ಚೆನ್ನೈ : ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ದುಬಾರಿ ಬೆಲ್ ಮತ್ತು ರಾಸ್ ಸೀಮಿತ ಆವೃತ್ತಿಯ ರಫೇಲ್ ವಾಚ್ ಖರೀದಿಸಿದ ವಾಚ್‌ನ ರಸೀದಿಯನ್ನು ತೋರಿಸಲು ಸಚಿವ ಸೆಂಥಿಲ್ ಬಾಲಾಜಿ ಹೇಳಿದ್ದಾರೆ.
“ಫ್ರೆಂಚ್ ಕಂಪನಿಯಿಂದ ಕೇವಲ 500 ರಫೇಲ್ ವಾಚ್‌ಗಳನ್ನು ತಯಾರಿಸಲಾಗಿದ್ದು, ಇದಕ್ಕೆ 5 ಲಕ್ಷ ರೂ. ಬೆಲೆ ಇದೆ. ಕೇವಲ ನಾಲ್ಕು ಮೇಕೆಗಳನ್ನು ಹೊಂದಿದ್ದೇನೆ ಎಂದು ಹೇಳಿಕೊಳ್ಳುವ ವ್ಯಕ್ತಿ ಈ ವಾಚ್ ಅನ್ನು ಧರಿಸಿದ್ದಾರೆ ! ಅವರು ಖರೀದಿಸಿದ ವಾಚ್‌ನ ರಸೀದಿಯನ್ನು ಹಂಚಿಕೊಳ್ಳಬಹುದೇ?” ಎಂದು ಸೆಂಥಿಲ್ ಬಾಲಾಜಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಡಸಾಲ್ಟ್ ಯುದ್ಧ ವಿಮಾನದ ಸಂಭ್ರಮಾಚರಣೆಗಾಗಿ ಕಂಪನಿಯು ತಯಾರಿಸಿದ ಬೆಲ್ ಮತ್ತು ರಾಸ್ ರಫೇಲ್ ಸೀಮಿತ ಆವೃತ್ತಿಯ ಕೈ ಗಡಿಯಾರವನ್ನು ಬಿಜೆಪಿ ನಾಯಕ ಅಣ್ಣಾಮಲೈ ಧರಿಸಿದ ನಂತರ ವಿವಾದ ಭುಗಿಲೆದ್ದಿದೆ.
ಡಿಎಂಕೆ ಸಚಿವರ ಆರೋಪಕ್ಕೆ ಉತ್ತರಿಸಿದ ಅಣ್ಣಾಮಲೈ, ”ನನ್ನ ಕೊನೆಗಾಲದವರೆಗೂ ಈ ವಾಚ್ ನನ್ನ ಬಳಿ ಇರುತ್ತದೆ. ಇದು ಸಂಗ್ರಾಹಕರ ಆವೃತ್ತಿಯಾಗಿದೆ. ನಾವು ಭಾರತೀಯರು ಹೊರತುಪಡಿಸಿ ಬೇರೆ ಯಾರು ಖರೀದಿಸಬಹುದು? ನಮ್ಮ ದೇಶಕ್ಕಾಗಿ, ಈ ಗಡಿಯಾರವನ್ನು ಡಸಾಲ್ಟ್ ರಫೇಲ್ ವಿಮಾನದ ಭಾಗಗಳನ್ನು ಬಳಸಿ ತಯಾರಿಸಲಾಗಿದೆ. ರಫೇಲ್ ಪ್ರವೇಶಿಸಿದ ನಂತರವೇ ಯುದ್ಧದ ನಿಯಮಗಳು ಬದಲಾದವು, ಭಾರತದ ವ್ಯಾಪ್ತಿಯನ್ನು ಗಣನೀಯವಾಗಿ ಹೆಚ್ಚಿಸಿತು ” ಎಂದು ಪ್ರತಿಕ್ರಿಯಿಸಿದ್ದಾರೆ.
ಕಂಪನಿಯು ತಯಾರಿಸಿದ 500 ವಾಚ್‌ಗಳಲ್ಲಿ 149 ನೇಯದನ್ನು ಕಟ್ಟಿಕೊಳ್ಳುತ್ತಿದ್ದೇನೆ ಎಂದು ಅಣ್ಣಾಮಲೈ ಹೇಳಿಕೊಂಡಿದ್ದಾರೆ.