ಬೆಂಗಳೂರು: ಮತ್ಯಾಶ್ರಯ ಯೋಜನೆಯಡಿ ಮೀನುಗಾರರಿಗೆ 5 ಸಾವಿರ ಮನೆಗಳನ್ನು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ 5 ಸಾವಿರ ವಸತಿ ರಹಿತ ಮೀನುಗಾರರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಆದ್ಯತೆ ಮೇರೆಗೆ ಮನೆಗಳನ್ನು ನಿರ್ಮಿಸಲಾಗುವುದು. ವಸತಿ ಇಲಾಖೆಯಲ್ಲಿ ಜಾರಿಯಲ್ಲಿರುವ ಸಹಾಯಧನ ಮಾದರಿಯಂತೆ ಹಾಗೂ ನಿಗಮದ ಮಾನದಂಡಗಳನ್ನು ಒಳಗೊಂಡಂತೆ ಮನೆ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ. ಈ ಮೂಲಕ ಮೀನುಗಾರರ ವಿಷಯದಲ್ಲಿ ನಮ್ಮ ಸರಕಾರ ನುಡಿದಂತೆ ನಡೆದಿದೆ ಎಂದು ಹೇಳಿದರು.
2022-23ನೇ ಸಾಲಿನಲ್ಲಿ 858 ಪರಿಶಿಷ್ಟ ಜಾತಿ ಹಾಗೂ 348 ಪರಿಶಿಷ್ಟ ಪಂಗಡ ಹಾಗೂ 3,794 ಸಾಮಾನ್ಯ ವರ್ಗಕ್ಕೆ ಸೇರಿದವರು ವಸತಿ ಇಲಾಖೆಯಡಿ ಮನೆ ಪಡೆಯುವ ಫಲಾನುಭವಿಗಳಿದ್ದಾರೆ. ಆದರೆ, ಮತ್ಸಾéಶನ ಯೋಜನೆಯಡಿ ವಸತಿ ರಹಿತ ಮೀನುಗಾರರಿಗೆ ಮನೆಗಳನ್ನು ಮಂಜೂರು ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ 3,794 ಸಾಮಾನ್ಯ ವರ್ಗಕ್ಕೆ ಸೇರಿದ ಫಲಾನುಭವಿಗಳಿಗೆ ದೇವರಾಜ ಅರಸು ವಸತಿ ಯೋಜನೆಯೊಂದಿಗೆ ಅವಕಾಶವಿರುವ ರಾಜ್ಯ ವಸತಿ ಯೋಜನೆಗಳಡಿ 2021-22ನೇ ಸಾಲಿಗೆ ನೀಡಲಾದ ಮನೆಗಳ ಗುರಿಯನ್ನು ಪರಿಗಣಿಸುವಂತೆ ವಸತಿ ಇಲಾಖೆಯಿಂದ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ತಿಳಿಸಲಾಗಿದೆ.
ಜತೆಗೆ ಪ.ಜಾತಿ ಹಾಗೂ ಪ.ಪಂಗಡಕ್ಕೆ ಸೇರಿದ 1,206 ಫಲಾನುಭವಿಗಳಿಗೆ ಡಾ| ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಗಳಡಿ ಗ್ರಾಮೀಣ ಮತ್ತು ನಗರದ 2021-22ನೇ ಸಾಲಿಗೆ ನೀಡಲಾದ ಮನೆಗಳ ಗುರಿಯನ್ನು ಪರಿಗಣಿಸುವಂತೆಯೂ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.