Advertisement
ಓಡಿಹೋಗಿ ಗೆಲ್ಲಿನ ತುಂಬ ಒತ್ತೂತ್ತಾಗಿ ತುಂಬಿಕೊಂಡ ಹೂವಿನ ಸಾಲನ್ನು ಸವರಿ ಪ್ರೀತಿಸಬೇಕೆನಿಸಿತು. ಆ ಕಡೆ ತಿರುಗಿದರೆ ಅರಳಿದ ಕೆಂಪು ಗುಲಾಬಿ, ರೇಷ್ಮೆ ನುಣುಪಿನ ಸುಗಂಧಭರಿತ ಪನೀರ್ ಗುಲಾಬಿ, ಬಣ್ಣ ಬಣ್ಣದ ದಾಸವಾಳಗಳು, ಬಿಳಿನೀಲಿ ಶಂಖಪುಷ್ಪ , ಬಿಳಿ ನಗೆಯ ಬೆಳ್ಳಿ ತುಂಡುಗಳಂತೆ ಮಲ್ಲಿಗೆಯ ಪುಟ್ಟ ಪುಟ್ಟ ಬಿಳಿ ಬಾಯಿಗಳು “”ನಾನು ಬೇಡವೆ” ಎನ್ನುವಂತೆ ನನ್ನನ್ನು ಆರ್ತವಾಗಿ ನೋಡಿದಂತೆನಿಸಿತು. ಕೈತೋಟದ ಗಿಡಗಳೆಲ್ಲ ನನ್ನೊಂದಿಗೆ ಸಂಭಾಷಿಸುತ್ತಿದ್ದವು. ನನ್ನ ಅಡಿಗೆ ಕೋಣೆಯ ಕಿಟಕಿಯಿಂದ ಕಾಣುವ ಈ ಪುಟ್ಟ ಪುಷ್ಪ ಪ್ರಪಂಚದೊಡನೆ ನಾನು ಯಾವಾಗಲೂ ಸಂಪರ್ಕದಲ್ಲಿರುತ್ತೇನೆ. ಹೂವಿನ ಮುಖದಲ್ಲಿರುವ ಹೊಳೆವ ಕಣ್ಣುಗಳನ್ನು ಗುರುತಿಸುತ್ತೇನೆ. ಎಸಳಿನ ಸ್ನಿಗ್ಧತೆಯಲ್ಲಿರುವ ಭಾವ ನವಿರನ್ನು ಅನುಭವಿಸುತ್ತೇನೆ. ಎಲೆಯ ಹಸಿರಿನ ಜೀವನೋತ್ಸಾಹವನ್ನು ಶ್ಲಾ ಸುತ್ತೇನೆ. ಇವುಗಳೆಲ್ಲ ನನ್ನ ಕೆಲಸಗಳಿಗೆ ಉಲ್ಲಾಸ ತುಂಬುತ್ತದೆ.
Related Articles
ಮೊನ್ನೆ ಕಾಲೇಜಿಗೆ ಹೋಗುವ ನನ್ನ ಪರಿಚಯದ ಹುಡುಗಿಯೊಬ್ಬಳು ನಮ್ಮ ಮನೆಗೆ ಬಂದಿದ್ದಳು. ಅವಳು ನನ್ನೊಡನೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಮೊಬೈಲಲ್ಲೇ ಕಣ್ಣು ನೆಟ್ಟಿರುತ್ತಿದ್ದಳು. “”ಒಂದು ಗಳಿಗೆ ಆ ಮೊಬೈಲನ್ನು ಆಫ್ ಮಾಡಿ ನನ್ನೊಡನೆ ಮಾತಾಡು” ಎಂದೆ. ಆಕೆ, “”ಅಯ್ಯೊ, ಆಂಟಿ ತುಂಬಾ ವಾಟ್ಸಾಪ್ ಮೆಸೇಜ್ ಬಂದಿದೆ. ಎಲ್ಲಾ ನೋಡ್ತಾ ಇದ್ದೇನೆ” ಎಂದಾಗ ನಾನು, “”ಹಾಗಾದರೆ ನೀನಿಲ್ಲಿಗೆ ಬಂದದ್ದು ಯಾಕೆ, ಮೆಸೇಜ್ ನೋಡಿಕೊಂಡು ಮನೆಯಲ್ಲೇ ಇರ್ಬೇಕಿತ್ತು” ಎಂದೆ. ಕೊಂಚ ಅಸಹನೆಯಿಂದ ಆಕೆ ಮೊಬೈಲ್‌ನಿಂದ ಮತ್ತೂ ಕಣ್ಣು ಕೀಳದೆ, “”ಸಾರಿ ಆಂಟಿ, ನೀವು ಹೇಗೆ ಮನೆಯಲ್ಲಿ ಟೈಂಪಾಸ್ ಮಾಡ್ತೀರಿ. ಬೋರ್ ಆಗುವುದಿಲ್ಲವೆ” ಎಂದಳು. ನನಗೆ ನಗು ಬಂತು.
