Advertisement

ಈ ವಿಶ್ವ ಎಷ್ಟು ದೊಡ್ಡದು?

07:54 PM Aug 21, 2019 | mahesh |

ಖಗೋಳ ವಿಜ್ಞಾನಿ ಬಾಬ್‌ ವಿಲಿಯಮ್ಸ್‌ ಯಾರ ಮಾತನ್ನೂ ಲೆಕ್ಕಿಸದೆ ನಿರ್ದೇಶನ ನೀಡಿಯೇ ಬಿಟ್ಟರು. ಅಂತರಿಕ್ಷದಲ್ಲಿ ನೆಲೆಗೊಂಡ ಹಬಲ್‌ ದೂರದರ್ಶಕ, ಶೂನ್ಯಾಕಾಶದಲ್ಲಿ 100 ಗಂಟೆಗಳ ಕಾಲ ಪೆನ್ಸಿಲ್‌ ಮೊನೆಯಷ್ಟು ಗಾತ್ರದ ಪ್ರದೇಶದತ್ತ ದಿಟ್ಟಿಸಿತು. “ಹಬಲ್‌ ಡೀಪ್‌ ಫೀಲ್ಡ್‌’ ಎಂದೇ ಹೆಸರಾದ ಈ ಪ್ರಯೋಗದ ಫ‌ಲಿತಾಂಶ ಏನಾಯ್ತು?

Advertisement

ಅಂತರಿಕ್ಷದ ವಿದ್ಯಮಾನಗಳನ್ನು ನೋಡಲು ಶಕ್ತಿಶಾಲಿ ದೂರದರ್ಶಕವನ್ನು ಬಳಸಲಾಗುತ್ತದೆ ಎಂಬ ಸಂಗತಿ ನಿಮಗೆ ಗೊತ್ತೇ ಇರುತ್ತದೆ. ವಿಶೇಷ ಶಕ್ತಿಯುಳ್ಳ ಇಂಥಾ ದೂರದರ್ಶಕಗಳನ್ನು ಬೆಟ್ಟದ ತುದಿಯಲ್ಲಿ, ಶುಭಾಕಾಶ ಕಾಣುವಲ್ಲಿ ಪ್ರತಿಷ್ಟಾಪಿಸಲಾಗುತ್ತದೆ. ಹಾಗಿದ್ದೂ, ಭೂಮಿ ಮೇಲಿನ ದೂರದರ್ಶಕಗಳಿಗೆ ಅದರದ್ದೇ ಆದ ಮಿತಿಗಳಿವೆ. ಈ ಮಿತಿಗಳನ್ನು ಮೀರುವುದು ಹೇಗೆ ಎಂಬ ಪ್ರಶ್ನೆ ಮೂಡಿದಾಗ ವಿಜ್ಞಾನಿಗಳು ಕಂಡುಕೊಂಡ ಉತ್ತರ ಅಂತರಿಕ್ಷದಲ್ಲೇ ಒಂದು ದೂರದರ್ಶಕವನ್ನು ಪ್ರತಿಷ್ಟಾಪಿಸುವುದು. ಇದು ಭೂಮಿಯ ಸುತ್ತ ಸುತ್ತುತ್ತಾ ಅಂತರಿಕ್ಷದತ್ತ ತನ್ನ ದುರ್ಬೀನಿನ ಕಣ್ಣು ಬೀರುತ್ತಾ ಫೋಟೋಗಳನ್ನು ತೆಗೆದು ಭೂಮಿಗೆ ಕಳಿಸಿಕೊಡುಂತೆ ಮಾಡುವುದು. ಹಾಗೆ ಅಂತರಿಕ್ಷಕ್ಕೆ ಹಾರಿಸಲ್ಪಟ್ಟ ದೂರದರ್ಶಕವೇ “ಹಬಲ್‌’. ಅನೇಕ ಬಾರಿ ರಿಪೇರಿಗೆ ಒಳಗಾಗಿರುವ ಈ ದೂರದರ್ಶಕ, ಈಗಲೂ ಕಾರ್ಯಾಚರಿಸುತ್ತಿದೆ. ಹಳೆಯದಾಗಿದ್ದರೂ ವಿಜ್ಞಾನಿಗಳಿಗೆ ಅದರ ಮೇಲೆ ವಿಶೇಷ ಪ್ರೀತಿ.

