Advertisement

Constitution ನಲ್ಲಿ ಎಷ್ಟು ಪುಟಗಳಿವೆ?: ವಿಪಕ್ಷಗಳಿಗೆ ಅನುರಾಗ್ ಠಾಕೂರ್ ಪ್ರಶ್ನೆ ವೈರಲ್

09:42 AM Jul 03, 2024 | Team Udayavani |

ಹೊಸದಿಲ್ಲಿ: ಲೋಕಸಭಾ ಕಲಾಪದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿ ಇಂಡಿಯಾ ಮೈತ್ರಿಕೂಟದ ಸಂಸದರು ಮುಗಿಬಿದ್ದು ವಾಗ್ದಾಳಿ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿ ಸಂಸದರು ದಿಟ್ಟ ತಿರುಗೇಟು ನೀಡುತ್ತಿದ್ದಾರೆ. ಮಂಗಳವಾರ ನಡೆದ ಕಲಾಪದಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ‘ಸಂವಿಧಾನದಲ್ಲಿ ಎಷ್ಟು ಪುಟಗಳಿವೆ? ಎಷ್ಟು?’ ಎಂದು ವಿಪಕ್ಷಗಳನ್ನು ಪ್ರಶ್ನಿಸಿರುವ ವಿಡಿಯೋ ವೈರಲ್ ಆಗುತ್ತಿದೆ.

Advertisement

ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ಕಿಡಿ ಕಾರಿದ ಠಾಕೂರ್ ‘ಸಂವಿಧಾನದಲ್ಲಿ ಎಷ್ಟು ಪುಟಗಳಿವೆ? ಸಂವಿಧಾನ ಎಷ್ಟು ದಪ್ಪವಾಗಿದೆ ಎಂದು ಹೇಳಬೇಡಿ ಆದರೆ ಪುಟಗಳನ್ನು ತಿಳಿಸಿ. ನೀವು ಅದನ್ನು ಪ್ರತಿದಿನ ಹಿಡಿದುಕೊಂಡು ಬರುತ್ತೀರಿ, ನೀವು ಅದನ್ನು ಕೆಲವೊಮ್ಮೆ ತೆರೆದು ಓದಿದರೆ ಅಡ್ಡಿಲ್ಲ. ನೀವು ಅದನ್ನು ಅಧ್ಯಯನ ಮಾಡುವುದಿಲ್ಲ, ಹಿಡಿದುಕೊಂಡು ಅಲೆದಾಡುತ್ತೀರಿ.ಒಮ್ಮೆ ಜೇಬಿನಿಂದ ತೆಗೆದು ನೋಡಿ’ ಎಂದು ಸವಾಲೆಸೆದರು.

‘ಮೊದಲು ಸಂವಿಧಾನ ರಚಿಸಿದ ವ್ಯಕ್ತಿಯನ್ನು ಅವಮಾನಿಸಿದ್ದರು ಈಗ ಸಂವಿಧಾನ ತೋರಿಸಿದರೂ ಓದುವುದಿಲ್ಲ.ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿರುವುದು ಒಳ್ಳೆಯದು. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕಳೆದ 20 ವರ್ಷಗಳಿಂದ ಜವಾಬ್ದಾರಿಯಿಲ್ಲದೆಯಿದ್ದ ಅವರು ಈಗ ಜವಾಬ್ದಾರಿಯನ್ನೂ ಹೊರಬೇಕಾಗುತ್ತದೆ. ರಾಹುಲ್ ಗಾಂಧಿಗೆ ಇದೊಂದು ಪರೀಕ್ಷೆ. ಅವರು ಪ್ರತಿಪಕ್ಷಗಳನ್ನು ಒಗ್ಗೂಡಿಸಬಲ್ಲರೇ? ಕಳೆದ ಅಧಿವೇಶನದಲ್ಲಿ ಅವರ ಹಾಜರಾತಿ ಶೇಕಡ 50ಕ್ಕಿಂತ ಕಡಿಮೆ ಇತ್ತು ಎಂದರು.

‘ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2014ರಲ್ಲಿ ಸಂಸತ್ತಿಗೆ ಬಂದು ಸಂಸತ್ತಿನ ಮೆಟ್ಟಿಲು ಹಾಗೂ ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ತಲೆಬಾಗಿದ್ದರು. ಕಾಂಗ್ರೆಸ್ ಬಾಯಿಯಿಂದ ಸಂವಿಧಾನ ಉಳಿಸುವ ಮಾತು ಬರುತ್ತಿದೆ. 100 ಇಲಿಗಳನ್ನು ತಿಂದು ಬೆಕ್ಕು ಹಜ್‌ಗೆ ಹೊರಟಂತೆ ಧ್ವನಿಸುತ್ತದೆ’ ಎಂದರು.

Advertisement

ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ನಾಯಕರು ಸಂವಿಧಾನ ಪ್ರತಿಗಳನ್ನು ಹಿಡಿದು ಸಂಸತ್ ಕಲಾಪದಲ್ಲಿ ಭಾಗಿಯಾಗಿದ್ದರು ಮಾತ್ರವಲ್ಲದೆ ಸಂವಿಧಾನ ಉಳಿಸಿ ಎಂಬ ಘೋಷಣೆಗಳ ಮೂಲಕ ಬಿಜೆಪಿ ವಿರುದ್ಧ ನಿರಂತರ ಪ್ರಹಾರ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next