ಈಕೋವಿಡ್ ಎನ್ನುವ ಕಿರಾತಕನಿಂದ ಎಷ್ಟೆಲ್ಲಾ ತೊಂದರೆಯಾಗಿದೆ ಗೊತ್ತಾ? ಕೋವಿಡ್ ಪಾಸಿಟಿವ್ ಅಂತ ಆಸ್ಪತ್ರೆಗೆ ಸೇರಿರುವ ಜನರ ಬಗ್ಗೆ ಅಥವಾ ಅವರ ಕಷ್ಟಗಳ ಬಗ್ಗೆ ನಾನಿಂದು ಹೇಳಲುಹೊರಟಿಲ್ಲ. ಗಟ್ಟಿ ಮುಟ್ಟಾಗಿ ತಿಂದುಂಡು, ತಿರುಗಿ, ನನ್ನ ಪಾಡಿಗೆ ನಾನು ಶಿವನೇ, ಎಂದು ಹಾಯಾಗಿದ್ದರೂ, ಅದಿಲ್ಲ, ಇದಿಲ್ಲ ಎಂದು ಕೊರಗುತ್ತಿದ್ದ ನನ್ನ ಬಗ್ಗೆ ಹಾಗೂ ನನ್ನಂತಹಾ ಗೃಹಿಣಿಯರ ಬಗ್ಗೆ ಒಂದಷ್ಟು ಹೇಳ್ಕೊಬೇಕಾಗಿದೆ ನಾನು. ತೆರೆ ಮರೆಯ ಕಾಯಂತೆ, ಮನೆಯಲ್ಲೇ ಇದ್ದರೂ ಒದ್ದಾಡುತ್ತಿರುವ ಗೃಹಿಣಿಯರ ಕಷ್ಟ ಕಾರ್ಪಣ್ಯಗಳು ಹೊರಗಿನ ಜನರಿಗೆ ತಿಳಿಯುವುದೇ ಇಲ್ಲ. ಹೊರಗಿನ ಜನರಿಗೇಕೆ? ನಮ್ಮೊಡನಿರುವ ಮನೆಯವರಿಗೇ ಅರ್ಥವಾಗುವುದಿಲ್ಲ.
ಹೇಗೆ ಎನ್ನುತ್ತೀರಾ? ಕೇಳಿ : ಕೋವಿಡ್ ಕಾರಣಕ್ಕೆ ಈಗ ನನ್ನಂಥವರು ಹೊರಗೆಲ್ಲೂ ಹೋಗುವಂತಿಲ್ಲ, ಹೋಟೆಲ್ಲಿನ ಊಟ- ತಿಂಡಿ ತಿನ್ನುವ ಹಾಗಿಲ್ಲ. ಮನೆಯ ಕೆಲಸ ಮಾಡಿಕೊಡಲು ಕೆಲಸದವಳು ಇಲ್ಲ.ಇಷ್ಟರ ಮೇಲೆ ಮಕ್ಕಳಿಗೆ ಸ್ಕೂಲಿಲ್ಲ. ಗಂಡನಿಗೆ ಮನೆಯೇ ಆಫೀಸ್!ಹೀಗಿರುವಾಗ ನಮ್ಮ ಪಾಡು ಕೇಳುವವರ್ಯಾರು? ಡಾಕ್ಟರ್‌ಗಳಿಗೆ, ನರ್ಸ್‌ಗಳಿಗೆ, ಪೊಲೀಸರಿಗೆ, ಕೋವಿಡ್ ವಾರಿಯರ್ಸ್ ಎಂದು ಚಪ್ಪಾಳೆ ತಟ್ಟಿದ್ದೇ ತಟ್ಟಿದ್ದು. ಗೃಹಿಣಿಯರಿಗಾಗಿ ಎಂದಾದರೂ, ಯಾರಾದರೂ ಚಪ್ಪಾಳೆ ತಟ್ಟಿದ್ದಾರಾ? ಇಲ್ಲ! ನಾನು ಮುಂದೆ ಹೇಳುವ ವಿಷಯಗಳನ್ನು ಓದಿಯಾದರೂ ಗೃಹಿಣಿಯರ ಬಗ್ಗೆ ಕಾಳಜಿ ತೋರಿ. ಚಪ್ಪಾಳೆ ಬೇಡ. ಕನಿಷ್ಟ ಪಕ್ಷ ಒಂದು ಪ್ರೋತ್ಸಾಹದ ಮಾತು ಹೇಳಿ…
ಡಬಲ್ ಕೆಲಸದ ಹೊರೆ : ಗೃಹಿಣಿಯಾದವಳು, ಬೆಳಗ್ಗೆ ಎಷ್ಟೇ ಬೇಗ ಎದ್ದರೂ, ಸಮಯ ಸಾಲುವುದೇ ಇಲ್ಲ. ಕಸ ಗುಡಿಸಿ, ನೆಲ ಒರೆಸಿ, ಪಾತ್ರೆ ತೊಳೆದು, ತಿಂಡಿ ಮಾಡುವಷ್ಟರಲ್ಲಿ ಗಂಡ-ಮಕ್ಕಳು ಎದ್ದು ಬರುತ್ತಾರೆ. ಹಾ! ಅವರು ಏಳುವ ತನಕ ಕೆಲವು ಕೆಲಸಗಳಿಗೆ ಬ್ರೇಕ್! ಅವರಿಗೆ ಎಚ್ಚರವಾಗಿಬಿಟ್ಟರೆ?- ಎಂಬ ಕಾರಣಕ್ಕೆ… ನಂತರದ ಕಥೆ ಕೇಳಿ; ಕೋವಿಡ್ ಕಾರಣದಿಂದ ಗಂಡನಿಗೆ ಮನೆಯಿಂದಲೇ ಕೆಲಸ. ಅವರು ಪೋನ್ ಹಿಡಿದು “ಕಾಲ್’ ಅಥವಾ ಮೀಟಿಂಗ್ ಎಂದು ಕುಳಿತರೆ, ಕುಳಿತಲ್ಲಿಂದ ಏಳುವುದೇ ಇಲ್ಲ. ಇದ್ದಲ್ಲಿಗೇ ಕಾಫಿ, ತಿಂಡಿ ಸಪ್ಲೆ„ ಮಾಡಬೇಕು. ಇನ್ನು ಮಕ್ಕಳನ್ನು ಹಿಡಿದು, ಆನ್‌ಲೈನ್ ಕ್ಲಾಸ್‌ಗೆ ಕೂರಿಸುವ ಕಷ್ಟ, ಅಮ್ಮಂದಿರಿಗೇ ಗೊತ್ತು. ಆಟ ಆಡಲು ಬಿಂದಾಸಾಗಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಬಳಸುವ ಮಕ್ಕಳು, ಪಾಠ ಎಂದೊಡನೆ,ಇಲ್ಲದ ರಗಳೆ ತೆಗೆಯುತ್ತಾರೆ. ಕಷ್ಟಪಟ್ಟು ಕೂರಿಸಿದರೂ, ನಿಮಿಷಕ್ಕೊಮ್ಮೆ ಅಮ್ಮಾ ಎನ್ನುವ ಕೂಗು. ಮಾಡುತ್ತಿರುವ ಕೆಲಸ ಬಿಟ್ಟು ಓಡಿ ಹೋದರೆ, ತಿನ್ನಲು ಏನಾದರೂ ಕೊಡು ಎನ್ನುವ ಕೋರಿಕೆ. ಈ ಏನಾದರೂ ಎನ್ನುವ ಪದ ಕೇಳಿ ಕೇಳಿ ನನಗೂ ಸಾಕಾಗಿ ಹೋಗಿದೆ. ಏನನ್ನು ಕೊಟ್ಟರೂ ಆ “ಏನಾದರೂ’ ಮುಗಿಯುವುದೇ ಇಲ್ಲ. ಮಕ್ಕಳು ಕೂಗಿದ ತಕ್ಷಣ, ಗಂಡನ ಕೋಪ ನೆತ್ತಿಗೇರುವುದು. ಮಗು ಕೂಗ್ತಾ ಇದೆ, ಕೇಳಲ್ವಾ? ಏನು ಎಂದು ನೋಡಬಾರದಾ? ಬೇಗ ಹೋಗಿ ನೋಡು, ನಂಗೆ ಡಿಸ್ಟರ್ಬ್ ಆಗ್ತಿದೆ!- ಎಂಬುದು ಅವರ ಸಿಡಿಮಿಡಿಯ ಮಾತು.
