ಆ ದಿನಗಳು ಎಷ್ಟು ಸುಂದರ ಅಲ್ಲವೆ? ಬರಿಗಾಲಿನಲ್ಲಿ ನಡೆದುಕೊಂಡು ಶಾಲೆಗೆ ಹೋಗುವುದು, ಸ್ಲೇಟು ಬರೆಯುವ ಕಡ್ಡಿಗಾಗಿ ಶಾಲೆಯ ಹಿಂಬದಿ ಹುಡುಕುವುದು, ಸ್ಲೇಟಿನ ಚೂರಿನಲ್ಲೆ ಬರೆಯುವುದು, ಮಳೆಗಾಲ ಬಂತೆಂದರೆ ದೂರದಲ್ಲೊಂದು ಮರ, ಅದರಲ್ಲಿ ಒಂದು ನವಿಲು ಕೂತು ಕೂಗಿದ್ದೇ ತಡ ನಾಲ್ಕೈದು ಗಂಡುಮಕ್ಕಳು ನಾವದನ್ನು ಹಿಡಿದು ತರುತ್ತೇವೆಂದು ಯುದ್ಧಕ್ಕೆ ಹೊರಟವರಂತೆ ಹೋಗುವಾಗ ಹೆಣ್ಣುಮಕ್ಕಳು ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತ ಇದ್ದರು. ಆದರೆ, ಹೋದವರಿಗೆ ನವಿಲು ಬಿಡಿ ನವಿಲಿನ ಪುಕ್ಕ ಕೂಡ ಸಿಗ್ತಾ ಇರಲಿಲ್ಲ.
ಇನ್ನು ಶಾಲೆ ಬಿಡುವ ಹೊತ್ತಿನಲ್ಲಿ ಮಳೆ ಬಂದರೆ ಒಂದು ಕೊಡೆಯಲ್ಲಿ ಐದಾರು ಮಂದಿ ! ಕೊಡೆ ತಂದವರನ್ನೂ ಸೇರಿಸಿ ಎಲ್ಲರೂ ಒದ್ದೆ. ದಾರಿ ಬದಿಯಲ್ಲಿರುವ ಕುಂಟಾಲಹಣ್ಣು, ತರೊಳಿಗೆ ಹಣ್ಣು, ಕೇಪಳಕಾಯಿ, ಚಂಪೆ ಹಣ್ಣು, ಕರಂಡೆಹಣ್ಣು ಎಲ್ಲವೂ ನಮ್ಮ ಹೊಟ್ಟೆ ಸೇರುತ್ತಿತ್ತು. ಆ ಹಣ್ಣು ಕೊಯ್ಯಲು ಕೊಡೆಯೆ ಕೊಕ್ಕೆ.
ಮನೆಗೆ ಬಂದು ನಡು ರಸ್ತೆಯಲ್ಲಿ ಜೂಟಾಟ, ಗುಡುಗುಡು ಗುಮ್ಮಾ, ಕಣ್ಣಾಮುಚ್ಚೆ ಆಟ ಕತ್ತಲಾಗುವವರೆಗೂ ಮುಂದುವರೆಯುತಿತ್ತು. ಭಾನುವಾರ ಬಂದರೆ ನೀರು ಹರಿವ ತೋಡಿನಲ್ಲಿ ಮೀನು ಹಿಡಿಯಲು ಹೊರಡುತ್ತ ಇ¨ªೆವು. ಸಿಕ್ಕ ಒಂದೆರಡು ಸಣ್ಣ ಮೀನನ್ನು ಹಿಡಿದು ಬಾಟಲಿಯಲ್ಲಿ ಹಾಕಿಡುತ್ತ ಇದ್ದೆವು. ಮರುದಿನ ನೋಡಿದರೆ ಅವುಗಳು ಅಂಗಾತ ಮಲಗಿ ಇರುತ್ತಿದ್ದವು.
