಿಜೇತ ಸಂಖ್ಯೆಯನ್ನು ಪ್ರಸಾರ ಮಾಡುತ್ತಿದ್ದವು. ಯೋಜನೆಯಂತೆ ಮೇ 8 ರಂದು ಕೊನೆಗೊಳ್ಳಬೇಕಿದ್ದ ಈ ಅಭಿಯಾನ ಮತ್ತೆ ಐದು ವಾರಗಳವರೆಗೆ ವಿಸ್ತರಿಸಲಾಯಿತು. ಅಷ್ಟೊತ್ತಿಗಾಗಲೇ ನಂಬರ್ ಫೀವರ್ ದೇಶಕ್ಕೆ ಹಬ್ಬಿತ್ತು.

ಈ ಅಭಿಯಾನ ಎಷ್ಟು ಹುಚ್ಚು ಹಿಡಿಸಿತ್ತು ಎಂದರೆ ಮನೆಯೊಂದರ ಕೆಲಸದಾಕೆ ಬಾಟಲ್ ಕ್ಯಾಪ್ ಕದ್ದ ಕಾರಣಕ್ಕೆ ಜೈಲು ಪಾಲಾದಳು. ಇದೇ ರೀತಿಯ ವಿಚಾರಕ್ಕೆ ಇಬ್ಬರು ಪೆಪ್ಸಿ ಮಾರಾಟಗಾರರ ಕೊಲೆ ನಡೆಯಿತು.

ಕೊನೆಗೂ ಆ ದಿನ ಬಂದಿತ್ತು. ಅಂದು ಮೇ 25. ಅಂದು ಪೆಪ್ಸಿ ಜಾಹೀರಾತಿನ ಕೊನೆಯ ಲಕ್ಕಿ ಡ್ರಾ ಘೋಷಿಸುವ ದಿನ. ಅಂದು ವಿಜೇತ ಸಂಖ್ಯೆ ನಮೂದಿಸಲಾಗಿದ್ದ ಕ್ಯಾಪ್ ಹೊಂದಿದವರಿಗೆ ಮಿಲಿಯನ್ ಪೆಸೋ ಸಿಗಲಿದೆ. ಯಾರಾಗಲಿದ್ದಾರೆ ಆ ಅದೃಷ್ಟವಂತ? ಇಡೀ ದೇಶ ಈ ಒಂದು ಕ್ಷಣಕ್ಕಾಗಿ ಕಾದು ಕುಳಿತಿತ್ತು. ಸಂಜೆಯ ಚಾನೆಲ್ 2 ವಾಹಿನಿಯಲ್ಲಿ ಪ್ರಸಾರವಾದ ಸುದ್ದಿ ಬಹುಶಃ ಫಿಲಿಪೈನ್ಸ್ ನ ಆ ದಶಕದ ಅತ್ಯಂತ ಮಹತ್ವದ ಸುದ್ದಿಯಾಗಿತ್ತು. ಒಂದು ಮಿಲಿಯನ್ ಹಣದ ಆ ನಂಬರ್ ಪ್ರಕಟವಾಗಿತ್ತು. ಅದೇ 349..!

ಸಂತಸದಿಂದ ಕ್ರೋಧದೆಡೆಗೆ…

ಆದರೆ ಬಹುದೊಡ್ಡ ಪ್ರಮಾದ ನಡೆದಿತ್ತು. ಕೇವಲ ಒಂದು ಬಾಟಲ್ ಕ್ಯಾಪ್ ನಲ್ಲಿ ಪ್ರಿಂಟ್ ಆಗಬೇಕಿದ್ದ ಈ ಲಕ್ಕಿ ನಂಬರ್ 349, ಫಿಲಿಫೈನ್ಸ್ ನ ಆರು ಲಕ್ಷ ಬಾಟಲಿಗಳ ಕ್ಯಾಪ್ ಗಳಲ್ಲಿ ಪ್ರಿಂಟ್ ಆಗಿತ್ತು! ಕಂಪ್ಯೂಟರ್ ತಪ್ಪಿನ ಕಾರಣವೋ ಅಥವಾ ಯಾರದೋ ನಿರ್ಲಕ್ಷ್ಯತನದ ಕಾರಣದಿಂದ ಮಾರ್ಕೆಟಿಂಗ್ ಇತಿಹಾಸದ ಯಶಸ್ವಿ ಯೋಜನೆಯೊಂದು ಅತ್ಯಂತ ಘೋರ ದುರಂತ ಅಂತ್ಯ ಕಂಡಿತ್ತು. ಮೊದಲೇ ಹೇಳಿದಂತೆ ನಾವೇ ಗೆದ್ದೆವು ಎಂದು ಕುಣಿದಾಡಿ ಮನೆಯಿಂದ ಹೊರಬಂದಿದ್ದ ಜನರಿಗೆ ಈ ಮಹಾ ಪ್ರಮಾದದಿಂದ ಉಂಟಾದ ಮೋಸದ ಅರಿವಾಗಿತ್ತು. ಜಗತ್ತೇ ಗೆದ್ದ ಸಂತಸ ಕೆಲವೇ ಕ್ಷಣದಲ್ಲಿ ಮಹಾ ಕ್ರೋಧಕ್ಕೆ ತಿರುಗಿತ್ತು.

