Advertisement
ಬೆಳ್ತಂಗಡಿ ತಾಲ್ಲೂಕಿನ ಗುರುವಾಯನ ಕೆರೆಯಲ್ಲಿ ಪತ್ತೆಯಾದ ಬೆಂಗಳೂರಿನ ಹೂಡಿ ನಿವಾಸಿ ಯಶವಂತ್ ಸಾಯಿ ಸಾವಿನ ಸುದ್ದಿ ಕುಟುಂಬ ಸದಸ್ಯರಿಗೆ ಬರಸಿಡಿಲಿನಂತೆ ಎರಗಿದೆ. ಯಶವಂತ್‌ನ ಚಿಕ್ಕಮ್ಮನ ಮೊಬೈಲ್ ಫೋನ್‌ಗೆ ಬುಧವಾರ ಮಧ್ಯರಾತ್ರಿ ಬಂದ ಮಿಸ್ಡ್ಕಾಲ್, ನೆಚ್ಚಿನ ಟೀ-ಶರ್ಟ್‌ನಲ್ಲೇ ಶವವಾಗಿ ಪತ್ತೆಯಾಗಿದ್ದು, ಎರಡು ಸಿಮ್ ಕಾರ್ಡ್, ಐ ಶುಡ್ ವರ್ಕ್ ಇನ್ ಉಡುಪಿ ಇನ್ ಫೈವ್ ಮಂಥ್ಸ್ ಎಂಬ ಸಂದೇಶ ಸಾವಿನ ನಿಗೂಢತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಮಂಗಳೂರಿನ ಕಡಲ ತೀರದ ವಿಪರೀತ ಆಕರ್ಷಣೆ, ಸೆಳೆತ ಹೊಂದಿದ್ದ ಯಶವಂತ್, ಮಂಗಳವಾರ ಬೆಳಗ್ಗೆ ಎಂದಿನಂತೆ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾನೆ. ತನ್ನ ಬಳಿಯಿದ್ದ 2,000 ರೂ.ನೊಂದಿಗೆ ಮೆಜೆಸ್ಟಿಕ್‌ಗೆ ತೆರಳಿ ಮೂರು ಜತೆ ಬಟ್ಟೆ, ಟವೆಲ್‌ಗಳು, ಒಂದು ಜತೆ ಚಪ್ಪಲಿ ಖರೀದಿಸಿದ್ದಾನೆ. ಕೆಲ ತಿಂಗಳ ಹಿಂದೆ ಆಸೆ ಪಟ್ಟು ಖರೀದಿಸಿದ್ದ ಸ್ಮಾರ್ಟ್ ವಾಚ್, ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ನನ್‌ಚಾಕ್ (ಕರಾಟೆ ಉಪಕರಣ) ಕೊಂಡೊಯ್ದಿದ್ದಾನೆ. ಅಲ್ಲಿಂದ ನೇರವಾಗಿ ಮಂಗಳೂರು ಬಸ್ ಏರಿ ಬೆಳ್ತಂಗಡಿಯಲ್ಲಿ ಇಳಿದಿದ್ದಾನೆ ಎಂದು ಸುವರ್ಣಾ ಹೇಳಿದ್ದಾರೆ.
Related Articles
ವಿಜ್ಞಾನಿಯಾಗುವ ಕನಸು ಹೊತ್ತಿದ್ದ ಯಶವಂತ್ ವಿಜ್ಞಾನ ಕಲಿಕೆಯಲ್ಲಿ ಹಿಂದಿದ್ದ. ಆದರೆ, ಗಣಿತದಲ್ಲಿ ಚುರುಕಾಗಿದ್ದ. ಹೀಗಾಗಿ ಭವಿಷ್ಯದಲ್ಲಿ ವಿಜ್ಞಾನಿಯಾಗುವ ಬದಲಿಗೆ ಹೋಟೆಲ್ ಮ್ಯಾನೆಜ್‌ಮೆಂಟ್ ಪದವಿ ಪಡೆಯಲು ಬಯಸಿದ್ದ. ಹಾಗಾಗಿ ಯುಟ್ಯೂಬ್ ಹಾಗೂ ಕೆಲ ಅಡುಗೆ ತಯಾರಿ ಪುಸ್ತಕಗಳನ್ನು ಖರೀದಿಸಿ ಎಗ್ ಫ್ರೈಡ್‌ರೈಸ್, ನೂಡಲ್ಸ್, ಆಮ್ಲೆಟ್ ಮಾಡುವುದನ್ನು ಕಲಿಯುತ್ತಿದ್ದ. ರಜಾ ದಿನಗಳಲ್ಲಿ ಮನೆ ಮಂದಿಗೆಲ್ಲ ಸ್ಪೆಷನ್ ರೈಸ್‌ಬಾತ್ ಸಿದ್ಧಪಡಿಸಿ ಬಡಿಸಿ ಖುಷಿಪಡುತ್ತಿದ್ದ. ಇಷ್ಟೆಲ್ಲಾ ಕನಸು ಹೊತ್ತಿದ್ದ ಆ ನನ್ನ ಕಂದ ಇದು ನನ್ನ ಕೈ ಜಾರಿ ಹೋಗಿದ್ದಾನೆ ಎನ್ನುತ್ತಾ ಸುವರ್ಣಾ ಕಣ್ಣೀರಿಟ್ಟರು.
