Advertisement

ಮೊಬೈಲು ಇಷ್ಟು ಲೈಟಾದ್ರೆ ಹೇಗೆ ಸ್ವಾಮಿ!

08:03 PM Jan 26, 2020 | Lakshmi GovindaRaj |

ಒಂದು ವರ್ಷದ ಹಿಂದೆ ಗೆಲಾಕ್ಸಿ ಎಸ್‌10 ಎಂಬ ಲಕ್ಷ ರೂ. ದರದ ಫೋನ್‌ ನೀಡಿದ್ದ ಸ್ಯಾಮ್‌ಸಂಗ್‌ ಈಗ ಸರಿಸುಮಾರು ಅತ್ಯುನ್ನತ ದರ್ಜೆಯ ಫೋನ್‌ನ ವೈಶಿಷ್ಟ್ಯಗಳನ್ನೇ ನೀಡಿ ಎಸ್‌10 ಲೈಟ್‌ ಎಂಬ ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಫೆ. 3ರಿಂದ ಇದು ಮಾರಾಟಕ್ಕೆ ಲಭ್ಯವಾಗಲಿದೆ.

Advertisement

ಸ್ಯಾಮ್‌ಸಂಗ್‌ ಬ್ರಾಂಡಿನ ಗೆಲಾಕ್ಸಿ ಎಸ್‌ 10, ಎಸ್‌10 ಪ್ಲಸ್‌ ಮೊಬೈಲ್‌ ಅದರ ಫ್ಲಾಗ್‌ಶಿಪ್‌ (ಅತ್ಯುನ್ನತ) ಫೋನ್‌ ಆಗಿದ್ದು, ವರ್ಷದ ಹಿಂದೆ ಬಿಡುಗಡೆಯಾಗಿತ್ತು. ಆ ಮಾಡೆಲ್‌ಗ‌ಳಲ್ಲಿ ಅತ್ಯಂತ ಹೆಚ್ಚು ವೈಶಿಷ್ಟ್ಯವುಳ್ಳ ಆವೃತ್ತಿಯ ಬೆಲೆ 1.14 ಲಕ್ಷ ರೂ. ಇತ್ತು! ಹಾಗಾಗಿ ಗೆಲಾಕ್ಸಿ ಎಸ್‌10 ಸರಣಿ ಎಂದರೆ ಅದು ಸಾಮಾನ್ಯ ಗ್ರಾಹಕರ ಕೈಗೆಟುಕುವುದಿಲ್ಲ ಎಂದುಕೊಳ್ಳಬೇಕಾಗಿತ್ತು. ಸಾಮಾನ್ಯವಾಗಿ ಸ್ಯಾಮ್‌ಸಂಗ್‌ನ ಫ್ಲಾಗ್‌ಶಿಪ್‌ ಫೋನ್‌ಗಳು ಮತ್ತು ಆಪಲ್‌ ಫೋನ್‌ಗಳು ಶ್ರೀಮಂತರ ಪ್ರತಿಷ್ಠೆಯ ಫೋನ್‌ಗಳು.

ಸ್ಯಾಮ್‌ಸಂಗ್‌ ಸಾಮಾನ್ಯವಾಗಿ ಒಂದು ಮಾಡೆಲ್‌ ಜನಪ್ರಿಯವಾದರೆ ಅದೇ ಹೆಸರಿಗೆ ಎಸ್‌, ಪ್ರೊ, ಇತ್ಯಾದಿ ಸೇರಿಸಿ ಇನ್ನೊಂದು ಫೋನನ್ನು ಮಾರುಕಟ್ಟೆಗೆ ಬಿಡುತ್ತದೆ. ಸ್ಪೆಸಿಫಿಕೇಷನ್‌ಗಳು ಬದಲಾಗಿರುತ್ತದೆ. ಆದರೆ ಹೆಸರು ಹಿಂದಿನ ಫೋನಿನದ್ದೇ ಇರುತ್ತದೆ. ಹಿಂದಿನ ಜನಪ್ರಿಯ ಫೋನ್‌ನ ಹೆಸರನ್ನು ಹೊಸ ಫೋನಿನಲ್ಲೂ ನಗದೀಕರಿಸಿಕೊಳ್ಳಲು ಹೀಗೆ ಮಾಡಲಾಗುತ್ತದೆ.

ಪ್ರೀ ಆರ್ಡರ್‌ ಶುರು: ಸ್ಯಾಮ್‌ಸಂಗ್‌, ಗೆಲಾಕ್ಸಿ ಎಸ್‌ 10 ಲೈಟ್‌ ಎಂಬ ಹೊಸ ಫೋನನ್ನು ಫೆಬ್ರವರಿ 3ರಿಂದ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇದು ಫ್ಲಾಗ್‌ಶಿಪ್‌ ಗುಣವಿಶೇಷಣಗಳನ್ನೇ ಒಳಗೊಂಡಿದೆ. ಒನ್‌ಪ್ಲಸ್‌, ಶಿಯೋಮಿ ಕಂಪೆನಿಗಳು ಒಂದು ಹಂತಕ್ಕೆ ಕೈಗೆಟುಕುವ ದರಕ್ಕೆ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿರುವುದರಿಂದ ಸ್ಯಾಮ್‌ಸಂಗ್‌ ಸಹ ಆನ್‌ಲೈನ್‌ ಮಾರಾಟದ ಮೂಲಕ ಸ್ಪರ್ಧಾತ್ಮಕ ದರದಲ್ಲಿ ಎಸ್‌10 ಲೈಟ್‌ ನೀಡಲು ಹೊರಟಿದೆ.

ಎಸ್‌10 ಕೈಗೆಟುವುದಿಲ್ಲ ಎಂದುಕೊಳ್ಳುವ ಗ್ರಾಹಕರಿಗಾಗಿ ಈ ಫೋನ್‌ ಹೊರತಂದಿದೆ. ಈ ಫೋನಿನ ದರ 40 ಸಾವಿರ ರೂ. ಫ್ಲಿಪ್‌ಕಾರ್ಟ್‌ ಮತ್ತು ಸ್ಯಾಮ್‌ಸಂಗ್‌.ಕಾಮ್‌ ನಲ್ಲಿ ಮಾತ್ರ ಲಭ್ಯವಾಗಲಿದೆ. ಗ್ರಾಹಕರಿಗೆ ಫೆ. 3 ರಿಂದ ಲಭ್ಯವಾದರೂ, ಫ್ಲಿಪ್‌ಕಾರ್ಟ್‌ನಲ್ಲಿ ಮುಂಚೆಯೇ (ಪ್ರೀ ಆರ್ಡರ್‌) ಆರ್ಡರ್‌ ಮಾಡಬಹುದಾಗಿದೆ.

Advertisement

ಆರಂಭಿಕ ಕೊಡುಗೆಯಾಗಿ 2000 ಸಾವಿರ ರೂ. ಹೆಚ್ಚುವರಿಯಾಗಿ ನೀಡಿದರೆ ಒಮ್ಮೆ ಸ್ಕ್ರೀನ್‌ ರೀಪ್ಲೇಸ್‌ಮೆಂಟ್‌ ಆಫ‌ರ್‌ ಸಹ ಇದೆ. ಐಸಿಐಸಿಐ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ 3 ಸಾವಿರ ರೂ. ತಕ್ಷಣದ ಕ್ಯಾಶ್‌ಬ್ಯಾಕ್‌ ಕೂಡ ದೊರಕಲಿದೆ. ನಿಮ್ಮ ಹಳೆಯ ಮೊಬೈಲ್‌ ಎಕ್ಸ್‌ಚೇಂಜ್‌ ಮಾಡಿದರೆ ಹೆಚ್ಚುವರಿ 3 ಸಾವಿರ ರೂ. ಮೌಲ್ಯ ನೀಡಲಾಗುತ್ತದೆ. ಬಿಳಿ, ಕಪ್ಪು ಮತ್ತು ನೀಲಿ ಬಣ್ಣದಲ್ಲಿ ಫೋನು ಲಭ್ಯವಿದೆ.

