ರೈಲಿನಲ್ಲೋ, ಬಸ್‌ನಲ್ಲೋ ಪ್ರಯಾಣ ಮಾಡುವಾಗ ಕುಡಿಯಲೆಂದು ನೀರು ಕೊಳ್ಳುತ್ತೇವೆ. ನೀರು ಖಾಲಿಯಾದ ಮೇಲೆ ಹೆಚ್ಚಿನವರು ಆ ಬಾಟಲಿಯನ್ನು ಅಲ್ಲೇ ಎಲ್ಲಾದರೂ ಎಸೆದು ಬಿಡುತ್ತಾರೆ. ನೀವು ಹಾಗೆ ಮಾಡದೆ, ಬಾಟಲಿಯನ್ನು ಕಸದಬುಟ್ಟಿಗೇ ಹಾಕುವಷ್ಟು ಜಾಣರು ನೀವು. ಅಲ್ಲವೇ? ಆದರೆ ಮುಂದಿನ ಬಾರಿ ಬಾಟಲಿ ತೆಗೆದುಕಂಡಾಗ ಖಾಲಿ ಬಾಟಲಿಯನ್ನು ಎಸೆಯದಿರಿ. ಅದೇ ಬಾಟಲಿಯಿಂದ ನೀವು ಜಾದೂಗಾರ ಅನ್ನಿಸಿಕೊಳ್ಳಬಹುದು ಅನ್ನೋದು ನಿಮಗೆ ಗೊತ್ತಾ?
ಬೇಕಾಗುವ ವಸ್ತು: ಪ್ಲಾಸ್ಟಿಕ್ ಬಾಟಲಿ, ನಾಣ್ಯ
ಪ್ರದರ್ಶನ: ಟೇಬಲ್ ಮೇಲೆ ಒಂದು ಖಾಲಿ ಪ್ಲಾಸ್ಟಿಕ್ ಬಾಟಲಿ (ಮುಚ್ಚಳ ಹಾಕಿರುವ) ಇರುತ್ತದೆ. ಅದನ್ನು ಎತ್ತಿ ಹಿಡಿದು ಜಾದೂಗಾರ ಎಲ್ಲರಿಗೂ ತೋರಿಸುತ್ತಾನೆ. ನಂತರ ಜೇಬಿನಿಂದ ಒಂದು ನಾಣ್ಯವನ್ನು ತೆಗೆದು, ಮಂತ್ರ ಪಠಿಸುತ್ತಾ ಅದನ್ನು ಖಾಲಿ ಬಾಟಲಿಯ ಒಳಗೆ ತೂರಿಸಿ ಬಿಡುತ್ತಾನೆ. ಬಾಟಲಿಯ ಹೊಟ್ಟೆಯೊಳಗಿಂದ ತೂರಿ ನಾಣ್ಯ ಒಳಕ್ಕೆ ಹೋಗಿ ಬಿಡುತ್ತದೆ.
ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಬಾಟಲಿಯಲ್ಲಿ. ನೀವು ಖಾಲಿ ಬಾಟಲಿ ಮೇಲೆ ಒಂದು ಕಡೆ ರಹಸ್ಯವಾಗಿ ಉದ್ದನೆಯ ರಂಧ್ರ (ಬಾಗಿಲಿನ ಆಕಾರದಲ್ಲಿ) ಕೊರೆಯಬೇಕು. ಬಾಟಲಿಯನ್ನು ಎತ್ತಿ ಹಿಡಿದು ಪ್ರೇಕ್ಷಕರಿಗೆ ತೋರಿಸುವಾಗ ಆ ರಂಧ್ರ ಕಾಣಿಸುವಂತಿರಬಾರದು. ಬಂತರ ನಾಣ್ಯವನ್ನು ಜೇಬಿನಿಂದ ತೆಗೆದು, ರಂಧ್ರ ಇರುವ ಕಡೆಯಲ್ಲಿ ತೂರಿಸಿಬಿಡಿ. ಗಾಳಿಯೊಳಗೆ ತೂರಿಕೊಂಡು ಹೋದಂತೆ ಆ ನಾಣ್ಯ ಬಾಟಲಿಯೊಳಕ್ಕೆ ಹೋಗಿಬಿಡುತ್ತದೆ.
ಗಮನಿಸಬೇಕಾದ ಒಂದು ವಿಷಯವೇನೆಂದರೆ, ತುಂಬಾ ಪಾರದರ್ಶಕ ಬಾಟಲಿಯಲ್ಲಿ ರಂಧ್ರ ಕಾಣಿಸಿಬಿಡುವ ಅಪಾಯವಿರುತ್ತದೆ. ಹಾಗಾಗಿ, ಅಂಗಡಿಯಲ್ಲಿ ಮಾರುವ ನೀರಿನ ಬಾಟಲಿಯ ಮಾದರಿಯ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಈ ಜಾದೂ ಪ್ರಯೋಗಿಸಿ.
ವಿನ್ಸೆಂಟ್ ಲೋಬೋ