ಮೂಡಿತೊಂದು ಯೋಚನೆ
1995ರಲ್ಲಿ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾದಲ್ಲಿ ಖಗೋಳ ವಿಜ್ಞಾನಿ ಬಾಬ್‌, ಹಬಲ್‌ ದೂರದರ್ಶಕ ಯೋಜನೆಯನ್ನು ನೋಡಿಕೊಳ್ಳುತ್ತಿದ್ದ ತಂಡದ ನೇತೃತ್ವ ವಹಿಸಿದ್ದರು. ಅವರಿಗೆ ಒಂದು ವಿಚಿತ್ರವಾದ ಯೋಚನೆ ಬಂದಿತು. ಅಂತರಿಕ್ಷದಲ್ಲಿ ಪೆನ್ಸಿಲ್‌ ಮೊನೆಯಷ್ಟು ಚಿಕ್ಕದಾದ ಪ್ರದೇಶದತ್ತ ಹಬಲ್‌ಅನ್ನು ದಿನಕ್ಕೆ 20 ನಿಮಿಷದಂತೆ ಒಟ್ಟು 100 ಗಂಟೆಗಳ ಕಾಲ ಕೇಂದ್ರೀಕರಿಸಿ ಫೋಟೋ ಕ್ಲಿಕ್ಕಿಸುವಂತೆ ಮಾಡುವುದು. ಒಂದೇ ಸಲ 100 ಗಂಟೆಗಳ ಕಾಲ ಕೇಂದ್ರೀಕರಿಸುವಂತೆ ಮಾಡಬಹುದಲ್ಲ ಎಂಬ ಪ್ರಶ್ನೆ ಮೂಡಬಹುದು. ಆದರೆ ಹಬಲ್‌ ಒಂದೆಡೆ ನಿಲ್ಲದೆ, ತನ್ನ ಕಕ್ಷೆಯಲ್ಲಿ ಸುತ್ತುತ್ತಿರುತ್ತದೆ ಎಂಬುದನ್ನು ನೆನಪಿಡಬೇಕು.

ಹಬಲ್‌ ಕುರಿತು ಅಪಸ್ವರಗಳು
ಆಗ ತಾನೇ ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ಹಬಲ್‌ ದೂರದರ್ಶಕವನ್ನು ರಿಪೇರಿ ಮಾಡಿಸಲಾಗಿತ್ತು. ಅಲ್ಲದೆ ಅದುವೆರಗೂ ಹಬಲ್‌ನಿಂದ ಯಾವುದೇ ಗಮನಾರ್ಹ ಉಪಯೋಗವೂ ಆಗಿರಲಿಲ್ಲ. ಹೀಗಾಗಿ ಈ ಯೋಜನೆಯ ಬಗ್ಗೆ ಅಪಸ್ವರಗಳೂ ಎದ್ದಿದ್ದವು. ಸಾರ್ವಜನಿಕರ ಹಣ ದುರುಪಯೋಗವಾಗುತ್ತಿದೆ ಎಂಬ ಕೂಗುಗಳೂ ಎದ್ದಿದ್ದವು. ಯೋಜನೆಯನ್ನು ನಿಲ್ಲಿಸುವಂತೆ ಒತ್ತಡ ಬೇರೆ ಇತ್ತು. ಇಂಥಾ ಸಂದರ್ಭದಲ್ಲಿ ವಿಜ್ಞಾನಿ ಬಾಬ್‌ಗ ಮೂಡಿದ ಯೋಚನೆ ಬಗ್ಗೆ ಸಹೋದ್ಯೋಗಿಗಳು ಯಾರೂ ಸಹಕಾರ ನೀಡಲಿಲ್ಲ. ಆದರೆ ಆತನೇ ನಿರ್ದೇಶಕನಾಗಿದ್ದರಿಂದ, ಅವನಿಗೆ ತನಗೆ ಅನಿಸಿದ್ದನ್ನು ಮಾಡುವ ಅಧಿಕಾರವಿತ್ತು. ಯಡವಟ್ಟಾದರೆ ಕೆಲಸ ಹೋಗುತ್ತದೆ ಎನ್ನುವ ಭಯವನ್ನೂ ಲೆಕ್ಕಿಸದೆ ಹಬಲ್‌ಅನ್ನು ತಾನು ಬೊಟ್ಟು ಮಾಡಿದ ಚುಕ್ಕಿಯಷ್ಟು ಜಾಗದತ್ತ ಕೇಂದ್ರಿಕರಿಸಲು ನಿರ್ದೇಶನ ನೀಡಿದ. “ಯಾವುದೇ ಸಂಶೋಧನೆ ಮಾಡುವಾಗ ರಿಸ್ಕ್ಗಳು ಇದ್ದೇ ಇರುತ್ತವೆ. ಅದನ್ನು ಮೀರುವುದು ವಿಜ್ಞಾನಿಗಳ ಕರ್ತವ್ಯ’ ಎಂದಿದ್ದ ಬಾಬ್‌. ಸುಮಾರು ಹತ್ತು ದಿನಗಳ ಕಾಲ ಈ ಪ್ರಯೋಗ ನಡೆಯಿತು. ವಿಜ್ಞಾನಿ ಬಾಬ್‌ ಕೈಗೊಂಡ ಈ ಪ್ರಯೋಗ “ಹಬಲ್‌ ಡೀಪ್‌ ಫೀಲ್ಡ್‌’ ಎಂದೇ ಪ್ರಖ್ಯಾತಿ ಪಡೆದಿದೆ.

