ಬೆಂಗಳೂರು: ನಾನು ಸಾಮಾನ್ಯ ಕೃಷಿ ಸಚಿವ. ಮೂರು ವರ್ಷದಿಂದ ಮಂತ್ರಿಯಾಗಿರುವ ನನ್ನ ಮನೆಯಲ್ಲಿ ಒಂದು ಸಾವಿರ ಕೋಟಿ ಸಿಗಬಹುದು ಎಂದು ಸಿದ್ದರಾಮಯ್ಯ ಹೇಳುವುದಾದರೆ ಅವರು ಐದು ವರ್ಷ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಅವರ ಮನೆಯಲ್ಲಿ ಎಷ್ಟು ಸಾವಿರ ಕೋಟಿ, ಎಷ್ಟು ಲಕ್ಷ ಕೋಟಿ ರೂ ಸಿಗಬಹುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿರುಗೇಟು ನೀಡಿದ್ದಾರೆ.
ಶಾಸಕ ಮಾಡಾಳು ವಿರೂಪಾಕ್ಷಪ್ಪ ಮನೆಯಲ್ಲಿ ಲೋಕಾಯುಕ್ತ ದಾಳಿ ವೇಳೆ ಎಂಟು ಕೋಟಿ ರೂ. ಪತ್ತೆಯಾಗಿತ್ತು. ಅದೇ ಬಿ.ಸಿ. ಪಾಟೀಲ್ ಮನೆಗೆ ದಾಳಿ ನಡೆದರೆ ಸಾವಿರ ಕೋಟಿ ರೂ. ಸಿಗಬಹುದು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಅವರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಬುದ್ಧಿ ಭ್ರಮಣೆಯಾದಂತಿದೆ. ಮುಖ್ಯಮಂತ್ರಿ ಆಗಿದ್ದವರು ಇಷ್ಟು ಕೇವಲವಾಗಿ ಮಾತನಾಡುವುದು ನಾಚಿಕೆಗೇಡು. ನನ್ನ ಉಪಚುನಾವಣೆಯ ಸಂದರ್ಭ ದಲ್ಲಿಯೂ ಸಿದ್ದರಾಮಯ್ಯ ಇದೇ ರೀತಿ ಹೇಳಿಕೆ ನೀಡಿದ್ದರು. ಆದರೆ ಜನರು ತಲೆಕೆಡಿಸಿಕೊಳ್ಳಲಿಲ್ಲ. ಜನರಿಗೆ ಬೋಗಸ್ ಸಿದ್ದರಾಮಯ್ಯ ಎಂಬುದು ಗೊತ್ತಿದೆ ಎಂದು ವಾಗ್ಧಾಳಿ ನಡೆಸಿದರು.