ನಿನ್ನ ನೆನಪು, ಬೆರಳು ತಾಕಿದ ವೀಣೆಯಂತೆ, ಅಂತರಾಳದ ನಿಲ್ದಾಣವೊಂದರಲ್ಲಿ ಕಂಪಿಸುತ್ತಾ, ಮತ್ತೂಂದು ಸ್ಪರ್ಶಕ್ಕಾಗಿ ಕಾಯುತ್ತಾ ಉಳಿಯುತ್ತದೆ. ಅಂಥ ಸವಿನೆನಪುಗಳ ಸಿಹಿಗಾಳಿಯನ್ನು ಉಸಿರಾಡಿಕೊಂಡೇ ಹಿಂದೆಯೂ ಬದುಕಿದ್ದೆ. ಈಗಲೂ ಬದುಕಿದ್ದೇನೆ…
ಮಾತಾಗದ ಮೌನವೇ, ಎಷ್ಟು ಮಾತಾಡಿದರೂ ಹೇಳದೇ ಉಳಿದುಹೋದ ಮಾತು, ಎದೆಯೊಳಗೆ ನೋವು ನೀಡಿದಷ್ಟೇ ಆಳವಾಗಿ ಮಧುರವಾಗುತ್ತಾ ಆವರಿಸಿಕೊಂಡಿತ್ತು. ಇಂದಿಲ್ಲ ನಾಳೆ ಒಳಪುಟದ ಅಕ್ಷರಗಳಿಗೆ ನವಿರು ಶಬ್ದಗಳು ದಕ್ಕಿ, ನಿನ್ನೆದುರು ಉಕ್ಕಿ ಬರುತ್ತವೆನ್ನುವ ನಿರೀಕ್ಷೆಯಲ್ಲಿ ಎಂಥದ್ದೋ ಅನೂಹ್ಯ ಸಂಭ್ರಮವೊಂದು ಅಡಗಿ ಕುಳಿತಿತ್ತು. ಅದೆಷ್ಟೇ ಹರಟೆ ಕೊಚ್ಚುತ್ತಿದ್ದರೂ, ಒಮ್ಮೊಮ್ಮೆ ಕಿರುಬೆರಳು ತಾಕಿದೊಡನೆ ಇಬ್ಬರೂ ಸ್ತಬ್ಧರಾಗಿ, ಒಂದು ಕ್ಷಣ ಮಾತೇ ಮುಗಿದು ಹೋದವರಂತೆ ನಡೆಯುತ್ತ ಸಾಗಿ ಬಿಡುತ್ತಿದ್ದೆವು.
ಆಗ ಮತ್ತೆ ಮಾತು ಆರಂಭಿಸುವುದೇ ಕಷ್ಟವಾಗುತ್ತಿತ್ತು. ನೂರು ಮಾತುಗಳು ಒಮ್ಮೆಗೇ ನುಗ್ಗಿ ಬಂದಂತಾಗಿ ಮನಸು ಮೂಕ ಮೂಕ. ಅಂತ ಘಳಿಗೆಗಳಲ್ಲಿ ನಿನ್ನ ಮೌನವೂ ಅಲ್ಲದ, ಮಾತೂ ಅಲ್ಲದ ಭಾವವೊಂದು ನಗೆಯಾಗಿ, ಮುಗುಳುನಗೆಯಾಗಿ ಹೊಮ್ಮುತ್ತಿತ್ತು. ಆ ಗುಳಿಬಿದ್ದ ಕೆನ್ನೆಯ ರಂಗೇರಿದ ನಯ ನಂಗೆ ಇಷ್ಟವಾಗುತ್ತಿತ್ತು. ಮುಗುಳ್ನಗೆಗಿಂತ, ಸಾವಿರ ಮಾತುಗಳನ್ನು ಹಿಡಿದಿಟ್ಟ ನಿನ್ನ ಮೌನ ಪ್ರಾಣ ಹೋಗುವಷ್ಟು ಇಷ್ಟವಾಗುತ್ತಿತ್ತು. ಈಗ ಇದೆಲ್ಲ ನೆನಪಿನ ಸರಕು. ದಿಕ್ಕೇ ತೋಚದೆ ಚಲಿಸುತ್ತಿದೆ ಬದುಕು..
