Advertisement
ರಾಹುಲ್ ಶ್ರೀಮಂತ ಮನೆಯ ಹುಡುಗನಾಗಿದ್ದ. ಕೆಲಸದ ನಿಮಿತ್ತ ಎರಡು ವರ್ಷ ಅಮೆರಿಕದಲ್ಲಿ ವಾಸವಿದ್ದ. ಆಧುನಿಕ ಜೀವನಶೈಲಿಯನ್ನು ಮೈಗೂಡಿಸಿಕೊಂಡಿದ್ದ ರಾಹುಲ್ ಗೌರಮ್ಮನಂತಿದ್ದ ವಸುಮತಿಗೆ ಇಷ್ಟವಾಗಿದ್ದು ಹೇಗೆ ಎನ್ನುವುದು ಇಲ್ಲಿಯವರೆಗೂ ಅನೇಕರಿಗೆ ಬಿಡಿಸಲಾಗದ ಒಗಟು. ಎರಡು ವಿರುದ್ಧ ಧೃವಗಳು ಒಂದನ್ನೊಂದು ಆಕರ್ಷಿಸುತ್ತವೆ ಎನ್ನುವುದು ಅವರಿಬ್ಬರ ಪಾಲಿಗೆ ಸತ್ಯವಾದ ಮಾತಾಗಿತ್ತು. ಮದುವೆ ನಂತರ ರಾಹುಲ್, ಫೋನ್‌ನಲ್ಲಿ ಅವನ ಬಾಲ್ಯದ ಗೆಳತಿ ಚಿತ್ರಾ ಜೊತೆ ಮಾತಾಡುವುದನ್ನು ಕೇಳಿಸಿಕೊಂಡಿದ್ದಳು. ಅವರಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎನ್ನುವುದು ವಸುಮತಿಗೆ ಗೊತ್ತಿತ್ತು. ಆದರೆ, ಬೇರೆ ಯಾರಾದರೂ ರಾಹುಲ್‌ನ ಮಾತನ್ನು ಕೇಳಿಸಿಕೊಂಡಿದ್ದರೆ ರಾಹುಲ್ ಬಗ್ಗೆ ಅಪಾರ್ಥ ಮಾಡಿಕೊಳ್ಳುವಂತಿತ್ತು ಅವನ ಮಾತುಕತೆ. ಆಗಲೂ ಅವರಿಬ್ಬರು ಕ್ಲೋಸ್‌ಫ್ರೆಂಡ್ಸ್ ಅಲ್ವಾ ಅಂತ ಸುಮ್ಮನಾಗಿದ್ದಳು ವಸುಮತಿ. ಆದರೆ, ರಾಹುಲ್ ಅನೇಕ ಮಹಿಳೆಯರೊಂದಿಗೆ ಅದೇ ರೀತಿ ಮಾತಾಡುವುದನ್ನು ಕಂಡಾಗ ವಸುಮತಿಗೆ ಆಘಾತವಾಗಿತ್ತು. ಆ ಮಹಿಳೆಯರು ತಮಗೆ ಇರಿಸು ಮುರಿಸಾದರೂ ತಡೆದುಕೊಂಡು ಸುಮ್ಮನಿದ್ದರು. ಇತ್ತ ತನ್ನ ದುಗುಡವನ್ನು ಯಾರಲ್ಲೂ ಹೇಳಿಕೊಳ್ಳಲಾಗದೆ ವಸುಮತಿ ಒಳಗೊಳಗೇ ಚಡಪಡಿಸುತ್ತಿದ್ದಳು. ತನ್ನ ಗಂಡ ಎಲ್ಲ ಹೆಂಗಸರೊಡನೆ ಫ್ಲರ್ಟ್ ಮಾಡುತ್ತಾನೆ ಎಂದು ಯಾವ ಹೆಣ್ಣು ತಾನೇ ಬಾಯಿಬಿಟ್ಟು ಹೇಳಿಕೊಳ್ಳುತ್ತಾಳೆ? ಅದೂ ಪ್ರೀತಿಸಿ ಮದುವೆಯಾದವಳು!ವಸುಮತಿ ಸೀದಾ ಹೋಗಿದ್ದು ಮನೋವೈದ್ಯೆಯ ಬಳಿಗೆ. ತನ್ನ ನೋವೆಲ್ಲವನ್ನೂ ಅವರಲ್ಲಿ ಹೇಳಿಕೊಂಡು ಅತ್ತು ಕಣ್ಣೀರಾಗಿದ್ದಳು. ವೈದ್ಯರು ಅವಳ ಸಮಸ್ಯೆಯನ್ನು ಸಮಾಧಾನದಿಂದ ಆಲಿಸಿದರು. ಅವರಿಗೆ ಎರಡು ರೀತಿಯ ಸಮಸ್ಯೆಗಳು ಕಂಡುಬಂದವು. ಒಂದು ವಸುಮತಿಯ ಕಡೆಯಿಂದ, ಇನ್ನೊಂದು ರಾಹುಲ್ ಕಡೆಯಿಂದ. ವಸುಮತಿ ಮುಂಚಿನಿಂದಲೂ ಸ್ವಲ್ಪ ಪೊಸೆಸಿವ್, ಅಂದರೆ ತನ್ನ ವಸ್ತು ಬೇರೆ ಯಾರ ಪಾಲಾಗುವುದನ್ನೂ ಸಹಿಸಳು ಎನ್ನುವುದನ್ನು ವೈದ್ಯರು ತಿಳಿದುಕೊಂಡರು. ನಿಜ ಹೇಳಬೇಕೆಂದರೆ, ಪೊಸೆಸಿವ್‌ನೆಸ್ ಕಾಯಿಲೆ ಏನಲ್ಲ. ಭೂಮಿ ಮೇಲೆ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಚಾರಕ್ಕೆ ಪೊಸೆಸಿವ್ ಆಗಿರುತ್ತಾರೆ. ತನ್ನ ಗಂಡ ಎಲ್ಲಾ ಹೆಂಗಸರೊಡನೆ ಫ್ಲರ್ಟ್ ಮಾಡುತ್ತಾನೆ ಅನ್ನೋದು ವಸುಮತಿಯ ಮನಸ್ಸಿಗೆ ಘಾಸಿ ತಂದಿತ್ತು. ತನ್ನದೊಬ್ಬಳದೇ ಆಗಬೇಕಿದ್ದ ಸ್ವತ್ತು ಇತರರ ಪಾಲಾಗುತ್ತಿರುವುದರ ನೋವು ಒಂದೆಡೆಯಾದರೆ, ಓರಗೆಯ ಹೆಂಗಸರ ನಡುವೆ ತನ್ನ ಗಂಡ ಕೆಟ್ಟ ಹೆಸರು ಪಡೆಯುತ್ತಿದ್ದಾನಲ್ಲ ಎಂಬ ಆಘಾತ ಇನ್ನೊಂದೆಡೆ. ಪರಿಹಾರ ಸಿಕ್ಕಿತ್ತು!
ರಾಹುಲ್‌ನ ಫ್ಲರ್ಟಿಂಗ್ ಬಗ್ಗೆ ವಸುಮತಿ ಈ ಹಿಂದೆ ಅವನಲ್ಲಿ ಮಾತಾಡಿದ್ದರೂ ಅವನದನ್ನು ಗಂಭೀರವಾಗಿ ತೆಗೆದುಕೊಂಡಿರಲೇ ಇಲ್ಲ. ಅವನ ಪ್ರಕಾರ ಅದು ಆರೋಗ್ಯಕರ, ಹಾಸ್ಯಭರಿತ ಮಾತುಕತೆ ಅಷ್ಟೇ. ಆದರೆ, ಅವನು ಒಂದು ವಿಚಾರವನ್ನು ಗಮನಿಸಲು ಸೋತಿದ್ದ. ತಮ್ಮ ಮಾತು ಇತರರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ ಎನ್ನುವುದನ್ನು ಗ್ರಹಿಸಲು ರಾಹುಲ್ ಸೋತಿದ್ದ. ಇದನ್ನು ಕಂಡುಕೊಂಡ ವೈದ್ಯರಿಗೆ ವಸುಮತಿಯ ಸಮಸ್ಯೆಗೆ ಪರಿಹಾರ ಸಿಕ್ಕಿತ್ತು. ರಾಹುಲ್‌ನ ಜೋಕು, ಮಾತುಗಳನ್ನು ತನ್ನ ಗೆಳತಿಯರು, ಸಹೋದ್ಯೋಗಿ ಹೆಂಗಸರು ಕಾಮಿಡಿ ಎಂದು ಪರಿಗಣಿಸುತ್ತಿಲ್ಲ, ಅವರಿಗೆ ಇರಿಸುಮುರಿಸಾಗುತ್ತಿದೆ ಎನ್ನುವುದನ್ನು ಹೇಗಾದರೂ ಮಾಡಿ ವಸುಮತಿ ಸಾಬೀತು ಪಡಿಸಿದರೆ ರಾಹುಲ್ ಮುಂದೆಂದೂ ಆ ರೀತಿ ವರ್ತಿಸುವುದಿಲ್ಲ ಎನ್ನುವುದು ವೈದ್ಯರ ಸಲಹೆಯಾಗಿತ್ತು. ಅವರ ಸಲಹೆ ಸರಿಯಾಗಿ ಕೆಲಸ ಮಾಡಿತು. ರಾಹುಲ್ ಯಾರ ಬಳಿಯೂ ಆ ರೀತಿ ಮಾತಾಡುವುದಿಲ್ಲ. ನಾವು ಮನುಷ್ಯರು ರೇಡಿಯೋ ಥರ ಅಲ್ಲ. ರಿಸೀವರ್‌ಗೆ ತಕ್ಕಂತೆ ಮಾರ್ಪಾಡುಗಳನ್ನು ಮಾಡಿಕೊಂಡು ಶಬ್ದತರಂಗಗಳನ್ನು ಬಿತ್ತರಿಸುತ್ತೇವೆ ಎನ್ನುವುದು ಕಡೆಗೂ ರಾಹುಲ್‌ಗೆ ಅರ್ಥವಾಗಿತ್ತು.
Related Articles
Advertisement