ನಾವು ಒಂದು ಕ್ಯಾಪ್ ನಲ್ಲಿ ಮಾತ್ರ ಸೆಕ್ಯುರಿಟಿ ಕೋಡ್ ಪ್ರಿಂಟ್ ಮಾಡಿದ್ದೆವು. ಉಳಿದ 349 ಸಂಖ್ಯೆಯ ಕ್ಯಾಪ್ ಗಳಲ್ಲಿ ಆ ಕೋಡ್ ಇಲ್ಲ. ಹೀಗಾಗಿ ನಾವು ಹಣ ಕೊಡುವುದಿಲ್ಲ ಎಂದು ಪೆಪ್ಸಿ ಕಂಪನಿ ಸ್ಪಷ್ಟನೆ ನೀಡಿತ್ತು. ಆದರೆ ಇದನ್ನು ಒಪ್ಪುವ ಮನಸ್ಥಿತಿ ಜನರಲ್ಲಿ ಇರಲಿಲ್ಲ. ಜನರು ಪೆಪ್ಸಿ ಬಾಟಲಿಂಗ್ ಘಟಕಗಳಿಗೆ ಮುತ್ತಿಗೆ ಹಾಕಿದ್ದರು. ತಡರಾತ್ರಿಯವರೆಗೆ ಮೀಟಿಂಗ್ ಮಾಡಿದ ಪೆಪ್ಸಿ ಕಂಪೆನಿ 349 ಸಂಖ್ಯೆಯ ಕ್ಯಾಪ್ ಹೊಂದಿದವರಿಗೆ 500 ಪೆಸೊ ಹಣ ನೀಡುವುದೆಂದು ಹೇಳಿತು. ಇದನ್ನು ಸುಮಾರು 486,170 ಜನರು ಸ್ವೀಕರಿಸುತ್ತಾರೆ. ಇದರಿಂದ ಪೆಪ್ಸಿ ಕಂಪನಿಗೆ 240 ಮಿಲಿಯನ್ ಪೆಸೊಗಳಷ್ಟು ಹೊರೆ ಬೀಳುತ್ತದೆ.

ಆದರೆ ಉಳಿದ ಮಂದಿ ಈ ಆಫರ್ ಒಪ್ಪಲು ಸಿದ್ದರಿರಲಿಲ್ಲ. ದೇಶಾದ್ಯಂತ ಪೆಪ್ಸಿ ಪ್ರೊಡಕ್ಟ್ ಗಳ ನಿಷೇಧಕ್ಕೆ ಅವರು ಕರೆ ನೀಡಿದರು. ರಸ್ತೆಯಲ್ಲಿ ಪ್ರತಿಭಟನೆಗಳು ನಡೆದವು. ಪ್ರತಿಭಟನೆ ವಿಕೋಪಕ್ಕೆ ತಿರುಗಿ ದಾವೋ ಮತ್ತು ಮನಿಲಾದಲ್ಲಿ ಗ್ರೆನೇಡ್ ಗಳನ್ನು ಪೆಪ್ಸಿ ಗೋದಾಮು ಮತ್ತು ಟ್ರಕ್ ಗಳ ಮೇಲೆ ಎಸೆಯಲಾಯಿತು. ಇದರಿಂದ ಹಲವರು ಪ್ರಾಣ ಕಳೆದುಕೊಂಡರು. 37 ಟ್ರಕ್ ಗಳನ್ನು ಸುಡಲಾಯಿತು.