Advertisement
ಮೊಬೈಲ್, ಲ್ಯಾಪ್‌ಲಾಪ್, ಗೂಗಲ್‌ಗಳು ತೋರಿಸುವ ಅಸಂಖ್ಯಾತ ಸಂದೇಶ, ಮಾಹಿತಿಗಳ ಮಹಾಪೂರದಲ್ಲಿ ಕಳೆದುಹೋಗುತ್ತಿರುವ ಇವರು ಒಳಗೆ ಹುಟ್ಟಬಹುದಾದ ಭಾವನೆಗಳಿಗೆ ಸ್ಪಂದಿಸುವುದು ಯಾವಾಗ. ಇವರಲ್ಲಿ ಪ್ರಶ್ನೆಗಳು, ಕುತೂಹಲಗಳೇ ಹುಟ್ಟುವುದಿಲ್ಲವೆ ಎಂಬ ಅನುಮಾನ ನನ್ನನ್ನು ಕಾಡತೊಡಗಿತು. ಎಲ್ಲ ಅಕಾಡೆಮಿಕ್ ಪ್ರಶ್ನೆಗಳಿಗೂ ಸಿದ್ಧ ಉತ್ತರಗಳ ಪಡೆಯೇ ಪ್ರತ್ಯಕ್ಷವಾಗುತ್ತಿರುವಾಗ ಯೋಚಿಸುವ, ಚಿಂತಿಸುವ, ಸಂಭಾಷಿಸುವ ಗೊಡವೆಯೇ ಇಲ್ಲ. ಹಾಗಾಗಿ ಇಂಥವರಿಗೆ ದಿನರಾತ್ರಿ ಮೊಬೈಲ್ ಕೈಯ್ಯಲ್ಲಿರಲೇಬೇಕು. “”ಮೊಬೈಲ್ ಕೈಯ್ಯಲ್ಲಿ , ಕಣ್ಣು ಮೊಬೈಲಲ್ಲಿ” ಇದು ಅವರ ಅತ್ಯುತ್ತಮವಾದ ಟೈಂಪಾಸ್. ಕೈಯಲ್ಲಿ ಮೊಬೈಲ್ ಇಲ್ಲವಾದರೆ ಅವರಿಗೆ ಟೈಂಪಾಸ್ ಆಗುವುದಿಲ್ಲ. ಅಂಥವರು “ಬೋರ್’ ಜೀವನವನ್ನು ಸಾಗಿಸುತ್ತಿದ್ದಾರೆ ಎನ್ನುವುದು ಈ ಮನಸುಗಳ ತರ್ಕ.
ಯಾವ ಮನಸು ತನ್ನ ಬುದ್ಧಿಯನ್ನು ಖಾಲಿಯಾಗಿ ಜಡವಾಗಿರಲು ಬಿಟ್ಟಿರುತ್ತದೊ ಆಗ ಅಲ್ಲಿ ತಥಾಕಥಿತ “ಬೋರ್’ ಎಂಬ ಶಬ್ದದ ಅರ್ಥ ಉಗಮಿಸುತ್ತದೆ. ಖಾಲಿ ಮನಸಿಗೆ ಟೈಂಪಾಸ್ ನಿಜಕ್ಕೂ ಕಷ್ಟ. ಮನಸ ಮಣಿಸಬಹುದಾದ ಮನುಜನಿಗೆ ಮನಸೆಲ್ಲ ಖಾಲಿ. ಶೂನ್ಯ ಮನಸ್ಕತೆಯ ಅನುಭವ ಎಂದರೆ ಇದೇ ನಮ್ಮ ಮನಸ್ಸು ಖಾಲಿಯಾಗದಂತೆ ತಡೆಯುವುದು ನಮ್ಮ ಕೈಯಲ್ಲಿಯೇ ಇದೆ.
ಗೃಹಿಣಿಗೆ ಮನೆಕೆಲಸದ ಜೊತೆಗೆ ಅಂಗಳದಲ್ಲೊಂದು ಪುಟ್ಟ ಹೂವಿನ ಕೈತೋಟವನ್ನು ನಿರ್ಮಿಸಿಕೊಂಡು ತನ್ನ ಒಲವಿನ ವಲಯವನ್ನು ವಿಸ್ತರಿಸಿಕೊಳ್ಳಬಹುದು. ಗಿಡಗಳನ್ನು ನೆಟ್ಟು ಅದಕ್ಕೆ ನೀರು ಗೊಬ್ಬರ ಹಾಕಿದಾಗ ವಿಕಸಿಸುವ ಎಲೆ, ಮೊಗ್ಗು, ಗೆಲ್ಲುಗಳ ಲೆಕ್ಕವಿಡುತ್ತ, ಅರಳುವ ಹೂಗಳೊಂದಿಗೆ ಖುಷಿಯ ಸಲ್ಲಾಪದಲ್ಲಿ ತೊಡಗಿಕೊಳ್ಳಬಹುದು. ಬೆಳೆಯುವ ಮಕ್ಕಳಿಗೆ ಕೆಟ್ಟ ಹುಡುಗರ ಸಹವಾಸದಿಂದ ಅಸ್ವಸ್ಥ ಬುದ್ಧಿ ಬರುವಂತೆ, ಹುಳ-ಹಾತೆಯ ಬಾಧೆಯಿಂದ ಮೊಗ್ಗು, ಎಲೆಗಳು ಸುರುಟುತ್ತ ಹೋದರೆ ಅದರ ಆರೈಕೆಯೆಡೆಗೆ ಗಮನಹರಿಸಿದರೆ ಅದು ಮತ್ತೆ ಅರಳಿ ನಳನಳಿಸಿ ಖುಷಿಯ ಕಣಜವಾಗುತ್ತದೆ. ಇದು ಗೃಹಿಣಿಗೆ ವ್ಯಾಯಾಮದೊಂದಿಗೆ ಒಡಲ ಲವಲವಿಕೆಯನ್ನು ಪಡೆಯಬಹುದಾದ ಸರಳ ಉಪಾಯ. ಇದು ಮನೆಯ ಸುತ್ತ ನಮಗೆ ಶುದ್ಧ ಆಮ್ಲಜನಕದ ಜೊತೆಗೆ ಹಿತವಾದ ಪರಿಸರವನ್ನು ಸೃಷ್ಟಿಸಿಕೊಡುತ್ತದೆ.