ಒಂದು ವಿದಾಯ ಕೂಡ ಹೇಳಲಾಗದೇ ನಾ ದೂರಾಗಿ…. ನೀ ಬಿಟ್ಟುಹೋಗಿ ಎಷ್ಟು ವರ್ಷವಾಯ್ತು? ನನಗೆ ನಾನೇ ವಿನಾಕಾರಣ ಪ್ರಶ್ನೆ ಕೇಳಿಕೊಳ್ಳುತ್ತೇನೆ. ಉತ್ತರ ಸಿಗುವುದಿಲ್ಲ. ನೀ ವಾಪಸ್ಸು ಬರಲಾರೆ ಅಂತ ಗೊತ್ತಿದ್ದೂ, ಸುಮ್ಮಸುಮ್ಮನೆ ಬೆರಳುಗಳ ಮಡಚಿ ಲೆಕ್ಕ ಹಾಕುತ್ತೇನೆ. ನನ್ನಿಷ್ಟದ ಯಾವುದೋ ಹಾಡಿನ ಸಾಲು ಕಿವಿ ತಲುಪಿ ಎದೆಯಾಳಕ್ಕಿಳಿದಾಗ, ಗಕ್ಕನೆ ನಿಂತಲ್ಲೇ ಅರೆಘಳಿಗೆ ನಿಂತು ಹೊರಡುತ್ತೇನೆ.
ಒಮ್ಮೊಮ್ಮೆ ಕಣ್ಣು ಹನಿಗೂಡಿ ಮುತ್ತಿನಂಥ ಹನಿಗಳು ಕೆನ್ನೆಗಿಳಿದು ಬಿಡುತ್ತವೆ. ನಿನ್ನ ನೆನಪುಗಳಿಗೊಡ್ಡಿಕೊಂಡ ನನ್ನನ್ನು ನಾನೇ ಸಂತೈಸಿಕೊಂಡು ಒಂದು ಬಿಕ್ಕು ಬಂದು ಎದೆ ತಟ್ಟುವ ಮೊದಲೇ, ನಕ್ಕು ಹಗುರಾಗುವ ಕಲೆಯನ್ನು, ಸದಾ ಬೇಯಿಸುತ್ತಲೇ ಇರುವ ಈ ಬದುಕು ಕಲಿಸಿಬಿಟ್ಟಿದೆ. ನಿನ್ನ ನೆನಪುಗಳಿಂದಷ್ಟೇ ನನ್ನೊಳಗೊಬ್ಬ ಮನುಷ್ಯ ಇವತ್ತಿಗೂ ಜೀವಂತವಿದ್ದಾನೆ. ಅವನಿಗೆ ನಿರೀಕ್ಷೆಗಳಿಂದಾಗುವ ನೋವುಗಳ ಅರಿವಿದೆ.
ಆದರೂ, ಒಮ್ಮೊಮ್ಮೆ ಅದನ್ನು ತಂತಾನೇ ಮರೆತು ಅವನೊಳಗಿನ ನಿನ್ನನ್ನು ಕಾಯುತ್ತಾ ಇರುಳು ಕಳೆದುಬಿಡುತ್ತಾನೆ. ಮತ್ತೆ ಹಗಲಾದರೆ ವಾಸ್ತವ ಹೆಗಲು ತಬ್ಬುತ್ತದೆ.ಈ ಮನಸಿಗೆ ಅದೆಷ್ಟು ಬುದ್ಧಿ ಹೇಳಿದರೂ, ಹೃದಯದ ಸುಪ್ತ ಪಿಸುಮಾತೇ ಅದಕ್ಕೆ ಆಪ್ತ. ಇನ್ನು ನಿನಗಾಗಿ ಕಾಯುವುದರಲ್ಲಿ ಏನಾದರೂ ಅರ್ಥವಿದೆಯಾ ಅಂತ ಯೋಚನೆಗೆ ಬೀಳುತ್ತೇನೆ.
ಆದರೆ ನನಗೆ ಬದುಕಲು ಇರುವ ಒಂದೇ ಒಂದು ಮುದ್ದಾದ ಏಕಮೇವ ಸ್ವಾರ್ಥವೆಂದರೆ ಅದೊಂದೇ ಅಲ್ಲವಾ ಅನ್ನಿಸಿ ನಕ್ಕು ಸುಮ್ಮನಾಗುತ್ತೇನೆ. ನಿನ್ನ ನೆನಪು ಬೆರಳು ತಾಕಿದ ವೀಣೆಯಂತೆ, ಅಂತರಾಳದ ನಿಲ್ದಾಣವೊಂದರಲ್ಲಿ ಕಂಪಿಸುತ್ತಾ, ಮತ್ತೂಂದು ಸ್ಪರ್ಶಕ್ಕಾಗಿ ಕಾಯುತ್ತಾ ಉಳಿಯುತ್ತದೆ. ಅಂಥ ಸವಿನೆನಪುಗಳ ಸಿಹಿಗಾಳಿಯನ್ನು ಉಸಿರಾಡಿಕೊಂಡೇ ಹಿಂದೆಯೂ ಬದುಕಿದ್ದೆ. ಈಗಲೂ ಬದುಕಿದ್ದೇನೆಹೀಗೆ ಈ ಬದುಕು ಸಾಗಿದೆ.
ಚಿರ ವಿರಹಿ
ಜೀವ ಮುಳ್ಳೂರು