ಫ‌ಲಿತಾಂಶ ಬಂದಾಗ…
ಒಟ್ಟು 100 ಗಂಟೆಗಳ ಕಾಲ ಚುಕ್ಕಿಯಷ್ಟು ಗಾತ್ರದ ಪ್ರದೇಶವನ್ನೇ ದಿಟ್ಟಿಸುತ್ತಾ ಈ ದೂರದರ್ಶಕ, ಫೋಟೋ ಕ್ಲಿಕ್ಕಿಸುತ್ತಾ ಸಾಗಿತು. ಈ ಫೋಟೋಗಳನ್ನು ಭೂಮಿಯಲ್ಲಿದ್ದ ಕಂಟ್ರೋಲ್‌ ಸೆಂಟರ್‌ಗೆ ಕಳಿಸಿತು. ಅದನ್ನು ಸಂಸ್ಕರಣೆಗೆ ಒಳಪಡಿಸಿದ ವಿಜ್ಞಾನಿಗಳಿಗೆ ಮಹದಾಶ್ಚರ್ಯವಾಗಿತ್ತು. ಆ ಫೋಟೋವನ್ನು ಜಗಜ್ಜಾಹೀರುಗೊಳಿಸಿದಾಗ ಈ ವಿಶ್ವದ ಅಗಾಧತೆಯನ್ನು ಮನಗಂಡು ಜಗತ್ತೇ ಬೆಚ್ಚಿ ಬಿದ್ದಿತ್ತು.
ಆ ಚುಕ್ಕೆಯಷ್ಟು ಗಾತ್ರದ ಪ್ರದೇಶದಲ್ಲಿ 3,000ಕ್ಕೂ ನಕ್ಷತ್ರಪುಂಜಗಳು(ಗ್ಯಾಲಕ್ಸಿ) ಸೆರೆಯಾಗಿದ್ದವು. ಇದರ ಅಗಾಧತೆ ಅರಿವಾಗಲು ಈ ಮಾಹಿತಿ ತಿಳಿದುಕೊಳ್ಳಬೇಕು. ನಮ್ಮ ಭೂಮಿ ನೆಲೆಗೊಂಡಿರುವ ಸೌರಮಂಡಲ ಇರುವುದು ಕೂಡಾ ಒಂದು ನಕ್ಷತ್ರಪುಂಜದಲ್ಲೇ. ಅದಕ್ಕೆ “ಮಿಲ್ಕಿ ವೇ’ ಎಂದು ಹೆಸರು. ನಮ್ಮ ಈ ನಕ್ಷತ್ರಪುಂಜದಲ್ಲಿ 40,000 ಕೋಟಿ ನಕ್ಷತ್ರಗಳು ಮತ್ತು 10,000 ಕೋಟಿಗೂ ಹೆಚ್ಚು ಗ್ರಹಗಳಿವೆ ಎಂಬ ಅಂದಾಜಿದೆ. ಒಂದು ನಕ್ಷತ್ರಪುಂಜದಲ್ಲೇ ಇಷ್ಟೊಂದು ನಕ್ಷತ್ರಗಳು, ಗ್ರಹಗಳಿರಬೇಕಾದರೆ ಹಬಲ್‌ ದಿಟ್ಟಿಸಿದ್ದ ಒಂದು ಚುಕ್ಕೆಯಷ್ಟು ಗಾತ್ರದ ಜಾಗದಲ್ಲಿ ಕಡಿಮೆಯೆಂದರೂ 3,000 ನಕ್ಷತ್ರಪುಂಜಗಳು ಸೆರೆಯಾಗಿದ್ದವು ಎಂದರೆ ಈ ವಿಶ್ವದ ಅಗಾಧತೆ ಮತ್ತು ನಿಗೂಢತೆ ಒಂದು ಕ್ಷಣ ನಮ್ಮ ನಿಲುಕಿಗೆ ಸಿಗಬಹುದು. ಒಂದು ಕ್ಷಣ ಮಾತ್ರ!

Advertisement

-ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next