ಇನ್ನೊಂದು ಉತ್ತಮ ಹವ್ಯಾಸವೆಂದರೆ ಓದುವುದು. ಇದು ಟೈಂಪಾಸ್ ಎಂಬ ಪದವನ್ನು ಹೈಜಾಕ್ ಮಾಡಬಹುದಾದ ಒಂದು ಚಮತ್ಕಾರ. ಯಾವುದನ್ನು ಓದಬೇಕು ಎನ್ನುವುದೂ ಆಕೆಯ ಆಸಕ್ತಿಯ ಹಾಗೂ ಬುದ್ಧಿ ವಿಸ್ತಾರ ದಾಹದ ಮೇಲೆ ಅವಲಂಬಿತವಾಗಿರುತ್ತದೆ.
ನಮ್ಮ ಪಕ್ಕದ ಮನೆಯ ಮಹಿಳೆಯೊಬ್ಬರು ನನಗೆ ಆಗಾಗ ಮಾತನಾಡಲು ಸಿಗುತ್ತಾರೆ. ಹೀಗೆ ಮಾತನಾಡುತ್ತ ನಾನು “”ಪುಸ್ತಕ ಓದುವುದೆಂದರೆ ನನಗೆ ಇಷ್ಟ” ಎಂದೆ. ಅದಕ್ಕವರು, “”ನನಗೂ ಇಷ್ಟ” ಎಂದರು. ನಾನು ಖುಷಿಯಿಂದ “”ಹೌದಾ, ಯಾವ ಪುಸ್ತಕ ಇಷ್ಟಪಡ್ತೀರಿ” ಎಂದು ಕೇಳಿದೆ. ಅದಕ್ಕವರು ಕೂಡಲೆ, “”ಅಡುಗೆ ಪುಸ್ತಕ” ಎಂದರು. ನನಗೆ ಕೊಂಚ ನಿರಾಶೆಯಾಯಿತು.
“”ನಮ್ಮ ಮನೆಯಲ್ಲಿ ದಿನಾ ಹೊಸರುಚಿ ಪ್ರಯೋಗ. ನನ್ನ ಗಂಡ ನಾನು ಮಾಡಿದ್ದೆಲ್ಲ ತಿನ್ನುತ್ತಾರೆ” ಎಂದರು. ನನಗೆ ಅಯ್ಯೋ ಪಾಪ ಎನಿಸಿತು. ಪ್ರತಿದಿನದ ಹೊಸರುಚಿ ಪ್ರಯೋಗವನ್ನು ಸಹಿಸಿಕೊಳ್ಳುವ ಅವರ ಗಂಡನ ಸಹನೆಯನ್ನು ಮೆಚ್ಚಬೇಕು ಎಂದುಕೊಂಡೆ. ಅಡುಗೆ ಪುಸ್ತಕ ಓದುವುದೆಲ್ಲ ಅಷ್ಟೊಂದು ಉತ್ತಮ ಹವ್ಯಾಸ ಎನಿಸುವುದಿಲ್ಲ. ಇದರ ಪ್ರಯೋಗದಲ್ಲಿ ಸಮಯ, ಶ್ರಮ ಎರಡೂ ವ್ಯರ್ಥವಾಗುವುದೇ ಹೆಚ್ಚು. ಎಲ್ಲಿಯಾದರೂ ಅಪರೂಪಕ್ಕೆ ಸರಿ ಆಗುವುದು ಇದೆ. ಆದರೆ, ವೃಥಾ ತೊಂದರೆಗೊಳಗಾಗುವುದಕ್ಕಿಂತ, ನಮಗೆ ತಿಳಿದ ಯಾರಾದರೂ ಮಾಡಿ ಅನುಭವವಿದ್ದವರಲ್ಲಿ ಕೇಳಿ ಮಾಡಿದರೆ ಇಂಥ ಅವಸ್ಥೆ ಇರುವುದಿಲ್ಲ.
ವಿಜಯಲಕ್ಷ್ಮಿ ಶ್ಯಾನ್‌ಭೋಗ್