ಈ ಫೋನಿನಲ್ಲಿ ಏನೇನೆಲ್ಲಾ ಇದೆ?
ರ್ಯಾಮ್‌ ಮತ್ತು ರೋಮ್‌: ಗೆಲಾಕ್ಸಿ ಎಸ್‌ 10 ಲೈಟ್‌ 8 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹದ ಒಂದೇ ಆವೃತ್ತಿ ಬಿಡುಗಡೆ ಮಾಡಲಾಗುತ್ತಿದೆ. 6 ಜಿಬಿ ರ್ಯಾಮ್‌ ಆವೃತ್ತಿ ಸಹ ಇದ್ದು ಸದ್ಯ ಭಾರತಕ್ಕೆ ಬಿಡುಗಡೆ ಮಾಡುತ್ತಿಲ್ಲ. ಇದು ಎರಡು ಸಿಮ್‌ ಸೌಲಭ್ಯ ಹೊಂದಿರುತ್ತದೆ. ಅಂಡ್ರಾಯ್ಡ 10 ಆವೃತ್ತಿ ದೊರಕಲಿದೆ. ಇದಕ್ಕೆ ಸ್ಯಾಮ್‌ಸಂಗ್‌ನ ಒನ್‌ ಯುಐ ಬೆಂಬಲವಿದೆ. ಈ ಫೋನು 187 ಗ್ರಾಂ ತೂಕವಿದೆ.

ಪರದೆ: ಇದರ ಪರದೆ 6.7 ಇಂಚಿನದು. ಫ‌ುಲ್‌ ಎಚ್‌ಡಿ ಪ್ಲಸ್‌ (1080×2400 ಪಿಕ್ಸಲ್ಸ್‌) ಸೂಪರ್‌ ಅಮೋಲೆಡ್‌ ಪ್ಲಸ್‌ ಡಿಸ್‌ ಪ್ಲೇ ಹೊಂದಿದೆ. ಮಧ್ಯದಲ್ಲಿ ಪಂಚ್‌ ಹೋಲ್‌ (ಸೆಲ್ಫಿ ಕ್ಯಾಮರಾಗಾಗಿ) ವಿನ್ಯಾಸ ಇದೆ. ಪಾಪ್‌ಅಪ್‌ ಕ್ಯಾಮರಾ ಕ್ರೇಜ್‌ ಹೋಗಿ, ಎಲ್ಲ ಕಂಪೆನಿಗಳು ಈಗ ಪಂಚ್‌ ಹೋಲ್‌ ಡಿಸ್‌ಪ್ಲೇಗೇ ಮರಳುತ್ತಿವೆ. ಸುಪರ್‌ ಅಮೋಲೆಡ್‌ ಎಂದ ಮೇಲೆ ಕೇಳುವಂತಿಲ್ಲ. ಅದರಲ್ಲಿ ಮೂಡಿಬರುವ ಚಿತ್ರಗಳು, ವಿಡಿಯೋಗಳು ನೋಡಲು ಬಹಳ ಆಕರ್ಷಕವಾಗಿ ಕಾಣುತ್ತವೆ. ಅಮೋಲೆಡ್‌ ಪರದೆ ನೀಡುವಲ್ಲಿ ಸ್ಯಾಮ್‌ಸಂಗ್‌ ಸದಾ ಮುಂದಿದೆ.

ಪ್ರೊಸೆಸರ್‌: ಸ್ಪರ್ಧೆಗೆ ನಿಲ್ಲಲೇಬೇಕಾದ ಅನಿವಾರ್ಯತೆಯಲ್ಲಿರುವ ಸ್ಯಾಮ್‌ಸಂಗ್‌ ಈ ಫೋನಿಗೆ ಕ್ಯಾಲ್‌ಕಾಂ ಸ್ನಾಪ್‌ಡ್ರಾಗನ್‌ 855 ಪ್ರೊಸೆಸರ್‌ ಅಳವಡಿಸಿದೆ. ಇದು ಎಂಟು ಕೋರ್‌ಗಳ (2.8 ಗಿಗಾಹಟ್ಜ್) ಅತ್ಯುನ್ನತ ದರ್ಜೆಯ ಪ್ರೊಸೆಸರ್‌. ತನ್ನ ತಯಾರಿಕೆಯ ಎಕ್ಸಿನಾಸ್‌ ಅನ್ನು ಸ್ಯಾಮ್‌ಸಂಗ್‌ ಇದರಲ್ಲಿ ಹಾಕಿಲ್ಲ. ಸ್ನಾಪ್‌ಡ್ರಾಗನ್‌ ಬಹಳ ಜನಪ್ರಿಯವಾಗಿರುವುದರಿಂದ ಅದನ್ನೇ ಅಳವಡಿಸಿದೆ.

