Advertisement

ಸೂರು ನೀಡುವ ಎಚ್‌ಡಿಕೆ ಕನಸು ಭಗ್ನ

02:17 PM Jun 18, 2022 | Team Udayavani |

ರಾಮನಗರ: ಪ್ರತಿಯೊಬ್ಬರಿಗೂ ಸೂರು ನೀಡಬೇಕೆಂಬ ಸರ್ಕಾರದ ಮಹತ್ತರ ಯೋಜನೆಯೊಂದು 15 ವರ್ಷ ಕಳೆದರೂ ಸಾಕಾರಗೊಳ್ಳದೆ ಪಾಳು ಬಂಗಲೆಗಳಾಗಿ ನಿರ್ಮಾಣಗೊಂಡಿದ್ದು, ಅಕ್ರಮಗಳ ಅಡ್ಡೆಯಾಗಿ ಪರಿವರ್ತನೆಯಾಗುತ್ತಿವೆ.

Advertisement

ಮಾಜಿ ಸಿಎಂ ಕುಮಾರಸ್ವಾಮಿ ಪ್ರಥಮ ಭಾರಿಗೆ ಮುಖ್ಯ ಮಂತ್ರಿಯಾಗಿದ್ದ ವೇಳೆ ಸ್ವಕ್ಷೇತ್ರವನ್ನು ಗುಡಿಸಲು ಹಾಗೂ ನಿರಾಶ್ರೀತ ರಹಿತ ಕ್ಷೇತ್ರವನ್ನಾಗಿಸುವ ಮಹತ್ತರ ಕನಸಿನೊಂದಿಗೆ ಯೋಜನೆಗಳನ್ನ ರೂಪಿಸಿ ದ್ದರು. ಅದರ ಫಲವಾಗಿ ಕೆಂಗಲ್‌ ಬಳಿಯ ದೊಡ್ಡಮಣ್ಣುಗುಡ್ಡೆ ದೊಡ್ಡಿ ಸರ್ವೆ ನಂ.1ರಲ್ಲಿ ಗುರ್ತಿಸಲಾಗಿದ್ದ ಜಮೀನಿನಲ್ಲಿ ಪ್ರಮುಖವಾಗಿ ಕೊಳಚೆ ನಿರ್ಮೂಲನ ಮಂಡಳಿ (ಕೊಳಗೇರಿ ಅಭಿವೃದ್ಧಿ ಮಂಡಳಿ) ವತಿ ಯಿಂದ 1280 ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಬಹುಶಃ ಅದೇ ವೇಗದಲ್ಲಿ ಯೋಜನೆ ಪೂರ್ಣಗೊಂಡಿದ್ದರೆ, ಅಷ್ಟೂ ಜನ ನಿರಾಶ್ರಿತರು ಸೂರಿನಡಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು.

ಡಿಡಿ ಕಟ್ಟಿದ್ದ ಬಡವರು: ಸರ್ಕಾರ ಮನೆ ನಿರ್ಮಿಸಿಕೊಡಲಿದೆ ಎಂಬ ವಿಚಾರ ಬಹಿರಂಗವಾಗುತ್ತಿದ್ದಂತೆ ಅರ್ಜಿ ಸಲ್ಲಿಕೆಗೆ ರಾಮನಗರ ನಗರವಾಸಿಗಳು ತಾಮುಂದು, ನಾಮುಂದು ಎಂದು ಮುಗಿಬಿದ್ದರು. ಆಗ ಪ್ರತಿಯೊಬ್ಬ ಫಲಾನುಭವಿಗಳು ಕೂಡ 5100 ರೂ. ಹಣ ಕಟ್ಟಬೇಕೆಂದು ನಿಯಮವಿತ್ತು. ಸುಸಜ್ಜಿತ ಮನೆ ಯೊಂದು ದೊರಕುತ್ತದೆ ಎಂಬ ಕಾರಣಕ್ಕೆ ಸಾಲ ಸೋಲ ಮಾಡಿದ ಸಾರ್ವಜನಿಕರು, ಬ್ಯಾಂಕ್‌ಗಳಲ್ಲಿ 5100 ರೂಗಳ ಡಿಡಿ ಪಡೆದು ಆಯುಕ್ತರು ಕರ್ನಾಟಕ ಕೊಳಚೆ ನಿರ್ಮೂಲಮ ಮಂಡಳಿ ಅವರಿಗೆ ಸಲ್ಲಿಸಿದ್ದರು.

