Advertisement

ಏಕಾಏಕಿ ಮನೆಯನ್ನು ಧ್ವಂಸಗೊಳಿಸಿದ ಅರಣ್ಯ ಇಲಾಖೆ; ಆರೋಪ

05:49 PM Mar 05, 2022 | Suhan S |

ಸಾಗರ: ತಾಲೂಕಿನ ತಾಳಗುಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಳ್ಳೆಣ್ಣೆ ಗ್ರಾಮದ ಗಿಳಿಗಾರು ವಾಸಿ ನಾಗಮ್ಮ ಅವರ ಮನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಧ್ವಂಸಗೊಳಿಸಿದ ಘಟನೆ ಶುಕ್ರವಾರ ನಡೆದಿದೆ.

Advertisement

ಅರಣ್ಯ ಇಲಾಖೆಯವರು ನಾಗಮ್ಮ ಕೋಂ ನಾರಾಯಣ ಗೌಡ ಎಂಬ ಕೃಷಿ ಕುಟುಂಬದವರು ಸರ್ವೇ ನಂ. ೪೫ರಲ್ಲಿ ವಾಸವಾಗಿದ್ದರು. ಈ ಜಮೀನು ಗೋಮಾಳ ಪ್ರದೇಶವಾಗಿದ್ದು, ಅನೇಕ ವರ್ಷಗಳಿಂದ ನಾಗಮ್ಮ ಮತ್ತವರ ಕುಟುಂಬ ಇಲ್ಲಿ ವಾಸ ಮಾಡುತ್ತಿದೆ. ಶುಕ್ರವಾರ ರಾತ್ರಿ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಯಾವುದೇ ಸೂಚನೆ ನೀಡದೆ ಏಕಾಏಕಿ ಅಡುಗೆ ಮಾಡುತ್ತಿದ್ದ ನಾಗಮ್ಮ ಅವರನ್ನು ಮನೆಯಿಂದ ಹೊರಗೆ ಎಳೆದು ಹಾಕಿದ್ದಾರೆ. ನಂತರ ಮನೆಯ ಹೆಂಚು, ಗೋಡೆಗಳನ್ನು ಒಡೆದ ಹಾಕಿದ್ದಾರೆ. ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಅರಣ್ಯ ಇಲಾಖೆ ಟ್ರ್ಯಾಕ್ಟರ್ ಮೇಲೆ ಹೇರಿಕೊಂಡು ಹೋಗಿದೆ ಎಂದು ಆರೋಪಿಸಲಾಗಿದೆ.

ಹಲವು ವರ್ಷಗಳಿಂದ ನಾಗಮ್ಮ ಅವರು ಇಲ್ಲಿ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದರು. ಈಚೆಗೆ ಸಿಮೆಂಟ್ ಹಲಗೆ, ಸಿಮೆಂಟ್ ಕಂಬ, ಬಾಗಿಲು ಹಾಕಿ ಮನೆ ಕಟ್ಟಿಕೊಂಡಿದ್ದರು. ಮನೆ ಕಟ್ಟಿಕೊಳ್ಳುವ ಮೊದಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಾಗಮ್ಮ ಮಾಹಿತಿ ಸಹ ನೀಡಿದ್ದರು ಎನ್ನಲಾಗಿದೆ. ಇದಕ್ಕೆ ಮರ ಕಡಿತಲೆ ಮಾಡದೆ ಮನೆ ಕಟ್ಟಿಕೊಳ್ಳಲು ಅರಣ್ಯ ಇಲಾಖೆಯವರು ಮೌಖಿಕ ಸಮ್ಮತಿ ಸಹ ಸೂಚಿಸಿದ್ದರು. ಆದರೆ ಶುಕ್ರವಾರ ಏಕಾಏಕಿ ನುಗ್ಗಿ ನಾಗಮ್ಮ ಅವರನ್ನು ಹೊರಗೆ ಹಾಕಿ ಮನೆ ಧ್ವಂಸ ಮಾಡಿರುವುದು ದುರದೃಷ್ಟಕರ ಸಂಗತಿ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ನಡುವೆ ಘಟನೆಯಿಂದ ತೀವ್ರ ಅಸ್ವಸ್ಥಗೊಂಡಿರುವ ನಾಗಮ್ಮ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next