ಬ್ಯಾಟರಿ: ಇದರಲ್ಲಿ 4500 ಎಂಎಎಚ್‌ ಬ್ಯಾಟರಿ ಇದೆ. ಇದಕ್ಕೆ ಸೂಪರ್‌ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. 25 ವ್ಯಾಟ್‌ನ ಚಾರ್ಜರ್‌ ನೀಡಲಾಗಿದೆ. ಎರಡು ದಿನ ಬ್ಯಾಟರಿ ಬರುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಆದರೆ ಇಂದಿನ ಮೊಬೈಲ್‌ ಬಳಕೆಯ ಪ್ರಮಾಣ ನೋಡಿದಾಗ ಒಂದು ದಿನ ಪೂರ್ತಿ ಬಂದರೆ ಅದೇ ಉತ್ತಮ ಬ್ಯಾಟರಿ ಎಂಬಂತಾಗಿದೆ.

ಕ್ಯಾಮರಾ: ಗೆಲಾಕ್ಸಿ ಎಸ್‌ 10 ಲೈಟ್‌ ಮೊಬೈಲಿನಲ್ಲಿ ಮೂರು ಲೆನ್ಸ್‌ಗಳ ಹಿಂಬದಿ ಕ್ಯಾಮರಾ ಇದೆ. 48 ಮೆಗಾಪಿಕ್ಸಲ್‌ ಮುಖ್ಯ ಲೆನ್ಸ್‌. 12 ಮೆಗಾ ಪಿಕ್ಸಲ್‌ ಅಲ್ಟ್ರಾ ವೈಡ್‌ ಲೆನ್ಸ್‌ ಮತ್ತು 5 ಮೆಗಾ ಪಿಕ್ಸಲ್‌ನ ಮ್ಯಾಕ್ರೋ ಲೆನ್ಸ್‌ ನೀಡಲಾಗಿದೆ. ಮುಂಬದಿಗೆ 32 ಮೆಗಾಪಿಕ್ಸಲ್‌ನ ಕ್ಯಾಮರಾ ಇದೆ. ಹಿಂಬದಿ ಕ್ಯಾಮರಾ ಆಪ್ಟಿಕಲ್‌ ಇಮೇಜ್‌ ಸ್ಟೆಬಿಲೈಜೇಶನ್‌ (ಓಐಎಸ್‌) ಹೊಂದಿದೆ. ಇದು ಕ್ಯಾಮರಾ ಮತ್ತು ವಿಡಿಯೋ ಎರಡಕ್ಕೂ ಲಭ್ಯವಾಗುತ್ತದೆ. ಓಐಎಸ್‌ ಇದ್ದಾಗ ಫೋಟೋಗಳಲ್ಲಿ ಮಸುಕಾದ ಚಿತ್ರ ಬರುವುದಿಲ್ಲ.

ಉದಾ: ವ್ಯಕ್ತಿಯ ಫೊಟೋ ಸೆರೆ ಹಿಡಿದಾಗ ಆತನ ಕೈ ಆಡಿಸಿದರೆ ಸಾಮಾನ್ಯ ಮೊಬೈಲ್‌ಗ‌ಳಲ್ಲಿ ಆ ಕೈ ಮಸುಕಾಗಿ, ಅಸ್ಪಷ್ಟವಾಗಿ ಮೂಡುತ್ತದೆ. ಓಐಎಸ್‌ ಇದ್ದಾಗ ಬೀಸಿದ ಕೈ ಸಹ ಸ್ಪಷ್ಟವಾಗಿ ಕಾಣುತ್ತದೆ. ಸಾಮಾನ್ಯವಾಗಿ ಸ್ಯಾಮ್‌ಸಂಗ್‌ ಫೋನ್‌ಗಳಲ್ಲಿ ಕ್ಯಾಮರಾ ಚೆನ್ನಾಗಿರುತ್ತದೆ. ಮಧ್ಯಮ ದರ್ಜೆಯ ಫೋನ್‌ಗಳಲ್ಲಿ ತೃಪ್ತಿಕರ ಫೊಟೋ ಬರುತ್ತದೆ. ಹೀಗಾಗಿ ಇದು ಹೆಚ್ಚಿನ ದರದ ಫೋನಾದ್ದರಿಂದ ಕ್ಯಾಮರಾ ಚೆನ್ನಾಗಿರುತ್ತದೆ ಎನ್ನಲಡ್ಡಿಯಿಲ್ಲ.

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next