ಸೈಲೆನ್ಸ್ ಪ್ಲೀಸ್… : ಸರಿ, ಮಕ್ಕಳ ಕೂಗಿಗೆ “ಆ’ ಅಂದದ್ದು ಮುಗಿದ ತಕ್ಷಣ, ನನ್ನ ಕೆಲಸಗಳು ಮುಗಿಯುತ್ತವೆಯೇ? ಇಲ್ಲ, ಇಲ್ಲವೇ ಇಲ್ಲ. ನಿಜ ಹೇಳಬೇಕೆಂದರೆ, ಈಗ ಮುಂಚೆಗಿಂತಲೂ ಹೆಚ್ಚಿನ ಕೆಲಸ ಅಡುಗೆ ಮನೇಲಿ. ಮುಂಚೆ ಗಂಡ- ಮಕ್ಕಳು, ಆಫೀಸ್, ಶಾಲೆ, ಎಂದು ಹೋದಾಕ್ಷಣ ನಾನೂ ಆರಾಮಾಗಿ ಟಿವಿ ನೋಡಿಕೊಂಡು ಇರುತ್ತಿದ್ದೆ ಇಲ್ಲವಾದರೆ, ಸ್ನೇಹಿತೆಯರ ಜೊತೆ ಮಾತುಕತೆ, ಹರಟೆ, ಇಲ್ಲವೇ ಶಾಪಿಂಗ್ ಎಂದು ಹೋಗಿಬಿಡುತ್ತಿದ್ದೆ. ಹಾಗೆ ಇದ್ದವಳಿಗೆ ಈಗ ಇದ್ದಕ್ಕಿದ್ದಂತೆಯೇ ಕೆಲಸದ ಮೇಲೆ ಕೆಲಸ. ಶಾಪಿಂಗ್ ಬೇಡ, ಪೋನ್ ಸಂಭಾಷಣೆಗೂ ಕತ್ತರಿ ಬಿದ್ದಿದೆ.ಬೆಳಗ್ಗೆ ತಿಂಡಿ, ಮದ್ಯಾಹ್ನ ಊಟ, ಸಂಜೆ ಮತ್ತೆ ತಿಂಡಿ, ರಾತ್ರಿ ಊಟ. ಇಷ್ಟರ ನಡುವೆ ಮಧ್ಯೆ ಮಧ್ಯೆ ಸ್ವಾದೋದಕ! ಕಾಫಿ, ಟೀ, ಅಲ್ಲದೆ, ಈ ಕೋವಿಡ್‌ನ ದೆಸೆಯಿಂದಾಗಿ ಕಷಾಯವನ್ನೂ ಮಾಡಬೇಕು! ಸ್ವಾರಸ್ಯ ಕೇಳಿ: ನಾನು ಈ ಎಲ್ಲಾ ಬೇಕು ಬೇಡಗಳನ್ನೂ ಪೂರೈಸಬೇಕು, ಆದರೆ ಶಬ್ದ ಮಾಡ ಬಾರದು! ಒಂದು ಚಮಚ ಕೈ ತಪ್ಪಿ ಕೆಳಗೆ ಬೀಳುವಂತಿಲ್ಲ. ಇನ್ನು ಕುಕ್ಕರ್, ಮಿಕ್ಸರ್ ಗ್ರೈಂಡರ್ ನಿಂದ ಜಾಸ್ತಿ ಸಡ್ಡು ಬರುವಂತೆಯೇ ಇಲ್ಲ. ಆದರೆ ಅಡುಗೆ ಮಾತ್ರ ರುಚಿ ರುಚಿಯಾಗಿ ಇರಬೇಕು! ಕುಕ್ಕರ್ ಕೂಗಿದರೆ, ಆನ್‌ಲೈನ್ ಮೀಟಿಂಗ್‌ನಲ್ಲಿ ಕೂತಿರುವ ಎಲ್ಲರಿಗೂ ಆ ಸದ್ದು ಕೇಳುತ್ತದೆ ಎನ್ನುವ ರೇಗಾಟ ಯಜಮಾನರದ್ದು.