Advertisement
ಯಶವಂತ್‌ನ ತಂದೆ, ತಾಯಿ ಕುಪ್ಪಂನಲ್ಲಿದ್ದಾರೆ. ಒಂದು ವರ್ಷದವನಾಗಿದ್ದಾಗಿನಿಂದ ನಮ್ಮ ಮನೆಯಲ್ಲೇ ಬೆಳೆದಿದ್ದ. ಬಹಳ ವರ್ಷ ತನ್ನ ತಂದೆ ತಾಯಿಯನ್ನೇ ಪೋಷಕರೆಂದುಕೊಂಡಿದ್ದ ಯಶವಂತ್ ಅವರನ್ನು ಕುಪ್ಪಂ ಡ್ಯಾಡಿ, ಕುಪ್ಪಂ ಮಮ್ಮಿ ಎಂದು ಕರೆಯುತ್ತಿದ್ದ. ನ್ಯೂಸ್ ಚಾನೆಲ್ ನೋಡುವಾಗ ಮಕ್ಕಳ ಮೇಲಿನ ದೌರ್ಜನ್ಯ, ಆತ್ಮಹತ್ಯೆಯಂತಹ ಸುದ್ದಿ ಪ್ರಸಾರವಾದರೆ ಚಾನೆಲ್ ಬದಲಾಯಿಸುತ್ತಿದ್ದೆವು. ಅಷ್ಟು ಜೋಪಾನದಿಂದ ನೋಡಿಕೊಳ್ಳುತ್ತಿದ್ದವು. ಹೀಗಿರುವಾಗ ಮಂಗಳೂರಿಗೆ ಹೇಗೆ ಹೋಗಿದ್ದಾನೆ ಎಂಬುದೇ ಅರ್ಥವಾಗುತ್ತಿಲ್ಲ. ಇತರೆ ಮಕ್ಕಳಂತೆ ತನ್ನ ಸಹೋದರಿಯೊಂದಿಗೆ ಕಿಡ್ಸ್ ಗೇಮ್ ಆಡುತ್ತಿದ್ದ ಯಶವಂತ್‌ಗೆ ಕರಾಟೆ, ಬೈಕ್ ರೈಡ್‌ನಲ್ಲಿ ವಿಶೇಷ ಆಸಕ್ತಿ ಇತ್ತು. ಭಾವನಾತ್ಮಕ ಅಂಶಗಳುಳ್ಳ ಸಿನಿಮಾ ನೋಡುವಾಗ ಭಾವುಕನಾಗುತ್ತಿದ್ದ ಎಂದ ಸುವರ್ಣಾ ಅವರು ಉಮ್ಮಳಿಸಿ ಬಂದ ನೋವು ತಡೆಯಲಾರದೆ ಬಿಕ್ಕಿದರು.
