Advertisement
ಚುನಾವಣೆಗೆ ಅಧಿಸೂಚನೆಯಾಗಿ ನಾಮಪತ್ರ ಸಲ್ಲಿಸಲು ವಾರಕ್ಕಿಂತ ಕಡಿಮೆ ಸಮಯ ಇರುವುದರಿಂದ ರಾಜಕೀಯ ಪಕ್ಷಗಳು ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಹಗಲಿರಳು ಸರಣಿ ಸಭೆ ಹಾಗೂ ಅಭಿಪ್ರಾಯ ಕ್ರೋಢಿಕರಿಸಿದರೂ ಎಷ್ಟೇ ಕಸರತ್ತು ನಡೆಸುತ್ತಿದ್ದರೂ ಸರಳವಾಗಿ ಸ್ಪರ್ಧಾ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಆಗುತ್ತಿಲ್ಲ. ಹೀಗಾಗಿ ನಾಮಪತ್ರ ಸಲ್ಲಿಕೆಯ ಕೊನೆ ದಿನವಾದ ಸೋಮವಾರ ಆ. 23ರಂದೇ ನೂಕು ನುಗ್ಗಲು ಎನ್ನುವಂತೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.
ಈಗ ದಿಢೀರ್ ಎದ್ದಿದ್ದು, ಚುನಾವಣೆ ಅಖಾಡಕ್ಕೆ ಧುಮಕುತ್ತಿದ್ದಾರೆ. ಒಂದೊಂದು ವಾರ್ಡ್‌ಗೆ ಕನಿಷ್ಟ ನಾಲ್ಕೈದು ಸ್ಪರ್ಧಾ ಆಕಾಂಕ್ಷಿಗಳಾಗಿದ್ದರಿಂದ ಪಕ್ಷದ ಮುಖಂಡರೂ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಅಭ್ಯರ್ಥಿಗಳನ್ನು ಅಳೆದು ತೂಗಲಾಗುತ್ತಿದೆ. ಚುನಾವಣೆಗೆ ಎಷ್ಟು ಖರ್ಚು ಮಾಡೋ ಹಾಗೆ ಇದ್ದೀರಿ? ಆದಾಯದ ಮೂಲ ಏನು? ಬ್ಯಾಕ್ ಗ್ರೌಂಡ್ ಹೇಗೆ? ಒಳಪಂಗಡ ಯಾವುದು? ಪಕ್ಷಕ್ಕೆ ಯಾವ ರೀತಿ ದುಡಿದಿದ್ದೀರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಕೂಲಂಕುಷವಾಗಿ ಕೇಳಲಾಗುತ್ತಿದೆ. ಹೆಚ್ಚಿನ ಹಣ ಖರ್ಚು ಮಾಡದೇ ಪಾಲಿಕೆ ಸದಸ್ಯನಾಗಿ ಸಮಾಜ ಸೇವೆ ಮಾಡಬೇಕೆನ್ನುವರಿಗೆ ಅಷ್ಟು ಪ್ರಾತಿನಿಧ್ಯತೆ ಕೊಡುತ್ತಿಲ್ಲ ಎನ್ನಲಾಗಿದೆ. ಟಿಕೆಟ್ ಆಕಾಂಕ್ಷಿಗಳಂತೂ ಎಲ್ಲವನ್ನು ತಿಳಿಸಿದರೂ ಕೊನೆ ಘಳಿಗೆಯಲ್ಲಿ ಹೈಕಮಾಂಡ್‌ದಿಂದ ಒತ್ತಡ ಬಂದವರಿಗೆ ಮಣೆ ಹಾಕಲಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
Related Articles
Advertisement
ಕಲಬುರಗಿ ಪಾಲಿಕೆ ಸದಸ್ಯರಾಗುವವರು ಕನಿಷ್ಟ ಪಕ್ಷ ಸ್ಪರ್ಧಾ ವಾರ್ಡ್‌ನಲ್ಲಿ ಕನಿಷ್ಟ 10 ವರ್ಷ ಇರುವುದರ ಜತೆಗೆ ಸೇವಾ ಮನೋಭಾವನೆ ಹೊಂದಿರಬೇಕು. ಈಗ ಎಲ್ಲ ಮರೆಯಾಗಿ ಕೇವಲ ಹಣದ ಖರ್ಚೆ ಮುನ್ನೆಲೆಗೆ ಬರುತ್ತಿದೆ. ಇದು ನಿಜಕ್ಕೂ ಆತಂಕಕಾರಿ ಸಂಗತಿ ಎಂಬುದಾಗಿ ಪ್ರಜ್ಞಾವಂತ ನಾಗರಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ ಶುಕ್ರವಾರ ಕಲಬುರಗಿ ನಗರಕ್ಕೆ ಆಗಮಿಸಿ ಪಕ್ಷದ ಮುಖಂಡರೊಂದಿಗೆ ಪಾಲಿಕೆ ಚುನಾವಣೆ ಕುರಿತಾಗಿ ಚರ್ಚಿಸಿದ್ದಾರೆ. ಶನಿವಾರ ಚುನಾವಣೆ ಸಭೆ ನಡೆಸಲಿದ್ದಾರೆ. ರಾಜ್ಯಾಧ್ಯಕ್ಷರು ಶುಕ್ರವಾರ ವಿಮಾನ ಮೂಲಕ ಕಲಬುರಗಿಗೆ ಆಗಮಿಸಿ ಟಿಕೆಟ್ ಆಕಾಂಕ್ಷಿ ಮನೆಗೆ ತೆರಳಿದ್ದನ್ನು ನೋಡಿದರೆ ಚುನಾವಣೆ ಯಾವ ಮಟ್ಟಿಗೆ ಗಂಭೀರತೆ ಪಡೆದುಕೊಂಡಿದೆ ಎನ್ನುವುದು ನಿರೂಪಿಸುತ್ತದೆ. ಚುನಾವಣೆ ಉಸ್ತುವಾರಿಗಳಂತೂ ನಗರದಲ್ಲಿಯೇ ಠಿಕಾಣಿ ಹೂಡಿ ಚುನಾವಣೆಗೆ ತಂತ್ರಗಾರಿಕೆ ರೂಪಿಸುತ್ತಿದ್ದಾರೆ.