ಪೆಪ್ಸಿ ವಿರುದ್ಧ ಸುಮಾರು 22,000 ಜನರು ಕೋರ್ಟ್ ಮೆಟ್ಟಿಲೇರಿದರು. ಸುಮಾರು 689 ಸಿವಿಲ್ ದೂರುಗಳು ಮತ್ತು 5,200 ಕ್ರಿಮಿನಲ್ ದೂರುಗಳನ್ನು ದಾಖಲಿಸಲಾಯಿತು. ಜೂನ್ 24, 1996 ರಂದು, ಒಂದು ಪ್ರಕರಣದಲ್ಲಿ “ನೈತಿಕ ಹಾನಿ” ಆಧಾರದಲ್ಲಿ 10,000 ಪೆಸೊಗಳನ್ನು ದೂರುದಾರರಿಗೆ ನೀಡಬೇಕು ಎಂದು ಟ್ರಯಲ್ ಕೋರ್ಟ್ ಆದೇಶಿಸಿತು. ಇದರ ವಿರುದ್ಧ ಮೂವರು ಮೇಲ್ಮನವಿ ಸಲ್ಲಿಸಿದರು. ಜುಲೈ 3, 2001 ರಂದು, ಮೇಲ್ಮನವಿ ನ್ಯಾಯಾಲಯವು ಈ ಮೂವರು ದೂರುದಾರರಿಗೆ ತಲಾ 30,000 ಪೆಸೊಗಳನ್ನು ಮತ್ತು ವಕೀಲರ ಶುಲ್ಕವನ್ನು ನೀಡಬೇಕು ಎಂದು ಸೂಚಿಸಿತು. ಆದರೆ ಇದಕ್ಕೊಪ್ಪದ ಪೆಪ್ಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತು. ವಾದ ಪ್ರತಿವಾದದ ಬಳಿಕ 2006ರಲ್ಲಿ ತೀರ್ಪು ನೀಡಿದ ಸುಪ್ರೀಂ, “ಕ್ಯಾಪ್ ಗಳ ಮೇಲೆ ತಪ್ಪು ಮುದ್ರಣದ ಕಾರಣದಿಂದ ಮೊತ್ತವನ್ನು ಪಾವತಿಸಲು ಪೆಪ್ಸಿ ಕಂಪನಿ ಜವಾಬ್ದಾರರಾಗಿರುವುದಿಲ್ಲ. ಹಾನಿಗಳಿಗೆ ಪೆಪ್ಸಿ ಜವಾಬ್ದಾರರಾಗಿರುವುದಿಲ್ಲ ಮತ್ತು 349 ಸಂಖ್ಯೆ ಘಟನೆಯ ಸುತ್ತಲಿನ ವಿಚಾರಗಳನ್ನು ಇಲ್ಲಿಯೇ ಕೊನೆಗೊಳಿಸಬೇಕು” ಎಂದು ಖಡಕ್ ಆದೇಶ ನೀಡಿತು.

ವ್ಯಾಪಾರ ಹೆಚ್ಚಿಸಲೆಂದು ಆರಂಭಿಸಿದ ಜಾಹೀರಾತೊಂದು ಫಿಲಿಪೈನ್ಸ್ ಜನರ ಮನಸಿನಾಳಕ್ಕೆ ಗಾಯ ಮಾಡಿದೆ. ಕೈಯಲ್ಲಿ 349 ಸಂಖ್ಯೆಯ ಕ್ಯಾಪ್ ಇದ್ದರೂ ಹಣ ಪಡೆಯಲಾಗದ ಜನರು ಇಂದೂ ತಂಪು ಪಾನೀಯ ಕಂಪನಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಸುಮಾರು 30 ವರ್ಷಗಳ ಬಳಿಕವೂ ಪೆಪ್ಸಿಯ ಈ ಜಾಹೀರಾತು ದುರಂತ ವಿಶ್ವದೆಲ್ಲೆಡೆ ಬ್ಯುಸಿನೆಸ್ ಸ್ಕೂಲ್ ಗಳಲ್ಲಿ ಕೇಸ್ ಸ್ಟಡಿಯಾಗಿ ಕಲಿಸಲಾಗುತ್ತಿದೆ. ಒಂದೇ ಒಂದು ಜಾಹೀರಾತಿನಿಂದ ಇಡೀ ದೇಶವನ್ನು ಒಂದು ಮಾಡಿದ್ದ ಪೆಪ್ಸಿ, ಅದೇ ಜಾಹೀರಾತಿನಿಂದ ದೇಶದ ತುಂಬಾ ವಿರೋಧ ಕಟ್ಟಿಕೊಂಡಿದ್ದು ಮಾತ್ರ ವಿಪರ್ಯಾಸ.

ಕೀರ್ತನ್ ಶೆಟ್ಟಿ ಬೋಳ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next