ಸಂಜೆ ನಾಲ್ಕು ಗಂಟೆಗೆ ಟಿ. ವಿ. ಯಲ್ಲಿ ಸಿನಿಮಾ ನೋಡಲು ಎಲ್ಲರೂ ಒಂದೇ ಮನೆಯಲ್ಲಿ ಸೇರುತ್ತಿದ್ದೆವು. ರಸ್ತೆಯಲ್ಲಿ ಹರಿವ ನೀರಿಗೆ ಅಡ್ಡ ಕಟ್ಟಿ ಅದರಲ್ಲಿ ಹುಲ್ಲು ನೆಟ್ಟು ಬೆಳೆ ಬರುತ್ತದೆ ಅಂತ ಕಾಯ್ತ ಇ¨ªೆವು. ನಡುವೆ ಗಾಡಿ ಹೋಗಿ ನಮ್ಮ ಕಟ್ಟೆ ಒಡೆದರೆ ಗಾಡಿಯವನಿಗೆ ಯರ್ರಾಬಿರ್ರಿ ಬೈಯುತ್ತಿದ್ದೆವು. ರಜಾ ಸಿಕ್ಕಿತೆಂದರೆ ಶುರುವಾಯ್ತು ಗೋಣಿ ಚೀಲ, ಗೆರಟೆ ಹೆಕ್ಕಿ ಮನೆ ಕಟ್ಟುವ ಕಾರ್ಯಕ್ರಮ. ಕೋಲು ಕಡಿದು ಗೋಣಿಗೆ ಹಗ್ಗ ಕಟ್ಟಿ ಮನೆ ರೆಡಿ. ಒಬ್ಬರು ಸಾಮಾನ್ಯ ಜನರಂತೆ, ಮತ್ತೂಬ್ಬರು ಅಂಗಡಿ, ಮತ್ತೂಬ್ಬ ಬೀಡಿ ಚೆಕ್ಕರ್, ಇನ್ನೊಬ್ಬ ಡಾಕ್ಟರ್. ಮನೆಯಿಂದ ನೀರು ಕದ್ದು ಡಬ್ಬದಲ್ಲಿ ತುಂಬಿಸಿ ಬಾವಿ ಮಾಡಿ ಅದರಲ್ಲೇ ನೀರು ಸೇದಿ ಅಡುಗೆ ಮಾಡುವುದು, ಮಣ್ಣಿನಲ್ಲಿ ವಿಧ ವಿಧದ ಅಡುಗೆ ತಿಂಡಿ ಮಾಡಿ ಬಡಿಸುವ ಕಾರ್ಯಕ್ರಮ, ಎಲ್ಲಾ ಚೆಲ್ಲಾಪಿಲ್ಲಿಯಾದ ಮೇಲೆ ಆಟ ಮುಕ್ತಾಯ. ಸೌದೆ ತರಲು ಹೋಗುವುದು, ದನ ಮೇಯಿಸಲು ಹೋಗಿ ಆಟವಾಡಿ ನೀರು ಖಾಲಿಯಾದಾಗ ಸಣ್ಣ ಬಾವಿಗೆ ಬಳ್ಳಿಯಿಂದ ಬಾಟಲಿಗೆ ಕಟ್ಟಿ ನೀರೆಳೆದು ಕುಡಿದ ನೆನಪು.
ಮರುದಿನ ಮತ್ತೆ ಆಟ. ಮರಕೋತಿ, ಕಳ್ಳ ಪೋಲಿಸ್, ಜೋಕಾಲಿ, ಅಡಕೆ ಹಾಳೆಯಲ್ಲಿ ಕೂತು ಎಳೆಯುವುದು ಸಂಜೆವರೆಗೂ ಏನೇನೊ ಆಟ. ತಿನ್ನಲು ರುಚಿರುಚಿಯಾದ ಮಾವು, ಗೇರು, ಹಲಸು… ಹೀಗೆ ರಜೆ ಮುಗಿದದ್ದೇ ಗೊತ್ತಾಗುತ್ತಿರಲಿಲ್ಲ..
ಈಗಿನ ಮಕ್ಕಳಿಗೆ ಇದಾವುದರ ಮಜಾವೇ ಇಲ್ಲ. ನಾವೇ ಅದೃಷ್ಟವಂತರು ಅಲ್ವಾ ಅಂತನ್ನಿಸುತ್ತದೆ.
ಪ್ರೀತಿಕಾ ಅಮೀನ್
ದ್ವಿತೀಯ ಬಿಎ, ಸರಕಾರಿ ಕಾಲೇಜು, ಹಿರಿಯಡ್ಕ