ಸದರಿ ಹಣ ಪಡೆದ ಸರ್ಕಾರ ಮನೆ ಕಟ್ಟುವ ಕಾಮಗಾರಿಗೆ ಚಾಲನೆ ನೀಡಿತಾದರೂ, ಬಳಿಕ ಅರಣ್ಯ ಇಲಾಖೆ ಸ್ವತ್ತು ತನ್ನದೆಂದು ಖ್ಯಾತೆ ಆರಂಭಿ ಸಿತು. ನಂತರ ಆಸ್ತಿ ಹಸ್ತಾಂತರವೇ ಆಗದೆ ಆಗಿನ ಸಿಎಂ ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಅಧಿಕಾರಿ ಗಳು ಕಾಮಗಾರಿ ಆರಂಭಿಸಿದ್ದರು. ಆದರೆ, ಅರಣ್ಯ ಇಲಾಖೆ ಒಪ್ಪದ ಕಾರಣ 1280 ಮನೆಗಳ ನಿರ್ಮಾ ಣದ ಪೈಕಿ ಸುಮಾರು 240 ಮನೆಗಳ ನಿರ್ಮಾಣವಷ್ಟೇ ಸಾಧ್ಯವಾಯಿತು.

ಎಚ್‌ಡಿಕೆ ಕನಸು ಭಗ್ನ: ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಯೊಬ್ಬರಿಗೂ ಸೂರು ನೀಡಬೇಕೆಂಬ ಆಸೆಯಿಂದ ಯೋಜನೆ ರೂಪಿಸಿದ್ದರೂ ಕೂಡ, ರಾಜಕೀಯ ವ್ಯತ್ಯಾಸದಿಂದಾಗಿ ಅಧಿಕಾರದಿಂದ ಕೆಳಗಿಳಿದ ಬಳಿಕ ಬಂದ ಸರ್ಕಾರ ಮತ್ತು ಅಧಿಕಾರಿಗಳು ಯೋಜನೆ ಬಗ್ಗೆ ಆಸಕ್ತಿ ತೋರದೆ ಹೋಗಿದ್ದು, ಒಂದು ಮಹತ್ತರವಾದ ಯೋಜನೆ ಸಂಪೂರ್ಣವಾಗಲಿಲ್ಲ. ಒಮ್ಮೆ ಲಾಟರಿ ಮುಖಾಂತರ ನಿರ್ಮಾಣಗೊಂಡಿರುವ 240 ಮನೆಗಳನ್ನ ಫಲಾನುಭವಿಗಳಿಗೆ ವಿತರಿಸಲು ಲಾಟರಿ ಮುಖೇನ ಆಯ್ಕೆ ಮಾಡಲಾಯಿತು. ಆದರೆ, ವಿರೋಧ ಹೆಚ್ಚಾಗಿದ್ದರಿಂದ ಅದನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ನಂತರ ಉಳಿದ ಮನೆಗಳ ನಿರ್ಮಾಣಕ್ಕಾಗಿ ಕೊತ್ತಿಪುರ ಬಳಿ ಜಮೀನು ಗುರುತಿಸ ಲಾಗಿತ್ತು. ಅದರಲ್ಲಿಯೂ ಸ್ಥಳೀಯರ ವಿರೋಧ ವ್ಯಕ್ತವಾಗಿದ್ದು, ಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ಪೈಕಿ 6 ಎಕರೆ ಪ್ರದೇಶ ಈಗಾಗಲೇ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

Advertisement

ಗಗನ ಕುಸುಮವಾದ ಸ್ವಂತ ಮನೆ ಕನಸು: ಸೋರು ತಿಹುದು ಮನೆಯ ಮಾಳಿಗೆ ಎನ್ನುವಂತೆ 15 ವರ್ಷಗಳ ಹಿಂದೆ ಕೊ.ನಿ.ಮಂಡಳಿ ವತಿಯಿಂದ ನಿರ್ಮಿಸಲಾಗಿದ್ದ 240 ಮನೆಗಳು ಇಂದು ಪಾಳು ಬಿದ್ದಿವೆ. ಕಿಟಕಿ ಬಾಗಿಲುಗಳು ಕಳ್ಳರ ಪಾಲಾಗಿವೆ. ಇನ್ನು ಹಾಕಿದ್ದ ವಾಟರ್‌ ಲೆನ್‌ ಪೈಪುಗಳು, ಬೋರ್‌ವೆಲ್‌ಗ‌ಳು ಯೂಜಿಡಿ ಕಾಮಗಾರಿ ಪೈಪ್‌ಗ್ಳೂ ಕೂಡ ಕಳ್ಳರ ಪಾಲಾಗಿವೆ. ಪಾಳು ಬಂಗಲೆಯಾಗಿ ಇಂದು ವಾಸ ಮಾಡಲು ಯೋಗ್ಯವಲ್ಲದ ಹಂತ ತಲುಪಿವೆ. ಇಷ್ಟಾದರೂ ಆಡಳಿತ ಶಾಹಿ ಹಾಗು ಅಧಿಕಾರಿ ವರ್ಗ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸಾಲಸೋಲ ಮಾಡಿಯೋ ಬಡ್ಡಿಗೋ ಅಥವಾ ವಡವೆ ಮಾರಿಯೋ ಪ್ರತಿಯೊಬ್ಬರೂ 5100 ರೂ.ಗಳ ಡಿಡಿ ನೀಡಿದ್ದರು. ಅದು 15 ವರ್ಷ ಕಳೆದರು ಅತ್ತ ಮನೆಯೂ ಇಲ್ಲ, ಇತ್ತ ಹಣವೂ ಇಲ್ಲಾ ಎನ್ನುವಂತಾಗಿ ಮತ್ತಷ್ಟು ಕಷ್ಟದ ಬದುಕು ಸವೆಸುತ್ತಿದ್ದಾರೆ.

