“ರುಚಿ ಹೆಚ್ಚು’ ಅಥವಾ “ರುಚಿ ಕಡಿಮೆ’ ಎಂದು ಹೇಳುವ ಹಾಗಿಲ್ಲ. ಏಕೆಂದರೆ ಹಾವಿನ ಮೊಟ್ಟೆಯನ್ನು ಇಷ್ಟಪಟ್ಟು ಬಾಯಲ್ಲಿ ನೀರೂರಿಸಿಕೊಂಡು ಚಪ್ಪರಿಸುವ ಪದ್ಧತಿ ಭಾರತದಲ್ಲಿಲ್ಲ. ಇದ್ದರೂ ಬುಡಕಟ್ಟು ಪಂಗಡಗಳಲ್ಲಿರಬಹುದಷ್ಟೇ. ಆದರೆ ಆಫ್ರಿಕಾ ಖಂಡ ಮತ್ತು ಇತರೆ ಕಲೆ ದೇಶಗಳಲ್ಲಿ ನಿರ್ದಿಷ್ಟ ಜಾತಿಗೆ ಸೇರಿದ ಹಾವಿನ ಮೊಟ್ಟೆಯನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ರುಚಿಯ ವಿಷಯವನ್ನು ಬದಿಗಿಟ್ಟು ಉತ್ತರಿಸುವುದಾದರೆ ಇಲ್ಲಿ ಕೇಳಿ. ಈಗ ನೀವೊಂದು ಸಾಹಿತ್ಯ ಸಮಾರಂಭದಲ್ಲಿ ಆಸೀನರಾಗಿದ್ದೀರಿ ಎಂದು ಭಾವಿಸೋಣ. ನಿಮಗೆ ಹಿರಿಯ ಸಾಹಿತಿಯ ಮಾತು ಕೇಳಬಹುದಲ್ವಾ ಎಂದು ನೆಮ್ಮದಿಯ ಉಸಿರು ಬಿಡುವಷ್ಟರಲ್ಲಿ ಅದೆಲ್ಲಿಂದಲೋ ಕವಿ ಪುಂಗವನ ಆಗಮನವಾಗುತ್ತದೆ. ಆತ ತನ್ನ ಕವನಗಳನ್ನು ವಾಚಿಸಲು ತಂದ ಪುಸ್ತಕದ ಗಾತ್ರವನ್ನು ಕಂಡೇ ನೀವು ಭಯ ಬೀಳುತ್ತೀರಿ. ಈ ಸಮಯದಲ್ಲಿ ನಿಮಗೆ ಮೊಟ್ಟೆ ಎಸೆದು ಬಿಡಬೇಕೆನಿಸುವಷ್ಟು ಕೋಪ ಬರುತ್ತದೆ! ಹಾವಿನ ಮೊಟ್ಟೆ ಎಸೆದರೆ ಹೂವನ್ನು ಎಸೆದಂತೆ, ಅದು ಒಡೆಯುವುದಿಲ್ಲ. ಆದ್ದರಿಂದ ಇಂಥ ಪ್ರತಿಕೂಲ ಸಂದರ್ಭಗಳಲ್ಲಿ ಇದರ ಬಳಕೆ ಸೂಕ್ತವಲ್ಲ. ಎಸೆದರೆ ಒಡೆದು ಪಚಕ್ಕೆಂದು ಅಂಟು ದ್ರವವನ್ನೆಲ್ಲಾ ಒಸರುವ ಕೋಳಿ ಮೊಟ್ಟೆ ಇಂಥ ಸಂದರ್ಭಗಳಿಗೆ ಹೇಳಿ ಮಾಡಿಸಿದ್ದು! ಹಾವಿನ ಮೊಟ್ಟೆಯ ಹೊರಕವಚ ಲೋಳೆಯಂಥಾ, ರಬ್ಬರ್ ಗುಣವಿರುವ ಪದಾರ್ಥದಿಂದ ರೂಪಿಸಲ್ಪಟ್ಟಿದೆ. ಹಾಗಾಗಿ ಅದು ಒಡೆಯದು, ಆ ಪದರ ಒಳಗಿರುವುದನ್ನು ರಕ್ಷಿಸುತ್ತದೆ.
ಹಾವಿನಮರಿ ಬೆಳೆಯುತ್ತಿದ್ದಂತೆ ಮೊಟ್ಟೆಯೂ ತನ್ನ ಗಾತ್ರವನ್ನು ಹಿಗ್ಗಿಸಿಕೊಳ್ಳುತ್ತದೆ ಬಲೂನಿನಂತೆ. ಕಾಡಿನ ಪೊಟರೆ, ಬಿಲ ಮುಂತಾದ ಸಂದುಗೊಂದುಗಳಲ್ಲಿನ ಘರ್ಷಣೆ, ಅವಘಡಗಳಿಂದ ಹಾವಿನಮರಿಯನ್ನು ರಕ್ಷಿಸಲು ಪ್ರಕೃತಿಯೇ ರೂಪಿಸಿದ ಅತ್ಯುತ್ತಮ ರಕ್ಷಣಾವ್ಯವಸ್ಥೆಯಿದು.