ಅವಳ ಕೆಲಸ ಕಡಿಮೆ ಮಾಡಿ… : ಹೆಚ್ಚಿಗೆ ಬೇಡ, ಸಣ್ಣ ಪುಟ್ಟ ಕೆಲಸಗಳನ್ನು ಗಂಡ-ಮಕ್ಕಳು ಹಂಚಿ ಕೊಂಡರೆ, ನಮಗೂ ಸಹಾಯವಾಗುವುದಿಲ್ಲವೇ? ಉದಾಹರಣೆಗೆ, ಊಟ ಮಾಡಿದ, ತಿಂಡಿ ತಿಂದ ತಟ್ಟೆಗಳನ್ನು ತಾವೇ ತೊಳೆದಿಡುವುದು. ನೀರು, ಕಾಫಿ, ಟೀ ಲೋಟಗಳನ್ನು ತೊಳೆಯುವುದು. ಆಗ ಗೃಹಿಣಿಯರಿಗೂ ಸಹಾಯವಾಗುತ್ತದೆ. ಗಂಡ- ಮಕ್ಕಳೂ ಅಲ್ಪ ಸ್ವಲ್ಪ ಮನೆ ಕೆಲಸ ಕಲಿತಂತಾಗುತ್ತದೆ.
ಒಟ್ಟಿನಲ್ಲಿ ಗೃಹಿಣಿಯರೂ ಕೂಡಾ ಒಂದು ರೀತಿಯಲ್ಲಿ ವಾರಿಯರ್ಸ್ ಯೇ! ಎಲ್ಲರಿಗೂ ಆಗಾಗ ರಜೆ ಸಿಗುತ್ತದೆ. ಆದರೆ ನಮಗಿಲ್ಲ. ಈಚೆಗಂತೂ ವಾರಾಂತ್ಯ, ವಾರದ ದಿನ, ಅಷ್ಟೇ ಏಕೆ? ಕೆಲವು ದಿನದ ತಾರೀಖು ಕೂಡಾ ಗೊತ್ತಿರುವುದಿಲ್ಲ! ಎಲ್ಲಾ ದಿನಗಳೂ ಒಂದೇ ರೀತಿಯಿದ್ದು ಏಕತಾನತೆಯಿಂದ ಕೂಡಿರುತ್ತದೆ. ಎಲ್ಲಾ ಸರಿಯಿದ್ದೂ, ಮತ್ತೇನೋ ಇಲ್ಲ ಎಂದು ಕೊರಗುತ್ತಿದ್ದ ನಮಗೆ, ಮುಂಚಿನ ತರಹ ಆದರೆ ಸಾಕಪ್ಪಾ ಎನ್ನುವಂತಾಗಿದೆ. ಯಾರು ಪೋ›ತ್ಸಾಹಿಸಲೀ, ಬಿಡಲೀ, ಸೂಟಿಯಿಲ್ಲದೇ ಎಲ್ಲಾ ಕೆಲಸಗಳನ್ನೂ ಪೂರೈಸುತ್ತಿರುವ ಜಗತ್ತಿನ ಎಲ್ಲಾ ಗೃಹಿಣಿಯರಿಗೆ ದೊಡ್ಡ ಚಪ್ಪಾಳೆ!
-ಲಾವಣ್ಯಗೌರಿ ವೆಂಕಟೇಶ್