ಹೊಸದಿಲ್ಲಿ : ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೆ ಈಗ ದೇಶದ ಒಳಗೆ ಮತ್ತು ಹೊರಗೆ ಒಂದರ ಬಳಿಕ ಒಂದರಂತೆ ಮುಖಭಂಗ ಅನುಭವಿಸುವ ದುರ್ದೆಶೆ ಎದುರಾಗುತ್ತಿರುವುದು ವಿಧಿಯ ವಿಪರ್ಯಾಸವಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅವರು ಭಾಗವಹಿಸಿದ್ದ ಸೌದಿ ಅರೇಬಿಯದ ರಿಯಾಧ್‌ನಲ್ಲಿನ ಪ್ರಪ್ರಥಮ ಅರಬ್ – ಇಸ್ಲಾಮಿಕ್ – ಅಮೆರಿಕನ್ ಶೃಂಗದಲ್ಲಿ ಭಯೋತ್ಪಾದನೆ ವಿರುದ್ಧದ ಸಮರದ ಕುರಿತಾಗಿ ಮಾತನಾಡುವ ಅವಕಾಶವೇ ನವಾಜ್ ಷರೀಫ್ ಗೆ ಸಿಗದೇ ಹೋದದ್ದು ಅವರಿಗಾಗಿರುವ ಭಾರೀ ಮುಖಭಂಗವೆಂದು ತಿಳಿಯಲಾಗಿದೆ.
ಉಗ್ರ ನಿಗ್ರಹದ ಈ ಶೃಂಗದಲ್ಲಿ ಸಣ್ಣ ಪುಟ್ಟ ರಾಷ್ಟ್ರಗಳ ನಾಯಕರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವಕಾಶ ಸಿಕ್ಕಿತ್ತು. ಆದರೆ ಪಾಕ್ ಪ್ರಧಾನಿ ಷರೀಫ್ ಗೆ ಅಂತಹ ಅವಕಾಶವನ್ನೇ ನಿರಾಕರಿಸಲಾಯಿತು ಎಂದು ಪಾಕಿಸ್ಥಾನದ ದೈನಿಕ “ದ ನೇಶನ್’ ವರದಿ ಮಾಡಿದೆ.
“ಅರಬ್ – ಇಸ್ಲಾಮಿಕ್ ಶೃಂಗದಲ್ಲಿ ಪಾಲ್ಗೊಂಡ ಮುಸ್ಲಿಂ ಅಣ್ವಸ್ತ್ರ ದೇಶವಾಗಿರುವ ಪಾಕಿಸ್ಥಾನ ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ವಹಿಸುತ್ತಿರುವ ಪಾತ್ರವನ್ನು ಎಲ್ಲಿಯೂ ಉಲ್ಲೇಖೀಸಲಾಗಿಲ್ಲ; ಮಾತ್ರವಲ್ಲದೆ ಈ ಬಗೆಗಿನ ತನ್ನ ಅಭಿಪ್ರಾಯವನ್ನು ಮಂಡಿಸುವ ಅವಕಾಶವನ್ನೂ ದೇಶದ ಪ್ರಧಾನಿಗೆ (ನವಾಜ್ ಷರೀಫ್) ನೀಡಲಾಗಿಲ್ಲ; ಆ ಮೂಲಕ ಈ ಶೃಂಗದಲ್ಲಿ ಪಾಕಿಸ್ಥಾನವನ್ನು ಸಂಪೂರ್ಣವಾಗಿ ಅವಮಾನಿಸಲಾಗಿದೆ ಎಂಬ ಅಭಿಪ್ರಾಯ ಪಾಕ್ ಮಾಧ್ಯಮ ನಿಯೋಗದಲ್ಲಿ ನೆಲೆಗೊಳ್ಳುವಂತಾಯತು’ ಎಂದು ವರದಿಯು ಹೇಳಿದೆ.
ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ತಾನು ಸಾಕಷ್ಟು ಕೆಲಸ ಮಾಡುತ್ತಿದ್ದೇನೆ ಎಂಬ ಪಾಕಿಸ್ಥಾನದ ಬೊಗಳೆಗೆ ಈ ಶೃಂಗದಲ್ಲಿ ಪರೋಕ್ಷವಾಗಿ ಉತ್ತರ ನೀಡಲಾಯಿತು ಎಂದು ವಿದೇಶೀ ಮಾಧ್ಯಮಗಳು ಹೇಳಿವೆ.