ಹೊಸದಿಲ್ಲಿ: ಸಂಸದರು, ಶಾಸಕರು ಅಥವಾ ಅಧಿಕಾರಿಗಳು ಅಲ್ಲದ ವ್ಯಕ್ತಿಗಳು ಅಥವ ಮಾಜಿಗಳು ಎಷ್ಟು ಸರಕಾರಿ ಬಂಗಲೆಗಳಲ್ಲಿ ವಾಸಿಸುತ್ತಿದ್ದಾರೆ. ಮಾತ್ರವಲ್ಲದೆ ಎಷ್ಟು ಸಮಯದಿಂದ ವಾಸಿಸುತ್ತಿದ್ದಾರೆ ಎಂಬುದರ ಲೆಕ್ಕ ಕೊಡುವಂತೆ ದಿಲ್ಲಿ ಹೈಕೋರ್ಟ್ ಕೇಂದ್ರ ಮತ್ತು ದಿಲ್ಲಿ ಸರಕಾರವನ್ನು ಕೇಳಿದೆ.
ಯಾವುದೇ ಹುದ್ದೆಯಲ್ಲಿರದವರು ಸರಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದು, ಅಂತವರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದೆ. ಸಂಸದರು, ಶಾಸಕರು ಅಥವಾ ಅಧಿಕಾರಿಗಳು ಅಲ್ಲದ ವ್ಯಕ್ತಿಗಳು ಹಲವಾರು ಅಧಿಕೃತ ನಿವಾಸಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಾರೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ಆಧಾರದಲ್ಲಿ ಕೋರ್ಟ್ ಈ ವಿವರಣೆಯನ್ನು ಕೇಂದ್ರದಿಂದ ಬಯಸಿದೆ.
ನ್ಯಾಯಾಂಗ ಅಧಿಕಾರಿಗಳಿಗೆ ಅಧಿಕೃತ ವಸತಿ ಸೌಕರ್ಯವನ್ನು ಕೋರಿ ಹೊಸ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಈ ಕುರಿತಂತೆಯೂ ತಮ್ಮ ನಿಲುವನ್ನು ಕೋರಿ ಹೈಕೋರ್ಟ್ ಕೇಂದ್ರ, ದಿಲ್ಲಿ ಸರಕಾರ ಮತ್ತು ಡಿಡಿಎಗೆ ನೋಟಿಸ್ ಜಾರಿಗೊಳಿಸಿದೆ. ಫೆಬ್ರವರಿ 5ರಂದು ಈ ಎರಡೂ ಪ್ರಕರಣಗಳಿಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಯಲಿದೆ.
ಇತ್ತೀಚೆಗೆ ಸಲ್ಲಿಸಲಾದ ವಕೀಲರ ಮನವಿಯಲ್ಲಿ ಹಲವು ನ್ಯಾಯಾಂಗ ಅಧಿಕಾರಿಗಳಿಗೆ ಅಧಿಕೃತ ನಿವಾಸವಿಲ್ಲ, ಈ ಕಾರಣದಿಂದಾಗಿ ಅವರು ದೂರದ ಸ್ಥಳಗಳಲ್ಲಿ ಬಾಡಿಗೆಗೆ ವಸತಿ ಸೌಕರ್ಯವನ್ನು ಪಡೆಯುತ್ತಿದ್ದಾರೆ. ನ್ಯಾಯಾಂಗ ಅಧಿಕಾರಿಗಳಿಗೆ ಮಾತ್ರವಲ್ಲದೇ ದಾವೆ ಹೂಡುವವರು, ಆರೋಪಿಗಳು, ವಕೀಲರು ಮತ್ತು ಪೊಲೀಸ್ ಅಧಿಕಾರಿಗಳಿಗೂ ಇದರಿಂದ ತೊಂದರೆಯಾಗುತ್ತಿದೆ ಎಂದು ಪಿಐಎಲ್‌ನಲ್ಲಿ ತಿಳಿಸಲಾಗಿದೆ.
ಮೇ 21, 2019ರ ಅಧಿಸೂಚನೆಯ ಅನ್ವಯ 126 ಹೊಸ ನ್ಯಾಯಾಂಗ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆದರೆ ಅವರಿಗೆ ಯಾವುದೇ ಸರಕಾರಿ ವಸತಿ ಸೌಕರ್ಯಗಳು ಲಭ್ಯವಿಲ್ಲ ಎಂಬುದನ್ನೂ ಮನವಿಯಲ್ಲಿ ತಿಳಿಸಲಾಗಿದೆ, ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಯಲ್ಲಿ ಲಭ್ಯವಿರುವ ಸುಮಾರು 140 ಸಿಡಬ್ಲ್ಯುಜಿ ಫ್ಲ್ಯಾಟ್ ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸುವ ಮೂಲಕ ದಿಲ್ಲಿ ನ್ಯಾಯಾಂಗ ಅಧಿಕಾರಿಗಳಿಗೆ ಅಧಿಕೃತ ವಸತಿ ಸೌಕರ್ಯವನ್ನು ಒದಗಿಸುವಂತೆ ಕೇಂದ್ರ ಮತ್ತು ದಿಲ್ಲಿ ಸರಕಾರಕ್ಕೆ ನಿರ್ದೇಶನ ನೀಡಿದ್ದು, ತಮ್ಮ ಅಭಿಪ್ರಾಯ ತಿಳಿಸುವಂತೆ ಕೋರ್ಟ್ ಹೇಳಿದೆ.