ಅಬ್ಟಾ… ಕಡೆಗೂ ಲಾಕ್‌ಡೌನ್ ಮುಗೀತು ಎಂದು ತಿಂಗಳ ಹಿಂದೆ ನಾವೂ ಖುಷಿ ಪಟ್ಟಿದ್ದು ನಿಜ. ಆದರೆ ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಯಜಮಾನರು ಆಫೀಸ್‌ಗೆ ಹೋಗಿ ವಾರ ಕಳೆಯುವ ಮೊದಲೇ ಅವರ ಆಫೀನಲ್ಲಿ ಯಾರಿಗೋ ಜ್ವರ ಬಂದ ಕಾರಣಕ್ಕೆ, ಮತ್ತೆ ಮನೆಯಿಂದಲೇ ಕೆಲಸ ಎಂಬ ನಿಯಮ ಜಾರಿಗೆ ಬಂತು. ಪರಿಣಾಮ: ಬೆಳಗಾಗ್ತಿದ್ದ ಹಾಗೆ, ನಂಗೆ ಶೇರಿಗಾರನ ಕೆಲಸ!
“ಇವತ್ತೇನ್ ಕೆಲ್ಸ ಮಾಡೋದು..’ ಅಂತ ಕೇಳುವ ರಾಯರಿಗೆ, ಕೆಲ್ಸ ಹಂಚುವುದಾಗಿತ್ತು. ಮೊದಮೊದಲು ನಂಗೂ ಖುಷಿಯೇ. ಮನೆಯ ಹೆಚ್ಚುವರಿ ಕೆಲಸಗಳೆಲ್ಲ ಲೀಲಾಜಾಲವಾಗಿ ಸಾಗ್ತಿದೆಯಲ್ಲ ಅಂತ. ಆದರೆ, ಒಮ್ಮೊಮ್ಮೆಯಂತೂ ಕುತ್ತಿಗೆಗೆ ಬರ್ತಾ ಇತ್ತು. ಯಜಮಾನರಿಂದ ನನಗೆ ಸಹಾಯವಾಗಿದ್ದೇನೋ ಸುಳ್ಳಲ್ಲ… ಆದರೆ ಮಾಡುವುದು ಮಾಡಿ, ತಮ್ಮ ಭಾವನಿಗೆ (ನನ್ನ ತಮ್ಮ..!) ಫೋನ್ ಮಾಡಿ, “ಇವತ್ತು ಇಷ್ಟು ಕೆಲ್ಸ ಆಯ್ತು ಮಾರಾಯಾ..’ ಅಂತ ವರ್ಣನೆ ಮಾಡುತ್ತಿದ್ದುದು ಉರಿಯುತ್ತಿತ್ತು.
“ಅಯ್ಯ.. ಸುಮ್ನಿರಿ.. ಅವನೂ ಮನೇಲಿ ಅದನ್ನೇ ಮಾಡಿರ್ತಾನೆ.. ಅವನಿಗೂ ಹೊತ್ತು ಹೋಗ್ಬೇಕಲ್ವಾ..ಎಲ್ಲಾ ಮನೆಗಳ ಗಂಡಸರೂ ಹಿಂಗೇ ಕೆಲಸ ಮಾಡಿರ್ತಾರೆ..ಆದ್ರೆ ಅವರೆಲ್ಲಾ ಅದನ್ನು ಹೇಳ್ಕೊಳೊಲ್ಲ ಅಷ್ಟೇ..’ ಅಂತ ಅವರ ಸಹಾನುಭೂತಿ ಪಡೆಯುವ ಸ್ಕೆಚ್‌ಗೆ ಅಡ್ಡಗಾಲು ಹಾಕಿದೆ. ಒಂದೊಂದ್ಸಲ ಇವರ ಕೆಲಸದ ವೈಖರಿ ನೋಡಿ, ಯಾಕಾದ್ರೂ ಕೆಲಸ ಹೇಳಿದೆನೋ ಅನಿಸುತ್ತಿತ್ತು. ಇದು ತಂದು ಕೊಡು.. ಅದು ತಂದುಕೊಡು.. ಅಂತ ಶುರು ಮಾಡುತ್ತಿದ್ದರು. ಅದನ್ನೆಲ್ಲ ಮುಗಿಸುವ ಹೊತ್ತಿಗೆ, ಇದರ ಬದಲು ನಾನೇ ಮಾಡಿಕೊಳ್ಳಬಹುದಿತ್ತು, ಇಷ್ಟೆಲ್ಲ ಸವರಣಿಗೆ ಮಾಡುವ ಬದಲು… ಅಂತಲೂ ಅನಿಸುತ್ತಿತ್ತು. ಮೊನ್ನೆ ಒಂದು ದಿನ, “ಇವತ್ತು ಎಲ್ಲ ಕಿಟಕಿಗಳ ಗ್ಲಾಸ್ ಒರೆಸಿಕೊಡಿ’ ಅಂದೆ… ಎಲ್ಲ ಸಾಮಗ್ರಿ ಒದಗಿಸಿ ಅಡುಗೆ ಮನೆ ಕಟ್ಟೆಯ ಬಳಿ ಇರುವಕಿಟಕಿ ಗ್ಲಾಸ್ ಒರೆಸಲು ಕಟ್ಟೆ ಹತ್ತಿ ಕುಕ್ಕುರುಗಾಲಲ್ಲಿ ಕೂತವರಿಗೆ ಕುರ್ಚಿ ತಂದುಕೊಟ್ಟು ಹೇಳಿದೆ: “ಬಿದ್ದುಬಿಟ್ಟಿರಿ ಮಾರ್ರೆ.. ಹುಷಾರು.. ಸೊಂಟ ಮುರಿದು ಹೋದೀತು..’, “ಮುರ್ದು ಹೋದ್ರೆ ನೀನಿದೀಯಲ್ಲ ನೋಡ್ಕೊಳ್ಳೋಕೆ..’ ಅಂತ ಅವರ ಕೊಂಕು ನುಡಿ… ಮೊದೆಲ್ಲೇ ಈ ಸುಡುಗಾಡು ಕೋವಿಡ್ ದಿಂದಾಗಿ ಮನೆಲಿದ್ದೂ ಇದ್ದೇ ಹೈರಾಣಾಗಿ ಹೋಗಿದೆ ಜೀವ.. ಇನ್ನಷ್ಟು ದಿನ ಮನೆಯಲ್ಲೇ ಕಟ್ಟಿಹಾಕುವ ಹುನ್ನಾರ..! ರೇಗಿಹೋಯಿತು ನನಗೆ. “ಊಹೂಂ..ನೋಡ್ಕೊಳ್ಳಲ್ಲ..ನೋಡ್ಕೊಳ್ಳಕ್ಕೆ ಅಂತ ಜನ ಗೊತ್ತುಮಾಡ್ತೀನಿ ಅಷ್ಟೇ..’ “ಒಂದೇ ಒಂದು ರಿಕ್ವೆಸ್ಟ್.’, “ಹೇಳಿ..’ “ಆಂಟಿ ಬೇಡ..ಯಾರಾದ್ರೂ ಒಳ್ಳೆಯ ಹುಡುಗಿ ನರ್ಸ್ ಇದ್ರೆ ನೋಡು..’. ಸಿಟ್ಟಿನಿಂದ ನೋಡಿದೆ- ಸೊಂಟವೇ ಮುರಿದು ಎದ್ದೇಳ ಲಾರ ದವರಿಗೆ… ನರ್ಸ್ ಯಾರಾದರೇನು? ಏನು ಜೀವನೋತ್ಸಾಹವಪ್ಪ….