ಮಾಹಿತಿ ನೀಡಲು ಅಧಿಕಾರಿಗಳ ಹಿಂದೇಟು: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿ ಕಾರಿಗಳನ್ನು ಈ ಬಗ್ಗೆ ಸ್ಪಷ್ಟ ಮಾಹಿತಿಗಾಗಿ ಸಂಪರ್ಕಿಸಿ ದರೂ ಸ್ವಲ್ಪ ಮಾಹಿತಿ ನೀಡಿ ನುಣಚಿಕೊಳ್ಳುವ ಪ್ರಯತ್ನ ನಡೆಸಿದರು. ಇನ್ನು ಇದಕ್ಕೆ ಅರಣ್ಯ ಇಲಾಖೆ ಹೊರತಾಗಿರ ಲಿಲ್ಲ. ಬಡವರಿಗೆ ಸೂರು ನೀಡಬೇಕೆನ್ನುವ ಎಚ್‌ ಡಿಕೆ ಕನಸಿನಿಂದಾಗಿ ಕ.ಕೊನಿಮ ನಿರ್ಮಿಸಿರುವ ಮನೆ ಇಂದು ವಿತರಣೆಯಾಗದೆ, ಹಣ ಕಟ್ಟಿದ್ದವರಲ್ಲಿ ಪತ್ರಕರ್ತರೂ ಸೇರಿದ್ದರು. ಆದರೆ, ಸರ್ಕಾರಕ್ಕೆ ಕಟ್ಟಿದ್ದ ಹಣ ವಾಪಾಸ್ಸಾಗದೆ ಇತ್ತ ಮನೆ ಇಲ್ಲದೆ ಸಂಕಷ್ಟವೇ ಬದುಕಾಗಿದೆ ಎನ್ನುತ್ತಾರೆ. ಎರಡನೇ ಪ್ರಯತ್ನವಾಗಿ ಕೊತ್ತಿ ಪುರ ಬಳಿ ಗುರ್ತಿಸಿರುವ ಜಾಗದ ಗೊಂದಲ ನಿವಾರಣೆ ಯಾಗಿ ಕಾಮಗಾರಿ ಜರೂರಾಗಿ ಆರಂಭವಾಗಲಿ ಇದರಲ್ಲಿ ಆಡಳಿತ ಪಕ್ಷದ ಜೊತೆಗೆ ವಿರೋಧ ಪಕ್ಷದವರೂ ಕೈ ಜೋಡಿಸಬೇಕಿದೆ ಎನ್ನುವುದು ಸ್ಥಳೀಯರ ಆಗ್ರಹ.

ಎಚ್‌ಡಿಕೆ ಅವರ ಕನಸ್ಸು ಯಾವೊಬ್ಬ ಬಡವರೂ ಸೂರಿಲ್ಲದೆ ಇರಬೇಕು ಎನ್ನುವುದಾಗಿತ್ತು. ಅದಕ್ಕಾಗಿ ಅವರು ಹಗಲಿರುಳು ಚಿಂತಿಸುತ್ತಿದ್ದರು. ಅಲ್ಲದೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ಕೊಟ್ಟಿದ್ದರು. ಆದರೆ, ಸ್ಥಳದ ತಾಂತ್ರಿಕ ಸಮಸ್ಯೆಗಳು ಎದುರಾದ ಪರಿಣಾಮ ಯೋಜನೆ ವಿಳಂಬವಾಗಿತ್ತು. ಈಗ ನೂತನ ಜಾಗವನ್ನ ಖರೀದಿ ಮಾಡಿದ್ದು, ಸ್ವಲ್ಪ ಗೊಂದಲವಿತ್ತು. ಸಾಧ್ಯವಾದಷ್ಟು ಬೇಗ ಗೊಂದಲ ನಿವಾರಿಸುತ್ತೇವೆ. ಪ್ರತಿಯೊಬ್ಬರಿಗೂ ಸೂರು ನೀಡುವ ಕುಮಾರಣ್ಣರವರ ಕನಸು ನನಸಾಗಲಿದೆ. -ಅನಿತಾ ಕುಮಾರಸ್ವಾಮಿ, ಶಾಸಕರು, ರಾಮನಗರ ವಿಧಾನಸಭಾ ಕ್ಷೇತ್ರ

-ಎಂ.ಎಚ್‌.ಪ್ರಕಾಶ್‌ ರಾಮನಗರ

Advertisement

Udayavani is now on Telegram. Click here to join our channel and stay updated with the latest news.

Next