ಉಡುಪಿಗೆ ಹೊರಟವ ಕೆರೆಗೆ ಹೋಗಿದ್ದೇಕೆ?ಯಶವಂತ್ ಮನೆಯಿಂದ ಹೋಗುವಾಗ ಎರಡು ಸಿಮ್‌ಕಾರ್ಡ್ ಕೊಂಡೊಯ್ದಿದ್ದಾನೆ. ಈ ಸಿಮ್‌ಕಾರ್ಡ್‌ಗಳನ್ನು ಸುತ್ತಿಟ್ಟಿದ್ದ ಕಾಗದದ ಒಳಭಾಗದಲ್ಲಿ ತನ್ನ ಫೇಸ್‌ಬುಕ್ ಖಾತೆ ಹೆಸರು ಹಾಗೂ ಪಾಸ್‌ವರ್ಡ್ ಬರೆಯಲಾಗಿದೆ. ಅಲ್ಲದೆ, ಮೆಜೆಸ್ಟಿಕ್‌ನಿಂದ ನೇರ ಮಂಗಳೂರಿಗೆ ಟಿಕೆಟ್ ಪಡೆದಿದ್ದ ಯಶವಂತ್ ಬೆಳ್ತಂಗಡಿಯಲ್ಲೇ ಇಳಿದಿದ್ದಾನೆ. ನಂತರ ಬೇರೊಂದು ಬಸ್‌ನಲ್ಲಿ ಕಾರ್ಕಳಕ್ಕೆ ಟಿಕೆಟ್ ಪಡೆದು ದಾರಿ ಮಧ್ಯೆ ಗುರುವಾಯನ ಕೆರೆ ಬಳಿ ಇಳಿದುಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಯಶವಂತ್‌ಗೆ ಯಾರೋ ಅಪರಿಚಿತರು ದಾರಿ ತಪ್ಪಿಸಿರುವ ಶಂಕೆ ಇದೆ ಎಂದು ಮಾವ ರವಿರಾಜ್ ಅನುಮಾನ ವ್ಯಕ್ತಪಡಿಸಿದರು. ಸೂಕ್ತ ತನಿಖೆಯಾಗಬೇಕು
ಬೆಂಗಳೂರಿನಿಂದ ಶಾಲಾ ಸಮವಸ್ತ್ರದಲ್ಲಿ ಹೋದ ಯಶವಂತ್ ದಾರಿ ಮಧ್ಯೆ ಬಟ್ಟೆ ಬದಲಿಸಿದ್ದಾನೆ. ಟ್ರ್ಯಾಕ್ ಪ್ಯಾಂಟ್ ಮತ್ತು ನೆಚ್ಚಿನ ಟೀ ಶರ್ಟ್ ಧರಿಸಿದ್ದ. ಇದೇ ಬಟ್ಟೆಯಲ್ಲಿ ಆತ ಶವವಾಗಿ ಪತ್ತೆಯಾಗಿದ್ದಾನೆ. ಒಂದೊಮ್ಮೆ ನೀರಿಗಿಳಿಯಬೇಕೆಂದರೆ ಬಟ್ಟೆ ಬಿಚ್ಚುತ್ತಿದ್ದ. ಆದರೆ, ಬಟ್ಟೆ ಧರಿಸಿಯೇ ನೀರಿಗಿಳಿದಿರುವ ಬಗ್ಗೆ ಅನುಮಾನವಿದೆ. ಅಲ್ಲದೆ, ಮಂಗಳವಾರ ನಾಪತ್ತೆಯಾದ ಯಶವಂತ್ ಕುರಿತು ಬುಧವಾರ ಮಧ್ಯಾಹ್ನ ರಾಜೇಂದ್ರ ಎಂಬುವರು ನಿಮ್ಮ ಯುವಕನ ವಸ್ತುಗಳು ಸಿಕ್ಕಿವೆ ಎಂಬುದಾಗಿ ಕರೆ ಮಾಡಿ ತಿಳಿಸಿದ್ದರು. ಅದೇ ದಿನ ತಡರಾತ್ರಿ 2 ಗಂಟೆ ಸುಮಾರಿಗೆ ನನ್ನ ಮೊಬೈಲ್‌ಗೆ ಒಂದು ಮಿಸ್ಡ್ ಕಾಲ್ ಬಂದಿತ್ತು. ಆ ಸಂಖ್ಯೆಯನ್ನು ಟ್ರೂ ಕಾಲರ್‌ನಲ್ಲಿ ಪರಿಶೀಲಿಸಿದಾಗ ಬೆಳ್ತಂಗಡಿಯ ನರ್ಸ್ ಎಂದು ತೋರಿಸುತ್ತಿದೆ. ನನ್ನ ಕಂದ ಮೃತಪಟ್ಟಿದ್ದು ಅಲ್ಲಿಯೇ. ಹೀಗಾಗಿ ಆಕೆ ಯಾರೆಂಬ ಬಗ್ಗೆ ತನಿಖೆಯಾಗಬೇಕು ಎಂದು ಸುವರ್ಣಾ ಒತ್ತಾಯಿಸಿದರು.
– ಮೋಹನ್ ಭದ್ರಾವತಿ