Advertisement
ಟೀವಿಯ ದಿ ಕಾಮೆಡಿ ನೈಟ್ಸ್ ವಿತ್ ಕಪಿಲ್‌ನಲ್ಲಿ ಇತ್ತೀಚೆಗೆ ನವಜೋತ್ ಸಿಂಗ್ ಸಿದ್ಧುವಿನ ಸ್ಥಾನ ತುಂಬಿದ ಅರ್ಚನಾ ಪುರಾನ್ ಸಿಂಗ್ ಕಪಿಲನ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, ತಮಗೆ ಸಿದ್ಧುವಿನ ವೇತನದ ಅರ್ಧಕ್ಕಿಂತ ಕಮ್ಮಿ ವೇತನ ಸಿಗುತ್ತಿದೆ ಎಂದು ವಿಷಾದಿಸಿದಾಗ ಹೊಗೆಯಾಡುತ್ತಿದ್ದ ಸಮಸ್ಯೆ ಮತ್ತೆ ಹತ್ತಿ ಉರಿಯಿತು.
Related Articles
Advertisement
ಯಾಕಾಗಿ ಮಹಿಳೆಯರಿಗೆ ಕಡಿಮೆ ವೇತನ? ಪುರುಷರಷ್ಟು ದೈಹಿಕವಾಗಿ ಮಹಿಳೆ ಶಕ್ತಿವಂತಳಲ್ಲವೆಂದೇ? ಅಥವಾ ಇದು ಪುರುಷ ಸಮಾಜದವರ ತಂತ್ರವೆ?
ಪುರುಷಾಳಿಗೂ ಹೆಣ್ಣಾಳಿಗೂ ವೇತನ ಸಮಸ್ಯೆಕೆಳ ಶ್ರೇಣಿಯ ಕೆಲಸಗಳಲ್ಲಿ ವೇತನ ತಾರತಮ್ಯ ಸಾರಾಸಗಟಾಗಿ ನಡೆಯುತ್ತದೆ, ಪುರುಷರಿಗೆ ದಿನಗೂಲಿ 600 ರೂಪಾಯಿ, ಮಹಿಳೆಯರಿಗೆ 450-500 ರೂಪಾಯಿ. ತಾರತಮ್ಯ ಸ್ಪಷ್ಟ, ಏಕೆ ಹೀಗೆ? ಕಟ್ಟಡದ ಕೆಲಸವೇ ಇರಲಿ, ಕೂಲಿ ಕೆಲಸವೇ ಇರಲಿ ಮಹಿಳೆಯೆಂದು ಸುಲಭದ ಕೆಲಸವನ್ನು, ಪುರುಷರಿಗೆ ಕಷ್ಟದ ಕೆಲಸವೇನೂ ಕೊಡುವುದೂ ಇಲ್ಲ, ಮಾಡುವುದೂ ಇಲ್ಲ. ಕಲ್ಲನ್ನು ಒಡೆಯುವ ಕೆಲಸವನ್ನು ಹೆಂಗಸರೂ ಮಾಡುತ್ತಾರೆ, ಕಾಂಕ್ರೀಟ್ ಕೆಲಸದಲ್ಲೂ ಗಂಡಸರಿಗೆ ಸರಿಸಮಾನವಾಗಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಗಂಡಸರಾದರೆ ಆಗಾಗ ಬೀಡಿ, ಸಿಗರೇಟು ಎಂದು ಅರ್ಧ-ಒಂದು ಗಂಟೆಗೊಮ್ಮೆ ಹತ್ತು ನಿಮಿಷದ ಬಿಡುವು ಮಾಡಿಕೊಳ್ಳುತ್ತಾರೆ. ಮೊನ್ನೆ ರಸ್ತೆಯಲ್ಲಿ ರಿಪೇರಿ ಕೆಲಸ ನಡೆಯುತ್ತಿರಬೇಕಾದರೆ ರಸ್ತೆ ದಾಟಲಾಗದೆ ಸುಮ್ಮನೆ ನಿಲ್ಲಬೇಕಾಗಿ ಬಂತು. ಆಗ ನೋಡಿದ್ದಿಷ್ಟು, 2-3 ಗಂಡಸರು, 2-3 ಹೆಂಗಸರು ಜಲ್ಲಿ ಕಲ್ಲುನ್ನು ಹಾಸುತ್ತ ಬಿಸಿಯಾದ ಟಾರನ್ನು ಸುರಿಯುತ್ತಿದ್ದರು, ಬೇಸಿಗೆಯ ಬಿಸಿಲನ್ನು ಲೆಕ್ಕಿಸದೆ ಗಂಡಸರಿಗೆ ಸರಿಸಮಾನವಾಗಿ ಮಹಿಳೆಯರು ಕೆಲಸ ಮಾಡುತ್ತಿದ್ದರು. ಅದೇ ಸಂಬಳ ಕೇಳಿದರೆ ಗಂಡಸರಿಗಿಂತ ನೂರೋ, ಇನ್ನೂರೋ ಕಡಿಮೆ, ಅಷ್ಟೇ ಅಲ್ಲ, ಎಷ್ಟೋ ಸಲ “ಮಿನಿಮಮ್ ವೇಜಸ್ ಆ್ಯಕ್ಟ್’ನ ಕಾಯಿದೆ ಪ್ರಕಾರ ಇಂತಿಷ್ಟೆಂದು ನಿಗದಿಯಾದ ಸಂಬಳವೂ ಸಿಗುವುದಿಲ್ಲ. ಅಲ್ಲದೆ ಕಾನೂನಿನ ಪ್ರಕಾರ ಮಹಿಳೆಯರಿಗೆ ಹೆರಿಗೆ ರಜಾ, ರಜಾ ಸಂಬಳ ಸಿಗಬೇಕು, ರಾತ್ರಿ ಪಾಳೆಯದಲ್ಲಿರುವ ಹೆಂಗಸರಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಕೊಡಬೇಕು. ಇದು ಎಷ್ಟು ಮಹಿಳಾ ಉದ್ಯೋಗಿಗಳಿಗೆ ಗೊತ್ತು? ಎಷ್ಟು ಮಹಿಳೆಯರಿಗೆ ಸಿಗುತ್ತಿದೆ. ಇದು ಅಸಂಘಟಿತ ವಲಯದ ಕಥೆ. ಮೇಲುನೋಟಕ್ಕೆ ಉನ್ನತ ಮತ್ತು ಮಧ್ಯಮ ಶ್ರೇಣಿಯ ಉದ್ಯೋಗ ಮತ್ತು ವೇತನದಲ್ಲಿ ಪುರುಷ ಮತ್ತು ಮಹಿಳೆಯರಲ್ಲಿ ತಾರತಮ್ಯ ಕಂಡುಬರುವುದಿಲ್ಲ. ಆದರೆ, ಸೂಕ್ಷ್ಮವಾಗಿ ಗಮನಿಸಿದಾಗ ಕ್ರೂರ ಸತ್ಯಗಳು ಹೊರಗೆ ಬರುತ್ತದೆ. ನನ್ನ ಚಿಕ್ಕಮ್ಮನ ಮಗಳು ಸಾಫ್ಟ್ ವೇರ್ ಇಂಜಿನಿಯರ್, ಸಂದರ್ಶನಕ್ಕೆ ಹೋದಾಗ, “ಮದುವೆ ಆಗಿ ಎಷ್ಟು ವರ್ಷ ಆಯಿತು? ಮಕ್ಕಳಿದ್ದಾರೆಯೇ?’ ಎಂದು ಕೇಳಿದರಂತೆ. “ಮಕ್ಕಳಿಲ್ಲ ಸರ್, ಮದುವೆಯಾಗಿ ಮೂರು ವರ್ಷವಾಯಿತು’ ಎಂದಳು. ಕೂಡಲೇ ಸಂದರ್ಶಕ, “ನಿಮಗೆ ಕೆಲಸ ಕೊಟ್ಟರೆ ನಾಳೆ ಆರು ತಿಂಗಳ ಹೆರಿಗೆ ರಜೆ ಮತ್ತು ಸಂಬಳ ಕೊಡಬೇಕಾದ ಪ್ರಮೇಯ ಬರುತ್ತದಲ್ಲವೇ?’ ಎಂದು ಇವಳನ್ನೇ ಕೇಳಿದರಂತೆ. ಇನ್ನು ಕೆಲವು ಕಡೆ ಪುರುಷ ಮತ್ತು ಮಹಿಳೆಯರಲ್ಲಿ ವೇತನ ತಾರತಮ್ಯ ಇಲ್ಲದಿದ್ದರೂ ಬಡ್ತಿ ಕೊಡುವ ಸಂದರ್ಭ ಬಂದಾಗ ಪುರುಷರಿಗೇ ಆದ್ಯತೆ ಕೊಡುವುದನ್ನು ಗಮನಿಸಿದ್ದೇವೆ, ಪಾಪ ಗಂಡಸರು ಮನೆಯ ಜವಾಬ್ದಾರಿ ಇದೆ, ಹೆಂಗಸರಿಗಾದರೆ ಸಂಬಳ, ಪಾಕೆಟ್ ಮನಿ, ಬಟ್ಟೆ, ಒಡವೆಗಾಗಿ ಸಂಬಳವನ್ನು ಖರ್ಚು ಮಾಡುತ್ತಾರೆ ಎನ್ನುವ ಕಿವಿಮಾತುಗಳೂ ತೂರಿ ಬರುತ್ತವೆ. ಅದೇ ಆಫೀಸಿನಲ್ಲಿ ಟಾರ್ಗೆಟ್ ಕೊಡುವಾಗ, ಡೆಡ್‌ಲೈನ್ ಕೊಡುವಾಗ ಗಂಡಸರು, ಹೆಂಗಸರು ಎಂಬ ಭೇದಭಾವವನ್ನು ನಾವು ನೋಡಿಲ್ಲ. ಉನ್ನತ ಶ್ರೇಣಿಯ ಕೆಲಸಗಳಾದ ಡಿಪಾರ್ಟ್‌ಮೆಂಟ್ ಹೆಡ್, ಬ್ರಾಂಚ್ ಮ್ಯಾನೇಜರ್, ಮ್ಯಾನೆಜಿಂಗ್ ಡೈರೆಕ್ಟರ್ ಹುದ್ದೆಗಳಿಗೆ ಬೇಕಾದ ಅನುಭವ, ವಿದ್ಯೆ ಮಹಿಳೆಯರಲ್ಲಿ ಇದ್ದರೂ ಪುರುಷರನ್ನೇ ಆಯ್ಕೆ ಮಾಡುವುದು ಜಾಸ್ತಿ. ಏಕೆ, ಮಹಿಳೆಯರ ಮೇಲೆ ನಂಬಿಕೆ ಇಲ್ಲ, ಅಪ್ಪಿತಪ್ಪಿ ಮಹಿಳೆ ಆಯ್ಕೆ ಆದರೂ ಭತ್ಯೆ, ವೇತನ ಪುರುಷರಿಗೆ ಕೊಟ್ಟಷ್ಟು ಕೊಡುವುದಿಲ್ಲ. ಇವೆಲ್ಲ ಕಂಡೂಕಾಣದಂತೆ ಇರುವ ಹಲವು ವಿಧದ ತಾರತಮ್ಯಗಳು. ಇನ್ನು ಮನರಂಜನೆಯ ಜಗತ್ತಿಗೆ ಬರೋಣ, ನಾಟಕ, ಟೀವಿ, ಸಿನೆಮಾ, ಇಲ್ಲಿ ಡೈರೆಕ್ಟರ್ ಆಗಿರಲಿ, ನಟ, ನಟಿಯರಾಗಿರಲಿ, ಹಾಡುಗಾರರಾಗಿರಲಿ, ಎಲ್ಲ ಕಡೆ ಪುರುಷರಿಗಿಂತ ಮಹಿಳೆಯರಿಗೆ 30-40 ಶತಮಾನವಾದರೂ ಕಡಿಮೆ ವೇತನ. ಅದಕ್ಕಾಗಿ ದೀಪಿಕಾ ಪಡುಕೋಣೆ ಅಂಥವರು ದಿಟ್ಟವಾಗಿ ಎದುರಿಸಿ ನಿಂತು ಪುರುಷರಿಗೆ ಸಮಾನವಾದ ಪಾತ್ರ ಮತ್ತು ಸಂಭಾವನೆಯನ್ನು ಕೇಳುತ್ತಿದ್ದಾರೆ, ಇಲ್ಲದಿದ್ದರೆ ಅಂತಹ ಪಾತ್ರಗಳೇ ಬೇಡ ಎನ್ನುತ್ತಿದ್ದಾರೆ. ಎಲ್ಲಾ ವಿಷಯದಲ್ಲೂ ತಮ್ಮ ಅಭಿಪ್ರಾಯವನ್ನು ಮಂಡಿಸುವ ಸಿನೆಮಾ ಜಗತ್ತು ಇಂತಹ ಸಮಸ್ಯೆಗಳಿಗೆ ಮಾತ್ರ ಮೌನವಾಗಿದೆ. ಇಲ್ಲಿ ಆಶ್ಚರ್ಯದ ಸಂಗತಿಯೆಂದರೆ, ಸ್ವತಃ ಮಹಿಳೆಯರೇ ಮೌನವಾಗಿರುವುದು, ಈ ಮೌನದ ಹಿಂದೆ ಅಸಹಾಯಕತೆ, ಅನಿಶ್ಚಿತತೆ ಅಡಗಿದೆಯೋ ಏನೋ, ಇಂತಹ ಸಮಸ್ಯೆಗಳ ಪರ ನಿಂತರೆ ಮಹಿಳೆ ತೀವ್ರವಾದ ಟೀಕೆಗೂ ಗುರಿಯಾಗುತ್ತಾಳೆ. ತೊಂದರೆಗಳಿಗೆ ಸ್ವರವಾಗುವ ಕಂಗನಾಳನ್ನು ಜನ ಬೆಂಬಲಿಸುವುದಿರಲಿ ಅಂಥವರ ಹೆಸರನ್ನು ಹೇಳುವುದೇ ತಪ್ಪು ಎನ್ನುವವರಿಲ್ಲವೇ? ಪುರುಷರಿರಲಿ, ಎಷ್ಟು ಜನ ಮಹಿಳೆಯರು ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ? ಪುರುಷ, ಮಹಿಳೆಯರೆಲ್ಲರೂ ಸರಿಸಮಾನರು, ಆದರೆ ಸಮಾಜದಲ್ಲೀಗ ಕೆಲವರು ಹೆಚ್ಚು ಸಮಾನರು? ಇದಕ್ಕೆ ಕೊನೆ ಎಂದು? ಗೀತಾ ಕುಂದಾಪುರ